ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಪುತ್ರ ನಿವೇದಿತ್ ಆಳ್ವಾ ವಿರುದ್ದ ತೊಡೆತಟ್ಟಿದ ಮಾಜಿ ಶಾಸಕಿ ಶಾರದಾ ಶೆಟ್ಟಿ
ಜಿಲ್ಲೆಯ ಕುಮಟಾ ಕ್ಷೇತ್ರ ಇದೀಗ ಇಡೀ ಜಿಲ್ಲೆಯಲ್ಲಿಯೇ ಗಮನ ಸೆಳೆದ ಕ್ಷೇತ್ರವಾಗಿದೆ. ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಸಾಕಷ್ಟು ಕಗ್ಗಂಟಾಗಿತ್ತು. ವಿರೋಧದ ನಡುವೆ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಪುತ್ರ ನಿವೇದಿತ್ ಆಳ್ವಾಗೆ ಟಿಕೆಟ್ ಕೊಡಲಾಗಿದೆ. ಸದ್ಯ ಮಾಜಿ ಶಾಸಕಿ ಶಾರದಾ ಶೆಟ್ಟಿ ಕಾಂಗ್ರೆಸ್ಗೆ ತೊಡೆ ತಟ್ಟಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.
ಉತ್ತರ ಕನ್ನಡ: ಹೌದು ರಾಜ್ಯದಲ್ಲಿ ಸದ್ಯ ಚುನಾವಣಾ ಕಾವು ಜೋರಾಗಿದೆ. ಜಿಲ್ಲೆಯ ಕುಮಟಾ ಕ್ಷೇತ್ರದಲ್ಲೂ ರಾಜಕೀಯ ದಿನೇ ದಿನೇ ರಂಗೇರುತ್ತಿದ್ದು ಕಾಂಗ್ರೆಸ್ ಪಕ್ಷದಲ್ಲಿನ ಬಂಡಾಯ ಸಾಕಷ್ಟು ಸದ್ದು ಮಾಡುತ್ತಿದೆ. ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಟಿಕೆಟ್ಗಾಗಿ ಹದಿನಾಲ್ಕು ಜನ ಮುಖಂಡರು ಅರ್ಜಿ ಸಲ್ಲಿಸಿದ್ದರು. ಆದರೆ ಕ್ಷೇತ್ರದವರಲ್ಲದ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಪುತ್ರ ನಿವೇದಿತ್ ಆಳ್ವಾ(Nivedith Alva)ಗೆ ಟಿಕೆಟ್ ನೀಡಲಾಗಿದೆ. ಇದು ಕಾಂಗ್ರೆಸ್ ಪಕ್ಷದೊಳಗೆ ಭಿನ್ನಮತ ಸೃಷ್ಟಿ ಮಾಡಿದೆ. ಇದನ್ನ ಶಮನ ಮಾಡುವ ಪ್ರಯತ್ನಕ್ಕೆ ನಾಯಕರು ಒಂದೆಡೆ ಇಳಿದರೆ, ಇನ್ನೊಂದೆಡೆ ಇದಕ್ಕೆ ಬಗ್ಗದ ಮಾಜಿ ಶಾಸಕಿ ಶಾರದಾ ಶೆಟ್ಟಿ(sharada shetty) ಪಕ್ಷೇತರವಾಗಿ ಈ ಬಾರಿ ನಾಮಪತ್ರ ಸಲ್ಲಿಸುವ ಮೂಲಕ ತಮ್ಮ ಪಕ್ಷದ ಅಭ್ಯರ್ಥಿ ವಿರುದ್ದವೇ ತೊಡೆ ತಟ್ಟಿದ್ದಾರೆ.
ಇನ್ನು ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದ ಟಿಕೆಟ್ಗಾಗಿ ಇಡೀ ಜಿಲ್ಲೆಯಲ್ಲಿಯೇ ಅತಿಹೆಚ್ಚು ಅರ್ಜಿ ಸಲ್ಲಿಸಲಾಗಿತ್ತು. ಈ ಬಾರಿ ಕಾಂಗ್ರೆಸ್ ಪಕ್ಷದ ಗಾಳಿ ಇದ್ದ ಹಿನ್ನಲೆಯಲ್ಲಿ ಗೆಲುವು ಸುಲಭವಾಗಬಹುದು ಎಂದು ಹಲವರು ಟಿಕೆಟ್ಗಾಗಿ ಪ್ರಯತ್ನ ನಡೆಸಿದ್ದರು. ಅಂತಿಮವಾಗಿ ನಿವೇದಿತ್ ಆಳ್ವಾಗೆ ಟಿಕೆಟ್ ಸಿಕ್ಕಿದ್ದು ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ಶಾರದಾ ಶೆಟ್ಟಿ ಬಂಡಾಯದ ಬಗ್ಗೆ ಮಾತನಾಡಿರುವ ಅಭ್ಯರ್ಥಿ ನಿವೇದಿತ್ ಆಳ್ವಾ, ‘ತಾಯಿ ಮಾರ್ಗರೇಟ್ ಆಳ್ವಾ ಮನೆಯಲ್ಲಿದ್ದ ಶಾರದಾ ಶೆಟ್ಟಿ ಅವರನ್ನ ತಂದು ಎರಡು ಬಾರಿ ಟಿಕೆಟ್ ಕೊಟ್ಟು ಎಂ.ಎಲ್.ಎ ಮಾಡಿದ್ದು ನಾನು. ಅವರು ಚುನಾವಣೆಗೆ ನಿಲ್ಲಲಿ. ಗೆದ್ದರೆ ಖುಷಿ ಪಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ:Twitter Blue Tick: ರಾಹುಲ್ ಗಾಂಧಿ, ಯೋಗಿ, ಕೇಜ್ರಿವಾಲ್ ಸೇರಿದಂತೆ ಹಲವರ ಟ್ವಿಟ್ಟರ್ ಖಾತೆಯಲ್ಲಿ ಬ್ಲ್ಯೂ ಟಿಕ್ ಮಾಯ
ಸದ್ಯ ಬಂಡಾಯ ಎದ್ದಿರುವ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರನ್ನ ಮನವೊಲಿಸುವ ಕಾರ್ಯ ಸಹ ಮಾಡಲಾಗಿದೆ. ಇನ್ನು ನಾಮಪತ್ರ ಸಲ್ಲಿಕೆ ದಿನಾಂಕ ಮುಗಿದಿದ್ದು ನಾಮಪತ್ರ ವಾಪಾಸ್ ಪಡೆಯಲು ಎರಡು ದಿನ ಅವಕಾಶವಿದೆ. ಕುಮಟಾ ಕಾಂಗ್ರೆಸ್ನಲ್ಲಿ ಬಂಡಾಯ ಶಮನವಾಗಿ ಮಾಜಿ ಶಾಸಕಿ ನಾಮಪತ್ರ ವಾಪಾಸ್ ತೆಗೆದುಕೊಳ್ಳುತ್ತಾರೋ ಅಥವಾ ಚುನಾವಣಾ ಕಣದಲ್ಲಿ ಮುಂದುವರೆಯುತ್ತಾರೋ ಎನ್ನುವುದನ್ನ ಕಾದು ನೋಡಬೇಕಾಗಿದೆ.
ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ