ರಾಮನಗರ: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) 2023)ಸಮೀಪಿಸುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ವೈ.ಎಸ್.ವಿ ದತ್ತಾ ಜೆಡಿಎಸ್(JDS) ತೊರೆದು ಕಾಂಗ್ರೆಸ್ (Congress) ಸೇರುವುದಾಗಿ ಪ್ರಕಟಿಸಿದ ಬೆನ್ನಲ್ಲೇ ಇದೀಗ ಜೆಡಿಎಸ್ನ ಮತ್ತೊಂದು ಪ್ರಮುಖ ವಿಕೆಟ್ ಪತನವಾಗಿದೆ. ರಾಮನಗರ ಜಿಲ್ಲೆಯ ಜೆಡಿಎಸ್ನ ಪ್ರಭಾವಿ ನಾಯಕ, 2008ರಲ್ಲಿ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ದೂಂತೂರು ವಿಶ್ವನಾಥ್,(DM Vishwanath) ತೆನೆ ಇಳಿಸಿ ಕೈ ಹಿಡಿಯಲಿದ್ದಾರೆ.
ಇದನ್ನೂ ಓದಿ: ದೇವೇಗೌಡರ ಮಾನಸ ಪುತ್ರ ಜೆಡಿಎಸ್ಗೆ ಗುಡ್ಬೈ, ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್…!
ಹೌದು…2008ರಲ್ಲಿ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ದೂಂತೂರು ವಿಶ್ವನಾಥ್ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೆ ನಿರ್ಧರಿಸಿದ್ದಾರೆ. ಜನವರಿ 09ರಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಇದೇ ವೇಳೆ ದೂಂತೂರು ವಿಶ್ವನಾಥ್ ಜೊತೆ ಹಲವು ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಕಾಂಗ್ರೆಸ್ ಪಕ್ಷ ಸೇರ್ಪಡೆ ಬಗ್ಗೆ ದೂಂತೂರು ವಿಶ್ವನಾಥ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಸಂಕ್ರಾಂತಿಯ ಹೊಸ್ತಿಲಲ್ಲಿ ರಾಜಕೀಯ ಸಂಕ್ರಮಣಕ್ಕೆ ನಾಂದಿ ಹಾಡುವುದು ಸೂಕ್ತವೇ ಸರಿ. 2004ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರ, 2008ರಲ್ಲಿ ಮರುವಿಂಗಡಣೆ ಆದ ಕನಕಪುರ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಸ್ಪರ್ಧೆ ಮಾಡಿದಾಗ ನಾನಾ ರೀತಿ ಷಡ್ಯಂತ್ರಗಳ ನಡುವೆಯೂ ಸಿಕ್ಕ ನಿಮ್ಮ ಬೆಂಬಲ, ಆಸರೆ, ಆಶೀರ್ವಾದವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
2008 ವಿಧಾನಸಭೆ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಡಿಕೆ ಶಿವಕುಮಾರ್ ವಿರುದ್ಧ ಸ್ಪರ್ಧಿಸಿ ಸೋಲುಕಂಡಿದ್ದರು. ಈ ಬಾರಿ ಡಿಕೆಶಿಗೆ ಫೈಟ್ ಕೊಡಬೇಕು ಎನ್ನುವ ಹಠಕ್ಕೆ ಬಿದ್ದವರಂತೆ ಸಾಲು-ಸಾಲು ಸಭೆಗಳು, ಪಂಚರತ್ನ ಯಾತ್ರೆಯನ್ನು ಕನಕಪುರದಲ್ಲೇ ಮಾಡಿದ್ದರು. ಅಲ್ಲದೇ ಕಾರ್ಯಕರ್ತರು ಹಾಗೂ ನಾಯಕರಲ್ಲಿ ಹೊಸ ಹುಮ್ಮಸ್ಸು ತುಂಬಿದ್ದರು. ಇನ್ನೇನು ಚುನಾವಣೆ ಮೂರ್ನಾಲ್ಕು ತಿಂಗಳು ಇರುವಾಗಲೇ ಕನಕಪುರ ಜೆಡಿಎಸ್ ಪ್ರಭಾವಿ ನಾಯಕ ವಿರೋಧಿ ಪಾಳಯಕ್ಕೆ ಜಿಗಿಯುತ್ತಿರುವುದು ದಳಪತಿಗಳಿಗೆ ಆರಂಭಿಕ ಆಘಾತವಾದಂತಾಗಿದೆ.
ಒಂದು ಕಾಲದಲ್ಲಿ ಜನತಾ ಪರಿವಾರದ ಭದ್ರಕೋಟೆಯಾಗಿದ್ದ ಕನಕಪುರ ಕ್ಷೇತ್ರ 2008ರ ನಂತರ ಸಂಪೂರ್ಣವಾಗಿ ಜೆಡಿಎಸ್ ಕೈತಪ್ಪಿತ್ತು. 2008ರಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಸ್ಪರ್ಧಿಸಿದ್ದ ದೂಂತೂರು ವಿಶ್ವನಾಥ್ ಗೆಲುವಿನ ಸಮೀಪ ಬಂದು ಸೋಲು ಕಂಡಿದ್ದರು. ಬಳಿಕ 2023ರಲ್ಲಿ ಪಿಜಿಆರ್ ಸಿಂಧ್ಯಾ ಪೈಪೋಟಿ ನೀಡದೇ ಡಿಕೆಶಿ ಮುಂದೆ ಮಂಡಿಯೂರಿದ್ದರು. ನಂತರ 2018ರ ಚುನಾವಣೆಯಲ್ಲಿ ನಾರಾಯಣಗೌಡ ಕಣಕ್ಕಿಳಿದರೂ ಡಿಕೆಶಿ ಮುಂದೆ ಆಟ ನಡೆಯಲಿಲ್ಲ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಕನಕಪುರ ಕ್ಷೇತ್ರಕ್ಕೆ ಜೆಡಿಎಸ್ನಿಂದ ತಾಲೂಕು ಅಧ್ಯಕ್ಷ ಬಿ. ನಾಗರಾಜು ಹಾಗೂ ಗ್ರಾನೈಟ್ ಉದ್ಯಮಿ ಬಾಲನರಸಿಂಹೇಗೌಡ ಹೆಸರುಗಳು ಕೇಳಿಬರುತ್ತಿವೆ. ಅದು ಏನೇ ಇದ್ದರೂ ಈಗ ಪ್ರಭಾವಿ ನಾಯಕ ವಿಶ್ವನಾಥ್ ಜೆಡಿಎಸ್ ತೊರೆದು ಡಿಕೆಶಿ ಪಾಳಯ ಸೇರುತ್ತಿರುವುದು ದಳಪತಿಗೆ ಮತ್ತಷ್ಟು ಚಿಂತೆಗೀಡು ಮಾಡಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ