ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ (Karnataka Assembly elections) ಚುನಾವಣಾ ಸಂಬಂಧಿತ ಕಾರ್ಯಗಳಲ್ಲಿ ನಿರತರಾಗಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಬಾರದು ಎಂದು ಮುಖ್ಯ ಚುನಾವನಾ ಆಯುಕ್ತ (CEO) ಮನೋಜ್ ಕುಮಾರ್ ಮೀನಾ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾಗೆ ಪತ್ರ ಬರೆದಿದ್ದಾರೆ. ಶೀಘ್ರದಲ್ಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದೂ ಅವರು ತಿಳಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕೆಲವು ಮಂದಿ ಅಧಿಕಾರಿಗಳ ವರ್ಗಾವಣೆ ಮಾಡಿರುವ ಬಗ್ಗೆ ಮುಖ್ಯ ಚುನಾವನಾ ಆಯುಕ್ತರು ಅಸಮಾಧಾನ ವ್ಯಕ್ತಪಡಿಸಿದ್ದು, ಆಯೋಗದ ಅನುಮತಿ ಇಲ್ಲದೆ ಇನ್ನು ಮುಂದೆ ವರ್ಗಾವಣೆ ನಿರ್ಧಾರ ಕೈಗೊಳ್ಳಬಾರದು ಎಂದು ಸೂಚಿಸಿದ್ದಾರೆ.
2023ರ ಕರ್ನಾಟಕ ವಿಧಾನಸಭಾ ಚುನಾವಣಿಯು ಸನ್ನಿಹಿತವಾಗುತ್ತಿದ್ದು, ಕೇಂದ್ರ ಚುನಾವಣಾ ಆಯೋಗವು ಸದ್ಯದಲ್ಲಿಯೇ ನೀತಿ ಸಂಹಿತೆಯನ್ನು ಜಾರಿಗೊಳಿಸಲಿದೆ. ಈ ಹಂತದಲ್ಲಿ ಚುನಾವಣಾ ಕಾರ್ಯದಲ್ಲಿ ನಿರತರಾದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಮುಖ್ಯ ಚುನಾವಣಾಧಿಕಾರಿಯವರ ಅನುಮತಿ ಪಡೆಯದೇ ವರ್ಗಾವಣೆ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಎಲ್ಲಾ ವರ್ಗಾವಣೆ ಪ್ರಕ್ರಿಯೆಗಳಿಗೆ ಮುಖ್ಯ ಚುನಾವಣಾಧಿಕಾರಿಯವರ ಅನುಮತಿ ಪಡೆಯಲು ಮಾರ್ಚ್ 8ರಂದು ಅರೆ ಸರ್ಕಾರಿ ಪತ್ರದ ಮೂಲಕ ತಿಳಿಸಿದ್ದಾಗ್ಯೂ, ಹಲವು ಇಲಾಖೆಗಳು ನಿರ್ದೇಶನವನ್ನು ಪರಿಗಣಿಸದೇ ವರ್ಗಾವಣೆ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತಿವೆ. ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳುವ ಮೊದಲು ಮುಖ್ಯ ಚುನಾವಣಾಧಿಕಾರಿಯವರ ಅನುಮತಿ ಪಡೆದು, ನಂತರ ವರ್ಗಾವಣೆ ಆದೇಶಗಳನ್ನು ಹೊರಡಿಸುವಂತೆ ಎಲ್ಲಾ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಮತ್ತೊಮ್ಮೆ ತಮ್ಮನ್ನು ಕೋರುತ್ತಿದ್ದೇವೆ. ಇದನ್ನು ಉಲ್ಲಂಘಿಸಿದಲ್ಲಿ ಚುನಾವಣಾ ಆಯೋಗವು ಕ್ರಮ ಕೈಗೊಳ್ಳಲಿದೆ ಎಂಬುದನ್ನು ಈ ಮೂಲಕ ತಿಳಿಸುತ್ತಿದ್ದೇವೆ ಎಂದು ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಚುನಾವಣಾ ಆಯುಕ್ತರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Karnataka Assembly Election: ಅಂಗವಿಕಲರು, 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ
ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇತೃತ್ವದ ನಿಯೋಗ ಇತ್ತೀಚೆಗಷ್ಟೇ ರಾಜ್ಯಕ್ಕೆ ಭೇಟಿ ನೀಡಿ ಚುನಾವಣಾ ಸಿದ್ಧತೆ ಪರಿಶೀಲನೆಗಳನ್ನು ನಡೆಸಿತ್ತು. ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಅನೇಕ ಕಾರ್ಯಕ್ರಮ, ಸಂವಾದಗಳಲ್ಲಿಯೂ ಭಾಗವಹಿಸಿತ್ತು. ರಾಜಕೀಯ ಪಕ್ಷಗಳ ಮುಖಂಡರ ಜತೆ ವಿಧಾನಸೌಧದಲ್ಲಿ ಸಭೆ ನಡೆಸಿತ್ತು. ಈ ವೇಳೆ, ರಾಜಕೀಯ ಪಕ್ಷಗಳ ಅಹವಾಲುಗಳನ್ನೂ ಸ್ವೀಕರಿಸಿತ್ತು.
ಪರೀಕ್ಷೆ, ಹಬ್ಬಗಳು ಇತ್ಯಾದಿ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿಯೇ ನಾವು ಚುನಾವಣೆ ದಿನಾಂಕ ನಿಗದಿಪಡಿಸುತ್ತೇವೆ. ಒಂದೇ ಹಂತದಲ್ಲಿ ಚುನಾವಣೆ ಮಾಡುವ ಬಗ್ಗೆ ರಾಜಕೀಯ ಪಕ್ಷಗಳು ಮನವಿ ಮಾಡಿವೆ. ಎಲ್ಲದರ ಬಗ್ಗೆಯೂ ವಿಮರ್ಶೆ ಮಾಡುತ್ತೇವೆ ಎಂದು ರಾಜೀವ್ ಕುಮಾರ್ ತಿಳಿಸಿದ್ದರು.
ಇನ್ನಷ್ಟು ಚುನಾವಣೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ