ಕೊನೆ ಕ್ಷಣದಲ್ಲಿ ಬಿಜೆಪಿಯಿಂದ ಮತ್ತೊಂದು ರಣತಂತ್ರ: ಹೊಳೆನರಸೀಪುರದಲ್ಲಿ ರೇವಣ್ಣ ವಿರುದ್ಧ ಪ್ರೀತಂಗೌಡ ಸ್ಪರ್ಧೆ?
ನಾಮಪತ್ರ ಸಲ್ಲಿಕೆಗೆ ಇಂದು ಕೊನೆ ದಿನವಾಗಿ. ಈ ಕೊನೆ ಕ್ಷಣದಲ್ಲಿ ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಬಿಜೆಪಿ ಮತ್ತೊಂದು ರಣತಂತ್ರ ರೂಪಿಸಿದೆ. ಹೆಚ್ಡಿ ರೇವಣ್ಣ ಠಕ್ಕರ್ ನೀಡಲು ಬಿಜೆಪಿ ಮೆಗಾ ಪ್ಲಾನ್ ಮಾಡಿದೆ ಎಂದು ತಿಳಿದುಬಂದಿದೆ.
ಹಾಸನ: ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕೆಲ ಅಚ್ಚರಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಹಾಗೇ ಅಚ್ಚರಕರ ಪ್ರಯೋಗಳನ್ನು ಮಾಡುತ್ತಿದೆ. ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ವಿ.ಸೋಮಣ್ಣ ಹಾಗೂ ಕನಕಪುರದಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಆರ್.ಅಶೋಕ್ ಅವರನ್ನು ಕಣಕ್ಕಿಸಿದೆ. ಇದೀಗ ಕೊನೆ ಕ್ಷಣದಲ್ಲಿ ಬಿಜೆಪಿ ಮತ್ತೊಂದು ರಣತಂತ್ರ ಹೆಣೆದಿದೆ. ಅದೇನೆಂದರೆ ಹಾಸನದ ಹೊಳೆನರಸೀಪುರ ಕ್ಷೇತ್ರದಲ್ಲಿ ಹೆಚ್ಡಿ ರೇವಣ್ಣ ವಿರುದ್ಧ ಶಾಸಕ ಪ್ರೀತಂಗೌಡ ಅವರನ್ನು ಸ್ಪರ್ಧೆಗಿಳಿಸಿದೆ ಎನ್ನುವ ಸುದ್ದಿ ಕೇಳಿ ಬಂದಿದೆ. ಈಗಾಗಲೇ ಪ್ರೀತಂಗೌಡ ಹಾಸನದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಿನ್ನೆ (ಏಪ್ರಿಲ್ 19) ನಾಮಪತ್ರ ಸಲ್ಲಿಸಿದ್ದಾರೆ. ಇಂದು ಹೊಳೆನರಸೀಪುರ ಕ್ಷೇತ್ರಕ್ಕೂ ಸಹ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಪೂರಕವೆಂಬಂತೆ ಚುನಾವಣಾ ಪ್ರಚಾರವನ್ನು ಬೇಗ ಮುಗಿಸಿ ಹೊಳೆನರಸೀಪುರದಲ್ಲಿ ನಾಮಿನೇಷನ್ ಮಾಡಬೇಕು ಎನ್ನುವ ಮಾತುಗಳನ್ನಾಡುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಹೌದು….ಹಾಸನದ ಗುಡ್ಡೇನಹಳ್ಳಿ ಬಡಾವಣೆಯಲ್ಲಿ ಇಂದು(ಏಪ್ರಿಲ್ 20) ಬೆಳಗ್ಗೆ ಪ್ರಚಾರದ ವೇಳೆ ಕಾರ್ಯಕರ್ತ ರ ಜೊತೆ ಮಾತನಾಡಿದ ಪ್ರೀತಂಗೌಡ, ಹೊಳೆನರಸೀಪುರದಲ್ಲಿ ನಾಮಿನೇಷನ್ ಮಾಡಬೇಕು ಹಾಗಾಗಿ ಬೇಗ ಮುಗಿಸಿ ಎನ್ನುವ ಮಾತುಗಳನ್ನಾಡಿದ್ದಾರೆ. ಅಲ್ಲದೇ ಪ್ರಚಾರ ಕಾರ್ಯಕ್ರಮದಿಂದ ತರಾತುರಿಯಲ್ಲಿ ನಿರ್ಗಮಿಸಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರೀತಂಗೌಡ, ನಮ್ಮ ಪಕ್ಷದ ವರಿಷ್ಠರು ರಣತಂತ್ರ ಮಾಡಿದಾರೆ. ಆ ತಂತ್ರ ಏನೆಂದು 10.30ಕ್ಕೆ(ಇಂದು ಬೆಳಗ್ಗೆ) ಹೇಳುತ್ತೇನೆ. ನಾಮಪತ್ರ ಸಲ್ಲಿಸುವುದು ಖಚಿತ. ಕಾದು ನೋಡಿ ಎಂದು ಹೇಳುವ ಮೂಲಕ ವಿಷಯವನ್ನು ನಿಗೂಢವಾಗಿ ಕಾಪಾಡಿಕೊಳ್ಳುತ್ತಲೇ ಮತ್ತಷ್ಟು ಕುತೂಹಲ ಹೆಚ್ಚಿಸಿದ್ದಾರೆ.
ಈಗಾಗಲೇ ಬಿಜೆಪಿ ಮೊದಲ ಪಟ್ಟಿಯಲ್ಲಿ ದೇವರಾಜೇಗೌಡ ಅವರ ಹೆಸರನ್ನು ಹೊಳೆನರಸೀಪುರ ಕ್ಷೇತ್ರಕ್ಕೆ ಪ್ರಕಟಿಸಿತ್ತು. ಆದ್ರೆ, ಅದೇನಾಯ್ತೋ ಏನೋ ಹಾಸನ ಜಿಲ್ಲಾ ರಾಜಕೀಯದಲ್ಲಿ ದಿಢೀರ್ ಮಹತ್ವ ರಾಜಕೀಯ ಬೆಳವಣಿಗೆ ನಡೆದಿದ್ದು, ಅಂತಿಮವಾಗಿ ರೇವಣ್ಣ ವಿರುದ್ಧ ಪ್ರತೀಂಗೌಡ ಅವರನ್ನು ಕಣಕ್ಕಿಳಿಸುವ ತಂತ್ರಗಳು ನಡೆದಿವೆ.
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:29 am, Thu, 20 April 23