ಕೋಲಾರ: ಸಿದ್ದರಾಮಯ್ಯ(Siddaramaiah) ಅವರು ಈ ಬಾರಿ ಕೋಲಾರದಿಂದ(Kolar) ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಕ್ಷೇತ್ರದಲ್ಲಿ ರಾಜಕೀಯ ರಂಗೇರಿದೆ. ದಿನಕ್ಕೊಂದು ರಾಜಕೀಯ ಬೆಳವಣಿಗೆಗಳಲು ನಡೆಯುತ್ತಲೇ ಇವೆ. ನಿನ್ನೆ (ಜನವರಿ 30) ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಅವರು ಕೋಲಾರಕ್ಕೆ ಭೇಟಿ ನೀಡಿ ಹಲವು ಮುಖಂಡರ ಜೊತೆ ಮಾತುಕತೆ ನಡೆಸಿ ಹೋಗಿದ್ದರು. ಇದೀಗ ಶಾಸಕರಾದ ಕೃಷ್ಣಬೈರೇಗೌಡ, ಶ್ರೀನಿವಾಸಗೌಡ, ನಂಜೇಗೌಡ ಸೇರಿದಂತೆ ಹಲವು ನಾಯಕರು ಸಿದ್ದರಾಮಯ್ಯನವರ ಪರವಾಗಿ ಒಕ್ಕಲಿಗ ಸಮುದಾಯದ ಮತ ಬೇಟೆಗೆ ಇಳಿದಿದ್ದಾರೆ.
ಇದನ್ನೂ ಓದಿ: ಯತೀಂದ್ರ ಸಿದ್ದರಾಮಯ್ಯ ಕೋಲಾರ ರೌಂಡ್ಸ್: ಕುರುಬ ಸಮುದಾಯದ ವೋಟ್ ಕ್ರೋಢೀಕರಣ
ಹೌದು..ಒಕ್ಕಲಿಗ ಶಾಸಕರುಗಳಾದ ಕೃಷ್ಣಬೈರೇಗೌಡ, ಶ್ರೀನಿವಾಸಗೌಡ, ಹಾಗೂ ನಂಜೇಗೌಡ ಹಾಗೂ ವಿಧಾನಪರಿಷತ್ ಸದಸ್ಯ ಅನಿಲ್ ಕುಮಾರ್ ಅವರುಗಳು ನೇತೃತ್ವದಲ್ಲಿ ವೇಮಗಲ್ ಹೋಬಳಿಯ ಒಕ್ಕಲಿಗ ಮುಖಂಡರ ಸಭೆ ನಡೆಸಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಅವರ ಪರವಾಗಿ ಒಕ್ಕಲಿಗರು ಕೂಡಾ ಒಂದಾಗಬೇಕು ಎಂದು ಸಭೆಯಲ್ಲಿ ಸಮುದಾಯದ ಮುಖಂಡರಿಗೆ ಮನವಿ ಮಾಡಿದರು. ಈ ಮೂಲಕ ಸಿದ್ದರಾಮಯ್ಯ ಪರವಾಗಿ ಒಕ್ಕಲಿಗರನ್ನು ಒಂದುಗೂಡಿಸಲು ಕೆಲಸಕ್ಕೆ ಕೈಹಾಕಿದ್ದಾರೆ.
ಈ ವೇಳೆ ಮಾತನಾಡಿದ ಶಾಸಕ ಕೃಷ್ಣಬೈರೇಗೌಡ ಮಾತನಾಡಿ ಎಲ್ಲರಿಗೂ ಕೂಡಾ ಜಾತಿ ಅಭಿಮಾನ ಇರಬೇಕು. ಅದರೆ, ಜಾತಿಯನ್ನಿಟ್ಟುಕೊಂಡು ರಾಜಕೀಯ ಮಾಡಬಾರದು ಎಂದು ಒಕ್ಕಲಿಗ ಮುಖಂಡರಿಗೆ ಮನವಿ ಮಾಡಿದ ಅವರು, ರಾಜ್ಯದ ಅಭಿವೃದ್ದಿ ದೃಷ್ಟಿಯಿಂದ ರೈತರ ಹಿತದೃಷ್ಟಿಯಿಂದ ಸಿದ್ದರಾಮಯ್ಯ ಅವರು ಅದರಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕ್ಕೆ ಬರಬೇಕು ಎಂದು ಮನವಿ ಮಾಡಿದರು.
ಕೋಲಾರದಲ್ಲಿ ಅಲ್ಪಸಂಖ್ಯಾತರ ಮತಗಳಷ್ಟೇ ಒಕ್ಕಲಿಗ ಮತಗಳು ಕೂಡಾ ಪ್ರಾಮುಖ್ಯತೆ ಪಡೆದಿದೆ. ಒಂದು ಲೆಕ್ಕದಲ್ಲಿ ಒಕ್ಕಲಿಗ ಮತಗಳು ನಿರ್ಣಾಯಕ ಅಂತನೇ ಹೇಳಬಹುದು. ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಸಮುದಾಯದ ಮತಗಳ ಬುಟ್ಟಿಗೆ ಕೈಹಾಕಿರುವ ಕಾಂಗ್ರೆಸ್, ಮೊದಲು ಅಲ್ಪಸಂಖ್ಯಾತರು ನಂತರ, ಒಕ್ಕಲಿಗರು, ನಂತರದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮತಗಳನ್ನು ಸೆಳೆಯಲು ಪ್ಲಾನ್ ಮಾಡಿದೆ. ಈ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ.
ವರದಿ: ರಾಜೇಂದ್ರ ಸಿಂಹ ಟಿವಿ9 ಕೋಲಾರ
Published On - 4:36 pm, Tue, 31 January 23