ಚುನಾವಣಾ ಫಲಿತಾಂಶ ಅತಂತ್ರ: ಅಭ್ಯರ್ಥಿಗಳನ್ನು ಹಿಡಿದಿಟ್ಟುಕೊಳ್ಳಲು ಕುಮಾರಸ್ವಾಮಿ-ದೇವೇಗೌಡ ತಂತ್ರ

|

Updated on: May 12, 2023 | 11:17 AM

ರಾಜ್ಯದಲ್ಲಿ ಅತಂತ್ರ ಚುನಾವಣಾ ಫಲಿತಾಂಶ ಸಾಧ್ಯತೆ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಹಿಡಿದಿಟ್ಟುಕೊಳ್ಳಲು ಕುಮಾರಸ್ವಾಮಿ ತಂತ್ರರೂಪಿಸಿದ್ದಾರೆ.

ಚುನಾವಣಾ ಫಲಿತಾಂಶ ಅತಂತ್ರ: ಅಭ್ಯರ್ಥಿಗಳನ್ನು ಹಿಡಿದಿಟ್ಟುಕೊಳ್ಳಲು ಕುಮಾರಸ್ವಾಮಿ-ದೇವೇಗೌಡ ತಂತ್ರ
ಹೆಚ್​ಡಿ ದೇವೇಗೌಡ, ಹೆಚ್​ಡಿ ಕುಮಾರಸ್ವಾಮಿ
Follow us on

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಮತ ಎಣಿಕೆಗೆ (Karnataka Assembly Election Result 2023) ಕೌಂಟ್​ಡೌನ್ ಶುರುವಾಗಿದೆ. ನಾಳೆ(ಮೇ 13) ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಕಾರ್ಯ ನಡೆಯಲಿದ್ದು, ಈ ಬಾರಿ ಫಲಿತಾಂಶ ಏನಿರಲಿದೆ ಎನ್ನುವ ಕುತೂಹಲ ಕ್ಷಣಕ್ಷಣಕ್ಕೂ ಹೆಚ್ಚಿಸುತ್ತಿದೆ. ಅದರಲ್ಲೂ ಮತದಾನೋತ್ತರ ಸಮೀಕ್ಷೆಗಳಲ್ಲಿ ಕೆಲ ಸಮೀಕ್ಷಾ ಸಂಸ್ಥೆಗಳು ಯಾವುದೇ ಪಕ್ಷಕ್ಕೆ ಬಹುಮತ ಬರುವುದಿಲ್ಲ ಎಂದು ಭವಿಷ್ಯ ನುಡಿದಿವೆ. ಹೀಗಾಗಿ ಕಾಂಗ್ರೆಸ್​, ಜೆಡಿಎಸ್​ನ ಕೆಲ ಗೆಲ್ಲುವ​ ಅಭ್ಯರ್ಥಿಗಳನ್ನು ಸಂಪರ್ಕಿಸಿದೆ. ಇದರಿಂದ ಎಚ್ಚೆತ್ತ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್​ಡಿ ಕುಮಾರಸ್ವಾಮಿ, ವಿದೇಶದಲ್ಲಿಟ್ಟುಕೊಂಡೇ ರಾಜಕೀಯ ತಂತ್ರಗಾರಿ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಮೈತ್ರಿಗೆ ನಾವು ಸಿದ್ಧ’ ಆದ್ರೆ ಕೆಲವು ಷರತ್ತುಗಳಿಗೆ ಒಪ್ಪಬೇಕು; ನಿಲುವು ಸ್ಪಷ್ಟಪಡಿಸಿದ ಹೆಚ್​ಡಿ ಕುಮಾರಸ್ವಾಮಿ

ಹೆಚ್​ಡಿ ಕುಮಾರಸ್ವಾಮಿ ಅವರು ಸಿಂಗಪುರ್​ಗೆ ಹೋಗಿದ್ದಾರೆ. ಇತ್ತ ರಾಜ್ಯದಲ್ಲಿ ಅತಂತ್ರ ಫಲಿತಾಂಶ ಸಾಧ್ಯತೆ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕರನ್ನ ಸೆಳೆಯಲು ಕಾಂಗ್ರೆಸ್ ಪ್ಲಾನ್ ಮಾಡಿದೆ. ಹೀಗಾಗಿ ಗೆಲ್ಲುವ ಅಭ್ಯರ್ಥಿಗಳನ್ನು ಹಿಡಿದಿಟ್ಟುಕೊಳ್ಳಲು ಕುಮಾರಸ್ವಾಮಿ ತಂತ್ರ ಹೆಣೆದಿದ್ದಾರೆ. ಗೆಲ್ಲುವ ಅಭ್ಯರ್ಥಿಗಳ ಜೊತೆ ನಿರಂತರ ಸಂಪರ್ಕ ದಲ್ಲಿರುವ ಕುಮಾರಸ್ವಾಮಿ, ಕೆಲ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ.

ಈಗಾಗಲೇ ಕಾಂಗ್ರೆಸ್ ಸಂಪರ್ಕ ಮಾಡಿರುವ ಜೆಡಿಎಸ್ ಗೆಲ್ಲುವ ಅಭ್ಯರ್ಥಿಗಳ ಜೊತೆ ಮಾತನಾಡಿರುವ ಕುಮಾರಸ್ವಾಮಿ, ಯಾವ ಆಮಿಷಕ್ಕೆ ಒಳಗಾಗಬೇಡಿ. ಈ ಬಾರಿಯ ಸರ್ಕಾರ ರಚನೆಯಲ್ಲಿ ನಮ್ಮ ಪಾತ್ರ ಪ್ರಮುಖ ಪಾತ್ರ ವಹಿಸುತ್ತದೆ. ಯಾವುದಕ್ಕೂ ಯಾರು ವಿಚಲಿತರಾಗಬೇಡಿ. ಯಾವುದೇ ರಾಜಕೀಯ ಬೆಳವಣಿಗೆ ಇದ್ದರೂ ತಕ್ಷಣ ತಿಳಿಸುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಅದರ ಜೊತೆಗೆ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಬಂಡಾಯ ಗೆಲ್ಲುವ ಅಭ್ಯರ್ಥಿಗಳ ಸಂಪರ್ಕಕ್ಕೆ ಕುಮಾರಸ್ವಾಮಿ ಪ್ಲಾನ್ ಮಾಡಿದ್ದಾರೆ. ಹೀಗಾಗಿ ಬಂಡಾಯ ಅಭ್ಯರ್ಥಿಗಳ ಆಪ್ತರ ಜೊತೆ ಮಾತುಕತೆಗೆ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

ಇನ್ನು ಜೆಡಿಎಸ್​ ವರಿಷ್ಠ ಹೆಚ್​ಡಿ ದೇವೇಗೌಡ ಸಹ ಪೀಲ್ಡ್​ಗೆ ಇಳಿದಿದ್ದು, ಮನೆಯಲ್ಲಿ ಕೂತು ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಗೆಲ್ಲುವ ಅಭ್ಯರ್ಥಿಗಳಿಗೆ ದೇವೇಗೌಡರು ದೂರವಾಣಿ ಕರೆ ಮಾಡಿ ಒಂದಷ್ಟು ಫಲಿತಾಂಶದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಗೆಲ್ಲುವ ಅಭ್ಯರ್ಥಿಗಳನ್ನು ಹಿಡಿದಿಟ್ಟುಕೊಳ್ಳಲು ದಳಪತಿಗಳು ಕಸರತ್ತು ನಡೆಸಿದ್ದಾರೆ.

ಒಟ್ಟಿನಲ್ಲಿ ಫಲಿತಾಂಶಕ್ಕೆ ಇನ್ನೇನು ಕೌಂಟ್​ಡೌನ್ ಶುರುವಾಗಿದ್ದರಿಂದ ಮೂರು ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಯಾವ ಪಕ್ಷಕ್ಕೆ ಅಧಿಕಾರ ಸಿಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.