ಚುನಾವಣಾ ಆಯೋಗಕ್ಕೆ ಉತ್ತರ ಕೊಟ್ಟಾಗಿದೆ, ಈಗ ಆಧಾರ ಕೇಳಿದ್ದಾರೆ ಎಂದ ಡಿಕೆ ಶಿವಕುಮಾರ್
ಕಾಂಗ್ರೆಸ್ ಪಕ್ಷ ನೀಡಿರುವ ಜಾಹಿರಾತು ಸಂಬಂಧ ಚುನಾವಣಾ ಆಯೋಗದಿಂದ ನೋಟಿಸ್ ಬಂದ ವಿಚಾರಕ್ಕೆ ಸಂಬಂಧಿಸಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು: ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪಿಸಿ ಕಾಂಗ್ರೆಸ್ ಪಕ್ಷ ನೀಡಿರುವ ಜಾಹಿರಾತು ಸಂಬಂಧ ಚುನಾವಣಾ ಆಯೋಗದಿಂದ ನೋಟಿಸ್ ಬಂದ ವಿಚಾರಕ್ಕೆ ಸಂಬಂಧಿಸಿ ಡಿಕೆ ಶಿವಕುಮಾರ್(DK Shivakumar) ಪ್ರತಿಕ್ರಿಯೆ ನೀಡಿದ್ದಾರೆ. ನಾನು ಚುನಾವಣಾ ಆಯೋಗಕ್ಕೆ ಉತ್ತರ ಕೊಟ್ಟಿದ್ದೇನೆ. ಚುನಾವಣಾ ಆಯೋಗ ಅಧಿಕಾರಿಗಳು ಈಗ ಆಧಾರ ಕೇಳಿದ್ದಾರೆ. ಆದ್ರೆ ಕಾಂಗ್ರೆಸ್ ವಿರುದ್ಧ ಅಮಿತ್ ಶಾ(Amit Shah), ಜೆಪಿ ನಡ್ಡಾ(JP Nadda) ಕಾಂಗ್ರೆಸ್ ಬಂದ್ರೆ ಕೋಮು ಗಲಭೆ ಆಗುತ್ತೆ ಎಂದಿದ್ದಾರೆ. ಇವರಿಗೆ ಏಕೆ ನೋಟಿಸ್ ಕೊಟ್ಟಿಲ್ಲ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ನನಗೆ ನೋಟಿಸ್ ನೀಡಿದ್ರು, ದಾಖಲೆ ಏನು ಅಂತ. ನಾನು ಚುನಾವಣಾ ಆಯೋಗಕ್ಕೆ ಉತ್ತರ ಕೊಟ್ಟಿದ್ದೀನಿ. ಈಗ ಆಧಾರ ಏನು ಅಂತ ಕೇಳಿದ್ದಾರೆ. ಯತ್ನಾಳ್, ವಿಶ್ವನಾಥ್, ಗೂಳಿಹಟ್ಟಿ ಶೇಖರ್ ಈ ಬಗ್ಗೆ ಹೇಳಿಕೆ ನೀಡಿದ್ದರು. ಬಿಜೆಪಿ ನಾಯಕರ ಹೇಳಿಕೆ ಮೇಲೆಯೇ ಪ್ರಚಾರ ಮಾಡಿದ್ದೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಕೋಮು ಗಲಭೆ ಆಗುತ್ತೆ ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದಾರೆ. ಅವರಿಗೂ ನೋಟಿಸ್ ಕೊಡಬೇಕು ಅಲ್ವಾ? ನಿಮಗೆ ಪಾರ್ಟಿ ನಡೆಸೋಕೆ ಬಂದಿಲ್ಲ. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದು ಬೀದಿ ಬೀದಿ ರೋಡ್ ಅಲೆಸ್ತಾ ಇದ್ದೀರಾ ಎಂದು ಬಿಜೆಪಿ ವಿರುದ್ಧ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ಗೆ ಬಿಜೆಪಿ ಲೀಗಲ್ ನೋಟಿಸ್, ಕ್ಷಮೆಯಾಚಿಸಲು ಸೂಚನೆ
ಇದೇ ವೇಳೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ನಾವು 141 ಸ್ಥಾನ ಗೆಲ್ಲುತ್ತೇವೆ. ಮೇ 13ರಂದು ನಾವು ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ಯಾರ ನೇತೃತ್ವದ ಕ್ಯಾಬಿನೆಟ್ ಎಂದು ಮೇ 15ರಂದು ಮಲ್ಲಿಕಾರ್ಜುನ ಖರ್ಗೆ ಘೋಷಣೆ ಮಾಡ್ತಾರೆ ಎಂದರು.
ನೂರಕ್ಕೆ ನೂರರಷ್ಟು ಬಹುಮತ ಪಡೆದು BJP ಅಧಿಕಾರಕ್ಕೆ ಬರುತ್ತೆ
ಇನ್ನು ಮತ್ತೊಂದೆಡೆ ನೂರಕ್ಕೆ ನೂರರಷ್ಟು ಬಹುಮತ ಪಡೆದು BJP ಅಧಿಕಾರಕ್ಕೆ ಬರುತ್ತೆ ಎಂದು ಮಂಗಳೂರಿನಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕಟೀಲು ಹೇಳಿಕೆ ನೀಡಿದ್ದಾರೆ. ಚುನಾವಣೆ ಘೋಷಣೆಗೂ ಮುನ್ನ ಪ್ರಧಾನಿ 16 ಬಾರಿ ಬಂದಿದ್ದರು. ಚುನಾವಣೆ ಘೋಷಣೆಯಾದ ಬಳಿಕ ಮೋದಿ 20 ಬಾರಿ ಬಂದಿದ್ದಾರೆ. ಇದರ ಪರಿಣಾಮ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಡಬಲ್ ಇಂಜಿನ್ ಸರ್ಕಾರದ ಸಾಧನೆಗಳು ಜನರಿಗೆ ತಲುಪಿದೆ. ಈ ಹಿಂದೆ ಹಳೇ ಮೈಸೂರು ಜೆಡಿಎಸ್ ಭದ್ರಕೋಟೆ ಅಂತಾ ಇತ್ತು. ಮೋದಿ, ಅಮಿತ್ ಶಾ ಭೇಟಿಯಿಂದ ಅಲ್ಲೂ ನಮಗೆ ಬೆಂಬಲ ಸಿಕ್ಕಿದೆ. ನಮ್ಮ ಸರ್ಕಾರ SC, ST ಸಮುದಾಯದ ಮೀಸಲಾತಿ ಹೆಚ್ಚಿಸಿದೆ. BJP ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸುವ ಕೆಲಸ ಮಾಡಿದೆ ಎಂದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:52 am, Mon, 8 May 23