ಮತದಾನದ ದಿನವೇ ಕಾಂಗ್ರೆಸ್ ಹಾಲಿ ಶಾಸಕನ ಸಹೋದರನ ಮೇಲೆ ರಣ ಭೀಕರ ಅಟ್ಯಾಕ್; ವಿಡಿಯೋ ವೈರಲ್
ಬಿಸಿಲನಾಡು ರಾಯಚೂರಿನಲ್ಲಿ ನಿನ್ನೆ(ಮೇ.10) ಬಹುತೇಕ ಕಡೆ ಶಾಂತಿಯುತ ಮತದಾನ ನಡೀತು. ಇನ್ನೇನು ಸಂಜೆ ಆಯ್ತು, ಮತದಾನ ಮುಗೀತು ಅನ್ನೋವಾಗಲೇ ಅದೊಂದು ಮಾರಾಮಾರಿ ನಡೆದುಹೋಗಿದೆ. ಹಾಲಿ ಕಾಂಗ್ರೆಸ್ ಶಾಸಕರೊಬ್ಬರ ಸಹೋದರನ ಮೇಲೆ ಅಟ್ಯಾಕ್ ಮಾಡಿ, ಭೀಕರ ಹಲ್ಲೆ ನಡೆಸಲಾಗಿದೆ.
ರಾಯಚೂರು: ಹೀಗೆ ವೀಲ್ ಚೇರ್ ಮೇಲೆ ಕುಳಿತುಕೊಂಡು ಚಿಕಿತ್ಸೆಗೊಳಪಟ್ಟಿರುವ ವ್ಯಕ್ತಿಯ ಹೆಸರು ಸಿದ್ದನಗೌಡ. ಇತ ಜಿಲ್ಲೆಯ ಮಸ್ಕಿ (Maski) ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ಬಸನಗೌಡ ತುರ್ವಿಹಾಳ(Basanagouda Turuvihal) ಅವರ ಸಹೋದರ. ನಿನ್ನೆ (ಮೇ.10) ಬೆಳಿಗ್ಗೆಯಿಂದ ಸಂಜೆ 6 ಗಂಟೆಯವರೆಗೂ ಮಸ್ಕಿ ಸೇರಿ ಇಡೀ ಜಿಲ್ಲೆಯಾದ್ಯಂತ ಶಾಂತಿಯುತ ಮತದಾನ ನಡೆದಿತ್ತು. ಇನ್ನೇನು ಎಲ್ಲವೂ ಅಂದುಕೊಂಡಂತೆ ಪೀಸ್ ಪುಲ್ ಆಗಿ ಆಯ್ತು, ಎಂದು ಅಧಿಕಾರಿಗಳು ಅಂದುಕೊಳ್ಳುವಾಗಲೇ ಮಸ್ಕಿ ಪಟ್ಟಣದಲ್ಲಿ ರಣ ಭೀಕರ ಘಟನೆ ನಡೆದು ಹೋಗಿದೆ. ನಿನ್ನೆ ಮತದಾನದ ಬಳಿಕ ಸಂಜೆ 6.30 ರ ಸುಮಾರಿಗೆ ಶಾಸಕರ ಸಹೋದರ ಸಿದ್ದನಗೌಡ, ಮಸ್ಕಿ ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿಯ ಬೂತ್ಗಳ ಬಳಿ ಕಾರ್ನಲ್ಲಿ ಹೋಗುತ್ತಿದ್ದರಂತೆ. ಬಳಿಕ ಕಾರ್ ನಿಲ್ಲಿಸಿ ಆತ ಕೆಳಗಿಳಿಯುತ್ತದ್ದಂತೆ ಅಲ್ಲೇ ಇದ್ದ ಅದೊಂದು ಗ್ಯಾಂಗ್ ಶಾಸಕರ ಸಹೋದರ ಸಿದ್ದನಗೌಡ ಹಾಗೂ ಆತನ ಜೊತೆಗಿದ್ದವರ ಮೇಲೆ ರಾಡ್ನಿಂದ ಹಲ್ಲೆ ನಡೆಸಿದ್ದಾರಂತೆ. ಹೌದು ನಡು ರಸ್ತೆಯಲ್ಲಿ ಶಾಸಕರ ಸಹೋದರನನ್ನ ಅಟ್ಟಾಡಿಸಿ ಹೊಡೆಯಲಾಗಿದೆ.
ಬೈ ಇಲೆಕ್ಷನ್ ವೇಳೆ ಮಸ್ಕಿ ಕ್ಷೇತ್ರ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ತೊರೆದು ಕಮಲ ಹಿಡಿದಿದ್ದ ಈಗಿನ ಮಸ್ಕಿ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಮತ್ತು ಇಲ್ಲಿನ ಕಾಂಗ್ರೆಸ್ನ ಹಾಲಿ ಶಾಸಕ ಬಸನಗೌಡ ತುರ್ವಿಹಾಳ ನಡುವೆ ನೇರಾನೇರ ಪೈಪೋಟಿ ಇದೆ. ಜೊತೆಗೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಮಧ್ಯದ ಕಿತ್ತಾಟ ಬೂದಿ ಮುಚ್ಚಿದ ಕೆಂಡದಂತೆ ಇತ್ತು. ಆದ್ರೆ, ಅದು ನಿನ್ನೆ ಬ್ಲಾಸ್ಟ್ ಆಗಿದೆ. ಮತದಾನದ ಹಿಂದಿನ ಅಂದ್ರೆ, ಮೊನ್ನೆ ಯಾರೋ ಮಾಟ ಮಂತ್ರ ಮಾಡಿಸುತ್ತಿದ್ದರ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಇದೇ ಸಿದ್ದನಗೌಡಗೆ ಮಾಹಿತಿ ನೀಡಿದ್ರು. ನಂತರ ಅಲ್ಲಿ ಸಿಕ್ಕಿಬಿದ್ದಿದ್ದ ಓರ್ವನಿಗೆ ಸಿದ್ದನಗೌಡ ಕಪಾಳಕ್ಕೆ ಹೊಡೆದು ಬುದ್ದಿ ಹೇಳಿದ್ರಂತೆ. ಅದರ ಮುಂದುವರೆದ ಭಾಗವಾಗಿ ನಿನ್ನೆ ಮತದಾನ ಮುಕ್ತಾಯವಾದ ಬಳಿಕ ಈ ಗಲಾಟೆ ನಡೆದಿರೊ ಬಗ್ಗೆ ಕಾಂಗ್ರೆಸ್ ಮುಖಂಡರು ಶಂಕೆ ವ್ಯಕ್ತ ಪಡಿಸುತ್ತಿದ್ದಾರೆ.
ಇದನ್ನೂ ಓದಿ:‘ಎಲ್ಲಾ ಬಿಟ್ಟು ಆದಿಮಾನವ ಆಗೋಣ’; ಚುನಾವಣೆ ಮುಗಿದ ಬಳಿಕ ಬದಲಾದ ಯೋಗರಾಜ್ ಭಟ್
ಕಾಂಗ್ರೆಸ್ ಶಾಸಕ ಬಸನಗೌಡ ತುರ್ವಿಹಾಳ ಸಹೋದರ ಸಿದ್ದನಗೌಡನ ಮೇಲೆ ಬಿಜೆಪಿಯ ಕಾರ್ಯಕರ್ತರ ಗುಂಪು ಬೇಕಂತಲೇ ದಾಳಿ ಮಾಡಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. ಇತ್ತ ಘಟನೆಯಲ್ಲಿ ಸಿದ್ದನಗೌಡ, ಮೌಲಾನಾ ಸಾಬ್ ಸೇರಿ ನಾಲ್ವರಿಗೆ ಗಾಯಗಳಾಗಿದ್ದು ಸಿಂಧನೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಈ ಬಗ್ಗೆ ಮಸ್ಕಿ ಪೊಲೀಸರು ಕೂಡ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸದ್ಯ ಶಾಸಕರ ಸಹೋದರನ ಮೇಳೆ ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ. ಹಲ್ಲೆಗೊಳಗಾದವರ ಕಡೆಯವರು ನೀಡುವ ದೂರಿನನ್ವಯ ತನಿಖೆ ನಡೆಸಲಾಗುತ್ತೆ ಎಂದು ಪೊಲೀಸರು ಹೇಳುತ್ತಿದ್ದಾರೆ.
ವರದಿ: ಭೀಮೇಶ್ ಟಿವಿ9 ರಾಯಚೂರು
ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ