AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​​ ಮೇಲೆ ಕಾಂಗ್ರೆಸ್​​ನವರಿಗೇ ಗ್ಯಾರಂಟಿ ಇಲ್ಲ, ಹೀಗಾಗಿ ಕಾರ್ಡ್​ ಹಂಚುತ್ತಿದ್ದಾರೆ: ಸಚಿವ ಸುಧಾಕರ್

ಚುನಾವಣಾ ಪೂರ್ವವಾಗಿ ನೀಡಿದ ಭರವಸೆಯನ್ನು ಈಡೇರಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಲು ಮುಂದಾಗಿದೆ. ಆದರೆ ಇದನ್ನು ಸಚಿವ ಸುಧಾಕರ್ ಅವರು ವ್ಯಂಗ್ಯವಾಡಿದ್ದು, ಕಾಂಗ್ರೆಸ್​​ ಮೇಲೆ ಕಾಂಗ್ರೆಸ್​​ನವರಿಗೇ ಗ್ಯಾರಂಟಿ ಇಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್​​ ಮೇಲೆ ಕಾಂಗ್ರೆಸ್​​ನವರಿಗೇ ಗ್ಯಾರಂಟಿ ಇಲ್ಲ, ಹೀಗಾಗಿ ಕಾರ್ಡ್​ ಹಂಚುತ್ತಿದ್ದಾರೆ: ಸಚಿವ ಸುಧಾಕರ್
ಡಾ.ಕೆ.ಸುಧಾಕರ್, ಸಿದ್ದರಾಮಯ್ಯ, ಡಿಕೆ ಶಿವಕುಮಾರ್
TV9 Web
| Edited By: |

Updated on:Feb 18, 2023 | 3:23 PM

Share

ಚಿಕ್ಕಬಳ್ಳಾಪುರ: ಕಾಂಗ್ರೆಸ್​​ ಮೇಲೆ ಕಾಂಗ್ರೆಸ್​​ನವರಿಗೇ ಗ್ಯಾರಂಟಿ ಇಲ್ಲ, ಅದಕ್ಕೆ ಕಾಂಗ್ರೆಸ್​ನವರು ಗ್ಯಾರಂಟಿ ಕಾರ್ಡ್ (Congress Guarantee Card) ಮೇಲೆ ಸಹಿ ಹಾಕಿ ಹಂಚುತ್ತಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (Dr.K. Sudhakar) ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್​​​ನಿಂದ ಮನೆ ಮನೆಗೆ ಗ್ಯಾರಂಟಿ ಕಾರ್ಡ್ ವಿತರಣೆ ವಿಚಾರವಾಗಿ ಚಿಕ್ಕಬಳ್ಳಾಪುರದಲ್ಲಿ ಹೇಳಿಕೆ ನೀಡಿದ ಸಚಿವರು, ಸಿದ್ದರಾಮಯ್ಯ ಅವಧಿಯಲ್ಲಿ ಶೇ.99ರಷ್ಟು ಬಜೆಟ್ ಅನುಷ್ಠಾನ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಸಿದ್ದರಾಮಯ್ಯ ಅವಧಿಯಲ್ಲಿ ಶೇ.39ರಷ್ಟು ಮಾತ್ರ ಬಜೆಟ್​ ಅನುಷ್ಠಾನವಾಗಿದೆ ಎಂದರು.

ಇನ್ನು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ಬಗ್ಗೆ ಮಾತನಾಡಿದ ಸುಧಾಕರ್, ಇಷ್ಟೊಂದು ಜನಪರ ಬಜೆಟ್​ ನಾವು ನಿರೀಕ್ಷೆ ಮಾಡಿರಲಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಅಭಿವೃದ್ಧಿಯ ಅಮೃತ ಹಂಚಿದ್ದಾರೆ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಮೂರು ಜಿಲ್ಲೆಗಳು ನೂತನ ಸ್ಯಾಟಲೈಟ್ ನಗರಗಳಾಗಿ ಬೆಳೆಯುತ್ತವೆ. ಎಲ್ಲಾ ವರ್ಗದ ಜನರ ಅವಶ್ಯಕತೆಗೆ ಅನುಗುಣವಾಗಿ ಬಜೆಟ್ ಮಂಡನೆ ಮಾಡಲಾಗಿದೆ ಎಂದರು.

ಇದನ್ನೂ ಓದಿ: ಬೆಂಗಳೂರು: ಮುಂದಿನ ವಾರ ಮಹಿಳೆಯರಿಗೆ ವಿಶೇಷ ಕ್ಲಿನಿಕ್‌ ಲೋಕಾರ್ಪಣೆ; ಸಚಿವ ಡಾ. ಕೆ. ಸುಧಾಕರ್‌

ಬಜೆಟ್​ನಲ್ಲಿ ಚಿಕ್ಕಬಳ್ಳಾಫುರ ಜಿಲ್ಲೆಗೆ ಭರಪೂರ ಕೊಡುಗೆ ನೀಡಿದ ಬಗ್ಗೆ ಮುಖ್ಯಮಂತ್ರಿಯವರಿಗೆ ಧನ್ಯವಾದಗಳನ್ನು ತಿಳಿಸಿದ ಸುಧಾಕರ್, ಈ ಬಾರಿ ಬಜೆಟ್​ನಲ್ಲಿ ಜಿಲ್ಲೆಗೆ ನಿರೀಕ್ಷೆಗೂ ಮೀರಿ ಅನುದಾನ ಘೋಷಣೆಯಾಗಿದೆ. ಹೆಚ್​.ಎನ್​​.ವ್ಯಾಲಿ 3ನೇ ಹಂತದ ಶುದ್ಧೀಕರಣ, ಎತ್ತಿನಹೊಳೆ ಯೋಜನೆ, ಹೂವಿನ ಮಾರುಕಟ್ಟೆ, ದ್ರಾಕ್ಷಿ ರಸ ಉತ್ಪಾದನಾ ಘಟಕ, ಹೈಟೆಕ್ ರೇಷ್ಮೆ ಘಟಕ, ನಂದಿಗಿರಿಧಾಮ ರೂಪ್​ವೇ ನಿರ್ಮಾಣ ಸೇರಿ ಹಲವು ಯೋಜನೆ ಘೋಷಣೆಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಗೆ ನೀಡಿರುವ ಕೊಡುಗೆ ನೋಡಿ ನಮ್ಮವರೆ ಕೆಲವರು ಅಸೂಯೆ ಪಟ್ಟುಕೊಂಡಿದ್ದಾರೆ ಎಂದರು.

ಬಜೆಟ್ ಮಂಡನೆಗೂ ಮುನ್ನ ಅಪಹಾಸ್ಯ ಮಾಡಿದ್ದು ಖಂಡನೀಯ

ಕಿವಿಯಲ್ಲಿ ಹೂವು ಇಟ್ಟುಕೊಂಡು ಕಾಂಗ್ರೆಸ್ಸಿಗರ ಲೇವಡಿ ಮಾಡಿದ ಬಗ್ಗೆ ಟೀಕಿಸಿದ ಸುಧಾಕರ್, ಬಜೆಟ್ ಮಂಡನೆಗೂ ಮುನ್ನ ಅಪಹಾಸ್ಯ ಮಾಡಿದ್ದು ಖಂಡನೀಯ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ವ್ಯವಸ್ಥೆ ಮೇಲೆ ನಂಬಿಕೆ ಇಡಬೇಕಿತ್ತು. ಬಜೆಟ್​ ಮಂಡನೆಯಾದ ಬಳಿಕ ಅವರು ಪ್ರತಿಕ್ರಿಯೆ ಕೊಡಬಹುದಿತ್ತು. ಕಿವಿಗೆ ಹೂವು ಹಾಕಿಕೊಂಡಿದ್ದು ಕಾಂಗ್ರೆಸ್ಸಿಗರ ದಿವಾಳಿತನ ತೋರಿಸುತ್ತದೆ. 75 ವರ್ಷಗಳ ರಾಜಕೀಯದಲ್ಲಿ ಯಾರೂ ಈ ರೀತಿ ಮಾಡಿರಲಿಲ್ಲ. ಬಜೆಟ್​​ಗೆ ಅಪಹಾಸ್ಯ ಮಾಡಿದ ಕುಖ್ಯಾತಿಗೆ ಕಾಂಗ್ರೆಸ್ಸಿಗರು ಗುರಿಯಾಗಿದ್ದಾರೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:23 pm, Sat, 18 February 23