ಹುಬ್ಬಳ್ಳಿ: ಟಿಕೆಟ್ ಘೋಷಣೆಯಾಗದ ಹಿನ್ನೆಲೆ ಬಿಜೆಪಿ ಹಿರಿಯ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಬುಧವಾರ (ಏಪ್ರಿಲ್ 12) ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಶೆಟ್ಟರ್ ಅವರಿಗೆ ಪಕ್ಷದಿಂದ ಟಿಕೆಟ್ ನಿರಾಕರಿಸಿದ ನಂತರ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಎಚ್ಚರಿಕೆ ನಡುವೆ ಬಿಜೆಪಿ ಹೈಕಮಾಂಡ್ (BJP High Commond) ಅವರನ್ನು ಆಹ್ವಾನಿಸಿದೆ. ಸದ್ಯ ಇಂದು ರಾತ್ರಿ ಬಡುಗಡೆಯಾದ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯಲ್ಲಿ ಶೆಟ್ಟರ್ ಪ್ರತಿನಿಧಿಸುತ್ತದ್ದ ಕ್ಷೇತ್ರ ಹುಬ್ಬಳ್ಳಿ ಧಾರವಾಡ ಕೇಂದ್ರದ ಟಿಕೆಟ್ ಘೋಷಣೆ ಮಾಡದೆ ಬಾಕಿ ಉಳಿಸಲಾಗಿದ್ದು, 2ನೇ ಹಂತದ ಪಟ್ಟಿಯಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ.
ಟಿಕೆಟ್ ಸಿಗದ ಬಗ್ಗೆ ಪ್ರತಿಕ್ರಿಯೆ ನೀಡಿದ ಜಗದೀಶ್ ಶೆಟ್ಟರ್, “ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಇರಬೇಕಿತ್ತು. ಆದರೆ ಹೆಸರು ಘೋಷಣೆಯಾಗಿಲ್ಲ. ನಾಳೆ ದೆಹಲಿಗೆ ರಾಷ್ಟ್ರೀಯ ಅಧ್ಯಕ್ಷರು ನನ್ನನ್ನು ಆಹ್ವಾನಿಸಿದ್ದಾರೆ. ನಾನು ದೆಹಲಿಯಿಂದ ಯಾರನ್ನೂ ಸಂಪರ್ಕಿಸಿಲ್ಲ ಆದರೆ ಅವರು ನನ್ನನ್ನು ಆಹ್ವಾನಿಸಿದ್ದಾರೆ. ನನ್ನ ನಿರ್ಧಾರವನ್ನು ಈಗಾಗಲೇ ಅವರಿಗೆ ತಿಳಿಸಿದ್ದೇನೆ. ನನಗೆ ಟಿಕೆಟ್ ಸಿಗುವ ಭರವಸೆ ಇದೆ. ನಾನು ಸ್ಪರ್ಧಿಸುವುದು ಖಚಿತ” ಎಂದು ಹುಬ್ಬಳ್ಳಿಯಲ್ಲಿ ಹೇಳಿದರು.
ಇದನ್ನೂ ಓದಿ: Jagadish Shettar: ಬಿಜೆಪಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗುಡ್ ಬೈ; ರಾಜೀನಾಮೆ ಪತ್ರ ವೈರಲ್, ಸ್ಪಷ್ಟನೆ ನೀಡಿದ ಶೆಟ್ಟರ್
ಹುಬ್ಬಳ್ಳಿಯ ಬಿಜೆಪಿ ಶಾಸಕ ಜಗದೀಶ್ ಶೆಟ್ಟರ್ ಇದುವರೆಗೆ ಆರು ಬಾರಿ ಗೆದ್ದಿದ್ದಾರೆ. “ನಾನು ಆರು ಬಾರಿ 21,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಆಯ್ಕೆಯಾಗಿದ್ದೇನೆ. ನನ್ನ ವಿರುದ್ಧ ಯಾವುದೇ ಆರೋಪಗಳಿಲ್ಲ. ನನ್ನನ್ನು ಏಕೆ ಚುನಾವಣೆಯಿಂದ ಹೊರಗಿಡಲಾಗಿದೆ? ನಾನು ಈಗಾಗಲೇ ನನ್ನ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದು, ಅದನ್ನು ತೀವ್ರಗೊಳಿಸುತ್ತೇನೆ” ಎಂದು ಹೇಳಿದ್ದಾರೆ.
ಬಿಜೆಪಿ ಹೈಕಮಾಂಡ್ ಚುನಾವಣೆಯಲ್ಲಿ ಸ್ಪರ್ಧಿಸದೆ ಹೊಸ ಮುಖಗಳಿಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಂಡ ನಂತರ 67 ವರ್ಷದ ಬಿಜೆಪಿ ನಾಯಕ ಶೆಟ್ಟರ್, ಸುದ್ದಿಗೋಷ್ಠಿ ನಡೆಸಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಅಲ್ಲದೆ, ಟಿಕೆಟ್ ನೀಡದಿದ್ದರೂ ಸ್ಪರ್ಧೆ ಮಾಡುತ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸ್ವತಂತ್ರವಾಗಿ ಸ್ಪರ್ಧಿಸುವ ಎಚ್ಚರಿಕೆ ನೀಡಿದ್ದರು.
ಸದ್ಯ ಶೆಟ್ಟರ್, ಈಶ್ವರಪ್ಪ, ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ಕೈತಪ್ಪಿದೆ. ಈ ನಡುವೆ ನಾಳೆ ತಮ್ಮ ಭೇಟಿಗೆ ಬೆಂಗಳೂರಿಗೆ ಬರುವಂತೆ ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ ಮತ್ತು ಲಕ್ಷ್ಮಣ ಸವದಿಗೆ ಯಡಿಯೂರಪ್ಪ ಅವರು ಕರೆ ಮಾಡಿದ್ದಾರೆ. ಆದರೆ ತಾನು ನಾಳೆ ದೆಹಲಿಗೆ ತೆರಳುತ್ತಿರುವುದಾಗಿ ಶೆಟ್ಟರ್ ಅವರು ಯಡಿಯೂರಪ್ಪಗೆ ತಿಳಿಸಿದ್ದಾರೆ. ಹೀಗಾಗಿ ನಾಳೆ ನಡ್ಡಾ ಭೇಟಿ ಮಾಡಿ ನಾಡಿದ್ದು ಯಡಿಯೂರಪ್ಪ ಭೇಟಿ ಮಾಡಲಿದ್ದಾರೆ.
ವಿಧಾನಸಭೆ ಚುಣಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:58 pm, Tue, 11 April 23