ರಾಜ್ಯದಲ್ಲಿ ಹರಿದ ಜನತಾ ಜಲಧಾರೆ, ಆದರೆ ಕರ್ನಾಟಕದಲ್ಲಿ ನದಿ ನೀರು ಚುನಾವಣಾ ವಿಷಯ ಆಗಲ್ಲ: ಹಾಗಾದರೆ ಜೆಡಿಎಸ್​​ ಗೆ ಬಂದ ಲಾಭವೇನು?

ರಾಜ್ಯದಲ್ಲಿ ಹರಿದ ಜನತಾ ಜಲಧಾರೆ, ಆದರೆ ಕರ್ನಾಟಕದಲ್ಲಿ ನದಿ ನೀರು ಚುನಾವಣಾ ವಿಷಯ ಆಗಲ್ಲ: ಹಾಗಾದರೆ ಜೆಡಿಎಸ್​​ ಗೆ ಬಂದ ಲಾಭವೇನು?
ರಾಜ್ಯದಲ್ಲಿ ಹರಿದ ಜನತಾ ಜಲಧಾರೆ, ಆದರೆ ಕರ್ನಾಟಕದಲ್ಲಿ ನದಿ ನೀರು ಚುನಾವಣಾ ವಿಷಯ ಆಗಲ್ಲ: ಹಾಗಾದರೆ ಜೆಡಿಎಸ್​​ ಗೆ ಬಂದ ಲಾಭವೇನು?

JDS Janata Jaladhare: ಕರ್ನಾಟಕದಲ್ಲಿ ನದಿ ನೀರು ವಿಷಯಗಳು ಚುನಾವಣಾ ವಿಷಯಗಳಾದ ಉದಾಹರಣೆಯೇ ಇಲ್ಲ. ಹೀಗಾಗಿ ಜನತಾ ಜಲಧಾರೆ ಜೆಡಿಎಸ್ ಪಕ್ಷಕ್ಕೆ ಚುನಾವಣೆಯಲ್ಲಿ ಲಾಭ ತಂದುಕೊಡುತ್ತದೆಯೇ? ಜೆಡಿಎಸ್‌ಗೆ ಬಿಜೆಪಿಯಿಂದ ಎದುರಾಗಿರುವ ಸವಾಲು ಏನು? ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

S Chandramohan

| Edited By: sadhu srinath

May 13, 2022 | 7:33 PM

ರಾಜ್ಯದಲ್ಲಿ ಜೆಡಿಎಸ್ ಪಕ್ಷ ಹಮ್ಮಿಕೊಂಡಿದ್ದ ಜನತಾ ಜಲಧಾರೆ ಕಾರ್ಯಕ್ರಮ ಇಂದು ಕೊನೆಗೊಂಡಿದೆ. ಆದರೇ, ಕರ್ನಾಟಕದಲ್ಲಿ ನದಿ ನೀರು ವಿಷಯಗಳು ಚುನಾವಣಾ ವಿಷಯಗಳಾದ ಉದಾಹರಣೆಯೇ ಇಲ್ಲ. ಹೀಗಾಗಿ ಜನತಾ ಜಲಧಾರೆ ಜೆಡಿಎಸ್ ಪಕ್ಷಕ್ಕೆ ಚುನಾವಣೆಯಲ್ಲಿ ಲಾಭ ತಂದುಕೊಡುತ್ತದೆಯೇ? ಜೆಡಿಎಸ್‌ಗೆ ಬಿಜೆಪಿಯಿಂದ ಎದುರಾಗಿರುವ ಸವಾಲು ಏನು? ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.

ಜೆಡಿಎಸ್‌ ಪಕ್ಷಕ್ಕೆ ಪ್ರತಿಯೊಂದು ವಿಧಾನಸಭಾ ಚುನಾವಣೆಯೂ ಮಾಡು ಇಲ್ಲವೇ ಮಡಿ ಹೋರಾಟ. ತನ್ನ ಆಸ್ತಿತ್ವ ಉಳಿಸಿಕೊಳ್ಳಬೇಕು, ಪಕ್ಷದ ಕಾರ್ಯಕರ್ತರು, ನಾಯಕರನ್ನು ಪಕ್ಷದಲ್ಲೇ ಹಿಡಿದಿಟ್ಟುಕೊಳ್ಳಬೇಕು ಎಂದರೇ, ಪಕ್ಷ ಅಧಿಕಾರಕ್ಕೆ ಬರಲೇಬೇಕು. ಪಕ್ಷ ಅಧಿಕಾರಕ್ಕೆ ಬಾರದಿದ್ದರೇ, ಪಕ್ಷದ ಕಾರ್ಯಕರ್ತರು, ನಾಯಕರು ಕಾಯುವ ತಾಳ್ಮೆ ಇಲ್ಲದೇ ಬೇರೆ ಪಕ್ಷಗಳಿಗೆ ವಲಸೆ ಹೋಗಿಬಿಡ್ತಾರೆ. ಹೀಗಾಗಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಾಯಕರು ಇನ್ನಿಲ್ಲದ ಹರಸಾಹಸ ಮಾಡುತ್ತಿದ್ದಾರೆ. ಈಗ 2023 ರ ಕರ್ನಾಟಕ ವಿಧಾನಸಭಾ ಚುನಾವಣೆ ಜೆಡಿಎಸ್ ಪಕ್ಷಕ್ಕೆ ಮತ್ತೊಮ್ಮೆ ಮಾಡು ಇಲ್ಲವೇ ಮಡಿ ಹೋರಾಟದ ಸ್ಥಿತಿಯನ್ನು ತಂದೊಡ್ಡಿದೆ.

ಈಗ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ಮಿಷನ್ 123 ತಲುಪುತ್ತೇವೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ 123 ಕ್ಷೇತ್ರಗಳಲ್ಲಿ ಗೆದ್ದು, ಸ್ವಂತ ಬಲದ ಮೇಲೆ ಸರ್ಕಾರವನ್ನು ರಚಿಸುವಷ್ಟು ಕ್ಷೇತ್ರಗಳಲ್ಲಿ ಗೆಲ್ಲಬೇಕೆಂಬ ಗುರಿಯನ್ನು ಹಾಕಿಕೊಂಡು ಎಚ್‌.ಡಿ.ಕುಮಾರಸ್ವಾಮಿ ಚುನಾವಣಾ ಹೋರಾಟದ ಅಖಾಡಕ್ಕಿಳಿದಿದ್ದಾರೆ. ಈಗಾಗಲೇ ಜನತಾ ಜಲಧಾರೆ ಕಾರ್ಯಕ್ರಮದೊಂದಿಗೆ ಜೆಡಿಎಸ್ ಚುನಾವಣಾ ಪ್ರಚಾರ ಆರಂಭವಾಗಿದೆ ಎಂದು ಕುಮಾರಸ್ವಾಮಿ ಅವರೇ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಹೇಳಿದ್ದಾರೆ.

ಜನತಾ ಜಲಧಾರೆ ಕಾರ್ಯಕ್ರಮದ ಮೂಲಕ 184 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಬಡಿದೆಬ್ಬಿಸಿ ಉತ್ಸಾಹದಿಂದ ಪಕ್ಷದ ಚಟುವಟಿಕೆ, ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಪ್ಲ್ಯಾನ್ ಜೆಡಿಎಸ್ ನಾಯಕರಿಗೆ ಇದೆ. ಜನತಾ ಜಲಧಾರೆ ಕಾರ್ಯಕ್ರಮದಿಂದಲೇ ಜೆಡಿಎಸ್ ಪಕ್ಷ ಹಾಗೂ ರಾಜ್ಯ ನಾಯಕರ ಇಮೇಜ್ ವೃದ್ದಿಯಾಗುತ್ತೆ ಎಂಬ ನಿರೀಕ್ಷೆ ಜೆಡಿಎಸ್ ನಾಯಕರಿಗೂ ಇಲ್ಲ. ಜನತಾ ಜಲಧಾರೆ ಕಾರ್ಯಕ್ರಮದ ಮೂಲಕ ಬೀದರ್ ನಿಂದ ಚಾಮರಾಜನಗರ ಜಿಲ್ಲೆಯವರೆಗಿನ ಜನರನ್ನು ಜೆಡಿಎಸ್ ಪಕ್ಷದತ್ತ ಸೆಳೆಯುವ ಪ್ಲ್ಯಾನ್ ಜೆಡಿಎಸ್ ಗೆ ಇದೆ.

ರಾಜ್ಯದ 5 ನೀರಾವರಿ ಯೋಜನೆಗಳಿಗೆ ಹಣ ಎಷ್ಟು ಬೇಕು? ಜೆಡಿಎಸ್ ಪಕ್ಷ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೇ, ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಹೇಳುತ್ತಿದೆ. ಇದು ನಿಜಕ್ಕೂ ಸಾಧ್ಯವೇ? ಐದೇ ವರ್ಷದಲ್ಲಿ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಬಂಡವಾಳ ಎಲ್ಲಿಂದ ತರುತ್ತಾರೆ? ಬೇರೆ ಅಭಿವೃದ್ದಿ ಯೋಜನೆಗಳನ್ನು ಮುಂದುವರಿಸಲು, ವಿವಿಧ ಇಲಾಖೆಯ ಅಭಿವೃದ್ದಿ ಕಾರ್ಯಗಳಿಗೆ ಹಣ ಹೇಗೆ ನೀಡಲಾಗುತ್ತೆ?

ರಾಜ್ಯದ ಐದು ಪ್ರಮುಖ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಲು ಅಂದಾಜು 1,20,268 ಕೋಟಿ ರೂಪಾಯಿ ಹಣ ಬೇಕು. ಮೇಕೆದಾಟು, ಕೃಷ್ಣಾ ಮೇಲ್ದಂಡೆ-ಹಂತ 3, ಮಹದಾಯಿ ನದಿ ಜೋಡಣೆ, ಎತ್ತಿನಹೊಳೆ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಈಗಿನ ಅಂದಾಜಿನ ಪ್ರಕಾರ, 1.20 ಲಕ್ಷ ಕೋಟಿ ರೂಪಾಯಿ ಹಣ ಬೇಕು. ಯೋಜನಾ ಕಾಮಗಾರಿ ಪೂರ್ಣಗೊಳ್ಳುವುದು ವಿಳಂಬವಾದಷ್ಟು ಯೋಜನಾ ವೆಚ್ಚ ಹೆಚ್ಚಾಗುತ್ತೆ.

ನೀರಾವರಿ ಮತ್ತು ಕುಡಿಯುವ ನೀರು ಯೋಜನೆಗಳನ್ನು ಪೂರ್ಣಗೊಳಿಸಲು 3 ಲಕ್ಷ ಕೋಟಿ ರೂಪಾಯಿಯಿಂದ 5 ಲಕ್ಷ ಕೋಟಿ ರೂಪಾಯಿ ಬೇಕು. ಇಷ್ಟೊಂದು ದೊಡ್ಡ ಮೊತ್ತದ ಹಣ ಸಂಗ್ರಹಕ್ಕೂ ಜೆಡಿಎಸ್ ಬ್ಲೂಪ್ರಿಂಟ್ ರೆಡಿ ಮಾಡಿದೆ. ಕಾಲಮಿತಿಯಲ್ಲಿ ಎಲ್ಲ ಯೋಜನೆಗಳನ್ನು ಪೂರ್ಣ ಮಾಡ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ರಾಜ್ಯದಲ್ಲಿ ಪ್ರತಿ ವರ್ಷ ಈಗ ಜಲಸಂಪನ್ಮೂಲ ಇಲಾಖೆಗೆ ನೀರಾವರಿ ಯೋಜನೆಗಳ ಕಾಮಗಾರಿ ಪೂರ್ಣಗೊಳಿಸಲು 10ರಿಂದ 12 ಸಾವಿರ ಕೋಟಿ ರೂಪಾಯಿ ಹಂಚಿಕೆ ಮಾಡಲಾಗುತ್ತಿದೆ. ಇದನ್ನು ಎರಡು ಪಟ್ಟು ಹೆಚ್ಚಿಸಿ ನೀಡಿದರೂ, ಯಾವುದೇ ನೀರಾವರಿ ಯೋಜನೆಗಳು ಪೂರ್ಣಗೊಳ್ಳಲ್ಲ.

ಮೇಕೆದಾಟು ಡ್ಯಾಂ ನಿರ್ಮಾಣಕ್ಕೆ 9 ಸಾವಿರ ಕೋಟಿ ರೂಪಾಯಿ ಬೇಕು. ಆದರೇ, ಇನ್ನೂ ಯೋಜನೆ ಆರಂಭವಾಗಿಲ್ಲ. ಮೇಕೆದಾಟು ಯೋಜನೆಯ ಡಿಪಿಆರ್ ಗೆ ಕೇಂದ್ರದ ಅರಣ್ಯ ಪರಿಸರ ಇಲಾಖೆ, ಜಲ ಆಯೋಗ ಒಪ್ಪಿಗೆ ನೀಡಿಲ್ಲ. ಕಾವೇರಿ ನದಿ ನೀರು ಪ್ರಾಧಿಕಾರದಲ್ಲೂ ಒಪ್ಪಿಗೆ ಸಿಕ್ಕಿಲ್ಲ. ಈ ಎಲ್ಲ ಒಪ್ಪಿಗೆಗಳು ಸಿಕ್ಕಿ, ಯಾವಾಗ ಯೋಜನೆ ಆರಂಭವಾಗುತ್ತೆ ಎಂದು ಈಗಲೇ ಹೇಳಲಾಗಲ್ಲ. ಯೋಜನೆಯ ಕಾಮಗಾರಿ ಆರಂಭವಾಗುವುದು ವಿಳಂಬವಾದಷ್ಟು ಯೋಜನೆಯ ಅಂದಾಜು ವೆಚ್ಚ ಹೆಚ್ಚಾಗುತ್ತಾ ಹೋಗುತ್ತದೆ. ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಗೆ ಸಾವಿರಾರು ಕೋಟಿ ರೂಪಾಯಿ ಹಣ ಬೇಕು.

UKP 3ನೇ ಹಂತದ ಯೋಜನೆಗೆ ಈಗ 65 ಸಾವಿರ ಕೋಟಿ ರೂಪಾಯಿ ಹಣ ಬೇಕು. 2021ರ ಸೆಪ್ಟೆಂಬರ್ ಅಂತ್ಯಕ್ಕೆ 13 ಸಾವಿರ ಕೋಟಿ ರೂಪಾಯಿ ಹಣ ಖರ್ಚು ಮಾಡಲಾಗಿದೆ. ಯುಕೆಪಿ-3 ರಲ್ಲಿ 130 ಟಿಎಂಸಿ ನೀರು ಬಳಕೆ ಮಾಡಿಕೊಳ್ಳುವ ಪ್ಲ್ಯಾನ್ ಇದೆ. ಕಳಸಾ-ಬಂಡೂರಿ ನಾಲಾ ಜೋಡಣೆ ಅಥವಾ ಮಹದಾಯಿ ನದಿ ಜೋಡಣೆ ಕಾರ್ಯ ಮುಗಿದಿಲ್ಲ. 2000 ರಲ್ಲಿ 94 ಕೋಟಿ ರೂಪಾಯಿ ಇದ್ದ ಯೋಜನೆ ವೆಚ್ಚ ಈಗ 1667 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಯೋಜನೆ ಪ್ರಾರಂಭದಲ್ಲಿ ಇದ್ದ ಅಂದಾಜು ವೆಚ್ಚಕ್ಕೆ ಹೋಲಿಸಿದರೇ, ಈಗ ಯೋಜನೆಯ ಅಂದಾಜು ವೆಚ್ಚ ಶೇ.1674 ರಷ್ಟು ಏರಿಕೆಯಾಗಿದೆ.

ಎತ್ತಿನಹೊಳೆ ಯೋಜನಾ ವೆಚ್ಚ ಏರಿಕೆಯಾಗುತ್ತಲೇ ಇದೆ. 2012 ರಲ್ಲಿ 12,900 ಕೋಟಿ ರೂಪಾಯಿ ಇದ್ದ ಯೋಜನಾ ವೆಚ್ಚ ಈಗ 23,151 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇನ್ನೂ ದಾವಣಗೆರೆ, ತುಮಕೂರು, ಚಿತ್ರದುರ್ಗ ಯೋಜನೆಗಳ ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಣೆಗೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಕೇಂದ್ರದ ಕ್ಯಾಬಿನೆಟ್ ಒಪ್ಪಿಗೆ ಬಾಕಿ ಇದ್ದು, ಈಗ ಯೋಜನೆಯ ಅಂದಾಜು ವೆಚ್ಚ 21,450 ಕೋಟಿ ರೂಪಾಯಿಗೆ ಏರಿಕೆ ಆಗಿದೆ. ಹೀಗೆ ಈ ಐದು ಯೋಜನೆಗಳನ್ನು ಪೂರ್ಣಗೊಳಿಸಲು ಅಂದಾಜು 1,20,268 ಕೋಟಿ ರೂಪಾಯಿ ಹಣ ಬೇಕು.

2018ರಲ್ಲಿ ಸಾಲಮನ್ನಾ ಅಸ್ತ್ರ, ಈಗ ಜಲಧಾರೆ, ಪಂಚ ರತ್ನ 2018ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ರೈತರ ಸಂಪೂರ್ಣ ಸಾಲಮನ್ನಾ ಘೋಷಿಸಿ ರೈತರನ್ನು ತನ್ನತ್ತ ಸೆಳೆದಿತ್ತು. ಈಗ ಜಲಧಾರೆ, ಪಂಚರತ್ನ ಕಾರ್ಯಕ್ರಮಗಳ ಮೂಲಕ ಎಲ್ಲರಿಗೂ ಉತ್ತಮ ಆರೋಗ್ಯ ಸೌಲಭ್ಯ, ವಸತಿ, ಶಿಕ್ಷಣ, ಕುಡಿಯುವ ನೀರು ನೀಡುವ ಆಶ್ವಾಸನೆಗಳು ಜೆಡಿಎಸ್‌ಗೆ ಹೆಚ್ಚಿನ ಸೀಟು ತಂದುಕೊಡುತ್ತಾವೆಯೇ? ಎಂಬ ಪ್ರಶ್ನೆ ರಾಜಕೀಯ ವಿಶ್ಲೇಷಕರಲ್ಲಿದೆ. ಜೆಡಿಎಸ್ ಪಕ್ಷ ಅಂದರೇ ಅತಂತ್ರ ವಿಧಾನಸಭೆ ನಿರ್ಮಾಣವಾದ ಸ್ಥಿತಿಯಲ್ಲಿ ಡಿಮ್ಯಾಂಡ್ ನಲ್ಲಿರುವ ಪಕ್ಷ ಎಂದೇ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಈಗಲೂ ಜೆಡಿಎಸ್ ಪಕ್ಷದ ನಾಯಕರು ಮಿಷನ್ 123 ಎಂದು ಹೇಳುತ್ತಿದ್ದರೂ ಕೂಡ ಜೆಡಿಎಸ್ ಕನಿಷ್ಠ 50 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೂ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸ್ಥಿತಿ ನಿರ್ಮಾಣವಾಗುತ್ತೆ ಎಂಬುದು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರ. ಮುಖ್ಯವಾಗಿ ಜೆಡಿಎಸ್ ಪಕ್ಷ ಹಳೇ ಮೈಸೂರು ಪ್ರಾಂತ್ಯದ ರಾಜಕೀಯ ಪಕ್ಷ. ಹಳೇ ಮೈಸೂರು ಪ್ರಾಂತ್ಯದಲ್ಲಿ ಒಕ್ಕಲಿಗ ವೋಟ್ ಬ್ಯಾಂಕ್ ನಿಂದಾಗಿ ಜೆಡಿಎಸ್ ಗೆ ಭದ್ರವಾದ ನೆಲೆ ಇದೆ. ಒಕ್ಕಲಿಗ ವೋಟ್ ಬ್ಯಾಂಕ್ ಜೊತೆಗೆ ಮುಸ್ಲಿಮರು, ಹಿಂದುಳಿದ ವರ್ಗದ ಒಂದೆರೆಡು ವೋಟ್ ಬ್ಯಾಂಕ್ ಗಳನ್ನು ತಮ್ಮ ಪಕ್ಷದ ತೆಕ್ಕೆಗೆ ತರಬೇಕೆಂದು ಜೆಡಿಎಸ್ ನಾಯಕರು ಬಹಳ ಹಿಂದಿನಿಂದಲೂ ಯತ್ನಿಸುತ್ತಿದ್ದಾರೆ.

ಆದರೇ, ಜಮೀರ್ ಅಹಮದ್ ಖಾನ್ ಕಾಂಗ್ರೆಸ್ ಸೇರ್ಪಡೆಯಿಂದ ಮುಸ್ಲಿಂ ಮತಗಳು ಕಳೆದ ಚುನಾವಣೆಯಲ್ಲಿ ಜೆಡಿಎಸ್ ಗೆ ಬಹಳಷ್ಟು ಕ್ಷೇತ್ರಗಳಲ್ಲಿ ಬಂದಿಲ್ಲ. ಈ ಕೊರತೆ ನೀಗಿಕೊಳ್ಳಲು ಮುಸ್ಲಿಂ ಸಮುದಾಯದ ನಾಯಕ ಸಿ.ಎಂ. ಇಬ್ರಾಹಿಂ ಅವರನ್ನು ಕರೆ ತಂದು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈಗ ಸಿ.ಎಂ.ಇಬ್ರಾಹಿಂ ಅವರಿಗೆ ಮುಸ್ಲಿಂ ವೋಟ್ ಬ್ಯಾಂಕ್ ಅನ್ನು ಜೆಡಿಎಸ್ ಪಕ್ಷಕ್ಕೆ ತರುವ ಹೊಣೆಗಾರಿಕೆ ನೀಡಲಾಗಿದೆ.

ಆದರೇ ಹಳೇ ಮೈಸೂರು ಪ್ರಾಂತ್ಯದ ಆಚೆಗೆ ಜೆಡಿಎಸ್ ವಿಸ್ತರಣೆಯಾಗುತ್ತಾ? ಎಂಬುದೇ ಈಗಿರುವ ಪ್ರಶ್ನೆ. ಜೆಡಿಎಸ್ ಪಕ್ಷ ಹಳೇ ಮೈಸೂರು ಪ್ರಾಂತ್ಯದ ಆಚೆಗೆ ವಿಸ್ತರಣೆಯಾಗಿ ಕ್ಷೇತ್ರಗಳನ್ನು ಗೆದ್ದರೇ, ಜೆಡಿಎಸ್ ಹೆಚ್ಚಿನ ಸೀಟುಗಳನ್ನು ಗೆಲ್ಲಲು ಸಾಧ್ಯ.

ಹಳೇ ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್‌ಗೆ ಬಿಜೆಪಿ ಸವಾಲು: ಹಳೇ ಮೈಸೂರು ಪ್ರಾಂತ್ಯದ 12 ಜಿಲ್ಲೆಗಳ ಪೈಕಿ 86 ಕ್ಷೇತ್ರಗಳಲ್ಲಿ ಒಕ್ಕಲಿಗ ವೋಟ್ ಬ್ಯಾಂಕ್ ಪ್ರಬಲವಾಗಿದೆ. ಈ ಪ್ರಾಂತ್ಯದಲ್ಲೇ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಲು ಜೆಡಿಎಸ್ ಪಕ್ಷ ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸುತ್ತಿದೆ. ಆದರೇ, ಈಗ ಬಿಜೆಪಿ ಪಕ್ಷಕ್ಕೂ ಕೂಡ ಹಳೇ ಮೈಸೂರು ಪ್ರಾಂತ್ಯದಲ್ಲಿ ನೆಲೆಯೂರಿ ಹೆಚ್ಚಿನ ಕ್ಷೇತ್ರಗಳನ್ನು ಗೆದ್ದರೇ ಮಾತ್ರವೇ ಬಹುಮತದ ಮ್ಯಾಜಿಕ್ ನಂಬರ್ ಆದ 113 ಸೀಟು ದಾಟಲು ಸಾಧ್ಯ ಎಂಬುದು ಚೆನ್ನಾಗಿಯೇ ಅರಿವಾಗಿದೆ. ಹೀಗಾಗಿ ಬಿಜೆಪಿಯ ಅಮಿತ್ ಶಾ, ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಪಕ್ಷದ ಸಂಘಟನೆ ಬಲಪಡಿಸಿ, ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಹೆಚ್ಚಿನ ಕ್ಷೇತ್ರ ಗೆಲ್ಲಬೇಕೆಂದು ಪಕ್ಷದ ನಾಯಕರಿಗೆ ಸೂಚಿಸಿದ್ದಾರೆ. ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ನೆಲೆಯೂರಲು ಯಶಸ್ವಿಯಾದರೇ, ಅದರಿಂದ ಜೆಡಿಎಸ್‌ಗೆ ಹೊಡೆತ ಬೀಳಲಿದೆ.

ಹಳೇ ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್‌ ಪ್ರಬಲವಾಗಿದ್ದರಿಂದ ಬಿಜೆಪಿಗೂ ಹಳೇ ಮೈಸೂರು ಪ್ರಾಂತ್ಯದಲ್ಲಿ ನೆಲೆಯೂರಲು ಸಾಧ್ಯವಾಗಿರಲಿಲ್ಲ. ಆದರೇ, ಈಗ ಬಿಜೆಪಿ ರಾಜ್ಯ ನಾಯಕರು ಕೂಡ ಹಳೇ ಮೈಸೂರು ಪ್ರಾಂತ್ಯದ ಒಕ್ಕಲಿಗ ನಾಯಕರನ್ನ ತಮ್ಮ ಪಕ್ಷದತ್ತ ಸೆಳೆಯುವ ಪ್ರಯತ್ನ ತೀವ್ರಗೊಳಿಸಿದ್ದಾರೆ. ಹೀಗಾಗಿ ಜೆಡಿಎಸ್ ಗೆ ಹಳೆ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿಯಿಂದ ಈ ವಿಧಾನಸಭಾ ಚುನಾವಣೆಯಲ್ಲಿ ಹೊಸ ಸವಾಲು ಎದುರಾಗುತ್ತಿದೆ. ಈ ಹಿಂದೆ ಚನ್ನಪಟ್ಟಣ, ಮಂಡ್ಯ ಜಿಲ್ಲೆಯ ಕ್ಷೇತ್ರಗಳನ್ನು ಬಿಜೆಪಿ ಪಕ್ಷ ಇನ್ನೂ 25 ವರ್ಷವಾದರೂ ಬಿಜೆಪಿ ಗೆಲ್ಲಲಾಗಲ್ಲ ಎಂದು ಜೆಡಿಎಸ್ ನಾಯಕ ಕುಮಾರಸ್ವಾಮಿ 2010ರ ಸುಮಾರಿಗೆ ಹೇಳುತ್ತಿದ್ದರು. ಆದರೇ, ಚನ್ನಪಟ್ಟಣ, ಮಂಡ್ಯದ ಕೆ.ಆರ್.ಪೇಟೆ ಕ್ಷೇತ್ರಗಳನ್ನು ಬಿಜೆಪಿ ಗೆದ್ದು ತೋರಿಸಿದೆ. ಹೀಗಾಗಿ ಹಳೆ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಅಪರೇಷನ್ ಕಮಲದ ಕಾರ್ಯಾಚರಣೆಯನ್ನು ಜೆಡಿಎಸ್ ಹಗುರವಾಗಿ ಪರಿಗಣಿಸುವುದು ಜೆಡಿಎಸ್‌ಗೆ ಒಳ್ಳೆಯದ್ದಲ್ಲ.

ನದಿ ನೀರು ಚುನಾವಣಾ ವಿಷಯವಾಗಲ್ಲ ಕುಡಿಯುವ ನೀರು, ನದಿ ನೀರಿನ ವಿಷಯಗಳ ಆಧಾರದ ಮೇಲೆ ಜನರನ್ನು ಸೆಳೆಯಲು ಕಾಂಗ್ರೆಸ್, ಜೆಡಿಎಸ್ ಯತ್ನಿಸುತ್ತಿವೆ. ಕರ್ನಾಟಕ ರಾಜಕಾರಣದಲ್ಲಿ ಕುಡಿಯುವ ನೀರು, ನದಿ ನೀರು ಹಂಚಿಕೆಯಂಥ ವಿಷಯಗಳು ಚುನಾವಣಾ ವಿಷಯಗಳಾಗಿ ಪರಿವರ್ತನೆಯಾದ ಉದಾಹರಣೆಗಳಿಲ್ಲ. 1991-92 ರಲ್ಲಿ ಬಂಗಾರಪ್ಪ ಸಿಎಂ ಆಗಿದ್ದಾಗ, ಸುಪ್ರೀಂಕೋರ್ಟ್, ಕಾವೇರಿ ನ್ಯಾಯಾಧೀಕರಣದ ಕಾವೇರಿ ನದಿ ನೀರು ಹಂಚಿಕೆಯ ಮಧ್ಯಂತರ ತೀರ್ಪು ಅನ್ನು ಎತ್ತಿ ಹಿಡಿದಿತ್ತು.

ಆಗ ರಾಜ್ಯದಲ್ಲಿ ದೊಡ್ಡ ಹೋರಾಟ ನಡೆದಿತ್ತು. ಆದರೇ, ಆದಾದ ಬಳಿಕ 1994ರಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾವೇರಿ ನದಿ ನೀರು ಹಂಚಿಕೆಯೂ ಚುನಾವಣಾ ವಿಷಯವಾಗಿರಲಿಲ್ಲ. ಹೀಗಾಗಿ ಈಗಲೂ ನದಿ ನೀರು ಹಂಚಿಕೆ, ಕುಡಿಯುವ ನೀರಿನ ವಿಚಾರಗಳು, ನೀರಾವರಿ ಯೋಜನೆಗಳನ್ನ ಪೂರ್ಣಗೊಳಿಸುವ ವಿಚಾರ ಚುನಾವಣಾ ವಿಷಯವಾಗಲ್ಲ ಎಂದೇ ಮೈಸೂರಿನ ಹಿರಿಯ ಪತ್ರಕರ್ತ ಕೆ.ಶಿವಕುಮಾರ್ ಹೇಳುತ್ತಾರೆ.

ಜೆಡಿಎಸ್ ಪಕ್ಷಕ್ಕೆ 2004 ರಲ್ಲಿ 58 ಕ್ಷೇತ್ರಗಳಲ್ಲಿ ಗೆಲುವು, 2008ರಲ್ಲಿ ವಚನಭ್ರಷ್ಟ ಆರೋಪದ ನಡುವೆಯೇ ಜೆಡಿಎಸ್‌ 28 ಸೀಟು, 2013ರಲ್ಲಿ 40 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. 2018ರಲ್ಲಿ 38 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಜೆಡಿಎಸ್ ಪಕ್ಷ 2023ರಲ್ಲಿ ಎಷ್ಟು ಕ್ಷೇತ್ರಗಳಲ್ಲಿ ಗೆಲ್ಲುತ್ತೆ? ಎಂಬುದೇ ಈಗಿರುವ ಕುತೂಹಲ. ಜೆಡಿಎಸ್ ಗೆಲ್ಲುವ ಕ್ಷೇತ್ರಗಳ ಸಂಖ್ಯೆಯ ಆಧಾರದ ಮೇಲೆಯೇ ರಾಜ್ಯದಲ್ಲಿ ಏಕಪಕ್ಷದ ಸರ್ಕಾರ ಆಸ್ತಿತ್ವಕ್ಕೆ ಬರುತ್ತದೆಯೋ ಇಲ್ಲವೇ ಮೈತ್ರಿ ಸರ್ಕಾರ ಆಸ್ತಿತ್ವಕ್ಕೆ ಬರುತ್ತದೆಯೋ ಎಂಬುದು ನಿರ್ಧಾರವಾಗುತ್ತೆ.

Follow us on

Related Stories

Most Read Stories

Click on your DTH Provider to Add TV9 Kannada