ಜೆಡಿಎಸ್ಗೆ ಮತ ನೀಡಿದರೆ ಬಿಜೆಪಿಗೆ ನೀಡಿದಂತೆಯೇ; ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಅಚ್ಚರಿಯ ಹೇಳಿಕೆ
ಜೆಡಿಎಸ್ಗೆ ಮತ ನೀಡಿದರೂ ಬಿಜೆಪಿಗೆ ನೀಡಿದಂತೆಯೇ, ಹಾಗಾಗಿ ಬಿಜೆಪಿಗೇ ಮತ ನೀಡಿ ಎಂಬರ್ಥದಲ್ಲಿ ಪ್ರೀತಂ ಗೌಡ ನೀಡಿರುವ ಹೇಳಿಕೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಮುಖ್ಯಾಂಶಗಳು
- ಜೆಡಿಎಸ್, ಬಿಜೆಪಿ ಮೈತ್ರಿ ಸುಳಿವು ನೀಡಿದರೇ ಪ್ರೀತಂ ಗೌಡ?
- ಪ್ರೀತಂ ಗೌಡ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ನಿರಾಕರಣೆ
- ಪ್ರೀತಂ ಗೌಡ ವಿರುದ್ಧ ಜೆಡಿಎಸ್ನಿಂದ ಕಣಕ್ಕಿಳಿದಿರುವ ಸ್ವರೂಪ್
ಬೆಂಗಳೂರು: ವಿಧಾನಸಭೆ ಚುನಾವಣೆ (Karnataka Assembly Elections 2023) ಫಲಿತಾಂಶದ ಬಳಿಕ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆಯೇ ಎಂಬ ಅನುಮಾನ ಹಾಸನ (Hassan) ಬಿಜೆಪಿ ಶಾಸಕ ಪ್ರೀತಂ ಗೌಡ (Preetham Gowda) ಅವರ ಹೇಳಿಕೆಯಿಂದ ಬಲವಾಗಿದೆ. ಹಾಸನ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಜೆಡಿಎಸ್ಗೆ ಮತ ನೀಡಿದರೂ ಬಿಜೆಪಿಗೆ ನೀಡಿದಂತೆಯೇ, ಹಾಗಾಗಿ ಬಿಜೆಪಿಗೇ ಮತ ನೀಡಿ ಎಂಬರ್ಥದಲ್ಲಿ ನೀಡಿರುವ ಹೇಳಿಕೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಏಪ್ರಿಲ್ 26ರಂದು ಪ್ರೀತಂ ಗೌಡ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಪ್ರೀತಂ ಗೌಡ ಹೇಳಿದ್ದೇನು?
‘ನಾನು ನಿಮಗೆ ಹೇಳುತ್ತಿದ್ದೇನೆ. ಜೆಡಿಎಸ್ಗೆ ಮತ ನೀಡುವುದೂ ಬಿಜೆಪಿಗೆ ನೀಡಿದಂತೆಯೇ. ಅವರಿಗೆ ನೀಡಿದರೂ ಅದು ನಮಗೇ ಸಲ್ಲಲಿದೆ. ಹೆಚ್ಡಿ ದೇವೇಗೌಡರು ಮತ್ತು ಮೋದಿ ಸಾಹೇಬ್ರು ಈಗಾಗಲೇ ಮಾತನಾಡಿದ್ದಾರೆ. ಜೆಡಿಎಸ್ಗೆ ಕೇವಲ 20 ರಿಂದ 25 ಸ್ಥಾನಗಳಷ್ಟೇ ದೊರೆಯಲಿದೆ. ನೀವು ಬೆಂಗಳೂರಿಗೆ ಹೋಗಲು ಬಯಸುತ್ತೀರಿ ಎಂದಾದರೆ ಅದಕ್ಕಾಗಿ ಮೈಸೂರಿಗೆ ಹೋಗಬೇಡಿ. ಹಾಸನದಿಂದ ಬೆಳ್ಳೂರು ಕ್ರಾಸ್ ಮೂಲಕ ಹೋಗಿ. ನೀವು ಮೈಸೂರಿನಿಂದಾಗಿ ಹೋಗಲು ಬಯಸುತ್ತೀರಾದರೆ ನಾನು ಹೇಳುವುದಿಷ್ಟೇ. ಎಲ್ಲ ನದಿಗಳ ನೀರು ಹರಿದು ಕೊನೆಗೆ ಸೇರುವುದು ಸಮುದ್ರಕ್ಕೇ. ಅದೇ ರೀತಿ ನೀವು ನಮ್ಮನ್ನೇ ಸೇರಬೇಕಷ್ಟೆ. ಈ ಬಗ್ಗೆ ಯೋಚನೆ ಮಾಡಿ. ಬಿಜೆಪಿಯನ್ನೇ ಬೆಂಬಲಿಸಿ’ ಎಂದು ಪ್ರೀತಂ ಗೌಡ ಹೇಳಿರುವುದು ವಿಡಿಯೋದಲ್ಲಿದೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಪ್ರೀತಂ ಗೌಡ ಅವರು ಹಾಸನ ಕ್ಷೇತ್ರದಿಂದ ಜೆಡಿಎಸ್ನ ಹೆಚ್ಎಸ್ ಪ್ರಕಾಶ್ ವಿರುದ್ಧ 13,006 ಮತಗಳಿಂದ ಜಯ ಗಳಿಸಿದ್ದರು. ಇದು ವಿಧಾನಸಭೆ ಚುನಾವಣೆಯಲ್ಲಿ ಪ್ರೀತಂ ಗೌಡ ಅವರ ಮೊದಲ ಗೆಲುವಾಗಿತ್ತು. ಈ ಬಾರಿ ಜೆಡಿಎಸ್ನ ಹೆಚ್ಪಿ ಸ್ವರೂಪ್ ವಿರುದ್ಧ ಕಣಕ್ಕಿಳಿದಿದ್ದಾರೆ.
ಇದನ್ನೂ ಓದಿ: Karnataka Elections: ಮೈಸೂರಿನಲ್ಲಿ ಮಾತ್ರ ತಯಾರಾಗುತ್ತದೆ ಮತದಾನದ ಶಾಯಿ; ಇಲ್ಲಿದೆ ಸ್ವಾರಸ್ಯಕರ ಮಾಹಿತಿ
ಪ್ರೀತಂ ಗೌಡ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ನಿರಾಕರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸ ಮಾಡಲಿದ್ದಾರೆ. ನಾವು ನಮ್ಮ ಕೆಲಸ ಮಾಡಲಿದ್ದೇವೆ ಎಂದಷ್ಟೇ ಅವರು ಹೇಳಿದ್ದಾರೆ.
ಜೆಡಿಎಸ್ನಿಂದಲೂ ಹಾಸನ ಟಿಕೆಟ್ ಘೋಷಣೆ ವಿಚಾರ ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು. ಹೆಚ್ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣಗೇ ಟಿಕೆಟ್ ನೀಡಬೇಕು ಎಂದು ಅವರು ಪಟ್ಟು ಹಿಡಿದಿದ್ದರೆ ಸ್ವರೂಪ್ಗೇ ನೀಡುವುದಾಗಿ ಹೆಚ್ಡಿ ಕುಮಾರಸ್ವಾಮಿ ಪಟ್ಟು ಹಿಡಿದಿದ್ದರು. ಕೊನೆಗೂ ಸ್ವರೂಪ್ ಅವರನ್ನೇ ಕಣಕ್ಕಿಳಿಸುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಿದ್ದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



