ಕನಕಪುರದಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಸ್ಪರ್ಧೆ: ಆರ್ ಅಶೋಕ್ ಫಸ್ಟ್ ರಿಯಾಕ್ಷನ್ ಹೀಗಿದೆ..!
ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ಹೈಕಮಾಂಡ್ ಆರ್ ಅಶೋಕ್ ಅವರನ್ನು ಕಣಕ್ಕಿಳಿಸಿದ್ದು, ಈ ಬಗ್ಗೆ ಅಶೋಕ್ ಮೊದಲ ಪ್ರತಿಕ್ರಿಯೆ ನೀಡಿದ್ದು ಅದು ಈ ಕೆಳಗಿನಂತಿದೆ.
ಬೆಂಗಳೂರು: ಬಿಜೆಪಿ ಕೊನೆಗೂ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಂಡಿದೆ. ಈ ಬಾರಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಸಚಿವ ಆರ್ ಅಶೋಕ್ ಅವರನ್ನು ಕಣಕ್ಕಿಳಿಸಿದೆ. ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರದ ಟಿಕೆಟ್ ಸಚಿವ ವಿ ಸೋಮಣ್ಣಗೆ ನೀಡಲಾಗಿದೆ. ಹೈಕಮಾಂಡ್ನ ಈ ನಡೆ ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ ಹೈಕಮಾಂಡ್ ಪ್ಲಾನ್ ಆದರೂ ಏನು ಎನ್ನುವ ಚರ್ಚೆಗಳು ಶುರುವಾಗಿವೆ. ಇನ್ನು ಡಿಕೆ ಶಿವಕುಮಾರ್ ವಿರುದ್ಧ ಸ್ಪರ್ಧೆಗೆ ಹೈಕಮಾಂಡ್ ಟಿಕೆಟ್ ಘೋಷಣೆ ಬೆನ್ನಲ್ಲೇ ಸಚಿವ ಅಶೋಕ್ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ಮಾಡಿದ್ದಾರೆ.
ಇದನ್ನೂ ಓದಿ: BJP Candidate List: ಸಿದ್ದರಾಮಯ್ಯ vs ಸೋಮಣ್ಣ, ಡಿಕೆ ಶಿವಕುಮಾರ್ vs ಆರ್ ಅಶೋಕ
ನಿನ್ನೆ(ಏಪ್ರಿಲ್ 12) ರಾತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಂತೆಯೇ ಅಶೋಕ್, ಸಿಎಂ ನಿವಾಸಕ್ಕೆ ಭೇಟಿ ನೀಡಿ ಡಿಕೆ ಶಿವಕುಮಾರ್ ವಿರುದ್ಧ ಸ್ಪರ್ಧೆ ಬಗ್ಗೆ ಮಹತ್ವದ ಮಾತುಕತೆ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್,
ನಮ್ಮ ಕಮಾಂಡರ್ ಮೋದಿ, ಅಮಿತ್ ಶಾ ಹೇಳಿದಂತೆ ಕೇಳಬೇಕು. ತುರ್ತುಪರಿಸ್ಥಿತಿಯಲ್ಲಿ ಇಂದಿರಾಗೆ ಧಿಕ್ಕಾರ ಕೂಗಿ ಜೈಲಿಗೆ ಹೋಗಿದ್ದೆ. ಬಾಬ್ರಿ ಮಸೀದಿ ಧ್ವಂಸ ಸಮಯದಲ್ಲಿ ಹೋರಾಟ ಮಾಡಿದ್ದೆ. ನಮ್ಮ ನಾಯಕರು 2 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎಂದು ಹೇಳಿದ್ದಾರೆ. ಕನಕಪುರ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎನ್ನುವುದು ಪಕ್ಷದ ತೀರ್ಮಾನ.ಇಂದಿರಾ ಗಾಂಧಿ, ದೇವೇಗೌಡ, ಬಿಎಸ್ ಯಡಿಯೂರಪ್ಪ, ಸಿದ್ದರಾಮಯ್ಯ ಸಹ ಸೋತಿದ್ದಾರೆ. ನನಗೆ 2 ಕ್ಷೇತ್ರದಿಂದ ಟಿಕೆಟ್ ಘೋಷಿಸಿರುವುದು ಚುನಾವಣಾ ತಂತ್ರ. ಇದೊಂದು ಸ್ಟ್ರಾಟಜಿ, ನಮ್ಮ ಗೆಲುವು ಶತಸಿದ್ಧ. ದೇವರು, ಜನರ ಇಚ್ಛೆ ಏನಿದೆ ಎಂಬುದನ್ನು ಕಾದು ನೋಡೋಣ ಎಂದು ಸ್ಪಷ್ಟಪಡಿಸಿದರು.
ಇನ್ನು ಆರ್ ಅಶೋಕ್ ಹೊಂದಾಣಿಕೆ ರಾಜಕೀಯ ಮಾಡುತ್ತಾರೆ ಎಂದು ಹೈಕಮಾಂಡ್ ಈ ಟಾಸ್ಕ್ ನೀಡಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಅಶೋಕ್ ಏನು ಮಾತನಾಡಿದ ಹೊರಟರು.
189 ಮಂದಿ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಲಾಗಿದೆ. ಹಲವು ಸುತ್ತುಗಳ ಸಭೆ, ಸುದೀರ್ಘ ಸಮಾಲೋಚನೆಗಳ ಬಳಿಕ ಮಂಗಳವಾರ ರಾತ್ರಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಹೈಕಮಾಂಡ್ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಪ್ರಸಕ್ತ ಚುನಾವಣೆಗೆ ಬಿಜೆಪಿ 52 ಹೊಸ ಮುಖಗಳಿಗೆ ಮಣೆ ಹಾಕಿದೆ. ಒಬಿಸಿಯ 32 ಮಂದಿಗೆ ಟಿಕೆಟ್ ಘೋಷಿಸಲಾಗಿದೆ. ಒಬಿಸಿ 32, ಎಸ್ಸಿ 30, ಎಸ್ಟಿ 16 ಹಾಗೂ 9 ವೈದ್ಯರು, ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಟಿಕೆಟ್ ನೀಡಲಾಗಿದೆ. 8 ಮಂದಿ ಮಹಿಳೆಯರು, ಐವರು ವಕೀಲರು, ಮೂವರು ಶಿಕ್ಷಕರು, 9 ಸ್ನಾತಕೋತ್ತರ ಪದವೀಧರರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಲಾಗಿದೆ.
Published On - 7:18 am, Wed, 12 April 23