ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election 2023) ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟುನಿಟ್ಟಾಗಿ ನೀತಿ ಸಂಹಿತೆ ಜಾರಿ (ಮಾರ್ಚ್ 29) ಮಾಡಲಾಗಿದೆ. ರಾಜ್ಯದ ಹಲವು ಕಡೆ ಚೆಕ್ಪೋಸ್ಟ್ಗಳಲ್ಲಿ ಅಪಾರ ಪ್ರಮಾಣದ ನಗದು, ಉಡುಗೊರೆಗಳು ಮತ್ತು ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗುತ್ತಿದೆ. ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾದಾಗಿನಿಂದ ಕರ್ನಾಟಕದಲ್ಲಿ ಇದುವರೆಗೂ 100 ಕೋಟಿ ರೂ. ಗಡಿ ದಾಟಿದೆ. ಏಪ್ರಿಲ್ 9ರ ಚುನಾವಣಾ ಆಯೋಗದ ಬುಲೆಟಿನ್ ಪ್ರಕಾರ, ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ 99.18 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.
ಬಾಗಲಕೋಟೆ: ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ ₹2.10 ಕೋಟಿ ರೂ. (cash) ಜಿಲ್ಲೆಯ ಜಮಖಂಡಿ ತಾಲೂಕಿನ ಹುನ್ನೂರು ಚೆಕ್‌ಪೋಸ್ಟ್‌ನಲ್ಲಿ ಜಪ್ತಿ ಮಾಡಲಾಗಿದೆ. ಮುಧೋಳದಿಂದ ಅಥಣಿ ಕಡೆಗೆ ತೆರಳುತ್ತಿದ್ದ ಬೊಲೆರೊ ವಾಹನದಲ್ಲಿ ಬಾರಿ ಮೊತ್ತದ ಹಣ ರವಾನೆ ಮಾಡಲಾಗುತ್ತಿತ್ತು. ಸಹಕಾರಿ ಬ್ಯಾಂಕ್ನ ಬೇರೆ ಶಾಖೆಗೆ ಹಣ ಸಾಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ ವಾಹನದಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ಸಹ ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಮತ್ತೊಂದು ಪ್ರಕರಣದಲ್ಲಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಜಗದಪುರ ಗ್ರಾಮ ಬಳಿಯ ಚೆಕ್‌ಪೋಸ್ಟ್‌ನಲ್ಲಿ 38 ಲಕ್ಷ ಹಣ ಪತ್ತೆ ಆಗಿದೆ. ಹಲಗೂರಿನಿಂದ ಚನ್ನಪಟ್ಟಣಕ್ಕೆ ಕಾರಿನಲ್ಲಿ ಸಾಗಿಸುತ್ತಿದ್ದು, ಚುನಾವಣಾಧಿಕಾರಿಗಳ ತಪಾಸಣೆ ವೇಳೆ 38 ಲಕ್ಷ ರೂ. ಹಣ ಪತ್ತೆಯಾಗಿದೆ. ಬ್ಯಾಂಕ್ಗೆ ಡಿಪಾಸಿಟ್ ಮಾಡುವ ರೆಡಿಯಂಟ್ಗೆ ಸೇರಿದ ಹಣವೆನ್ನಲಾಗುತ್ತಿದ್ದು, ಚುನಾವಣಾಧಿಕಾರಿಗಳು ದಾಖಲೆ ಪತ್ರ ಪರಿಶೀಲನೆ ಮಾಡಿದ್ದಾರೆ.
ಮಂಡ್ಯ: ದಾಖಲೆ ಇಲ್ಲದ ನಗದು, ಮದ್ಯ, ಡ್ರಗ್ಸ್ ಸೇರಿ ಹಲವು ವಸ್ತುಗಳನ್ನು ಜಪ್ತಿ ಮಾಡಿದ್ದು, 1 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಹೆಚ್.ಎನ್.ಗೋಪಾಲಕೃಷ್ಣ ಮಾಹಿತಿ ನೀಡಿದರು. ಕಳೆದ ವಾರ 56.61 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು. ಈ ವಾರ ನಗದು ಸೇರಿ 1.12 ಕೋಟಿ ಮೌಲ್ಯದ ವಸ್ತುಗಳ ಜಪ್ತಿ ಆಗಿವೆ. ಮಂಡ್ಯ ಜಿಲ್ಲೆಯಾದ್ಯಂತ 7 ಮಂದಿಯನ್ನು ಗಡಿಪಾರು ಮಾಡಲಾಗಿದೆ.
ಇದನ್ನೂ ಓದಿ: BJP Candidates List: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಳಂಬಕ್ಕೆ ಕಾರಣಗಳು ಹಲವು; ಇಲ್ಲಿವೆ ನೋಡಿ
ಜಿಲ್ಲೆಯ ಇನ್ನೂ ಕೆಲವರ ಗಡಿಪಾರಿಗೆ ಚಿಂತನೆ ನಡೆಸಲಾಗಿದೆ. ನಾಳೆ ಸಂಜೆ 5 ಗಂಟೆವರೆಗೆ ಮತದಾರರ ಪಟ್ಟಿಗೆ ಸೇರ್ಪಡೆಗೆ ಅವಕಾಶ ನೀಡಲಾಗಿದೆ. ಜಿಲ್ಲೆಯ ಎಲ್ಲಾ ಚೆಕ್ಪೋಸ್ಟ್ಗಳಲ್ಲೂ ತೀವ್ರ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ಗ್ರಾ: ಜಿಲ್ಲೆಯಲ್ಲಿ 4 ಚೆಕ್ಪೋಸ್ಟ್ಗಳಲ್ಲಿ 1 ಕೋಟಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಹೊಸಕೋಟೆ ಕ್ಷೇತ್ರದಲ್ಲಿ 49,96,090 ರೂ. ದೇವನಹಳ್ಳಿ ಕ್ಷೇತ್ರದಲ್ಲಿ 30,54,436 ರೂ, ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ 21,77,628 ರೂ. ನೆಲಮಂಗಲ ವ್ಯಾಪ್ತಿಯಲ್ಲಿ 84,59,277 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಎಲ್ಲವನ್ನೂ ವಶಕ್ಕೆ ಪಡೆದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಯಾವುದೇ ದಾಖಲೆ ಇಲ್ಲದೇ ಅಕ್ರಮವಾಗಿ ವಸ್ತುಗಳನ್ನು ಸಾಗಿಸುತ್ತಿದ್ದ ಹಿನ್ನೆಲೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
1.57 ಕೋಟಿ ಮೌಲ್ಯದ ತವಾ, ಕುಕ್ಕರ್ ಜಪ್ತಿ ಮಾಡಿದ ಅಧಿಕಾರಿಗಳು
ಬೆಂಗಳೂರು: ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಕುಕ್ಕರ್ ಹಾಗೂ ತವಾವನ್ನು ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಚುನಾವಣಾಧಿಕಾರಿಗಳ ದಾಳಿ ವೇಳೆ 4,533 ಕುಕ್ಕರ್, 10,964 ತವಾ ಪತ್ತೆಯಾಗಿದ್ದು, ಸುಮಾರು 1.57 ಕೋಟಿ ಮೌಲ್ಯದ ತವಾ, ಕುಕ್ಕರ್ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದು, ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತ ಮಕ್ಕಳನ್ನು ಮದುವೆಯಾದವರಿಗೆ 2 ಲಕ್ಷ ರೂ. ಅನುದಾನ: ಕುಮಾರಸ್ವಾಮಿ ಘೋಷಣೆ
ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಸೊನ್ನ ಚೆಕ್‌ಪೋಸ್ಟ್‌ನಲ್ಲಿ ದಾಖಲೆಯಿಲ್ಲದ 3.2 ಲಕ್ಷ ರೂ. ನಗದು ಹಣ ಜಪ್ತಿ ಮಾಡಲಾಗಿದೆ. ಬೈಕ್ನಲ್ಲಿ ನಗದು ತೆಗೆದುಕೊಂಡು ಹೋಗುತ್ತಿದ್ದ ಶ್ರೀಕಾಂತ್ ಮ್ಯಾಳೇಸಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಇವರು ಅಫಜಲಪುರದಿಂದ ಬೈಕ್ನಲ್ಲಿ ಮಹಾರಾಷ್ಟ್ರದ ನಾಗಣಸೂರ್‌ಗೆ ಹಣ ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಅಫಜಲಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ ವಿಧಾನಸಭಾ ಚುನಾಚವಣೆಯ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 5:06 pm, Mon, 10 April 23