ಬೈಕ್ ರ‍್ಯಾಲಿ ವೇಳೆ 2 ಗುಂಪುಗಳ ನಡುವೆ ಬಡಿದಾಟ: JDS ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ ಆರೋಪ
ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಬೈಕ್ ರ‍್ಯಾಲಿ ವೇಳೆ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ಉಂಟಾಗಿದ್ದು, JDS ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ ಆರೋಪ ಕೇಳಿಬಂದಿದೆ.
ಬೆಂಗಳೂರು: ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಬೈಕ್ ರ‍್ಯಾಲಿ ವೇಳೆ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ (clash) ಉಂಟಾಗಿದ್ದು, JDS ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ ಆರೋಪ ಕೇಳಿಬಂದಿದೆ. ಯಲಹಂಕದ ಅಟ್ಟೂರು ಬಡಾವಣೆಯಲ್ಲಿ ಘಟನೆ ನಡೆದಿದೆ. ಓರ್ವ JDS ಕಾರ್ಯಕರ್ತನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೈಕ್ ರ‍್ಯಾಲಿ ನಡೆಸುವಾಗ ಎರಡೂ ಪಕ್ಷಗಳ ಕಾರ್ಯಕರ್ತರು ಮುಖಾಮುಖಿ ಆಗಿದ್ದಾರೆ. ಪರಸ್ಪರ ಘೋಷಣೆಗಳು ಕೂಗಿ ಅತಿರೇಕ ಹೆಚ್ಚಾದಾಗ ಹೊಡೆದಾಡಿಕೊಂಡಿದ್ದಾರೆ. ಎರಡೂ ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ಗಲಾಟೆ ಆಗಿದೆ. ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸಿರಿಗೆರೆ ಗ್ರಾಮದಲ್ಲಿ ಬಿಜೆಪಿ ರೋಡ್ಶೋ ವೇಳೆ ಮಾರಾಮಾರಿ
ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ಕ್ಷೇತ್ರದ ವ್ಯಾಪ್ತಿಯ ಸಿರಿಗೆರೆ ಗ್ರಾಮದಲ್ಲಿ ಬಿಜೆಪಿ ರೋಡ್ಶೋ ವೇಳೆ ಮಾರಾಮಾರಿ ನಡೆದಿರುವಂತಹ ಘಟನೆ ನಡೆದಿದೆ. ಬಿಜೆಪಿ ಅಭ್ಯರ್ಥಿ ಎಂ.ಚಂದ್ರಪ್ಪ ನೇತೃತ್ವದಲ್ಲಿ ರೋಡ್ಶೋ ವೇಳೆ ಬಾವುಟ ತಿರುಗಿಸುವಾಗ ವ್ಯಕ್ತಿಗೆ ತಾಗಿದ್ದಕ್ಕೆ ಗುಂಪು ಘರ್ಷಣೆ ಉಂಟಾಗಿ ರೋಡ್ಶೋಗೆ ಬಂದಿದ್ದ 2 ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ತಕ್ಷಣ ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ಹತೋಟಿಗೆ ಬಂದಿದೆ. ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಕುಸುಮಾರನ್ನು ಡಿಸಿಪಿ ತಳ್ಳಿದ್ದಾರೆಂದು ಕಾಂಗ್ರೆಸ್ ರ್ಯಕರ್ತರು ಆರೋಪ
ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮತಯಾಚನೆ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಯಾಗಿದ್ದು, ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾರನ್ನು ಪುರುಷ ಪೊಲೀಸ್ ಸಿಬ್ಬಂದಿ ತಳ್ಳಾಡಿದ್ದರು. ಕುಸುಮಾರನ್ನು ಡಿಸಿಪಿ ತಳ್ಳಿದ್ದಾರೆಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪ ಮಾಡಿದ್ದು, ಯಶವಂತಪುರ ಠಾಣೆ ಎದುರು ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಗೊಂಡಿದ್ದರು. ಪೊಲೀಸರು ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿ ಧರಣಿ ಮಾಡಲಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರು ಮನೆಮನೆಗೆ ತೆರಳಿ ಚೀಟಿ ಹಂಚಿಕೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದರು.
ಈ ವೇಳೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರನ್ನು ಚದುರಿಸಲು ಲಾಠಿ ಬೀಸಿದ್ದರು. ಅಭ್ಯರ್ಥಿ ಕುಸುಮಾ ಸೇರಿದಂತೆ ಎಲ್ಲರನ್ನೂ ಪೊಲೀಸರು ಚದುರಿಸಿದ್ದರು. ಪೊಲೀಸರ ಜತೆ ಸೇರಿ ಬಿಜೆಪಿ ಕಾರ್ಯಕರ್ತರು ಹಲ್ಲೆಮಾಡಿರುವುದಾಗಿ ಕಾಂಗ್ರೆಸ್ ಆರೋಪಿಸಿತ್ತು.
ಮತಯಾಚನೆಗೆ ತೆರಳಿದ್ದ ಮಹಿಳಾ ಕಾರ್ಯಕರ್ತೆಗೆ ನಿಂದಿಸಿ ಧಮ್ಕಿ
ಬೆಂಗಳೂರು ಗ್ರಾಮಾಂತರ: ಮತಯಾಚನೆಗೆ ತೆರಳಿದ್ದ ಮಹಿಳಾ ಕಾರ್ಯಕರ್ತೆಗೆ ನಿಂದಿಸಿ ಧಮ್ಕಿ ಹಾಕಿರುವಂತಹ ಘಟನೆ ಜಿಲ್ಲೆಯ ಹೊಸಕೋಟೆ ತಾಲೂಕಿನ ಕೊರಳೂರು ಗ್ರಾಮದಲ್ಲಿ ನಡೆದಿತ್ತು. ಕಾಂಗ್ರೆಸ್ ಕಾರ್ಯಕರ್ತೆ ಶ್ಯಾಮಲಾಗೆ ನಿಂದನೆ ಮಾಡಿದ್ದು, ನಿಂದಿಸಿರುವ ದೃಶ್ಯ ಮೊಬೈಲ್ನಲ್ಲಿ ಸೆರೆ ಮಾಡಲಾಗಿತ್ತು. ಮತ ಕೇಳಲು ನಮ್ಮ ಏರಿಯಾಗೆ ಬರ್ತಿಯಾ ಎಂದು ನಿಂದಿಸಿ ಗ್ರಾ.ಪಂ. ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ ಧಮ್ಕಿ ಹಾಕಿದ್ದರು.
MTB ನಾಗರಾಜ್ ಕಡೆಯವರ ಮನೆಗಳಲ್ಲಿ ಪ್ರಚಾರ ಮಾಡದಂತೆ ಧಮ್ಕಿ ಹಾಕಿದ್ದು, ಮತ ಕೇಳಲು ಬಂದ ಕಾರ್ಯಕರ್ತೆಗೆ ಧಮ್ಕಿ ಹಾಕ್ತೀರಾ ಎಂದು ಶಾಸಕ ಶರತ್ ಎಂಟಿಬಿ ಬೆಂಬಲಿಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ತಿರುಮಲಶೆಟ್ಟಿಹಳ್ಳಿ ಠಾಣೆ ಎದುರು ಶರತ್, ಎಂಟಿಬಿ ಬೆಂಬಲಿಗರ ಜಮಾವಣೆಗೊಂಡಿದ್ದು, ಶರತ್, ಎಂಟಿಬಿ ಬೆಂಬಲಿಗರ ಮನವೊಲಿಕೆಗೆ ಪೊಲೀಸರು ಹರಸಾಹಸ ಪಟ್ಟಿದ್ದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:04 pm, Sun, 7 May 23