ಬೆಂಗಳೂರು: ಜೆಡಿಎಸ್ಗೆ ಮತ ನೀಡಿದರೂ ಬಿಜೆಪಿಗೆ ನೀಡಿದಂತೆಯೇ, ಹಾಗಾಗಿ ಬಿಜೆಪಿಗೇ ಮತ ನೀಡಿ ಎಂಬರ್ಥದಲ್ಲಿ ಹಾಸನ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ (Preetham Gowda) ನೀಡಿರುವ ಹೇಳಿಕೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬೆನ್ನಲ್ಲೇ ಆ ಕುರಿತು ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಇದರಿಂದ ಕೆರಳಿರುವ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ ಟ್ವೀಟ್ ಮಾಡಿದೆ.
ಚುನಾವಣಾ ಕುತಂತ್ರಿಯನ್ನು ಕರೆಸಿದರೂ ತನಗೆ ಮತ ಬೀಳುವುದಿಲ್ಲ ಎಂದು ದುರಂಹಕಾರಿ ಪ್ರೀತಂ ಗೌಡಗೆ ಖಾತ್ರಿಯಾಗಿದೆ. ಹಾಗಾಗಿಯೇ ಹೆಚ್ಡಿ ದೇವೇಗೌಡ ಅವರ ಹೆಸರಿನಲ್ಲಿ ಮತ ಕೇಳಿ, ಚುನಾವಣೆಗೂ ಮೊದಲೇ ಸೋಲೊಪ್ಪಿಕೊಂಡಿದ್ದಾರೆ. ಆದರೆ ಕರ್ನಾಟಕ ಕಾಂಗ್ರೆಸ್ ಮಾತ್ರ ಬಿಜೆಪಿಯ ಸುರಿದ ಸುಳ್ಳನ್ನೆ ತೀರ್ಥ ಎಂದುಕೊಂಡು ಕಣ್ಣಿಗೊತ್ತಿಕೊಳ್ಳುತ್ತಿದೆ. ಚುನಾವಣೆ ಗೆಲ್ಲಲು ಈ ಎರಡು ಹಿಂದಿ ಗುಲಾಮಿ ರಾಷ್ಟ್ರೀಯ ಪಕ್ಷಗಳು ಯಾವುದೆ ಮಟ್ಟಕ್ಕಾದರೂ ಇಳಿಯಬಲ್ಲವು. ಜೆಡಿಎಸ್ ಅನ್ನು ಸೋಲಿಸಲು ಯಾರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದು ಈಗ ಸ್ಪಷ್ಟವಾಯ್ತು. ಕಳ್ಳನಿಗೆ ಮಳ್ಳ ಸಾಕ್ಷಿ ಎಂಬಂತೆ ಪ್ರೀತಂ ಬಿಸಾಕಿದ ಮೂಳೆಯನ್ನು ಈಗ ಕರ್ನಾಟಕ ಕಾಂಗ್ರೆಸ್ ಕೂಡಾ ನೆಕ್ಕುತ್ತಿರುವುದು ಹಾಸ್ಯಾಸ್ಪದ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
‘#ಚುನಾವಣಾ_ಕುತಂತ್ರಿ‘ಯನ್ನು ಕರೆಸಿದರೂ ತನಗೆ ಮತ ಬೀಳುವುದಿಲ್ಲ ಎಂದು ದುರಂಹಕಾರಿ @nimmapreethamಗೆ ಖಾತ್ರಿಯಾಗಿದೆ. ಹಾಗಾಗಿಯೆ @H_D_Devegowdaಅವರ ಹೆಸರಿನಲ್ಲಿ ಮತ ಕೇಳಿ,ಚುನಾವಣೆಗೂ ಮೊದಲೆ ಸೋಲೊಪ್ಪಿಕೊಂಡಿದ್ದಾರೆ.ಆದರೆ @INCKarnatakaಮಾತ್ರ@BJP4Karnatakaಸುರಿದ ಸುಳ್ಳನ್ನೆ ತೀರ್ಥ ಎಂದುಕೊಂಡು ಕಣ್ಣಿಗೊತ್ತಿಕೊಳ್ಳುತ್ತಿದೆ.1/2 pic.twitter.com/2Ljg1EiBPT
— Janata Dal Secular (@JanataDal_S) April 28, 2023
ನಾವು ಪದೇ ಪದೇ ಹೇಳುತ್ತಿದ್ದೇವೆ ಜೆಡಿಎಸ್ಗೆ ಮತ ಹಾಕಿದರೆ ಬಿಜೆಪಿಗೆ ಹಾಕಿದಂತೆ. ಅದನ್ನೇ ಈಗ ಸ್ವತಃ ಬಿಜೆಪಿ ಶಾಸಕ ಪ್ರೀತಂ ಗೌಡ ಅನುಮೋದಿಸಿದ್ದಾರೆ. ಮೋದಿ-ದೇವೇಗೌಡರ ಮಧ್ಯೆ ಈಗಾಗಲೇ ಮಾತುಕತೆಯೂ ಆಗಿದೆಯಂತೆ. ಬಿಜೆಪಿಯೊಂದಿಗೆ ಕೈಜೋಡಿಸಿರುವ ಜೆಡಿಎಸ್ ಅನ್ನು ಬೆಂಬಲಿಸಬೇಡಿ. ಕಾಂಗ್ರೆಸ್ಗೆ ಮತ ನೀಡಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು.
‘ನಾನು ನಿಮಗೆ ಹೇಳುತ್ತಿದ್ದೇನೆ. ಜೆಡಿಎಸ್ಗೆ ಮತ ನೀಡುವುದೂ ಬಿಜೆಪಿಗೆ ನೀಡಿದಂತೆಯೇ. ಅವರಿಗೆ ನೀಡಿದರೂ ಅದು ನಮಗೇ ಸಲ್ಲಲಿದೆ. ಹೆಚ್ಡಿ ದೇವೇಗೌಡರು ಮತ್ತು ಮೋದಿ ಸಾಹೇಬ್ರು ಈಗಾಗಲೇ ಮಾತನಾಡಿದ್ದಾರೆ. ಜೆಡಿಎಸ್ಗೆ ಕೇವಲ 20 ರಿಂದ 25 ಸ್ಥಾನಗಳಷ್ಟೇ ದೊರೆಯಲಿದೆ. ನೀವು ಬೆಂಗಳೂರಿಗೆ ಹೋಗಲು ಬಯಸುತ್ತೀರಿ ಎಂದಾದರೆ ಅದಕ್ಕಾಗಿ ಮೈಸೂರಿಗೆ ಹೋಗಬೇಡಿ. ಹಾಸನದಿಂದ ಬೆಳ್ಳೂರು ಕ್ರಾಸ್ ಮೂಲಕ ಹೋಗಿ. ನೀವು ಮೈಸೂರಿನಿಂದಾಗಿ ಹೋಗಲು ಬಯಸುತ್ತೀರಾದರೆ ನಾನು ಹೇಳುವುದಿಷ್ಟೇ. ಎಲ್ಲ ನದಿಗಳ ನೀರು ಹರಿದು ಕೊನೆಗೆ ಸೇರುವುದು ಸಮುದ್ರಕ್ಕೇ. ಅದೇ ರೀತಿ ನೀವು ನಮ್ಮನ್ನೇ ಸೇರಬೇಕಷ್ಟೆ. ಈ ಬಗ್ಗೆ ಯೋಚನೆ ಮಾಡಿ. ಬಿಜೆಪಿಯನ್ನೇ ಬೆಂಬಲಿಸಿ’ ಎಂದು ಪ್ರೀತಂ ಗೌಡ ಹೇಳಿರುವ ವಿಡಿಯೋ ವೈರಲ್ ಆಗಿತ್ತು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ