ಬೆಂಗಳೂರು: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಕಾವು ರಂಗೇರಿದೆ. ಬಿಜೆಪಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಕರ್ನಾಟಕಕ್ಕೆ ಭೇಟಿ ನೀಡಿ ಅಲೆ ಎಬ್ಬಿಸಲು ಶುರು ಮಾಡಿದ್ದಾರೆ. ಇದರ ಮಧ್ಯೆ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗಲು ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಬಿಎಸ್ ಯಡಿಯೂರಪ್ಪ ಬೆಂಬಲಿಗ ಶಾಸಕರು ಹೈಕಮಾಂಡ್ಗೆ ಪತ್ರ ಬರೆದಿದ್ದಾರೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಹೊಸ ಬಾಂಬ್ ಸಿಡಿಸಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಸೋಲಿಸಲು ಅಖಾಡಕ್ಕಿಳಿದ ಸಂಘಟನಾ ಚತುರ, ಕೋಲಾರದಲ್ಲಿ ಬಿಜೆಪಿ ಗೆಲುವಿಗೆ ಸಂತೋಷ್ ‘ಸೂತ್ರ’
ಬೆಂಗಳೂರಿನಲ್ಲಿ ಇಂದು (ಜನವರಿ 24) ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ವಕ್ತಾರ ರಮೇಶ್ ಬಾಬು, ಸಿಎಂ ನೇತೃತ್ವದಲ್ಲಿ ಚುನಾವಣೆಗೆ ಹೋಗಲು ಬಿಜೆಪಿ ಶಾಸಕರು ಸಿದ್ಧರಿಲ್ಲ. ಯಡಿಯೂರಪ್ಪ ಬೆಂಬಲಿಗ ಶಾಸಕರು ಹೈಕಮಾಂಡ್ಗೆ ಪತ್ರ ಬರೆದಿದ್ದಾರೆ. 40-50 ಶಾಸಕರು ಪತ್ರಕ್ಕೆ ಸಹಿ ಹಾಕಿದ್ದಾರೆ. BSY, ಬೊಮ್ಮಾಯಿ ನಾನೊಂದು ತೀರ ನೀನೊಂದು ತೀರ ಅಂತಾಗಿದೆ ಎಂದು ಹೇಳಿದರು.
ಹೌದು…ಮುಂದಿನ ಚುನಾವಣೆಯನ್ನು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಎದುರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಕರ್ನಾಟಕ ಪ್ರವಾಸದ ವೇಳೆ ಕಳೆದ ಆರೇಳು ತಿಂಗಳ ಹಿದೆಯೇ ಕಾರ್ಯಕಮ್ರವೊಂದರಲ್ಲಿ ಬಹಿರಂಗವಾಗಿ ಹೇಳಿದ್ದರು. ಅಮಿತ್ ಶಾ ನೀಡಿದ ಹೇಳಿಕೆಗೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಯಾಕೆಂದರೆ ಚುನಾವಣೆ ಹಾಗೂ ಪ್ರಮುಖ ನಿರ್ಧಾರಗಳ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ತೆಗೆದುಕೊಳ್ಳಬಹುದು ಅಂದುಕೊಂಡಿದ್ದ ರಾಜ್ಯ ಬಿಜೆಪಿಯಲ್ಲಿ ಇದು ತಲ್ಲಣ ಸೃಷ್ಟಿಸಿತ್ತು.
ಅಲ್ಲದೇ ಬಿಎಸ್ ಯಡಿಯೂರಪ್ಪ ಹಾಗೂ ಇನ್ನಿತರ ನಾಯಕರನ್ನು ಬಿಜೆಪಿ ಹೈಕಮಾಂಡ್ ಬದಿಗೆ ನೂಕಲು ಪ್ರಯತ್ನಿಸುತ್ತಿದ್ಯಾ? ಅನ್ನುವ ಬಗ್ಗೆಯೂ ಚರ್ಚೆ ಶುರುವಾಗಿತ್ತು. ಇನ್ನು ಇತ್ತ ಬಿಜೆಪಿಯ ನಾಯಕರುಗಳು ಕೂಡ ತಕಾರರು ವ್ಯಕ್ತಪಡಿಸಿದ್ದರು, ಇನ್ನು ಕೆಲವರು ಇದನ್ನು ಒಪ್ಪಿಕೊಂಡಿದ್ದರು. ಇದೀಗ ಕೆಪಿಸಿಸಿ ವಕ್ತಾರ ರಮೇಶ್ ಬಾಬು ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ್ದು, ಸಂಚಲನ ಮೂಡಿಸಿದೆ.
ಹಾಗಾದ್ರೆ, ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಬಿಎಸ್ವೈ ಬೆಂಬಲಿಗ ಶಾಸಕರು ಹೈಕಮಾಂಡ್ಗೆ ಪತ್ರ ಬರೆದಿದ್ದು ನಿಜ ನಾ? ಎನ್ನುವ ಬಗ್ಗೆ ಸ್ವತಃ ಬಿಜೆಪಿ ನಾಯರುಗಳೇ ಸ್ಪಷ್ಟಪಡಿಸಿಬೇಕಿದೆ.