ಬಿಜೆಪಿ ಮಾಜಿ ಶಾಸಕ, ಆರ್ಎಸ್ಎಸ್ ಕಟ್ಟಾಳು ನಿಗಮ ಮಂಡಳಿಗೆ ರಾಜೀನಾಮೆ, ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್
ಬಿಜೆಪಿ ಮಾಜಿ ಶಾಸಕ, ಆರ್ಎಸ್ಎಸ್ ಕಟ್ಟಾಳು ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ಸೇರ್ಪಡೆಗೆ ತೀರ್ಮಾನಿಸಿದ್ದಾರೆ. ಇದರಿಂದ ಚುನಾವಣೆ ಹೊತ್ತಲ್ಲೇ ಬಿಜೆಪಿಗೆ ಆಘಾತವಾಗಿದೆ.
ತುಮಕೂರು: ವಿಧಾನಸಭೆ ಚುನಾವಣೆ (Karnataka Assembly Elections 2023)ಸಮೀಪಿಸುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುವ ಪಕ್ಷಾಂತರ ಪರ್ವ ಶುರುವಾಗಿದೆ. ಮೊನ್ನೇ ಅಷ್ಟೇ ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ(CT Ravi) ಆಪ್ತ ತಮ್ಮಯ್ಯ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ಸೇರ್ಪಡೆಗೆ ತೀರ್ಮಾನಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಬಿಜೆಪಿ ಮಾಜಿ ಶಾಸಕ, ಆರ್ಎಸ್ಎಸ್ ಕಟ್ಟಾಳು ಕಾಂಗ್ರೆಸ್(Congress) ಸೇರ್ಪಡೆಗೆ ಮುಹೂರ್ತ ಫಿಕ್ಸ್ ಆಗಿದೆ.
ಹೌದು…ಬಿಜೆಪಿ ಮಾಜಿ ಶಾಸಕ, ಆರ್ಎಸ್ಎಸ್ ಕಟ್ಟಾಳು ಕಿರಣ್ ಕುಮಾರ್ ಅವರು ತಮ್ಮ ಜೈವಿಕ ಇಂಧನ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು(ಫೆಬ್ರವರಿ 18) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದು, ವೈಯಕ್ತಿಕ ಕಾರಣ, ಸ್ವ ಇಚ್ಚೆಯಿಂದ ರಾಜೀನಾಮೆ ನೀಡುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಕಿರಣ್ ಕುಮಾರ್ ಅವರು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ, ಮಾಧುಸ್ವಾಮಿ ಇರುವುದರಿಂದ ಟಿಕೆಟ್ ಸಿಗುವುದು ಕಷ್ಟ ಸಾಧ್ಯ ಎಂದು ಅರಿತು ಕಾಂಗ್ರೆಸ್ ಸೇರ್ಪಡೆಗೆ ತೀರ್ಮಾನಿಸಿದ್ದಾರೆ. ಇದೇ ಸೋಮವಾರ (ಫೆ.20) ಅಧಿಕೃತವಾಗಿ ಕಿರಣ್ ಕುಮಾರ್ ಅವರು ಕಾಂಗ್ರೆಸ್ ಸೇರಲಿದ್ದಾರೆ.
ಬಿಜೆಪಿಯಲ್ಲಿದ್ದರೂ ಸಚಿವ ಮಾಧುಸ್ವಾಮಿ ವಿರುದ್ದ ತೊಡೆತಟ್ಟಿದ್ದರು. ಕ್ಷೇತ್ರದಲ್ಲಿ ಕಿರಣ್ ಕುಮಾರ್ ಹಾಗೂ ಮಾಧುಸ್ವಾಮಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇತ್ತು. ಆದ್ರೆ, ಇದೀಗ ಕಿರಣ್ ಕುಮಾರ್ ಬಿಜೆಪಿ ತೊರೆದು ಕೈ ಹಿಡಿಯಲು ಮುಂದಾಗಿದ್ದು, ಬಿಜೆಪಿಗೆ ಆಘಾತವಾಗಿದೆ. ಇನ್ನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಿರಣ್ ಕುಮಾರ್ ಅವರು ಕಾಂಗ್ರೆಸ್ ಪಕ್ಷದಿಂದ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಮಾಧುಸ್ವಾಮಿ ವಿರುದ್ಧ ಅಖಾಡಕ್ಕಿಳಿಯುವ ಸಾಧ್ಯತೆಗಳಿವೆ.
2008ರಲ್ಲಿ ಕ್ಷೇತ್ರಗಳ ವಿಂಗಡಣೆಯ ಬಳಿ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಧುಸ್ವಾಮಿ ಹಾಗೂ ಕಿರಣ್ ಕುಮಾರ್ ನಡುವೆ ಮುಸುಕಿನ ಗುದ್ದಾಟ ನಡೆದಿದೆ. 2018 ರ ಚುನಾವಣೆಯಲ್ಲಿ ಪಕ್ಷದ ಹೈಕಮಾಂಡ್ ಮತ್ತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಒತ್ತಡದಿಂದಾಗಿ ಕಿರಣ್ ಕುಮಾರ್ ಅವರು ಮಾಧುಸ್ವಾಮಿಗೆ ಕ್ಷೇತ್ರ ತ್ಯಾಗ ಮಾಡಿದ್ದರು. ಆದ್ರೆ, ಇದೀಗ ಕಿರಣ್ ಕುಮಾರ್ ಮುಂದಿನ ವಿಧಾನಸಭೆ ಚುನಾವಣೆಗೆ ನಾನೇ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದು ಹೇಳಿದ್ದರು. ಅಲ್ಲದೇ ಕಚೇರಿಯನ್ನೂ ಸಹ ಓಪನ್ ಮಾಡಿದ್ದರು. ಇದು ಬಿಜೆಪಿ ಹಾಗೂ ಸಚಿವ ಮಾಧುಸ್ವಾಮಿಗೆ ದೊಡ್ಡ ತಲೆನೋವಾಗಿತ್ತು.
ಟಿಕೆಟ್ ಕೈತಪ್ಪಿದ್ದಕ್ಕೆ ನಿಗಮ ಮಂಡಳಿ
ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಭರವಸೆ ಮೇರೆಗೆ ಕಿರಣ್ ಕುಮಾರ್ ಅವರು ಸ್ಪರ್ಧೆಯಿಂದ ಹಿಂದೆ ಸರಿದು ಮಾಧುಸ್ವಾಮಿಗೆ ಅವಕಾಶ ನೀಡಿದ್ದರು, ಇದರಿಂದ ಅವರಿಗೆ ಬಿಎಸ್ ಯಡಿಯೂರಪ್ಪ ಅವರನ್ನು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದ್ದರು. ಆದ್ರೆ ಇದೀಗ ಮತ್ತೆ ಈ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿಯೇ ಮಾಡುತ್ತೇನೆ ಎಂದು ಎದ್ದು ನಿಂತಿದ್ದರು.
ಯಡಿಯೂರಪ್ಪ ಮತ್ತು ಬಿಜೆಪಿ ಹೈಕಮಾಂಡ್ 2023ರಲ್ಲಿ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ 2018ರಲ್ಲಿ ಸೀಟು ತ್ಯಾಗ ಮಾಡಿದ್ದೆ ಎಂದು ಕಿರಣ್ ಕುಮಾರ್ ಹೇಳಿದ್ದರು. ನನ್ನ ಸ್ಪರ್ಧೆ ಖಚಿತ ಎಂಬ ಸ್ಪಷ್ಟ ಸಂದೇಶವನ್ನು ಪಕ್ಷದ ಕಾರ್ಯಕರ್ತರಿಗೆ ರವಾನಿಸಲು ಪ್ರಚಾರ ಆರಂಭಿಸಿದ್ದೇನೆ ಎಂದು ಕಿರಣ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
Published On - 9:03 pm, Sat, 18 February 23