ಸಿಎಂ ಬೊಮ್ಮಾಯಿ ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೋಟೆಲ್ ಮೇಲೆ ಐಟಿ ದಾಳಿ
ಸಿಎಂ ಬಸವರಾಜ ಬೊಮ್ಮಾಯಿ ಸ್ಪರ್ಧಿಸುವ ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೋಟೆಲ್ ಮೇಲೆ ಐಟಿ ಇಲಾಖೆ ದಾಳಿ ಮಾಡಿದ್ದು, ಅಧಿಕಾರಿಗಳ ತಂಡದಿಂದ ಪರಿಶೀಲನೆ ಮಾಡಲಾಗಿದೆ.
ಹಾವೇರಿ: ಚುನಾವಣೆ ಹೊತ್ತಲ್ಲಿ ಐಟಿ ಅಧಿಕಾರಿಗಳು ಫುಲ್ ಅಲರ್ಟ್ ಆಗಿದ್ದು, ಸೋಮವಾರ ಸಿಎಂ ಬಸವರಾಜ ಬೊಮ್ಮಾಯಿ ಸ್ಪರ್ಧಿಸುವ ಶಿಗ್ಗಾಂವಿ (Shiggaon) ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೋಟೆಲ್ ಮೇಲೆ ಐಟಿ ಇಲಾಖೆ ದಾಳಿ ಮಾಡಿದೆ. ಬಂಕಾಪುರ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ (Yasir Khan Pathan) ಒಡೆತನದ ಗ್ರ್ಯಾಂಡ್ ಹೋಟೆಲ್ ಮೇಲೆ ಐಟಿ ಅಧಿಕಾರಿಗಳ ಕಣ್ಣು ಬಿದ್ದಿದೆ. ಸದ್ಯ ಗ್ರ್ಯಾಂಡ್ ಹೋಟೆಲ್ನಲ್ಲಿ ಐಟಿ ಅಧಿಕಾರಿಗಳ ತಂಡದಿಂದ ಪರಿಶೀಲನೆ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ಇಂದು ಧಾರವಾಡ ಸೇರಿದಂತೆ ಬೆಂಗಳೂರು ನಗರದ 11 ಕ್ಷೇತ್ರಗಳಲ್ಲಿ ಐಟಿ ಅಧಿಕಾರಿಗಳು ಕಾರ್ಯಾಚರಣೆ ಮಾಡಿದ್ದು, ಕೋಟಿ ಕೋಟಿ ನಗದು ಸೀಜ್ ಮಾಡಿದ್ದಾರೆ.
15.53 ಕೋಟಿ ರೂ, ನಗದು, 7 ಕೋಟಿ ಮೌಲ್ಯದ 10.14 ಕೆಜಿ ಚಿನ್ನಾಭರಣ ಸೀಜ್
ಬೆಂಗಳೂರಿನ ಹಲವು ಕ್ಷೇತ್ರಗಳ ವ್ಯಾಪ್ತಿಯಲ್ಲಿ ಐಟಿ ಕಾರ್ಯಾಚರಣೆ ಮಾಡಿದ್ದು, ಸುಮಾರು 15.53 ಕೋಟಿ ರೂ, ನಗದು, ಹಾಗೂ 7 ಕೋಟಿ ಮೌಲ್ಯದ 10.14 ಕೆಜಿ ಚಿನ್ನಾಭರಣ ಸೀಜ್ ಮಾಡಲಾಗಿದೆ. ಶಿವಾಜಿನಗರ ವ್ಯಾಪ್ತಿಯಲ್ಲಿ 4.77, ಆರ್ಆರ್ ನಗರ ವ್ಯಾಪ್ತಿಯಲ್ಲಿ 3.44, ಮಲ್ಲೇಶ್ವರಂ ವ್ಯಾಪ್ತಿಯಲ್ಲಿ 3.35, ಪುಲಿಕೇಶಿನಗರ ವ್ಯಾಪ್ತಿಯಲ್ಲಿ 2.30 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ. ಅದೇ ರೀತಿಯಾಗಿ ಶಾಂತಿನಗರ ವ್ಯಾಪ್ತಿಯಲ್ಲಿ 62.83, ಗಾಂಧಿನಗರ ವ್ಯಾಪ್ತಿಯಲ್ಲಿ 55, ಹೆಬ್ಬಾಳ, ಶಿವಾಜಿನಗರ, ಚಿಕ್ಕಪೇಟೆ ಮತ್ತು ಜಯನಗರದಲ್ಲಿ 23.50 ಲಕ್ಷ ರೂ. ನಗದು ಸೀಜ್ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರು ನಗರದ 11 ಕ್ಷೇತ್ರಗಳಲ್ಲಿ ಐಟಿ ಅಧಿಕಾರಿಗಳ ಮೆಗಾ ಆಪರೇಷನ್: ಕೋಟಿ ಕೋಟಿ ನಗದು ಜಪ್ತಿ
ಮತದಾನಕ್ಕೆ ಇನ್ನೂ ಎರಡು ದಿನಗಳಷ್ಟೇ ಬಾಕಿಯಿರುವಾಗ ಕ್ಷೇತ್ರಗಳಲ್ಲಿ ಹಣ, ಉಡುಗೊರೆಗಳ ಹಂಚಿಕೆ ಗುಮಾನಿ ನಡೆಯುತ್ತಿದ್ದು, ಈ ಬಗ್ಗೆ ಐಟಿ ಅಧಿಕಾರಿಗಳು ತೀವ್ರ ನಿಗಾ ವಹಿಸಿದ್ದರೂ ಕೋಟಿ ಕೋಟಿ ಹಣ ಸೀಜ್ ಮಾಡಿದ್ದಾರೆ. ರಾಯಚೂರು ನಗರದ ಮೂರು ಕ್ಷೇತ್ರ ವ್ಯಾಪ್ತಿಯಲ್ಲಿ 30 ಲಕ್ಷ ರೂ. ನಗದು, ಐದು ಕೋಟಿ ಮೌಲ್ಯದ ಚಿನ್ನವನ್ನು ಐಟಿ ಇಲಾಖೆ ಜಪ್ತಿ ಮಾಡಿದೆ.
ಇದನ್ನೂ ಓದಿ: ಕರ್ನಾಟಕ ಚುನವಾಣೆ: ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳ; ಪ್ರಯಾಣಿಕರ ಆಕ್ರೋಶ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತನ ಮನೆ ಮೇಲೆ ಐಟಿ ದಾಳಿ
ಧಾರವಾಡ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತ, ಕಾಂಗ್ರೆಸ್ ಮುಖಂಡನ ಮನೆ ಮೇಲೆ ಐಟಿ ದಾಳಿ ಮಾಡಿದ್ದು, ಪರಿಶೀಲನೆ ಮಾಡಿದ್ದಾರೆ. ವಿದ್ಯಾಗಿರಿ ಬಡಾವಣೆಯ ವಿವೇಕಾನಂದನಗರದಲ್ಲಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸದಸ್ಯ ಆಗಿರುವ ರಾಬರ್ಟ್ ದದ್ದಾಪುರಿ ನಿವಾಸದ ಮೇಲೆ ಐಟಿ ದಾಳಿ ಮಾಡಿದ್ದು, ಮನೆಯಲ್ಲಿ 6 ಐಟಿ ಅಧಿಕಾರಿಗಳ ತಂಡ ತಪಾಸಣೆ ನಡೆಸುತ್ತಿದ್ದಾರೆ. ಕಳೆದ ವಾರ ಮಾಜಿ ಸಚಿವ ವಿನಯ್ ಕುಲಕರ್ಣಿ ಆಪ್ತ ಸಹಾಯಕ ಪ್ರಶಾಂತ್ ಕೇಕರೆ ಮನೆ ಮೇಲೆ ಐಟಿ ದಾಳಿ ನಡೆದಿತ್ತು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ