Karnataka Election 2023 Live updates: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೇವಲ 6 ದಿನಗಳು ಮಾತ್ರ ಬಾಕಿ ಇವೆ. ಮೇ 10ರಂದು ಮತದಾನ ನಡೆಯಲಿದ್ದು ಮೇ 13ಕ್ಕೆ ಫಲಿತಾಂಶ ಹೊರ ಬೀಳಲಿದೆ. ಈಗಾಗಲೇ ಕಾಂಗ್ರೆಸ್-ಬಿಜೆಪಿ ಕೇಂದ್ರ ನಾಯಕರು ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಜೆಡಿಎಸ್ ವರಿಷ್ಠ ಹೆಚ್ಡಿ ಕುಮಾರಸ್ವಾಮಿ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಪ್ರಚಾರ ನಡೆಸುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ತನ್ನ ಪ್ರಣಾಳಿಕೆ ಬಿಡುಗಡೆ ಮಾಡುತ್ತಿದ್ದಂತೆ ರಾಜ್ಯದಲ್ಲಿ ಕೋಲಾಹಲ ಎದ್ದಿತ್ತು. ಬಜರಂಗದಳ ನಿಷೇಧದ ಬೆಂಕಿ ಹಬ್ಬಿತ್ತು. ಹೀಗಾಗಿ ಸಂಜೆ 7 ಗಂಟೆಗೆ ಹನುಮಾನ್ ಚಾಲೀಸಾ ಪಠಣ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಕಳೆದ 2 ದಿನಗಳಿಂದ ಪ್ರಚಾರ ನಡೆಸಿ ಇಂದು ಬ್ರೇಕ್ ತೆಗೆದುಕೊಂಡಿದ್ದಾರೆ. ಕಲಬುರಗಿಯಲ್ಲಿ ಚುನಾವಣೆ ಚಾಣಕ್ಯ ಅಮಿತ್ ಶಾ ಅಬ್ಬರಿಸಲಿದ್ದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಇಂದು ಹಾವೇರಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಪ್ರಚಾರ ನಡೆಸಲಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಮಹಾರಾಷ್ಟ್ರ ಡಿಸಿಎಂ ಫಡ್ನವಿಸ್, ಕೇಂದ್ರ ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ್ ಚೌಹಾಣ್ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಹಾಗೂ ರಾಯಚೂರು ಜಿಲ್ಲೆಯಲ್ಲಿ ನಟ ಸುದೀಪ್ ರೋಡ್ ಶೋ ನಡೆಸಲಿದ್ದಾರೆ.
ಬೆಳಗಾವಿ: ಬಿಜೆಪಿ ವಿರುದ್ಧ ಮಾಜಿ ಸಿಎಂ ಜಗದೀಶ್ ಶೆಟ್ಟರ್ ‘ಲಿಂಗಾಯತ ಅಸ್ತ್ರ’ ಪ್ರಯೋಗಿಸಿದ್ದಾರೆ. ಬೆಳಗಾವಿಯಲ್ಲಿ ಲಿಂಗಾಯತ, ಮುಸ್ಲಿಂ ಸಮುದಾಯದ ಮುಖಂಡರ ಸಭೆ ನಡೆಸಿದ ಜಗದೀಶ್ ಶೆಟ್ಟರ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಲಿಂಗಾಯತ ಸಮುದಾಯ ಬೆಂಬಲದಿಂದ ಅಧಿಕಾರಕ್ಕೆ ಬಂದಿತ್ತು. ಇವತ್ತು ಆ ಲಿಂಗಾಯತ ಸಮುದಾಯವನ್ನ, ನಾಯಕತ್ವ ತಗೆದು ಹಾಕುವ ಹಿಡನ್ ಅಜೆಂಡಾ ಇದೆ. ಇದನ್ನು ಸಮಾಜ ಬಾಂಧವರು ಅರ್ಥ ಮಾಡಿಕೊಳ್ಳಬೇಕು. ಇದು ಜಗದೀಶ್ ಶೆಟ್ಟರ್ ಒಬ್ಬನ ವೈಯಕ್ತಿಕ ಪ್ರಶ್ನೆ ಅಲ್ಲ. ನಾನು ಈಗಾಗಲೇ ಆರು ಬಾರಿ ಆರಿಸಿ ಬಂದಿದ್ದೇನೆ, ಸಿಎಂ ಆಗಿದ್ದೇನೆ. ಮುಂದೇನು ಆಗಬೇಕು ಅಂತಾ ನನಗೇನೂ ಇಲ್ಲ. ಆದರೆ ಸಮಾಜದ ಹಿತದೃಷ್ಟಿಯಿಂದ ಹೇಳುತ್ತೇನೆ ನೀವು ಎಚ್ಚರವಾಗಿರಿ. ಮುಂದೆ ಗಂಡಾಂತರ ಇದೆ, ಹೀಗಾಗಿ ಇಂದು ಕಾಂಗ್ರೆಸ್‌ಗೆ ಬೆಂಬಲ ಕೊಡಿ. ಇವರಿಗೆ ಪಾಠ ಕಲಿಸೋಣ, ಆಗ ಇವರು ಎಚ್ಚರ ಆಗುತ್ತಾರೆ. ಇಲ್ಲವಾದರೆ ಇದೇ ರೀತಿ ಸರ್ವಾಧಿಕಾರ ಪ್ರವೃತ್ತಿ ಮುಂದುವರಿಯುತ್ತದೆ ಎಂದರು.
ಬಳ್ಳಾರಿ: ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರು ಇಂದು ಅಬ್ಬರದ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಅವರು, ರಾಜಕಾರಣದಲ್ಲಿ ಧರ್ಮ., ಅಧರ್ಮ ಇರಲೇಬೇಕು. ಆದರೆ ಕೊನೆಗೆ ಧರ್ಮವೇ ಗೆಲ್ಲಬೇಕು. ರಾಜಕಾರಣದಲ್ಲಿ ಹಣ ಬಲ, ತೋಳ್ಬಲ, ಜನ ಇದ್ದೆ ಇರುತ್ತದೆ. ಆದರೆ ಕೊನೆಗೆ ಜನ ಬಲ ಗೆಲ್ಲಬೇಕು. ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಧರ್ಮ, ಜನಬಲ ಗೆಲುತ್ತದೆ. ಧರ್ಮದ ಪರವಾಗಿ ಜನರ ಬಲ ನನಗೆ ದೊರೆಯಲಿದೆ ಎಂದರು.
ಬಳ್ಳಾರಿ: ಗ್ರಾಮೀಣ ಪ್ರದೇಶದ ಕೌಲಬಜಾರ್ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪ್ರಚಾರ ನಡೆಸಿದರು. ಪ್ರಚಾರದ ವೇಳೆ ಭಾಷಣ ಮಾಡುತ್ತಿದ್ದಾಗ ಆಜಾನ್ ಕೂಗು ಕೇಳಿಬಂದ ಹಿನ್ನೆಲೆ ಅವರು ಭಾಷಣ ನಿಲ್ಲಿಸಿದರು. ಮುಸ್ಲಿಂ ಸಮುದಾಯ ಮೀಸಲಾತಿ ವಿಚಾರದಲ್ಲಿ ಭಯ ಬೀಳುವುದು ಬೇಡ. ಮೀಸಲಾತಿ ಕೊಡಿಸುವ ವಿಚಾರದಲ್ಲಿ ನಾನು ಬಹುದೊಡ್ಡ ಹೋರಾಟ ಮಾಡಿರುವೆ. ನಿಮ್ಮ ಪರವಾಗಿ ನಾನು ಇರುತ್ತೇನೆ ಎಂದು ಮುಸ್ಲಿಂ ಸಮುದಾಯಕ್ಕೆ ಭರವಸೆ ನೀಡಿದರು.
ಕೊಪ್ಪಳ: ನಾನು ಮೂರು ಪಂದ್ಯಗಳಲ್ಲಿ ಹ್ಯಾಟ್ರಿಕ್ ಶತಕ ಬಾರಿಸಿದ್ದೆ. ಅದೇ ರೀತಿ ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ್ ಹ್ಯಾಟ್ರಿಕ್ ಗೆಲುವು ಸಾಧಿಸಬೇಕು ಎಂದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಹೇಳಿದ್ದಾರೆ. ಪ್ರಚಾರದ ವೇಳೆ ಮಾತನಾಡಿದ ಅವರು, ಹಿಟ್ನಾಳ್ ಅವರು ಗೆದ್ದೇ ಗೆಲ್ಲುತ್ತಾರೆ, ಅತಿಹೆಚ್ಚು ಮತಗಳಿಂದ ಗೆಲ್ಲಿಸಬೇಕು. ಬೂತ್ಮಟ್ಟದಲ್ಲಿ ಕಾರ್ಯಕರ್ತರು ಚೆನ್ನಾಗಿ ಕೆಲಸ ಮಾಡಬೇಕು ಎಂದರು.
ನೆಲಮಂಗಲ: ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಕಾಂಗ್ರೆಸ್ನವರ ವಿರೋಧದ ನಡುವೆಯೂ ರೈತರ ಸಾಲಮನ್ನಾ ಮಾಡಿದ್ದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. 25 ಸಾವಿರ ಕೋಟಿ ಸಂಗ್ರಹ ಮಾಡಿ ರೈತರ ಸಾಲಮನ್ನಾ ಮಾಡಿದ್ದೆ. ನಂತರ ಆಪರೇಷನ್ ಕಮಲಮಾಡಿ ಸಮ್ಮಿಶ್ರ ಸರ್ಕಾರವನ್ನು ತೆಗೆದರು. ನಂತರ ಅಧಿಕಾರಕ್ಕೆ ಬಂದ BJP ಸಾಲಮನ್ನಾ ಹಣ ಬಿಡುಗಡೆ ಮಾಡಿಲ್ಲ ಎಂದರು.
ನೆಲಮಂಗಲ: ನಾನು ಏಕಾಂಗಿ ಹೋರಾಟ ಮಾಡುತ್ತಿದ್ದೇನೆ ಎಂದು ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ. ಜನ ಸಂಕಷ್ಟದಲ್ಲಿದ್ದಾಗ ದೆಹಲಯಿಂದ ಯಾರು ಬಂದಿಲ್ಲ. ನದಿ ನೀರು ಉಪಯೋಗಕ್ಕೆ ಅವಕಾಶ ಕೊಟ್ಟಿಲ್ಲ. ನಾಡಿನ ದಾಸರನ್ನು, ಸಂತರನ್ನ ನೆನೆಪಿಸಿಕೊಳ್ಳುತ್ತಾ ಇದ್ದಾರೆ. ಅದಕ್ಕೆ ಜನ ಉತ್ತರ ಭಾರತದಿಂದ ಬರುತ್ತಿದ್ದಾರೆ ಎಂದರು.
ಬೆಳಗಾವಿ: ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್, ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ ಸೋಲಿಸಲು ಗುಜರಾತ್ ಟೀಮ್ ಆಗಮಿಸಿದ ವಿಚಾರವಾಗಿ ಮಾತನಾಡಿದ ಜಗದೀಶ್ ಶೆಟ್ಟರ್, ಯಾರೂ ಏನೇ ಮಾಡಿದರೂ ಏನೂ ಮಾಡಕ್ಕಾಗಲ್ಲ. ಇವತ್ತು ಜನರ ಪ್ರೀತಿ ವಿಶ್ವಾಸ ನಮ್ಮ ಮೇಲೆ ಇದೆ. ನಾವು ಗೆದ್ದೆ ಗೆಲ್ಲುತ್ತೇವೆ ಎಂಬ ವಿಶ್ವಾಸ ನಮ್ಮಲ್ಲಿದೆ ಎಂದರು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪ ವಿಚಾರವಾಗಿ ಮಾತನಾಡಿದ ಅವರು, ಇದರ ಬಗ್ಗೆ ನಾನು ಚರ್ಚೆ ಮಾಡಲು ಹೋಗಲ್ಲ. ಇಂದು ಮಾಜಿ ಸಿಎಂ ವೀರಪ್ಪ ಮೊಯ್ಲಿಯವರು ಸ್ಪಷ್ಟವಾಗಿ ಹೇಳಿದ್ದಾರೆ. ನಾವು ಬ್ಯಾನ್ ಮಾಡುವುದಿಲ್ಲ ಎಂದಿದ್ದಾರೆ. ಯಾವುದೇ ಸಂಘ ಸಂಸ್ಥೆ ನಿಷೇಧ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಅದು ಕೇಂದ್ರ ಸರ್ಕಾರಕ್ಕೆ ಇರುವ ಅಧಿಕಾರ, ನಾನು ಇದರ ಬಗ್ಗೆ ಹೆಚ್ಚು ಚರ್ಚೆ ಮಾಡಲು ಹೋಗಲ್ಲ. ಏನೇ ಆದರೂ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇನೆ ಎಂದರು.
ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋಗೆ ಅನುಮತಿ ನೀಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಹೇಳಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇ 6, 7ರಂದು ಪ್ರಧಾನಿ ರೋಡ್ ಶೋಗೆ ಅನುಮತಿ ನೀಡಲಾಗಿದೆ. ಅಗ್ನಿಶಾಮಕ ದಳ ಸೇರಿ ಎಲ್ಲಾ ಅನುಮತಿ ಪಡೆದಿದ್ದರೆ ಮಾತ್ರ ಅವಕಾಶ ನೀಡಲಾಗುತ್ತದೆ. ನಿಯಮಗಳನ್ನು ಉಲ್ಲಂಘಿಸಿದರೆ ಮಾತ್ರ ಕ್ರಮ ಕೈಗೊಳ್ಳಲಾಗುವುದು ಎಂದರು.
ಚಿತ್ರದುರ್ಗ: ಚುನಾವಣಾ ಕಣದಿಂದ ನಿವೃತ್ತಿ ಘೋಷಣೆ ಬೆನ್ನಲ್ಲೇ ಮಾಜಿ ಶಾಸಕ ಬಸವರಾಜನ್, ಪತ್ನಿ ಸೌಭಾಗ್ಯ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಚಿತ್ರದುರ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸೌಭಾಗ್ಯ ಬಸವರಾಜನ್ ಹಾಗೂ ಇವರ ಪತಿಯೂ ಆಗಿರುವ ಮಾಜಿ ಶಾಸಕ ಬಸವರಾಜನ್ ಅವರು ಪ್ರಚಾರ ಸಭೆಯಲ್ಲಿ ಬಿಜೆಪಿ ಸೇರ್ಪಡೆಯಾದರು. ಚಿತ್ರದುರ್ಗ ನಗರದ ಕಮ್ಮರೆಡ್ಡಿ ಸಮುದಾಯ ಭವನದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಬಿಜೆಪಿ ಸೇರಿದರು. ಈ ವೇಳೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಚಿತ್ರದುರ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ ಎಚ್ ತಿಪ್ಪಾರೆಡ್ಡಿ ಉಪಸ್ಥಿತರಿದ್ದರು. ಮಾಜಿ ಶಾಸಕ ಎಸ್.ಕೆ.ಬಸವರಾಜನ್‌ಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿತ್ತು. ಹೀಗಾಗಿ ಅವರ ಪತ್ನಿಯನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದರು.
ಹಾಸನ: ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಭವಾನಿ ರೇವಣ್ಣ, ನಮ್ಮೆಲ್ಲರ ಗುರಿ ಒಂದೇ ಅದು ಇಲ್ಲಿ ಬಿಜೆಪಿ ಸೋಲಿಸಬೇಕು. ಜೆಡಿಎಸ್ ಸರ್ಕಾರ ತರುವ ಉದ್ದೇಶದಿಂದ ದೇವೇಗೌಡರು ಕೂಡ ಇಷ್ಟು ಕಷ್ಟದಲ್ಲಿ ರಾಜ್ಯ ಸುತ್ತುತ್ತಿದ್ದಾರೆ ಎಂದು ಭವಾನಿ ರೇವಣ್ಣ ಹೇಳಿದರು. ದೇವೇಗೌಡರು ಹಾಸನದಲ್ಲಿ ತಲೆ ಎತ್ತಿ ನೋಡುವಂತಾ ಅಭಿವೃದ್ಧಿ ಮಾಡಿದ್ದಾರೆ. ಇಲ್ಲಿ ಅಭಿವೃದ್ಧಿ ಮಾಡಿದ್ದೇನೆ ಅಂತಾ ಹೇಳಿಕೊಂಡು ಓಡಾಡುತ್ತಾರಲ್ಲ ಅವರು ಕಟ್ಟಿರುವ ಒಂದೇ ಒಂದು ಕಟ್ಟಡ ತೊರಿಸಲಿ ಎಂದು ಸವಾಲು ಹಾಕಿದರು.
ಬೆಂಗಳೂರು: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧಿಸುವ ವಿಚಾರ ಪ್ರಸ್ತಾಪವನ್ನು ಖಂಡಿಸಿ ಬೆಂಗಳೂರಿನ ವಿವಿಧ ಆಂಜನೇಯ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸಾ ಪಠಣೆ ನಡೆಯಿತು. ಮೈಸೂರು ರಸ್ತೆಯ ಗಾಳಿ ಆಂಜನೇಯ ದೇವಾಲಯದಲ್ಲಿ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಹನುಮಾನ್ ಚಾಲಿಸ ಪಠಣೆ ಮಾಡಿದ್ದು, ಈ ವೇಳೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಬಿಗ್ ಬಾಸ್ ಖ್ಯಾತಿಯ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಮತ್ತಿತರರು ಭಾಗಿಯಾಗಿದ್ದರು. ಈ ವೇಳೆ ದೇವಾಲಯದ ಒಳಗೆ ರಾಜಕೀಯ ಮಾಡಬಾರದು ಎಂಬ ಉದ್ದೇಶದಿಂದ ದೇವಸ್ಥಾನದ ಒಳಾಂಗಣದಲ್ಲಿ ಅವಕಾಶ ನೀಡದೆ ಹೊರಾಂಗಣದಲ್ಲಿ ಪಠಣೆಗೆ ಅವಕಾಶ ನೀಡಲಾಯಿತು. ಹನುಮಾನ್ ಚಾಲೀಸಾ ಪಠಿಸಬೇಕೆಂದರೆ ವಿಡಿಯೋ ಮಾಡಬೇಡಿ, ಬೇಕಿದ್ದರೆ ಭಕ್ತಿಯಿಂದ ಹನುಮಾನ್ ಚಾಲೀಸಾ ಪಠಿಸಿ ಎಂದು ಆಡಳಿತ ಮಂಡಳಿ ಸೂಚನೆ ನೀಡಿದೆ. ಹೀಗಾಗಿ ದೇವಸ್ಥಾನದ ಹೊರಗಿರುವ ವಿಗ್ರಹದ ಬಳಿ ಹನುಮಾನ್ ಚಾಲೀಸಾ ಪಠಣೆ ನಡೆಸಲಾಯಿತು.
ಬೆಂಗಳೂರು: ಪ್ರವಾಹ ಸಂದರ್ಭದಲ್ಲಿ ಅನೇಕ ಜನ ಮನೆ ಕಳೆದುಕೊಂಡಿದ್ದರು. ಮನೆ ಕಳೆದುಕೊಂಡವರಿಗೆ 5 ಲಕ್ಷ ನೀಡುವುದನ್ನು ಯಡಿಯೂರಪ್ಪ ನೇತೃತ್ವದಲ್ಲಿ ಘೋಷಣೆ ಮಾಡಿದ್ದೆವು. ನಮ್ಮ ತಾಲೂಕಿನಲ್ಲಿ ಆರು ಸಾವಿರಕ್ಕೂ ಹೆಚ್ಚು ಮನೆಗಳನ್ನು ನಿರ್ಮಾಣ ಮಾಡಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಪ್ರತಿ ಮನೆಗೆ ನಳದಿಂದ ಕುಡಿಯುವ ನೀರು ಕೋಡುವ ಯೋಜನೆಗೆ ಚಾಲನೆ ಕೊಟ್ಟಿದ್ದೇವೆ. ಮುಂದಿನ 8-9 ತಿಂಗಳಲ್ಲಿ ಈ ಯೋಜನೆ ಪೂರ್ಣ ಆಗುತ್ತದೆ. ಕಾಂಗ್ರೆಸ್‌ನವರು 70 ವರ್ಷದಲ್ಲಿ 25 ಲಕ್ಷ ಮನೆಗೆ ನೀರು ಕೋಟ್ಟರು. ನಾವು ಕೇವಲ ಮೂರು ವರೆ ವರ್ಷದಲ್ಲಿ 40 ಲಕ್ಷ ಮನೆಗೆ ನೀರು ಕೊಟ್ಟಿದ್ದೆವು ಎಂದರು.
ಬೆಂಗಳೂರು: ಕಳೆದ ಚುನಾವಣೆಯಲ್ಲಿ ಪ್ರತಿ ಗ್ರಾಮಗಳಿಗೆ ಭೇಟಿ ಕೊಟ್ಟಿದ್ದೆ. ಆದರೆ ಇಂದು ರಾಜ್ಯದ ಜವಾಬ್ದಾರಿ ಇರುವುದರಿಂದ ಕೇವಲ ಗ್ರಾಮ ಪಂಚಾಯತಿ ಇರುವ ಗ್ರಾಮಗಳಿಗೆ ಭೇಟಿ ಕೊಡುತ್ತಿದ್ದೇನೆ. ಯಾರು ಕೂಡ ಅನ್ಯಥಾ ಭಾವಿಸಬಾರದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು. ಯಡಿಯೂರಪ್ಪ ನೆತೃತ್ವದಲ್ಲಿ ಕೊವೀಡ್ ಅನ್ನು ಉತ್ತಮವಾಗಿ ನಿರ್ವಹಿಸಿದ್ದೇವೆ. ಔಷಧಿ ಹಾಗೂ ಲಸಿಕೆಯನ್ನು ವಿದೇಶದಿಂದ ತೆಗೆದುಕೊಳ್ಳುವುದನ್ನ ತಪ್ಪಿಸಿ ಭಾರತದಲ್ಲಿಯೇ ತಯಾರಿಸಿ ದೇಶದ ಜನರನ್ನು ರಕ್ಷಿಸಿದ್ದು ಬಿಜೆಪಿ ಸರ್ಕಾರ. ರಾಜ್ಯದ ಜನರನ್ನು ಕೋವಿಡ್ನಿಂದ ರಕ್ಷಿಸಿದ್ದು ಡಬಲ್ ಎಂಜಿನ್ ಸರ್ಕಾರದ ಸಾಧನೆ. ಯಡಿಯೂರಪ್ಪ ಅವರ ಪ್ರಯತ್ನದಿಂದ ಕೋವಿಡ್ ಮುಕ್ತ ರಾಜ್ಯ ಮಾಡಿದ್ದೇವೆ. ಕೋವಿಡ್ ಸಮಯದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಅನೇಕ ಜನರು ಸಾಯುತ್ತಿದ್ದರು ಎಂದರು.
ಚಿಕ್ಕಮಗಳೂರು: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಬಗ್ಗೆ ಉಲ್ಲೇಖ ವಿಚಾರವಾಗಿ ಮಾತನಾಡಿದ ಸಿಟಿ ರವಿ, ಬಜರಂಗದಳ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ರೀತಿ ಪ್ರಕರಣ ಮಾಡಿದ್ಯಾ? ಬಜರಂಗದಳ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಿಸಿಕೊಂಡಿದ್ಯಾ? ಎಂದು ಪ್ರಶ್ನಿಸಿದರು. ಗೋಹತ್ಯೆ, ಲವ್ ಜಿಹಾದ್ ವಿರುದ್ಧ ಪ್ರತಿಭಟನೆ ಮಾಡಿರಬಹುದು ಅಷ್ಟೇ. ಪ್ರತಿಭಟನೆಯಲ್ಲಿ ಭಾರತ್ ಮಾತಾಕಿ ಜೈ, ಜೈಶ್ರೀರಾಮ್ ಅಂತಾರೆ, ಕಾಂಗ್ರೆಸ್ ನಾಯಕರಿಗೆ ಜೈ ಶ್ರೀರಾಮ್ ಅಂದರೆ ಸಹಿಸಿಕೊಳ್ಳಲು ಆಗಲ್ಲ. ಹರ-ಹರ ಮಹಾದೇವ ಎಂದು ಹೇಳಿದರೂ ಸಹಿಸಿಕೊಳ್ಳಲು ಆಗುವುದಿಲ್ಲ. ಭಾರತ್ ಮಾತಾಕಿ ಜೈ ಅಂದರೆ ಆರ್ಎಸ್ಎಸ್ನವರಾ ಎಂದು ಕೇಳುತ್ತಾರೆ. ಕಾಂಗ್ರೆಸ್ನವರದ್ದು ಮಿತಿಮೀರಿದ ಓಲೈಕೆ ರಾಜನೀತಿ ಎಂದು ಟೀಕಿಸಿದರು.
ಚಿಕ್ಕಮಗಳೂರು: ಬಜರಂಗಿಯನ್ನು ಕೆಣಕಿ ಯಾರೂ ಉಳಿದವರಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಬಜರಂಗದಳ ಬ್ಯಾನ್ ಮಾಡತ್ತೇವೆ ಎಂದು ಹೇಳಿದ ಕಾಂಗ್ರೆಸ್‌ಗೆ ಟಾಂಗ್ ನೀಡಿದರು. ಕಾಂಗ್ರೆಸ್ ತನ್ನ ಪ್ರಣಾಳಿಕೆ ಹಿಂಪಡೆದು, ಕ್ಷಮೆ ಕೇಳಬೇಕು, ತ್ರೇತಾಯುಗದಲ್ಲಿ ಭಜರಂಗಿಯನ್ನು ಕೆಣಕಿದ್ದ ರಾವಣನ ಸರ್ವ ನಾಶವಾದ. ಆಂಜನೇಯನ ಬಾಲಕ್ಕೆ ಬೆಂಕಿ ಹಚ್ಚಿದ್ದಕ್ಕೆ ಲಂಕೆ ಸುಟ್ಟುಹೋಯ್ತು. ಈಗ ಕಾಂಗ್ರೆಸ್ ನಾಯಕರು ಬಜರಂಗದಳವನ್ನು ಕೆಣಕಿದ್ದಾರೆ. ಕಾಂಗ್ರೆಸ್ ಅದೇ ಕಾರಣಕ್ಕೆ ರಾಜಕೀಯವಾಗಿ ನಾಶವಾಗುತ್ತದೆ ಎಂದು ಹೇಳಿದರು.
ಕೊಪ್ಪಳ: ಹನುಮಂತನ ಸುದ್ದಿಗೆ ಬಂದಿದ್ದಕ್ಕೆ ಹೆಲಿಕಾಪ್ಟರ್ ಗ್ಲಾಸ್ ಪುಡಿಪುಡಿಯಾಗಿದೆ, ಮುಂದೆ ತಂಟೆಗೆ ಬಂದರೆ ಡಿಕೆ ಶಿವಕುಮಾರ್ ಅವರೇ ನೀವೂ ಪತನವಾಗಲಿದ್ದೀರಿ ಎಂದು ಬಿಜೆಪಿ ಫೈರ್ ಬ್ರಾಂಡ್ ಬಸನಗೌಡ ಪಾಟೀಲ್ ಯತ್ನಾಳ್ ಕಿವಿಮಾತು ಹೇಳಿದ್ದಾರೆ. ಕೊಪ್ಪಳದ ಗಂಗಾವತಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರು ಇನ್ನೊಂದುಸಲ ಹುಟ್ಟಿಬಂದರೂ ಬಜರಂಗದಳವನ್ನು ಬ್ಯಾನ್ ಮಾಡಲು ಸಾಧ್ಯ ಇಲ್ಲ. ಬಜರಂಗದಳದವರು ಭಯೋತ್ಪಾದಕರಲ್ಲ, ದೇಶ ವಿರೋಧಿ ಚಟುವಟಿಕೆ ಮಾಡುವುದಿಲ್ಲ. ಬಜರಂಗದಳ ಎಂದರೆ ಗಂಗಾವತಿ ಎಂದರು. ಭಾರತದ ರಾಮ ಮೋದಿ, ಹನುಮ ಯೋಗಿ, ಲಕ್ಷ್ಮಣ ಅಮಿತ್ ಶಾ. ಬಜರಂಗದಳ ನಿಷೇಧ ಮಾಡೋರನ್ನು ತಿಹಾರ ಜೈಲಿಗೆ ಕಳುಹಿಸೋಣ ಎಂದು ಯತ್ನಾಳ್ ಹೇಳಿದರು.
ಚಿತ್ರದುರ್ಗ: ಕ್ಷೇತ್ರದ ಪಕ್ಷೇತರ ಅಬ್ಯರ್ಥಿ ಸೌಭಾಗ್ಯ ಕಣದಿಂದ ನಿವೃತ್ತಿ ಸಾಧ್ಯತೆ ಹಿನ್ನೆಲೆ ಅವರ ಮನೆ ಬಳಿ ಹೈಡ್ರಾಮಾ ನಡೆಯುತ್ತಿದ್ದು, ಬೆಂಬಲಿಗರ ಕಣ್ಣೀರು ಹಾಕುತ್ತಿದ್ದಾರೆ. ಬೆಂಬಲಿಗರ ಗತಿಯೇನು ಎಂದು ಮಾಜಿ ಶಾಸಕ ಎಸ್ ಕೆ ಬಸವರಾಜನ್ ಅವರನ್ನು ಬೆಂಬಲಿಗರು ಪ್ರಶ್ನೆ ಮಾಡುತ್ತಿದ್ದಾರೆ. ಸೌಭಾಗ್ಯ ಮನೆಗೆ ಬಿಜೆಪಿ ಅಭ್ಯರ್ಥಿ ತಿಪ್ಪಾರೆಡ್ಡಿ ಭೇಟಿಯಾಗಿದ್ದು, ಇಂದು ಸಂಜೆ ಸೌಭಾಗ್ಯ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಸಿದ್ದರಾಮಯ್ಯ ಪರ ನಟ ಶಿವರಾಜ್ಕುಮಾರ್ ಪ್ರಚಾರ ನಡೆಸುತ್ತಿರುವ ಬಗ್ಗೆ ಟಿವಿ9 ಜೊತೆ ಮಾತನಾಡಿದ ಪ್ರತಾಪ್ ಸಿಂಹ, ಡಾ.ರಾಜ್ ಕುಟುಂಬವನ್ನು ರಾಜಕೀಯ ಹೊರತಾಗಿ ನೋಡುತ್ತೇವೆ ಎಂದರು. ಶಿವಮೊಗ್ಗದಲ್ಲಿ ಯಡಿಯೂರಪ್ಪ ವಿರುದ್ಧ ಗೀತಾ ಸ್ಪರ್ಧೆ ಮಾಡಿದ್ದರು. ಆಗಲೂ ನಟ ಶಿವರಾಜ್ಕುಮಾರ್ ಪ್ರಚಾರಕ್ಕೆ ಹೋಗಿರಲಿಲ್ಲ. ಡಾ.ರಾಜ್ ಕುಟುಂಬವನ್ನು ರಾಜಕೀಯದ ಆಚೆಗೆ ನೋಡುತ್ತಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ಗೀತಾ ಸ್ಪರ್ಧಿಸಿದಾಗಲೂ ಸರಿ ಕಾಣಲಿಲ್ಲ. ಬಿಜೆಪಿ ಸಂಸದನಾಗಿ ಈ ವಿಚಾರವನ್ನು ಹೇಳುತ್ತಿಲ್ಲ. ಗೀತಾ ಶಿವರಾಜ್ಕುಮಾರ್ ರಾಜಕೀಯ ಕುಟುಂಬದಿಂದ ಬಂದಿದ್ದು. ಅವರ ತಂದೆ ಎಸ್.ಬಂಗಾರಪ್ಪ ಕರ್ನಾಟಕದ ಸಿಎಂ ಆಗಿದ್ದವರು. ಗೀತಾ ಶಿವರಾಜ್ಕುಮಾರ್ ಪ್ರಚಾರಕ್ಕೆ ಬಂದರೆ ತಕರಾರು ಇಲ್ಲ ಎಂದರು.
ಬೆಂಗಳೂರು: ಕಾಂಗ್ರೆಸ್ನಿಂದ ಬಜರಂಗದಳ ಬ್ಯಾನ್ ಬಗ್ಗೆ ಪ್ರತಿಕೆಯೆ ನೀಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ನಮ್ಮ ಕಾರ್ಯಕರ್ತರು ಕೊಲೆ, ದೊಂಬಿಯಲ್ಲಿ ಭಾಗಿಯಾಗಿಲ್ಲ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಸುಳ್ಳು ಕೇಸ್ಗಳನ್ನು ಹಾಕಿದೆ. ದಕ್ಷಿಣ ಕನ್ನಡ, ಉಡುಪಿಯಿಂದ ಹೆಚ್ಚು ಗೋವು ಕಳ್ಳಸಾಗಣೆ ಆಗುತ್ತದೆ. ಬಜರಂಗದಳ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ಕೊಡುತ್ತಾರೆ. ತಡೆಯಲು ಹೋದಾಗ ಪೊಲೀಸರ ಮೇಲೆ ಗುಂಡು ಹಾರಿಸಲಾಗಿದೆ. ಕಾಂಗ್ರೆಸ್‌ನವರು ಆ ಪೊಲೀಸರನ್ನೇ ಟಾರ್ಗೆಟ್ ಮಾಡಿದ್ದಾರೆ. ಇದೇ ನಮಗೂ ಕಾಂಗ್ರೆಸ್ಗೂ ಇರುವ ವ್ಯತ್ಯಾಸ ಎಂದರು.
ಕಾರವಾರ: ಡಿಕೆ ಶಿವಕುಮಾರ್ ಅವರು ಬಂದಿಳಿದ ಹೆಲಿಪ್ಯಾಡ್ ಬಳಿ ಬೆಂಕಿ ಕಾಣಿಸಿಕೊಂಡ ಘಟನೆ ಹೊನ್ನಾವರದ ರಾಮತೀರ್ಥ ಬಳಿ ನಡೆದಿದೆ. ಕೆಪಿಸಿಸಿ ಅಧ್ಯಕ್ಷರು ಮೈಸೂರಿನಿಂದ ಹೊನ್ನಾವರಕ್ಕೆ ಹೆಲಿಕಾಪ್ಟರ್ನಲ್ಲಿ ಆಗಮಿಸಿದ್ದರು. ಈ ವೇಳೆ ಹೆಲಿಪ್ಯಾಡ್ನ ಬಳಿಯ ಹುಲ್ಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೆಲಿಕಾಪ್ಟರ್ಗೆ ಸಿಗ್ನಲ್ ಕೊಡುವ ಸ್ಮೋಕ್ ಕ್ಯಾಂಡಲ್ನಿಂದ ಬೆಂಕಿ ಕಾಣಿಸಿಕೊಂಡು ನಂತರ ಹುಲ್ಲಿಗೆ ಹೊತ್ತಿಕೊಂಡಿದೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.
ಮೈಸೂರು: ವರುಣ ಕ್ಷೇತ್ರದ ಅಭಿವೃದ್ಧಿ ನನ್ನಿಂದ ಮಾತ್ರ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ವಿ ಸೋಮಣ್ಣ, ತಮ್ಮ ಮನೆಯ ಕೋಳಿ ಕೂಗಿದರೆ ಮಾತ್ರ ಬೆಳಕು ಎಂಬಂತೆ ಹೇಳಿದ್ದಾರೆ. ಸಿದ್ದರಾಮಯ್ಯ ಮನಸ್ಸು ಮಾಡಿದರೆ ವರುಣಾ ಅಭಿವೃದ್ಧಿ ಮಾಡಬಹುದಿತ್ತು. ಆದರೆ ಈ ಕ್ಷೇತ್ರದಲ್ಲಿ ಒಂದು ಕಾಲೇಜು ಇಲ್ಲ, ಆಸ್ಪತ್ರೆ ಇಲ್ಲ, ಸರಿಯಾದ ರಸ್ತೆಗಳಿಲ್ಲ. ಬಾದಾಮಿ ಕ್ಷೇತ್ರದಲ್ಲೂ ಸಿದ್ದರಾಮಯ್ಯ ಯಾವುದೇ ಅಭಿವೃದ್ಧಿ ಮಾಡಲಿಲ್ಲ. ಜನರ ಋಣ ತೀರಿಸುವುದಕ್ಕೂ ಬದ್ಧತೆ ಬೇಕೆಂದು ಟಾಂಗ್ ನೀಡಿದರು. ಜನರ ಋಣ ತೀರಿಸುವ ಕೆಲಸವನ್ನು ನಾನು ಮಾಡಿದ್ದೇನೆ. ಎಲ್ಲದ್ದಕ್ಕೂ ನಾನೇ ಎಂಬುವುದನ್ನು ಸಿದ್ದರಾಮಯ್ಯ ಮೊದಲು ಬಿಡಲಿ. ವರುಣ ಕ್ಷೇತ್ರದ ಜನರು ಗೆಲ್ಲಿಸಿದರೆ ನಾನು ವರುಣದಲ್ಲೇ ಇರುತ್ತೇನೆ. ವರುಣ ಕ್ಷೇತ್ರದಲ್ಲೇ ಶಾಶ್ವತವಾಗಿ ಮನೆ ಮಾಡುತ್ತೇನೆ ಎಂದರು.
ಮೈಸೂರು: ಸಿದ್ದರಾಮಯ್ಯ ಪರ ಸ್ಟಾರ್ಗಳ ಪ್ರಚಾರ ವಿಚಾರವಾಗಿ ಟಾಂಗ್ ಕೊಟ್ಟ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ, ಸಿದ್ದರಾಮಯ್ಯ ಹತಾಶರಾಗಿ ಸ್ಟಾರ್ಗಳನ್ನು ಕರೆಸಿಕೊಂಡು ಪ್ರಚಾರಕ್ಕೆ ಇಳಿದಿದ್ದಾರೆ. ಒಂದೇ ದಿನ ಪ್ರಚಾರಕ್ಕೆ ಬರುತ್ತೇನೆ ಎಂದಿದ್ದ ಸಿದ್ದರಾಮಯ್ಯ ಈಗ ಮತ್ತೆ ಮತ್ತೆ ಬರುತ್ತಿದ್ದಾರೆ. ರಾಜಕುಮಾರ್ ಕುಟುಂಬಕ್ಕೂ ನನಗೂ 40 ವರ್ಷದ ಅವಿನಾಭಾವ ಸಂಬಂಧವಿದೆ. ಪುನೀತ್ ರಾಜಕುಮಾರ್ ಹೆಸರಿನಲ್ಲಿ ನಮ್ಮ ಕ್ಷೇತ್ರದಲ್ಲಿ ಬೃಹತ್ ಆಸ್ಪತ್ರೆ ಕಟ್ಟಿಸಿದ್ದೇನೆ. ಶಿವರಾಜ್ ಯಾಕೆ ಹೀಗೆ ಮಾಡಿದರು ನನಗೆ ಗೊತ್ತಿಲ್ಲ ನನಗೆ ವಿಜಯ್, ರಮ್ಯಾ ಬಗ್ಗೆ ಗೊತ್ತಿಲ್ಲ ಆದರೆ ಶಿವರಾಜ್ ಯಾಕೆ ಹೀಗೆ ಮಾಡಿದರು ಗೊತ್ತಿಲ್ಲ ಅಷ್ಟೆ. ಸಿದ್ದರಾಮಯ್ಯ ಅವರು ಸ್ಟಾರ್ ಪ್ರಚಾರಕರ ಜೊತೆ ಬಂದು ಸೋಮಣ್ಣ ವಿರುದ್ದ ಪ್ರಚಾರ ಮಾಡುತ್ತಿದ್ದಾರಲ್ಲ ನನಗೆ ಅದೇ ಖುಷಿ. ಜನ ಸೇರಿಸಲು ಸಿದ್ದರಾಮಯ್ಯ ಸ್ಟಾರ್ಗಳ ಜೊತೆ ಬರುತ್ತಿದ್ದಾರೆ ಅಷ್ಟೇ ಎಂದರು.
ಹಾವೇರಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದರೆ ಸವಣೂರು ತಾಲೂಕು ನಂ.1 ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಾನು ಶಾಸಕನಾಗುವ ಮುಂಚೆಯಿಂದಾನೂ ಇಲ್ಲಿಗೆ ಬರುತ್ತಿದ್ದೆ. ಆದರೆ ಸಿಎಂ ಆದ ಬಳಿಕ ಈ ಕ್ಷೇತ್ರಕ್ಕೆ ಹೆಚ್ಚಾಗಿ ಬರಲು ಆಗಲಿಲ್ಲ. ಆದರೂ ನೀವು ಇಷ್ಟೆಲ್ಲಾ ಪ್ರೀತಿ ತೋರಿಸಿದ್ದು ನಾನು ಎಂದಿಗೂ ಮರೆಯಲ್ಲ. ಆಗ ಹಳ್ಳ ಬಂದರೆ ಈ ಗ್ರಾಮಕ್ಕೆ ಬಹಳ ಕಷ್ಟ ಆಗುತ್ತಿತ್ತು. ಆಗ ನಮ್ಮ ತಂದೆಯ ರಾಜ್ಯ ಸಭಾ ಸದಸ್ಯರ ನಿಧಿಯಿಂದ ಬ್ರಿಡ್ಜ್ ಮಾಡಿದ್ದೆವು. ಇಂದು ದೊಡ್ಡ ಮಟ್ಟದಲ್ಲಿ ಬ್ರಿಡ್ಜ್ ನಿರ್ಮಾಣ ಮಾಡಿದ್ದೇವೆ. ಜಾತಿ ಮತ ಪಂಥ ನೋಡದೆ ಕ್ಷೇತದಲ್ಲಿ ಎಲ್ಲ ಸಮುದಾಯಕ್ಕೂ ಅಭಿವೃದ್ಧಿ ಮಾಡಿದ್ದೇನೆ ಎಂದರು.
ಯಾದಗಿರಿ: ಭಜರಂಗದಳವನ್ನ ಬ್ಯಾನ್ ಮಾಡುವ ಭರವಸೆ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ, ಈಗಾಗಲೇ ಇದರ ಬಗ್ಗೆ ಪ್ರಣಾಳಿಕೆ ಕಮಿಟಿ ಅಧ್ಯಕ್ಷರು ಉತ್ತರ ಕೊಟ್ಟಿದ್ದಾರೆ. ಇದು ರಾಜ್ಯ ಮಟ್ಟದ ಪ್ರಣಾಳಿಕೆ ಅವರೇ ಹೇಳುತ್ತಾರೆ. ನಮ್ಮ ರಾಷ್ಟ್ರೀಯ ಕಾರ್ಯದರ್ಶಿ ಸುರ್ಜೇವಾಲಾ ಕೂಡ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಅದರ ಬಗ್ಗೆ ಮಾತಾಡಲು ಹೋಗಲ್ಲ ಎಂದರು. ಪ್ರಿಯಾಂಕ್ ಖರ್ಗೆಗೆ ಚುನಾವಣಾ ಆಯೋಗ ನೋಟೀಸ್ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನೋಟಿಸ್‌ಗೆ ಉತ್ತರ ಕೊಡುತ್ತೇವೆ. ಬಸನಗೌಡ ಪಾಟೀಲ್ ಯತ್ನಾಳ್ಗೆ ಜಿಲ್ಲಾಧಿಕಾರಿ ನೋಟೀಸ್ ಕೊಟ್ಟಿದ್ದಾರೆ. ಪ್ರಿಯಾಕ್ಗೆ ಚುನಾವಣಾ ಆಯೋಗದಿಂದ ನೋಟೀಸ್ ಕೊಡಿಸಿದ್ದಾರೆ. ಒಬ್ಬರಿಗೆ ಡಿಸಿ ಬಳಿ ಇನ್ನೊಬ್ಬರಿಗೆ ದೆಹಲಿಗೆ ಹೋಗಿ ಉತ್ತರ ಕೊಡಬೇಕು. ಅವರೆಲ್ಲ ಚುನಾವಣಾ ಆಯೋಗಕ್ಕೆ ಆಟ ಆಡಿಸುತ್ತಿದ್ದಾರೆ. ಅದಕ್ಕಾಗಿ ನಾವು ಹೆಚ್ಚಿಗೆ ಮಾತಾಡಲ್ಲ ನಾವು ಅದನ್ನು ಎದುರಿಸುತ್ತೇವೆ ಎಂದರು.
ಯಾದಗಿರಿ: ಈ ಸರ್ಕಾರದ ನಡವಳಿಕೆ, ಭ್ರಷ್ಟಾಚಾರಕ್ಕೆ ಬೇಸತ್ತು ಬಿಜೆಪಿ ನಾಯಕರು ರಾಜ್ಯಕ್ಕೆ ಬರುತ್ತಿದ್ದಾರೆ. ಮೊದಲು ರಾಜ್ಯಕ್ಕೆ ಕರೆದರೂ ಬರುತ್ತಿರಲಿಲ್ಲ. ಈಗ ಮಂತ್ರಿಗಳು, ಗೃಹ ಮಂತ್ರಿಗಳು ಮೂವತ್ತು ಮಂತ್ರಿಗಳು ರಾಜ್ಯಕ್ಕೆ ಬಂದು ಪ್ರಚಾರ ಮಾಡುತ್ತಿದ್ದಾರೆ. ಹಿಂದೆ ಯಾರೆ ಪ್ರಧಾನಿ ಇದ್ದರೂ ಒಂದೆರಡು ಕಡೆ ಭಾಷಣ ಮಾಡಿ ಹೋಗುತ್ತಿದ್ದರು ಎಂದು ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಇದೇ ವೇಳೆ ಸೂಕ್ಷ್ಮ ಮತಗಟ್ಟೆಗಳಲ್ಲಿ ಸಿಸಿಟಿವಿ ಅಳವಡಿಸಬೇಕು ಎಂದು ಹೇಳಿದ ಖರ್ಗೆ, ಪ್ಯಾರಾ ಮಿಲಿಟರಿ ಅಲ್ಲಿ ಉಪಯೋಗ ಮಾಡಿಕೊಳ್ಳಬೇಕು. ಸ್ಥಳೀಯ ಅಧಿಕಾರಿಗಳಿಗಿಂತ ಪ್ಯಾರಾ ಮಿಲಿಟರಿ ಬಳಿಕೆ ಮಾಡಬೇಕು. ನಮ್ಮ ಅಭ್ಯರ್ಥಿ ಈಗಾಗಲೇ ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಈಗ ನಾನು ಕೂಡ ಪತ್ರ ಬರೆಯುತ್ತೇನೆ ಎಂದರು.
ಬೆಂಗಳೂರು: ಮೇ 6 ಮತ್ತು 7ರಂದು ಬೆಂಗಳೂರಿನಲ್ಲಿ ‘ನಮ್ಮ ಬೆಂಗಳೂರು ನಮ್ಮ ಹೆಮ್ಮೆ’ ಹೆಸರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ ನಡೆಸಲಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ನಗರದಲ್ಲಿ ಹೇಳಿಕೆ ನೀಡಿದ ಅವರು, ಮೇ 6ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ರೋಡ್ಶೋ ನಡೆಯಲಿದೆ. ನ್ಯೂ ತಿಪ್ಪಸಂದ್ರದಿಂದ ಬ್ರಿಗೇಡ್ ರಸ್ತೆವರೆಗೆ ರೋಡ್ ಶೋ ನಡೆಯುತ್ತದೆ. ಭಾನುವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 2.30ರವರೆಗೆ ರೋಡ್ಶೋ ನಡೆಯಲಿದೆ. ಬ್ರಿಗೇಡ್ ಮಿಲೇನಿಯಂನಿಂದ ಮಲ್ಲೇಶ್ವರಂ ಸ್ಯಾಂಕಿ ಕೆರೆವರೆಗೆ ರ್ಯಾಲಿ ನಡೆಯಲಿದೆ. ಮೇ 6ರ ಸಂಜೆ 4 ಗಂಟೆಗೆ ಬಾದಾಮಿ ಸಮಾವೇಶದಲ್ಲಿ ಮೋದಿ ಭಾಗಿಯಾಗಲಿದ್ದಾರೆ ಎಂದರು.
ಬಾಗಲಕೋಟೆ: ರಾಜ್ಯ ವಿಧಾನಸಭೆ ಚುನಾವಣಾ ಹಿನ್ನಲೆ ಪ್ರಚಾರದಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿಯವರ ಬಾಗಲಕೋಟೆ ಪ್ರವಾಸದಲ್ಲಿ ಬದಲಾವಣೆ ಮಾಡಲಾಗಿದೆ. ಮೇ.7 ರ ಬದಲು ಮೇ.6 ರಂದು ಬಾಗಲಕೋಟೆ ಜಿಲ್ಲೆಯ ಬಾದಾಮಿಗೆ ಪ್ರಧಾನಿ ಮೋದಿ ಬರಲಿದ್ದಾರೆ. ಹೌದು ಬಾಗಲಕೋಟೆ ಜಿಲ್ಲೆಯ ಐದು ಹಾಗೂ ಗದಗ ಜಿಲ್ಲೆಯ ಎರಡು ವಿಧಾನಸಭಾ ಅಭ್ಯರ್ಥಿಗಳ ಪರ ಬಾದಾಮಿ ಹೊರವಲಯ ಬನಶಂಕರಿ ಲೇಔಟ್ನಲ್ಲಿ ಪ್ರಚಾರಸಭೆ ನಡೆಸಲಿದ್ದಾರೆ.
ಕೊಪ್ಪಳ: ವಿಧಾನಸಭೆ ಚುನಾವಣಾ ಕಣ ರಂಗೇರುತ್ತಿದ್ದು, ಈ ಚುನಾವಣೆಯನ್ನ ಪ್ರಿಯಾಂಕಾ ಗಾಂಧಿ ಮಹಾಭಾರತಕ್ಕೆ ಹೋಲಿಸಿದ್ದಾರೆ. ಮಹಾಭಾರತದಲ್ಲಿ ಅರ್ಜುನನ ಗುರಿ ಹೇಗಿತ್ತೋ, ನಿಮ್ಮ ಗುರಿ ಕೂಡ ಹಾಗೇ ಇರಬೇಕು. ಅವರು ಇವರು ಏನ್ ಹೇಳುತ್ತಾರೆ ಎಂದು ಕನ್ಪ್ಯೂಸ್ ಆಗಬಾರದು. ನಿಮ್ಮ ಗುರಿ ನಿಮ್ಮ ಮಕ್ಕಳ ಭವ್ಯ ಭವಿಷ್ಯದ ಕಡೆ ಇರಬೇಕು. ನಿಮ್ಮ ಭವಿಷ್ಯ ಯಾರು ರೂಪಿಸುತ್ತಾರೋ ಅವರಿಗೆ ಮತ ನೀಡಿ. ಬಿಜೆಪಿ ಸರ್ಕಾರ ನಿಮಗೆ ಏನ್ ಮಾಡಿದೆ. ಕಾಂಗ್ರೆಸ್ ಏನ್ ಹೇಳಿದೆ ಇದನ್ನ ನೆನಪಿಸಿಕೊಳ್ಳಿ. ಕಾಂಗ್ರೆಸ್ ಪಕ್ಷವನ್ನ ಪೂರ್ಣಬಹುಮತದೊಂದಿಗೆ ಗೆಲ್ಲಿಸಿ. ಇದು ಕನ್ನಡದ ಸ್ವಾಭಿಮಾನದ ಸರ್ಕಾರ ಆಗಿರುತ್ತೆ ಎನ್ನುವ ಮೂಲಕ ಭರ್ಜರಿ ಪ್ರಚಾರ ನಡೆಸಿದ್ದಾರೆ.
ಬೆಂಗಳೂರು: ಬಿಜೆಪಿಯವರಿಗೆ ಹನುಮಾನ್ ಚಾಲೀಸ್ ಹೇಳಲು ಬರಲ್ಲ ಎಂಬ ಸುರ್ಜೇವಾಲಾ ಹೇಳಿಕೆ ವಿಚಾರವಾಗಿ ‘ಅವರ ಸವಾಲನ್ನು ನಾವು ಸ್ವೀಕಾರ ಮಾಡಿದ್ದೇವೆ. ಇವತ್ತು ಸಂಜೆ ಎಲ್ಲಾ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸ್ ಹೇಳುತ್ತೇವೆ. ನಾನೂ ಸಹ ಮಲ್ಲೇಶ್ವರ ದೇವಸ್ಥಾನದಲ್ಲಿ ಭಾಗವಹಿಸುತ್ತೇನೆ. ನಾವು ಹನುಮಾನ್ ಚಾಲೀಸ್ ಓದುವುದು, ಹೇಳುವುದನ್ನು ಸುರ್ಜೇವಾಲಾ ಬಂದು ನೋಡಲಿ ಎನ್ನುವ ಮೂಲಕ ಶೋಭಾ ಕರಂದ್ಲಾಜೆ ಟಾಂಗ್ ನೀಡಿದ್ದಾರೆ.
ರಾಮನಗರ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಬಗ್ಗೆ ಉಲ್ಲೇಖ ವಿಚಾರ, ಇದು ಭಾರೀ ವಿವಾದಕ್ಕೀಡಾಗಿತ್ತು. ಇದಕ್ಕೆ ‘ಭಜರಂಗದಳ ಸಿಂಬಲ್ ಹನುಮಂತ, ಅದಕ್ಕೆ ಕಾಂಗ್ರೆಸ್‌ನವರು ಕೊಡಲಿ ಪೆಟ್ಟು ಹಾಕಿದ್ದಾರೆ.ಜೊತೆಗೆ ಅದನ್ನ ಸಮರ್ಥನೆ ಮಾಡುತ್ತಿದ್ದಾರೆ. ಭಜರಂಗದಳ ಪ್ರಾರಂಭವಾಗಿ 40-50 ವರ್ಷ ಆಗಿದೆ ಆವಾಗಿನಿಂದಲೂ ಕಾಂಗ್ರೆಸ್‌ನವರು ಮಣ್ಣು ತಿನ್ನುತ್ತಿದ್ದಾರೆ. ಪಾಕಿಸ್ತಾನದ ಸಂಬಂಧ ಇರುವವರನ್ನ ನಿಮ್ಮ ಜೊತೆ ಇಟ್ಟುಕೊಂಡಿದ್ದೀರಿ. ಪಿಎಫ್ಐ ಅವರಿಗೆ ಬಿರಿಯಾನಿ ಕೊಟ್ಟು ಇಟ್ಟುಕೊಂಡಿದ್ದೀರಿ, ಹಿಂದೂ ಸಂಘಟನೆ ಬಗ್ಗೆ ಕಣ್ಣು ಹಾಕಿರುವುದು ದ್ರೋಹ. ಜನರೇ ಹನುಮಾನ್ ಚಾಲೀಸ ಪಠಣ ಮಾಡುತ್ತಿದ್ದಾರೆ. ನಾನು ಬೆಂಬಲ ಕೊಡುತ್ತೇನೆ. ಸಂಜೆ ನಾನು ಕೂಡ ಪಾಲ್ಗೊಳ್ಳುತ್ತೇನೆ. ನಾನು ಕೂಡ ಭಜರಂಗದಳದವನೇ ಎಂದಿದ್ದಾರೆ.
ದೇವದುರ್ಗ:ವಿಧಾನಸಭೆ ಚುನಾವಣೆ ಹಿನ್ನಲೆ ಬಿಜೆಪಿ ಅಭ್ಯರ್ಥಿ ಶಿವನಗೌಡರ ಪರ ಪಟ್ಟಣದಲ್ಲಿ ನಟ ಸುದೀಪ್ ಭಾಷಣ ಮಾಡಿದ್ದು ‘ನಮ್ಮ ಹಿರಿಯ ಸಹೋದರ ಶಿವನಗೌಡ ನಾಯಕ್ ಅವರನ್ನ ನಾಲ್ಕು ಸಾರಿ ಗೆಲ್ಲಿಸಿದ್ದೀರಾ ಅಂದ್ರೆ, ಅವರು ಒಳ್ಳೆಯವ್ರು ಅಂತ ಅರ್ಥ. ಎಜುಕೇಶನ್ ಲೇಔಟ್ ಮಾಡಿ ಸಕ್ಸಸ್ ಮಾಡಿರೋರು ಇವರು. ಇವರನ್ನ ಗೆಲ್ಲಿಸಿ, ಶಿವನಗೌಡ ನಾಯಕ್ ಬೇರೆ ಯಾರೂ ಅಲ್ಲ, ಅವ ನಮ್ಮವರಿದ್ದಾರೆ. ಅವ್ರಿಗೆ ವೋಟ್ ಹಾಕೋದು ಒಂದೇ , ನನ್ನ ಗೆಲ್ಲಿಸೋದು ಒಂದೇ ಎಂದಿದ್ದಾರೆ.
ರಾಯಚೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆ ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡ ನಾಯಕ್ ಪರ ಜಿಲ್ಲೆಯ ದೇವದುರ್ಗಕ್ಕೆ ಪ್ರಚಾರಕ್ಕೆ ನಟ ಸುದೀಪ್ ಬಂದಿದ್ದು, ಈ ವೇಳೆ ನಟ ಕಿಚ್ಚ ಸುದೀಪ್ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಬಗ್ಗೆ ಉಲ್ಲೇಖ ಹಿನ್ನೆಲೆ ಕಾಂಗ್ರೆಸ್ ಪ್ರಣಾಳಿಕೆ ನೋಡಿ ಬಿಜೆಪಿಯವರಿಗೆ ಗಾಬರಿ ಆಗಿದೆ ಎಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಬಜರಂಗದಳಕ್ಕೂ ಆಂಜನೇಯನಿಗೂ ವ್ಯತ್ಯಾಸ ಇಲ್ವಾ? ಬಜರಂಗದಳ ಒಂದು ರಾಜಕೀಯ ಪಕ್ಷದ ವಿಭಾಗ. ಹನುಮಂತ ಹೆಸರು ಇಟ್ಟು ಕೊಂಡವರೆಲ್ಲಾ ಆಂಜನೇಯ ಆಗಲ್ಲ. ಬಜರಂಗದಳದವರು ನೈತಿಕ ಪೊಲೀಸ್ಗಿರಿ ಮಾಡುತ್ತಿದ್ದಾರೆ. ದೇವರ ಹೆಸರನ್ನು ರಾಜಕೀಯವಾಗಿ ಬಳಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. ಬಿಜೆಪಿಯವರು ಒಂದಾದ್ರೂ ಆಂಜನೇಯ ದೇಗುಲ ಕಟ್ಟಿದ್ದಾರಾ? ರಾಜ್ಯದಲ್ಲಿ ಆಂಜನೇಯ ಹುಟ್ಟಿದ್ದಕ್ಕೆ ಸಾಕ್ಷಿ ಇದೆ. ಅಧಿಕಾರಕ್ಕೆ ಬಂದರೆ ಆಂಜನೇಯ ದೇಗುಲ ಅಭಿವೃದ್ಧಿಗೆ ಒತ್ತು. ಆಂಜನೇಯ ದೇಗುಲ ಅಭಿವೃದ್ಧಿಗೆ ವಿಶೇಷ ಒತ್ತು ನೀಡುತ್ತೇವೆ. ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ವಿಶೇಷ ಮಂಡಳಿ ಮಾಡುತ್ತೇವೆ. ಯುವಕರಲ್ಲಿ ಆಂಜನೇಯ ಸಿದ್ಧಾಂತ ಬೆಳೆಸಲು ಪ್ರತ್ಯೇಕ ಕಾರ್ಯಕ್ರಮ ನಡೆಸುತ್ತೇವೆ. ಪ್ರತಿ ತಾಲೂಕಿನಲ್ಲೂ ಆಂಜನೇಯನ ಹೆಸರಿನಲ್ಲಿ ಪ್ರತ್ಯೇಕ ಕಾರ್ಯಕ್ರಮ ನಡೆಸುತ್ತೇವೆ ಎಂದರು.
ಬೆಂಗಳೂರಿನಲ್ಲಿ ಶನಿವಾರ ಮತ್ತು ಭಾನುವಾರ 2 ದಿನಗಳ ಕಾಲ ಪ್ರಧಾನಿ ಮೋದಿ ರೋಡ್ಶೋ ನಡೆಸಲಿದ್ದಾರೆ. ಶನಿವಾರ ಸಂಜೆ ನಡೆಯಬೇಕಿದ್ದ ರೋಡ್ಶೋ ಭಾನುವಾರಕ್ಕೆ ನಿಗದಿಯಾಗಿದ್ದು ಸಂಜೆ ಮಳೆ ಬರುವ ಸಾಧ್ಯತೆ ಹಿನ್ನೆಲೆ ಭಾನುವಾರ ಬೆಳಗ್ಗೆ ರೋಡ್ಶೋ ನಡೆಯಲಿದೆ. ಶನಿವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 1ಗಂಟೆಯವರೆಗೆ ಹಾಗೂ ಭಾನುವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ರೋಡ್ಶೋ ನಡೆಯಲಿದೆ.
ಚಾಮುಂಡೇಶ್ವರಿ ದೇವಿ ಮುಂದೆ ಡಿಕೆ ಶಿವಕುಮಾರ್ ರುದ್ರಾಕ್ಷಿ ಜಪ ಮಾಡಿದ್ದಾರೆ. ಬೆಂಬಲಿಗರನ್ನು ಹೊರಗೆ ಕಳುಹಿಸಿ 10 ನಿಮಿಷಕ್ಕೂ ಹೆಚ್ಚು ಕಾಲ ದೇಗುಲದ ಗರ್ಭಗುಡಿಯಲ್ಲಿ ಜಪ ಮಾಡಿದ್ರು. ಗೋಪುರದ ಮುಂದೆ ಈಡುಗಾಯಿ ಸೇವೆ ನೆರವೇರಿಸಿದರು.
ಕನಕಪುರದಲ್ಲಿ ಬಿಜೆಪಿ ಅಭ್ಯರ್ಥಿ ಆರ್ ಅಶೋಕ್ ಪ್ರಚಾರ ನಡೆಸುವುದಕ್ಕೆ ತಯಾರಿ ನಡೆದಿತ್ತು. ಆದ್ರೆ ಈಗ ದಿಢೀರ್ ರದ್ದಾಗಿದೆ. ಆರ್ ಅಶೋಕ್ ಕ್ಷೇತ್ರದ ಅರಳಾಳು ಸಂದ್ರಗೇಟ್, ಚಿಕ್ಕಮುದವಾಡಿ, ಚಿಕ್ಕೇನಹಳ್ಳಿ ವಾಡೇದೊಡ್ಡಿ ಮುಂತಾದೆಡೆ ಪ್ರಚಾರ ಮಾಡಬೇಕಿತ್ತು ಆದ್ರೆ ಪ್ರಚಾರಕ್ಕೆ ಪೊಲೀಸ್ ನಿರಾಕರಣೆ ಹಿನ್ನೆಲೆ ಪ್ರಚಾರ ರದ್ದಾಗಿದೆ. ಇದೇ ಮಾರ್ಗದಲ್ಲಿ ಸಂಸದ ಡಿ.ಕೆ ಸುರೇಶ್ ರಿಂದ ಶಿವಕುಮಾರ್ ಪರವಾಗಿ ಪ್ರಚಾರ ನಡೆಯಲಿದೆ. ಮುಂಜಾಗ್ರತಾ ಕ್ರಮವಾಗಿ ಘರ್ಷಣೆ ನಡೆಯುವ ಸಾಧ್ಯತೆ ಹಿನ್ನೆಲೆ ಪೊಲೀಸರು ಅಶೋಕ್ ಪ್ರಚಾರ ಅನುಮತಿ ನಿರಾಕರಿಸಿದ್ದಾರೆ.
ಹುಬ್ಬಳ್ಳಿ: ಬಜರಂಗದಳ ನಿಷೇಧ ಬಗ್ಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದು, ಇದು ಭಾರೀ ವಿವಾದಕ್ಕೀಡಾಗಿತ್ತು. ಇದಕ್ಕೆ ಬಿಜೆಪಿ ನಾಯಕರು ಹಾಗೂ ಹಿಂದೂಪರ ಸಂಘಟನೆಗಳು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಈ ಕುರಿತು ಡಿಕೆ ಶಿವಕುಮಾರ್ ಆಂಜನೇಯನಿಗೂ ಬಜರಂಗದಳಕ್ಕೂ ಏನು ಸಂಬಂಧ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ‘ರಾಮನಿಗೂ ಹನುಮನಿಗೂ ಯಾವ ರೀತಿ ಸಂಬಂಧ ಇದೆಯೋ, ಅದೇ ರೀತಿಯ ಸಂಬಂಧ ಹನುಮನಿಗೂ ಬಜರಂಗದಳಕ್ಕೂ ಇದೆ. ಇದನ್ನು ಕಾಂಗ್ರೆಸ್ ಪಕ್ಷ ಮೊದಲು ಅರ್ಥ ಮಾಡಿಕೊಳ್ಳಲಿ ಎನ್ನುವ ಮೂಲಕ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
K.S.ಈಶ್ವರಪ್ಪ ಕಾಂಗ್ರೆಸ್ ಪ್ರಣಾಳಿಕೆ ಪ್ರತಿಗೆ ಬೆಂಕಿ ಇಟ್ಟ ವಿಚಾರಕ್ಕೆ ಸಂಬಂಧಿಸಿ ಪ್ರಣಾಳಿಕೆ ಪ್ರತಿ ಸುಟ್ಟು ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಿದ್ದಾರೆ ಎಂದು ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು. ಜನರಿಗೆ ನೀಡಿದ ಗ್ಯಾರಂಟಿ ಯೋಜನೆಗಳನ್ನು ಸುಟ್ಟು ಹಾಕಿದಂತೆ. ರಾಜ್ಯದಲ್ಲಿ ಈ ರೀತಿಯ ಘಟನೆಗಳು ನಡೆಯಬಾರದು. ಬಿಜೆಪಿಯವರ ಹಿಂದುತ್ವ ಬೇರೆ, ನಮ್ಮ ಹಿಂದುತ್ವವೇ ಬೇರೆ. ನಾನು ಹಿಂದೂ, ಅವರು ಕೂಡ ಹಿಂದೂ ಎಂದರು.
ಬಿವೈ ವಿಜಯೇಂದ್ರಗೆ ಬಿಜೆಪಿ ಹೈಕಮಾಂಡ್ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ. ಸುಮಾರು 20 ಕ್ಷೇತ್ರದ ಪ್ರಚಾರಕ್ಕೆ ತೆರಳಲು ಸೂಚನೆ ನೀಡಲಾಗಿದೆ. ಲಿಂಗಾಯತ ಮತದಾರರನ್ನು ಸೆಳೆಯಲು ಬಿಜೆಪಿಯಿಂದ ಪ್ಲಾನ್. ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ತುಮಕೂರು ಸೇರಿದಂತೆ ಹಲವೆಡೆ ಶ್ರೀರಾಮುಲು, ಗೋವಿಂದ ಕಾರಜೋಳ, ತಿಪ್ಪಾರೆಡ್ಡಿ, ಪೂರ್ಣಿಮಾ ಸೇರಿದಂತೆ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ತಿಳಿಸಲಾಗಿದೆ. ಸ್ಟಾರ್ ಪ್ರಚಾರಕ ಅಲ್ಲದಿದ್ದರೂ ಕೊನೆ ಕ್ಷಣದಲ್ಲಿ ವಿಜಯೇಂದ್ರರನ್ನ ಪ್ರಚಾರಕ್ಕೆ ಬಳಸಿಕೊಳ್ಳಲು ಪ್ಲಾನ್ ನಡೆದಿದೆ. ಪ್ರಚಾರಕ್ಕಾಗಿ ವಿಶೇಷ ಹೆಲಿಕಾಪ್ಟರ್ ಅಲಾಟ್ ಮಾಡಲಾಗಿದೆ. ಬಿಎಸ್ ಯಡಿಯೂರಪ್ಪ ಎಲ್ಲಡೆ ಪ್ರಚಾರಕ್ಕೆ ಲಭ್ಯವಿಲ್ಲದ ಹಿನ್ನಲೆ ಕೊನೆ ಕ್ಷಣದಲ್ಲಿ ವಿಜಯೇಂದ್ರ ಬಳಕೆಗೆ ನಿರ್ಧರಿಸಲಾಗಿದೆ.
ಕಾಂಗ್ರೆಸ್ನದ್ದು ರಾಷ್ಟ್ರ ದ್ರೋಹಿ ಪ್ರಣಾಳಿಕೆ. ಕಾಂಗ್ರೆಸ್ ಕೂಡಲೇ ಈ ಪ್ರಣಾಳಿಕೆಯನ್ನು ಹಿಂಪಡೆಯಬೇಕು ಎಂದು ಕಲಬುರಗಿ ನಗರದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ. ಕಾಂಗ್ರೆಸ್ ಸರ್ಕಾರ PFI ಮೇಲಿದ್ದ 173 ಪ್ರಕರಣ ಹಿಂಪಡೆದಿದೆ. ಭಯೋತ್ಪಾದಕ ಚಟುವಟಿಕೆಗಳಿಗೆ ಕಾಂಗ್ರೆಸ್ ಬೆಂಬಲ ನೀಡಿತ್ತು. ದೇಶದಲ್ಲಿ PFI ಬ್ಯಾನ್ ಆಗಿದೆ ಅನ್ನೋದೆ ಕಾಂಗ್ರೆಸ್‌ಗೆ ಗೊತ್ತಿಲ್ಲ. BJP ಸರ್ಕಾರ ರಾಷ್ಟ್ರದ್ರೋಹಿ ಸಂಘಟನೆಯನ್ನು ಬ್ಯಾನ್ ಮಾಡಿದೆ. ಭಜರಂಗದಳ ಮುಟ್ಟಿದ್ದರಿಂದ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತೆ. ವಿಪಕ್ಷ ಸ್ಥಾನ ಪಡೆಯುವಷ್ಟು ಸ್ಥಾನವನ್ನೂ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದು ಪ್ರಣಾಳಿಕೆ ಪ್ರತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಅಂಶ ಪ್ರಕಟಣೆಗೆ ಖಂಡನೆ ವ್ಯಕ್ತಪಡಿಸಿ ರಾಜ್ಯಾದ್ಯಂತ ಹನುಮಾನ್ ಚಾಲೀಸಾ ಪಾರಾಯಣಕ್ಕೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಕರೆ ನೀಡಿದೆ. ಇಂದು ಸಂಜೆ 7ಕ್ಕೆ ಬೆಳಗಾವಿಯ ಹನುಮಾನ್ ಮಂದಿರದಲ್ಲಿ ಹನುಮಾನ್ ಚಾಲೀಸಾ ಪಠಣೆ ಮಾಡಲಿದ್ದಾರೆ.
ಕಲಬುರಗಿಗೆ ಇಂದು ಚುನಾವಣೆ ಚಾಣಕ್ಯ ಅಮಿತ್ ಶಾ ಎಂಟ್ರಿ ನೀಡುತ್ತಿದ್ದು ಜೇವರ್ಗಿ ಮತ್ತು ಅಫಜಲಪುರದಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ. ಸಂಜೆ ನಾಲ್ಕ ಗಂಟೆಗೆ ಜೇವರ್ಗಿಯಲ್ಲಿ ಸಾರ್ವಜನಿಕ ಸಭೆ ನಡೆಸಿ ಸಂಜೆ 5.30 ಕ್ಕೆ ಅಫಜಲಪುರದಲ್ಲಿ ಸಭೆ ನಡೆಸಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ. ಬಳಿಕ ರಾತ್ರಿ ಕಲಬುರಗಿ ನಗರದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಇನ್ನು ಇಂದು ಕನಕಪುರ ಕ್ಷೇತ್ರದಲ್ಲಿ ನಿಗದಿಯಾಗಿದ್ದ ಕೇಂದ್ರ ಸಚಿವ ಅಮಿತ್ ಶಾ ಚುನಾವಣಾ ಪ್ರಚಾರ ಮುಂದೂಡಿಕೆಯಾಗಿದೆ. ಮೇ 8ರಂದು ಕನಕಪುರದಲ್ಲಿ ಅಮಿತ್ ಶಾ ಪ್ರಚಾರ ಸಾಧ್ಯತೆ ಇದೆ.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರ ಅಬ್ಬರದ ಪ್ರಚಾರ: ಇಂದು ಯಾರು ಎಲ್ಲೆಲ್ಲಿ ಮತಬೇಟೆ? ಇಲ್ಲಿದೆ ಮಾಹಿತಿ#karnatakaelections2023 #Congress #BJP #JDS #KarnatakaAssemblyElections2023 #ElectionCampaign2023https://t.co/NHchkk4iam
— TV9 Kannada (@tv9kannada) May 4, 2023
ಪ್ರಧಾನಿ ಮೋದಿ ವಿರುದ್ಧ ನಾಲಾಯಕ್ ಪದ ಬಳಕೆ ಹಿನ್ನೆಲೆ ಪ್ರಿಯಾಂಕ್ ಖರ್ಗೆಗೆ ಚುನಾವಣಾ ಆಯೋಗದಿಂದ ನೋಟಿಸ್ ಜಾರಿಯಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ ನೋಟಿಸ್ ನೀಡಿದ್ದು ಇಂದು ಸಂಜೆ 5ರೊಳಗೆ ನೋಟಿಸ್‌ಗೆ ಉತ್ತರಿಸುವಂತೆ ಸೂಚಿಸಲಾಗಿದೆ. ಇನ್ನು ಮತ್ತೊಂದೆಡೆ ಸೋನಿಯಾ ಗಾಂಧಿ ವಿರುದ್ಧ ವಿಷಕನ್ಯೆ ಪದ ಬಳಕೆ ಹಿನ್ನೆಲೆ ಶಾಸಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಚುನಾವಣಾ ಆಯೋಗದಿಂದ ನೋಟಿಸ್ ಜಾರಿಯಾಗಿದ್ದು ಇಂದು ಸಂಜೆ 5 ರೊಳಗೆ ನೋಟಿಸ್‌ಗೆ ಉತ್ತರಿಸಲು ಸೂಚಿಸಲಾಗಿದೆ.
ಬೆಂಗಳೂರಿನಲ್ಲಿ ವೋಟರ್ ಐಡಿ ಸಂಗ್ರಹಿಸುತ್ತಿದ್ದ ನಾಲ್ವರನ್ನು ಫ್ಲೈಯಿಂಗ್ ಸ್ಕ್ವಾಡ್, ಭಾರತಿನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿವಾಜಿನಗರ ಕ್ಷೇತ್ರದಲ್ಲಿ ಹಣ ನೀಡುವುದಾಗಿ ಹೇಳಿ ಮತದಾರರ ಬಳಿ ವೋಟರ್ ಐಡಿ ಸಂಗ್ರಹಿಸುತ್ತಿದ್ದ ಆರೋಪಿಗಳು ಅರೆಸ್ಟ್. ಒಂದು ವೋಟ್ಗೆ 2 ಸಾವಿರ ರೂ. ನೀಡುವುದಾಗಿ ಹೇಳಿ ಐಡಿ ಸಂಗ್ರಹಿಸಲಾಗುತ್ತಿತ್ತು. ಈ ಸಂಬಂಧ ಶಿವಾಜಿನಗರ ಕಾಂಗ್ರೆಸ್ ಕಾರ್ಯಕರ್ತನಿಂದ ದೂರು ದಾಖಲಾಗಿದೆ.
Published On - 7:00 am, Thu, 4 May 23