ಧಾರವಾಡ: ಸಾವಿನ ಮನೆಯಲ್ಲೂ ಮತ ಚಲಾಯಿಸಿ, ಆದರ್ಶ ಮೆರೆದ ವೃದ್ಧೆ
ಅವರದು 64 ವರ್ಷಗಳ ಅನ್ಯೋನ್ಯ ದಾಂಪತ್ಯ ಜೀವನ, ಒಬ್ಬರನ್ನೊಬ್ಬರು ಬಿಟ್ಟು ಇರದ ಆ ವಯೋವೃದ್ಧರು, ಆ ಬಡಾವಣೆಯಲ್ಲಿ ಆದರ್ಶ ದಂಪತಿಗಳಾಗಿದ್ದವರು. ಜೀವನದ ಉದ್ದಕ್ಕೂ ವಿವಿಧ ಆದರ್ಶಗಳನ್ನು ಪಾಲಿಸಿಕೊಂಡು ಬಂದಿದ್ದರು. ಅದೇ ಆದರ್ಶವನ್ನು ಅಜ್ಜ ತೀರಿದ ಬಳಿಕವೂ ಪಾಲಿಸಿದ ಅಜ್ಜಿ ಯುವ ಸಮುದಾಯಕ್ಕೆ ಆದರ್ಶವಾಗಿದ್ದಾರೆ. ಹಾಗಾದರೆ ಸಾವಿನ ಮನೆಯಲ್ಲಿ ನಡೆದ ಘಟನೆಯಾದರೂ ಏನು? ಇಲ್ಲಿದೆ ನೋಡಿ.
ಧಾರವಾಡ: ಈ ಚಿತ್ರದಲ್ಲಿ ಕಾಣುತ್ತಿರುವ ವ್ಯಕ್ತಿಯ ಹೆಸರು ಜ್ಯೋತಿಬಾ ತಿಬೇಲಿ. ಧಾರವಾಡ (Dharwad)ನಗರದ ಸಾರಸ್ವರಪುರ ಬಡಾವಣೆಯ ಇವರು ನಿವೃತ್ತ ಪಿಎಸ್ಐ. ಜ್ಯೋತಿಬಾ ತಮ್ಮ 95 ನೇ ವಯಸ್ಸಿನಲ್ಲಿ ರವಿವಾರ (ಏ.30) ತೀರಿಕೊಂಡರು. ಮರುದಿನ ಮನೆಯವರೆಲ್ಲ ಅವರ ಅಂತ್ಯಕ್ರಿಯೆಯ ಚಟುವಟಿಕೆಯಲ್ಲಿ ಮುಳುಗಿರುವಾಗ ಅಲ್ಲಿಗೆ ಚುನಾವಣಾ ಸಿಬ್ಬಂದಿ ಬಂದರು. ಏಕೆಂದರೆ ಸಿಬ್ಬಂದಿ ಅದಾಗಲೇ ಈ ಮನೆಯಲ್ಲಿ ಇಬ್ಬರು 80 ವರ್ಷ ಮೀರಿದವರಿದ್ದಾರೆ ಅನ್ನೋದರ ಬಗ್ಗೆ ಮಾಹಿತಿ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಮನೆಯಿಂದಲೇ ಮತ ಪಡೆಯಲು ಸಿಬ್ಬಂದಿ ಬಂದಿದ್ದು, ಬಳಿಕ ಮನೆಯ ಯಜಮಾನ ತೀರಿ ಹೋಗಿರೋದು ಗೊತ್ತಾಗಿದೆ. ಹೀಗಾಗಿ ಈ ಸಂದರ್ಭದಲ್ಲಿ ಉಳಿದವರಿಗೆ ಮತ ಹಾಕಿ ಎಂದು ಹೇಳೋದು ಸರಿಯಲ್ಲ ಎನ್ನುವ ಹೊತ್ತಿಗೆ ಮೃತರ ಪತ್ನಿ ಮತ ಚಲಾಯಿಸಲು ತೀರ್ಮಾನಿಸಿದ್ದಾರೆ. ಹೌದು ಪತ್ನಿ ಶಾಂತಾಬಾಯಿ ಅವರೇ ಪತಿ ತೀರಿಕೊಂಡಿದ್ದರೂ ಮತ ಚಲಾಯಿಸಿ, ಆದರ್ಶ ಮೆರೆದಿದ್ದಾರೆ.
ಇನ್ನು ಮೊದಲಿಗೆ ಬಂದ ಚುನಾವಣಾ ಅಧಿಕಾರಿಗಳು ಮತ ಪಡೆಯದಿರಲು ನಿರ್ಧರಿಸಿದ್ದರು. ಏಕೆಂದರೆ, ಎಲ್ಲರೂ ಮನೆ ಯಜಮಾನನ ಸಾವಿನ ದುಃಖದಲ್ಲಿದ್ದ ಕಾರಣ, ಅಲ್ಲಿಂದ ಹೋಗಲು ನಿರ್ಧರಿಸಿದ್ದರು. ಆದರೆ, ಅಲ್ಲಿದ್ದ ಜ್ಯೋತಿಬಾ ಅವರ ಮಕ್ಕಳು, ತಂದೆ ತೀರಿ ಹೋಗಿದ್ದರೂ ನಮ್ಮ ತಾಯಿ ಮತದಾನ ಮಾಡುತ್ತಾರೆ ಎಂದು ಹೇಳಿದ್ದರು. ಇದರಿಂದ ಅಧಿಕಾರಿಗಳಿಗೆ ಅಚ್ಚರಿಯಾಗಿ, ಕೂಡಲೇ ಮತದಾನಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡು, ಶಾಂತಾಬಾಯಿ ಅವರಿಂದ ಮತದಾನ ಮಾಡಿಸಿದರು. ಇವರ ಸಹಕಾರ ನೋಡಿ ಚುನಾವಣಾಧಿಕಾರಿಗಳು ಸೂಕ್ತ ವ್ಯವಸ್ಥೆ ಹಾಗೂ ತಿಳುವಳಿಕೆ ನೀಡಿ ಮತದಾನ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಎಷ್ಟೋ ವಿದ್ಯಾವಂತ ಮತದಾರರು ಮತದಾನದ ದಿನ ರಜೆ ಇದ್ದರು, ಮತದಾನ ಮಾಡಲು ಹೋಗದೆ, ಮನೆಯಲ್ಲಿ ಕಾಲ ಕಳೆಯುವಾಗ, ಸಾವಿನ ಮನೆಯಲ್ಲಿಯೂ ಮತದಾನ ಮಾಡುವ ಮೂಲಕ ಅಜ್ಜಿ ಶಾಂತಾಬಾಯಿ, ದುಃಖದ ಸಂದರ್ಭದಲ್ಲಿಯೂ ಸಹ ಮತದಾನದ ಮಾಡಿದ್ದು, ನಿಜಕ್ಕೂ ಅಚ್ಚರಿಯ ಸಂಗತಿ, ಇದರ ಜೊತೆಗೆ ಮತದಾನದ ಅರಿವು ಮೂಡಿಸಿದ ಚುನಾವಣಾ ಸಿಬ್ಬಂದಿ ಕಾರ್ಯ ಕೂಡ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:18 am, Thu, 4 May 23