ಹಾಸನ: ಮುಂಬರುವ ವಿಧಾನಸಭೆ (Karnataka Assembly Elections 2023) ಟಿಕೆಟ್ ವಿಚಾರವಾಗಿ ಹಾಸನದಲ್ಲಿ (Hassan) ದಳಪತಿಗಳಲ್ಲಿ ತಳಮಳ ಶುರುವಾಗಿದೆ. ಹಾಸನಕ್ಕಾಗಿ ಕುಟುಂಬದಲ್ಲೇ ಮುಸುಕಿನ ಗುದ್ದಾಟ, .ಅರಲಗೂಡಿನಲ್ಲಿ ಅತಂತ್ರ, ಅರಸೀಕೆರೆಯಲ್ಲಿ ಸೆಡ್ಡು. ಹೀಗೆ ಮನೆಯೊಂದು ಮೂರು ಬಾಗಿಲು ಎನ್ನುವಂತೆ ಹಾಸನ ಜೆಡಿಎಸ್ ಆಗಿದೆ. ಈ ಹಿನ್ನೆಲೆಯಲ್ಲಿ ಈ ಎಲ್ಲಾ ಗೊಂದಲಗಳನ್ನು ನಿವಾರಿಸಲು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಇಂದು(ಫೆಬ್ರವರಿ 12) ಹಾಸನ ಜಿಲ್ಲಾ ಪ್ರವಾಸ ಕೈಗೊಂಡು ಧೂಳೆಬ್ಬಿಸಿದರು. ಅರಸೀಕೆರೆಯಲ್ಲಿ ಶಿವಲಿಂಗೇಗೌಡ ವಿರುದ್ಧ ಪರ್ಯಾಯ ಅಭ್ಯರ್ಥಿಯನ್ನು ಘೋಷಿಸಿದರು. ಇನ್ನು ಹಾಸನ ಟಿಕೆಟ್ ಬಗ್ಗೆ ಒಂದು ತೀರ್ಮಾನ ತೆಗೆದುಕೊಳ್ಳುತ್ತಾರೆ. ಟಿಕೆಟ್ ಸಮರಕ್ಕೆ ಪೂರ್ಣ ವಿರಾಮ ಇಡುತ್ತಾರೆ ಎಂದು ಜಿಲ್ಲೆಯ ಮುಖಂಡರು, ಕಾರ್ಯಕರ್ತರು ಭಾವಿಸಿದ್ದರು. ಆದ್ರೆ, ಹೆಚ್‌ಡಿಕೆ ಅದ್ಯಾವುದನ್ನು ಮಾಡದೇ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಾಸನ ಟಿಕೆಟ್ ನಿಗೂಢವಾಗಿಟ್ಟಿದ್ದಾರೆ.
ಹಾಸನ ಟಿಕೆಟ್‌ಗಾಗಿ ಭವಾನಿ ರೇವಣ್ಣ ಅವರು ಕುಮಾರಸ್ವಾಮಿ ಮಾತಿಗೆ ಕ್ಯಾರೇ ಎನ್ನದೇ ಕ್ಷೇತ್ರದಲ್ಲಿ ಭರ್ಜರಿ ಓಡಾಡಿದರು. ಇನ್ನು ಭವಾನಿ ರೇವಣ್ಣ ಅವರ ಪುತ್ರ ಸೂರಜ್ ಸಹ ತಮ್ಮ ಚಿಕ್ಕಪ್ಪ ಕುಮಾರಸ್ವಾಮಿ ವಿರುದ್ಧವೇ ತೊಡೆತಟ್ಟಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ವಿರೋಧಿಗಳು ಸಹ ಮುಸಿಮುಸಿ ನಗುವಂತಾಗಿತ್ತು. ಇದು ದೊಡ್ಡಗೌಡ್ರ ವರ್ಚಸ್ಸಿಗೆ ಧಕ್ಕೆ ಉಂಟಾಗುವ ರೀತಿಯಲ್ಲಿ ಇತ್ತು. ಇದರಿಂದ ಎಚ್ಚೆತ್ತ ದೇವೇಗೌಡ, ರೇವಣ್ಣ ಅವರನ್ನು ಮನೆಗೆ ಕರೆಯಿಸಿಕೊಂಡು ಪಾಠ ಮಾಡಿದ್ದರು. ಬಳಿಕ ಕುಮಾರಸ್ವಾಮಿ ಹಾಗೂ ರೇವಣ್ಣ ಕುಟುಂಬದ ನಡುವಿನ ಏಟು ಎದುರೇಟಿಗೆ ಬ್ರೇಕ್ ಬಿತ್ತು. ಆದ್ರೆ, ಇಂದು ತಾಯಿ ಮಗ(ಭವಾನಿ ರೇವಣ್ಣ ಹಾಗೂ ಸೂರಜ್) ಕುಮಾರಸ್ವಾಮಿ ಜೊತೆ ಓಡಾಡಿಕೊಂಡಿದ್ದರು.
ರೇವಣ್ಣ ಅವರ ಇಡೀ ಕುಟುಂಬ ಅಂದ್ರೆ ಪ್ರಜ್ವಲ್ ರೇವಣ್ಣ, ಭವಾನಿ, ಹಾಗೂ ಸೂರಜ್, ಕುಮಾರಸ್ವಾಮಿ ಜೊತೆ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದರು. ಅಲ್ಲದೇ ಕೆಲ ಕಾರ್ಯಕ್ರಮಗಳಲ್ಲಿ ಭಾವಹಿಸಿ ದೇವೇಗೌಡರ ಫ್ಯಾಮಿಲಿ ಒಗ್ಗಟ್ಟು ಪ್ರದರ್ಶನ ಮಾಡಿತು. ಇದರೊಂದಿಗೆ ನಮ್ಮ ಕುಟುಂಬದಲ್ಲಿ ಯಾವುದೇ ಭಿನ್ನಮತ ಆಗಲಿ ಗುದ್ದಾಟವಾಗಲಿ ಎಲ್ಲ ಎಂದು ವಿರೋಧಿಗಳಿಗೆ ಸಂದೇಶ ರವಾನಿಸಿದರು.
ಒಂದೆಡೆ ಭವಾನಿ, ಮತ್ತೊಂದೆಡೆ ರೇವಣ್ಣ. ಇನ್ನೊಂದೆಡೆ ಸ್ವರೂಪ್. ಈ ಮೂವರ ನಡುವೆ ಹಾಸನ ಟಿಕೆಟ್‌ಗಾಗಿ ಗೇಮ್ ಸ್ಟಾರ್ಟ್ ಆಗಿದೆ. ಭವಾನಿ ರೇವಣ್ಣ ಕೂಡ ಸೈಲೆಂಟಾಗಿಯೇ ಕ್ಷೇತ್ರದಾದ್ಯಂತ ಓಡಾಡುತ್ತಿದ್ದಾರೆ. ಅತ್ತ ಸ್ವರೂಪ್ ಕೂಡ ನಾನೇ ಆಕಾಂಕ್ಷಿ, ವರಿಷ್ಠರು ಏನ್ ಹೇಳ್ತಾರೋ ಕೇಳುತ್ತೇನೆ ಎಂದು ಬಾಣ ಬಿಟ್ಟಿದ್ದಾರೆ. ಇದು ಕುಮಾರಸ್ವಾಮಿಗೆ ಟೆನ್ಷನ್ ತಂದಿಟ್ಟಿದೆ. ಯಾಕಂದ್ರೆ ಇಲ್ಲಿ ಒಂದೇ ಒಂದು ನಿರ್ಧಾರ ಹೊರಬೀಳಬೇಕಿದೆ. ಒಂದು ಭವಾನಿಗೆ ಟಿಕೆಟ್ ಕೊಡಬೇಕಾ ಬೇಡ್ವಾ ಅನ್ನೋ ನಿರ್ಧಾರ. ಎರಡು ರೇವಣ್ಣ ಸ್ಪರ್ಧೆಗೆ ಓಕೆ ಅನ್ನ ಬೇಕಾ ಬೇಡ್ವಾ. ಮೂರು ತಾವೇ ಹೇಳಿರುವಂತೆ ಸ್ವರೂಪಗೆ ಟಿಕೆಟ್ ಕೊಡಬೇಕಾ, ಬೇಡ್ವಾ ಅನ್ನೋದು. ಇಲ್ಲಿ ಯಾವ ನಿರ್ಧಾರ ಮಾಡಿದ್ರೂ ಹೆಚ್‌ಡಿಕೆ ಬೆನ್ನಿಗಿ ಅದರದ್ದೇ ಆದ ಸಂಕಷ್ಟ ಇದೆ ಹೀಗಾಗೇ, ಕುಮಾರಸ್ವಾಮಿ ನಿರ್ಧಾರದ ಮೇಲೆ ಮುಂದಿನ ಕದನ ಹೇಗಿರುತ್ತೆ ಎನ್ನುವುದು ಗೊತ್ತಾಗಲಿದೆ. ಆದ್ರೆ, ಟಿಕೆಟ್ ಭವಾನಿಗೋ ಇಲ್ಲ ಸ್ವರೂಪ್ ಗೌಡಗೋ ಎನ್ನುವ ಕುತೂಹಲ ಇನ್ನೂ ಮುಂದುವರೆದಿದೆ. ಈ ಇಬ್ಬರ ನಡುವೆ ಪ್ರೀತಂ ಗೌಡ ಅವರನ್ನು ಹಣೆಯಲು ರೇವಣ್ಣಗೆ ಮಣೆ ಹಾಕಿದರೂ ಅಚ್ಚರಿ ಪಡಬೇಕಿಲ್ಲ. ಇದರಿಂದ ಕುಮಾರಸ್ವಾಮಿ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎನ್ನುವ ಕುತೂಹಲ ಕಾರಣವಾಗಿದೆ.
ಹೌದು…ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂ ಗೌಡ ಸವಾಲೇ ಹೆಚ್.ಡಿ ರೇವಣ್ಣ ನಿದ್ದೆಗೆಡಿಸಿದೆ. ಪ್ರೀತಂ ಗೌಡ ಸವಾಲನ್ನ ದಾಳವನ್ನಾಗಿ ಬಳಸಿಕೊಳ್ಳಲು ರಣತಂತ್ರ ಹೆಣೆದಿದ್ದಾರೆ. ಯಾಕಂದ್ರೆ ಧೈರ್ಯ ಇದ್ರೆ ಹಾಸನದಿಂದ ರೇವಣ್ಣ ಸ್ಪರ್ಧೆ ಮಾಡಲಿ ಎಂದು ಸವಾಲು ಹಾಕಿದ್ದಾರೆ. ಅಷ್ಟೇ ಅಲ್ಲ ನಾನು 50 ಸಾವಿರ ಲೀಡ್ನಿಂದ ಗೆಲ್ಲುತ್ತೇನೆ, ಒಂದು ವೇಳೆ ಗೆಲ್ಲದಿದ್ರೆ ರಾಜಿನಾಮೆ ಕೊಟ್ಟು ಹೋಗುತ್ತೇನೆ ಎಂದು ಪ್ರೀತಂ ಸವಾಲು ಹಾಕಿದ್ದಾರೆ.. ಇದೇ ಸವಾಲು ರೇವಣ್ಣಗೆ ಡಿಸ್ಟರ್ಬ್ ಮಾಡಿದೆ. ಹೀಗಾಗಿ ನಾನು ಸವಾಲು ಸ್ವೀಕಾರ ಮಾಡುವುದಕ್ಕೆ ರೆಡಿ ಇದ್ದೇನೆ. ಆದ್ರೆ ಪಕ್ಷ ಒಪ್ಪಬೇಕು ಎನ್ನುವ ಮೂಲಕ ರೇವಣ್ಣ ಕುಮಾರಸ್ವಾಮಿ ಮನೆ ಅಂಗಳಕ್ಕೆ ಟಿಕೆಟ್ ಚೆಂಡು ಎಸೆದಿದ್ದಾರೆ. ಈ ನಡುವೆ ಹಾಸನದಲ್ಲಿ ಸ್ವರೂಪ್ಗೆ ಟಿಕೆಟ್ ತಪ್ಪಿದರೂ ದಳಕ್ಕೆ ಸಂಕಷ್ಟ ಎನ್ನುವ ಮಾತು ಕೇಳಿ ಬರ್ತಿದೆ. ಯಾಕಂದ್ರೆ, ಸ್ವರೂಪ್ಗೆ ಟಿಕೆಟ್ ಮಿಸ್ ಆದ್ರೆ JDS ದಾಸ ಒಕ್ಕಲಿಗ ಸಮುದಾಯದ ಕೆಂಗಣ್ಣಿಗೆ ಗುರಿ ಆಗುವ ಸಾಧ್ಯತೆ ಇದೆ. ಈಗಾಗಿ ಜಿಲ್ಲೆಯಲ್ಲಿ ಭಿನ್ನಮತ, ಬಿಕ್ಕಟ್ಟು ಬರದಂತೆ ಎಚ್ಚರಿಕೆ ಹೆಜ್ಜೆಯೊಂದಿಗೆ ದಳಪತಿಗಳು ತಂತ್ರ ಹೆಣೆದಿದ್ದಾರೆ. ಅಲ್ಲದೇ ಕುಮಾರಸ್ವಾಮಿ, ಪ್ರೀತಂಗೌಡ ಅವರನ್ನು ಬೀಳಿಸಲು ಸೈಲೆಂಟ್ ಆಗಿ ಸ್ಕೆಚ್ ಹಾಕುತ್ತಿದ್ದಾರೆ. ಇದರಿಂದ ಹಾಸನ ಟಿಕೆಟ್ ಘೋಷಣೆ ಮಾಡದೇ ಜಾಣ ನಡೆ ಇಟ್ಟಿದ್ದಾರೆ.
ಒಟ್ಟಿನಲ್ಲಿ ಹೆಚ್‌ಡಿಕೆ ಹಾಸನಕ್ಕೆ ಕಾಲಿಟ್ಟು ತಮ್ಮ ಫ್ಯಾಮಿಲಿ ಫೈಟ್‌ನ ಡ್ಯಾಮೇಜ್ ಕಂಟ್ರೋಲ್ ಮಾಡುವಲ್ಲಿ ಯಶಸ್ವಿಯಾದರು ವಿನಃ ಟಿಕೆಟ್ ಯಾರಿಗೆ ಎಂದು ಘೋಷಣೆ ಮಾಡದೇ ಗೌಪ್ಯವಾಗಿ ಇಟ್ಟಿದ್ದಾರೆ. ಇದರಿಂದ ಹಾಸನ ಟಿಕೆಟ್ ಯಾರಿಗೆ ಎಂದು ಕೌತುಕ ಹೆಚ್ಚಾಗಿದ್ದು, ಹೆಚ್‌ಡಿಕೆ ಕುಮಾರಸ್ವಾಮಿ ನಡೆ ಕುತೂಹಲ ಮೂಡಿಸಿದೆ.