Basavaraj Bommai: ಪಿಎಫ್‌ಐ, ಎಸ್‌ಡಿಪಿಐ ಕಪಿಮುಷ್ಟಿಯಲ್ಲಿ ಕಾಂಗ್ರೆಸ್; ಸಿಎಂ ಬೊಮ್ಮಾಯಿ
ಕಾಂಗ್ರೆಸ್ ಪಕ್ಷವು ಪಿಎಫ್‌ಐ, ಎಸ್‌ಡಿಪಿಐ ಕಪಿಮುಷ್ಟಿಯಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದರು.
ಹಾವೇರಿ: ಕಾಂಗ್ರೆಸ್ ಪಕ್ಷವು ಪಿಎಫ್‌ಐ, ಎಸ್‌ಡಿಪಿಐ ಕಪಿಮುಷ್ಟಿಯಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಗಂಭೀರ ಆರೋಪ ಮಾಡಿದರು. ಹಾವೇರಿ (Haveri) ಹೊರವಲಯದಲ್ಲಿ ನಡೆದ ಬಿಜೆಪಿ ನವ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಪಿಎಫ್‌ಐ, ಎಸ್‌ಡಿಪಿಐ ಒತ್ತಾಯಕ್ಕೆ ಮಣಿದು ಬಜರಂಗದಳ ನಿಷೇಧದ ಬಗ್ಗೆ ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪ್ರಸ್ತಾಪಿಸಿದೆ. ಬಜರಂಗದಳ ನಿಷೇಧಿಸಲು ಯಾರಿಗಾದರೂ ತಾಕತ್ತು ಇದೆಯೇ ಎಂದು ಪ್ರಶ್ನಿಸಿದರು. ಪ್ರಧಾನಿ ನರೇಂದ್ರ ಮೋದಿ ಹಾವೇರಿ ಜಿಲ್ಲೆಗೆ ಬಂದಿದ್ದಾರೆ. ಇಂದು ಬಿಜೆಪಿಯ ವಿಜಯದ ದಿನ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಕಾಂಗ್ರೆಸ್ನವರು ಸುಳ್ಳು ಗ್ಯಾರಂಟಿ ನೀಡುವುದರ ಜತೆಗೆ, ಸುಳ್ಳು ಆರೋಪ ಮಾಡುತ್ತಿದ್ದಾರೆ. ಕೊವಿಡ್ ಸಾಂಕ್ರಾಮಿಕದ ವಿರುದ್ಧ ಯಶಸ್ವಿಯಾಗಿ ಹೋರಾಡಿದ್ದೇವೆ ಎಂದು ಹೇಳಿದರು.
ನಿಷೇಧಿತ ಪಿಎಫ್‌ಐ ಜೊತೆ ಗುರುತಿಸಿಕೊಂಡಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಸಂಘಟನೆಯೊಂದಿಗೆ ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಬಿಜೆಪಿ ಶುಕ್ರವಾರ ಆರೋಪಿಸಿತ್ತು. ಕೇರಳ ಕಾಂಗ್ರೆಸ್ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರ ವಿಡಿಯೋವನ್ನು ಬಿಜೆಪಿ ರಾಜ್ಯ ಘಟಕ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಎರಡೂ ಕೈ ಜೋಡಿಸಿವೆ ಎಂದು ಆರೋಪಿಸಿತ್ತು. ಇದೀಗ ಮುಖ್ಯಮಂತ್ರಿ ಕೂಡ ಅಂಥದ್ದೇ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಪಿಎಫ್‌ಐ, ಎಸ್‌ಡಿಪಿಐ ಮೆಚ್ಚಿಸಲು ಬಜರಂಗದಳ ನಿಷೇಧಿಸಲು ಹೊರಟ ಕಾಂಗ್ರೆಸ್; ಉಡುಪಿಯಲ್ಲಿ ಅನಿಲ್ ಆ್ಯಂಟನಿ
ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ
ಕಾಂಗ್ರೆಸ್ನ ತುಷ್ಟೀಕರಣದಿಂದ ಕರ್ನಾಟಕದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು. ಲಿಂಗಾಯತ, ಹಿಂದುಳಿದ ವರ್ಗದ ಜನರು ಸಿಟ್ಟಿನಲ್ಲಿ ಇದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲು ಕಾಯುತ್ತಿದ್ದಾರೆ ಎಂದು ಹೇಳಿದರು. ಹಿಮಾಚಲ ಪ್ರದೇಶದಲ್ಲಿ ಸುಳ್ಳು ಗ್ಯಾರಂಟಿ ಘೋಷಿಸಿ ಅಧಿಕಾರಕ್ಕೆ ಬಂದರು. ಆದರೆ ಸರ್ಕಾರ ರಚಿಸಿದ ಮೇಲೆ ಯಾವುದೇ ಘೋಷಣೆ ಈಡೇರಿಸಿಲ್ಲ. ಕಾಂಗ್ರೆಸ್ನ ಸುಳ್ಳು ಗ್ಯಾರಂಟಿಗಳ ಇತಿಹಾಸವನ್ನು ಒಮ್ಮೆ ನೋಡಿ ಎಂದು ಮೋದಿ ಕಿಡಿಕಾರಿದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ