ಅನುಮತಿ ಪಡೆಯದೇ ಲಿಂಗಾಯತ ಮುಖಂಡರ ಸಭೆ ಕರೆದು ಊಟದ ವ್ಯವಸ್ಥೆ ಆರೋಪ: ಈರಣ್ಣ ಕಡಾಡಿ ಸೇರಿ ನಾಲ್ವರ ವಿರುದ್ಧ FIR
ಅನುಮತಿ ಪಡೆಯದೇ ಲಿಂಗಾಯತ ಮುಖಂಡರ ಸಭೆ ಕರೆದು ಊಟದ ವ್ಯವಸ್ಥೆ ಹಿನ್ನೆಲೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿದೆ.
ಬೆಳಗಾವಿ: ಅನುಮತಿ ಪಡೆಯದೇ ಲಿಂಗಾಯತ ಮುಖಂಡರ ಸಭೆ ಕರೆದು ಊಟದ ವ್ಯವಸ್ಥೆ ಹಿನ್ನೆಲೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ (Code of Conduct) ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿದೆ. ಬಿಜೆಪಿ ಸಂಸದೆ ಮಂಗಲಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹಾಗೂ ಮಲಪ್ರಭಾ ಶುಗರ್ಸ್ ಮಾಜಿ ಅಧ್ಯಕ್ಷ ಮೋಹನ ಸಂಬರಗಿ ವಿರುದ್ಧ ನಂದಗಡ ಠಾಣೆಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಜಿಲ್ಲೆಯ ಖಾನಾಪುರ ಕ್ಷೇತ್ರದ ವ್ಯಾಪ್ತಿಯ ಹಿರೇಮುನವಳ್ಳಿ ಗ್ರಾಮದಲ್ಲಿ ನಿನ್ನೆ ಸಂಜೆ ಲಿಂಗಾಯತ ಮುಖಂಡರ ಸಭೆ ಕರೆಯಲಾಗಿದೆ ಎನ್ನಲಾಗಿದೆ.
ಖಾನಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಠ್ಠಲ್ ಹಲಗೇಕರ್ ಪರ ಪ್ರಚಾರ ಹಿನ್ನೆಲೆ 500ಕ್ಕೂ ಹೆಚ್ಚು ಜನರ ಸೇರಿಸಿ ಸಭೆ ಮಾಡಿ ಊಟದ ವ್ಯವಸ್ಥೆ ಆರೋಪ ಕೇಳಿಬಂದಿದೆ.
ಶಶಿಕಲಾ ಜೊಲ್ಲೆ ವಿರುದ್ಧ ಎಫ್‌ಐಆರ್
ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ನಿಪಾಣಿ ಪೊಲೀಸ್ ಠಾಣೆಯಲ್ಲಿ ಏ. 1ರಂದು ಎಫ್‌ಐಆರ್ ದಾಖಲಾಗಿತ್ತು. ಸ್ಥಳೀಯ ಪುರಸಭೆಯ ಪ್ರೌಢಶಾಲೆಯಲ್ಲಿ 5ರಿಂದ ರಾತ್ರಿ 10ರವರೆಗೆ ಆಯೋಜಿಸಿದ್ದ ‘ಅರಿಶಿಣ ಕುಂಕುಮ’ ಕಾರ್ಯಕ್ರಮದಲ್ಲಿ ಶಶಿಕಲಾ ಜೊಲ್ಲೆ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ಬಂದವರಿಗಾಗಿ ಆಹಾರ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಇದನ್ನೂ ಓದಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ವಿರುದ್ಧ ದೂರು
ಅಲ್ಲದೆ ಕಾರ್ಯಕ್ರಮದ ಸ್ಥಳದಲ್ಲಿ ಸ್ಥಳೀಯ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಚಿತ್ರಗಳ ಬ್ಯಾನರ್ಗಳು ಹಾಗೂ ಬಿಜೆಪಿ ಧ್ವಜಗಳನ್ನು ಹಾಕಲಾಗಿತ್ತು. ಹೀಗಾಗಿ ನೀತಿ ಸಂಹಿತೆ ಉಲ್ಲಂಘಿಸಲಾಗಿದೆ ಎಂದು ಎಫ್ಐಆರ್ ದಾಖಲಾಗಿತ್ತು.
ಅನುಮತಿ ಪಡೆಯದೇ ಎಂಪಿ ರೇಣುಕಾಚಾರ್ಯ ಸಭೆ
ಬೆಂಗಳೂರು: ನೀತಿ ಸಂಹಿತೆ ಜಾರಿಯಲ್ಲಿದ್ದರೂ ಅನುಮತಿ ಪಡೆಯದೇ ನಗರದ ಶಿವಾನಂದ ಸರ್ಕಲ್ ಬಳಿ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಅವರು ಹೊನ್ನಾಳಿ ಕ್ಷೇತ್ರದ ಜನರೊಂದಿಗೆ ಇತ್ತೀಚೆಗೆ ಸಭೆ ನಡೆಸಿದ್ದರು. ಮಾಹಿತಿ ತಿಳಿದ ಚುನಾವಣಾ ಅಧಿಕಾರಿಗಳು ರೇಣುಕಾಚಾರ್ಯ ಅವರ ಭಾಷಣದ ವೇಳೆ ದಾಳಿ ನಡೆಸಿ ಸಭೆ ನಿಲ್ಲಿಸುವಂತೆ ಸೂಚಿಸಿದ್ದರು.
ಇದನ್ನೂ ಓದಿ: ಚುನಾವಣಾಧಿಕಾರಿಗಳ ವಿರುದ್ಧವೇ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ ಶಾಸಕ ಕೃಷ್ಣ ಭೈರೇಗೌಡ
ಸಭೆಯ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಿಕೊಂಡ ಅಧಿಕಾರಿಗಳು ರೇಣುಕಾಚಾರ್ಯ ಅವರು ಬಳಸುತ್ತಿದ್ದ ಮೈಕ್ ಕಸಿಯಲು ಯತ್ನಿಸಿದ್ದರು. ಆದರೆ ಕ್ಯಾರೇ ಎನ್ನದ ರೇಣುಕಾಚಾರ್ಯ ಭಾಷಣ ಮುಂದುವರಿಸಿದ್ದರು. ಕೊನೆಗೆ ಅಧಿಕಾರಿಗಳ ಸೂಚನೆಯಂತೆ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು.
ಚುನಾವಣಾಧಿಕಾರಿಗಳ ವಿರುದ್ಧವೇ ದೂರು
ಚುನಾವಣಾಧಿಕಾರಿಗಳ ವಿರುದ್ಧವೇ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರಿಗೆ ಶಾಸಕ ಕೃಷ್ಣ ಭೈರೇಗೌಡ ಇತ್ತೀಚೆಗೆ ದೂರು ನೀಡಿದ್ದರು. ವಕೀಲರೊಂದಿಗೆ ತೆರಳಿ ಕೃಷ್ಣ ಭೈರೇಗೌಡ ದೂರು ಸಲ್ಲಿಸಿದ್ದರು. ಕ್ಷೇತ್ರದ ಮತದಾರರಿಗೆ ಆಮಿಷವೊಡ್ಡಲು ಬಿಜೆಪಿ ಮುಖಂಡ ಕೋಟ್ಯಂತರ ಮೌಲ್ಯದ ಸಾಮಗ್ರಿ ಸಂಗ್ರಹಿಸಿದ್ದರು. ಆದರೂ ಚುನಾವಣಾ ಅಧಿಕಾರಿಗಳು ಯಾವುದೇ ಪ್ರಕರಣ ದಾಖಲಿಸಿಲ್ಲ. ಯಾರೋ ಬೇನಾಮಿ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಿದ್ದು, ಕೇಸ್ ಮುಚ್ಚಿ ಹಾಕುವ ಹುನ್ನಾರ ನಡೆದಿದೆ ಎಂದು ಚುನಾವಣಾಧಿಕಾರಿಗಳ ವಿರುದ್ಧವೇ ದೂರು ದಾಖಲಿಸಿದ್ದರು.
ವಿಧಾನಸಭಾ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ