ಐಪಿಎಲ್ ಸೈಡಿಗಾಕಿ ರಾಜ್ಯದಲ್ಲಿ ಹೆಚ್ಚಾದ ರಾಜಕೀಯದ ಬೆಟ್ಟಿಂಗ್, ಸೋಲು ಗೆಲುವಿನ ಲೆಕ್ಕಾಚಾರಕ್ಕೆ ಕೋಟಿ ಕೋಟಿಗಳ ಆಟ
ಕಾರ್ಯಕರ್ತರು, ಅಭಿಮಾನಿಗಳು ತಮ್ಮ ಕುತೂಹಲವನ್ನು ತಾಳಲಾರದೆ ತಮ್ಮ ನೆಚ್ಚಿನ ಅಭ್ಯರ್ಥಿಯ ಪರವಾಗಿ ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಅದರಲ್ಲೂ ಕೋಲಾರ, ಮೈಸೂರು ಸೇರಿದಂತೆ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಬಾಜಿ ಕಟ್ಟುವವರ ಸಂಖ್ಯೆ ಹೆಚ್ಚಾಗಿದೆ.
ಬೆಂಗಳೂರು: ಐಪಿಎಲ್ ಕ್ರಿಕೆಟ್(IPL) ಮ್ಯಾಚ್ ವರ್ಷಕ್ಕೆ ಒಂದು ಬಾರಿ ನಡೆಯಬಹುದು ಆದರೆ ಐದು ವರ್ಷಕ್ಕೊಮ್ಮೆ ಬರುವ ಐಪಿಎಲ್ ಮ್ಯಾಚ್ಗಿಂತ ಅತ್ಯಂತ ಕೂತೂಹಲ ಹಾಗೂ ತಲೆಕೆಡಿಸುವ ಎಲ್ಲರ ಲೆಕ್ಕಾಚಾರವನ್ನು ಉಲ್ಟಾ ಮಾಡಬಲ್ಲ ಮ್ಯಾಚ್ ಅಂದ್ರೆ ಅದು ಚುನಾವಣೆ. ಕುತೂಹಲ ಕೆರಳಿಸಿದ್ದ ರಾಜ್ಯ ವಿಧಾನಸಭಾ ಚುನಾವಣೆಗೆ(Karnataka Assembly Election 2023) ಮೇ 10ರಂದು ಭರ್ಜರಿ ಮತದಾನ ನಡೆದಿದ್ದು ಮೇ 13ರಂದು ಫಲಿತಾಂಶ ಹೊರ ಬೀಳಲಿದೆ. ಆದ್ರೆ ಮತದಾನ(Voting) ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ಬೆಟ್ಟಿಂಗ್(Betting) ದಂಧೆ ಜೋರಾಗಿದೆ. ಐಪಿಎಲ್ ಮ್ಯಾಚ್ಗೆ ಬೆಟ್ಟಿಂಗ್ ಕಟ್ಟುವ ರೀತಿ ಲಕ್ಷ ಲಕ್ಷಗಳಲ್ಲಿ ಯಾವ ಪಕ್ಷ ಗೆಲ್ಲುತ್ತೆ ಎಂಬ ಬಗ್ಗೆ ಬೆಟ್ಟಿಂಗ್ ಕಟ್ಟಲಾಗುತ್ತಿದೆ.
ಹೌದು ರಾಜ್ಯ ವಿಧಾನಸಭೆ ಚುನಾವಣೆ ಮತದಾನ ಪ್ರಕ್ರಿಯೆ ಮುಗಿದಿದ್ದು ಈಗ ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರ ಒಂದೆಡೆ ನಡೆಯುತ್ತಿದ್ದರೆ. ಇನ್ನೊಂದೆಡೆ ತಮ್ಮ ತಮ್ಮ ನಾಯಕರ ಪರವಾಗಿ ಕಾರ್ಯಕರ್ತರು, ಅಭಿಮಾನಿಗಳು ಲಕ್ಷಾಂತರ ರೂಪಾಯಿ ಬೆಟ್ಟಿಂಗ್ ಶುರು ಮಾಡಿದ್ದಾರೆ.
ಚುನಾವಣೆ ಮುಗಿದ ಬೆನ್ನಲ್ಲೇ ಶುರುವಾಯ್ತು ಗೆಲುವಿನ ಲೆಕ್ಕಾಚಾರ
2023ರ ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದಿದೆ, ಮತ ಎಣಿಕೆ ಕಾರ್ಯಕ್ಕೆ ಇನ್ನೊಂದು ದಿನ ಮಾತ್ರ ಬಾಕಿ ಇದೆ. ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದೆ, ಅಭ್ಯರ್ಥಿಗಳ ಎದೆಯಲ್ಲಿ ಒಂದೆಡೆ ಢವ ಢವ ಶುರುವಾಗಿದ್ದರೆ, ವಿವಿಧ ಪಕ್ಷಗಳ ಕಾರ್ಯಕರ್ತರಲ್ಲಿ ಕೂತೂಹಲ ಎಳ್ಳೆ ಮೀರಿದೆ. ಹಾಗಾಗಿ ಕಾರ್ಯಕರ್ತರು, ಅಭಿಮಾನಿಗಳು ತಮ್ಮ ಕುತೂಹಲವನ್ನು ತಾಳಲಾರದೆ ತಮ್ಮ ನೆಚ್ಚಿನ ಅಭ್ಯರ್ಥಿಯ ಪರವಾಗಿ ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಅದರಲ್ಲೂ ಕೋಲಾರ, ಮೈಸೂರು ಸೇರಿದಂತೆ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಬಾಜಿ ಕಟ್ಟುವವರ ಸಂಖ್ಯೆ ಹೆಚ್ಚಾಗಿದೆ.
ಕೋಲಾರ ಜಿಲ್ಲೆಯಲ್ಲಿ ಒಟ್ಟು ಆರು ವಿಧಾನಸಭಾ ಕ್ಷೇತ್ರಗಳಿದೆ. ಈ ಪೈಕಿ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಕೂಡಾ ಭರ್ಜಿರಿ ಬೆಟ್ಟಿಂಗ್ ನಡೆಯುತ್ತಿದೆ. ರಾಯಲಸೀಮಾ ಮಾದರಿಯ ರಾಜಕೀಯಕ್ಕೆ ಹೆಸರಾಗಿರುವ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಆರ್.ರಮೇಶ್ ಕುಮಾರ್ ಹಾಗೂ ಜೆಡಿಎಸ್ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ ಪರವಾಗಿ ಬೆಟ್ಟಿಂಗ್ ನಡೆಯುತ್ತಿದೆ. ಅಲ್ಲದೆ ತೀವ್ರ ಕುತೂಹಲ ಕೆರಳಿಸಿರುವ ಮಾಲೂರು ವಿಧಾನಸಭಾ ಕ್ಷೇತ್ರದಲ್ಲೂ ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್, ಬಿಜೆಪಿ ಅಭ್ಯರ್ಥಿ ಕೆ.ಎಸ್.ಮಂಜುನಾಥಗೌಡ ಹಾಗೂ ಕಾಂಗ್ರೇಸ್ ಅಭ್ಯರ್ಥಿ ಕೆ.ವೈ.ನಂಜೇಗೌಡ ಪರವಾಗಿ ಬೆಟ್ಟಿಂಗ್ ಕಟ್ಟಲಾಗಿದೆ. ಅಷ್ಟೇ ಅಲ್ಲದೆ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಕಾರ್ಯಕರ್ತರು ಭರ್ಜರಿ ಬೆಟ್ಟಿಂಗ್ ಕಟ್ಟಿದ್ದಾರೆ. ಬಿಜೆಪಿ ಅಭ್ಯರ್ಥಿ ವರ್ತೂರ್ ಪ್ರಕಾಶ್, ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಮಂಜುನಾಥ್ ಮತ್ತು ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಪರವಾಗಿ ದೊಡ್ಡ ಮಟ್ಟದಲ್ಲಿ ಬೆಟ್ಟಿಂಗ್ ಕಟ್ಟಲಾಗಿದೆ. ಇನ್ನುಳಿದಂತೆ ಮುಳಬಾಗಿಲು, ಕೆಜಿಎಫ್, ಮತ್ತು ಬಂಗಾರಪೇಟೆ ಕ್ಷೇತ್ರದಲ್ಲೂ ಬೆಟ್ಟಿಂಗ್ ನಡೆಯುತ್ತಿದೆ. ಇನ್ನು ಮತ್ತೊಂದೆಡೆ ಅಭಿಮಾನಿಯೊಬ್ಬರು ಕಾಂಗ್ರೆಸ್ ಗೆಲ್ಲುವುದಾಗಿ ಘೋಷಿಸಿ 3 ಲಕ್ಷ ಬೆಟ್ಟಿಂಗ್ ಕಟ್ಟಲು ಬಿಜೆಪಿ ಕಾರ್ಯಕರ್ತರನ್ನು ಆಹ್ವಾನಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಬೆಟ್ಟಿಂಗ್ ಪ್ರಕ್ರಿಯೆ ಹೇಗಿರುತ್ತೆ?
ಇನ್ನು ಐಪಿಎಲ್ ಕ್ರಿಕೆಟ್ ಮ್ಯಾಚ್ಗಳಲ್ಲಿ ಬೆಟ್ಟಿಂಗ್ ಕಟ್ಟಲು ಪ್ರತ್ಯೇಕ ವೆಬ್ ಸೈಟ್, ಮೊಬೈಲ್ ಅಪ್ಲಿಕೇಷನ್ ಗಳು ಇರುತ್ತವೆ, ಆದರೆ ಇಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ನೇರ ನೇರ ಬೆಟ್ಟಿಂಗ್ ನಡೆಯುತ್ತದೆ. ಒಂದು ಗ್ರಾಮದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಬೆಟ್ಟಿಂಗ್ ಕಟ್ಟಿಕೊಳ್ಳುತ್ತಾರೆ. ಪ್ರಮುಖವಾಗಿ ತಮ್ಮ ನೆಚ್ಚಿನ ನಾಯಕನ ಪರವಾಗಿ ಲಕ್ಷಾಂತರ ರೂಪಾಯಿ ಬೆಟ್ಟಿಂಗ್ ಕಟ್ಟಲಾಗುತ್ತಿದೆ. ಇನ್ನು ಪ್ರಮುಖವಾಗಿ ಈ ಬೆಟ್ಟಿಂಗ್ನಲ್ಲಿ ಕೇವಲ ಹಣವಷ್ಟೇ ಅಲ್ಲಾ, ಹಣ, ಬೈಕ್, ಕಾರ್, ಕುರಿ, ಕೋಳಿ, ಮೇಕೆ, ಹಸು, ಜೊತೆಗೆ ಭೂಮಿಯನ್ನು ಕೂಡಾ ಪಣಕ್ಕಿಡಲಾಗಿದೆಯಂತೆ. ಜಿಲ್ಲೆಯಾದ್ಯಂತ ಕೋಟ್ಯಾಂತರ ರೂಪಾಯಿ ಬೆಟ್ಟಿಂಗ್ ನಡೆಯುತ್ತಿದೆ ಎನ್ನಲಾಗಿದೆ. ಚುಣಾವಣೆಗೆ ಮುನ್ನವೇ ಅಭ್ಯರ್ಥಿಗಳ ಪರವಾದ ಟ್ರೆಂಡ್ ನೋಡಿ ಬೆಟ್ಟಿಂಗ್ ಕಟ್ಟಲಾಗುತ್ತಿದೆ. ಆದರೆ ಮೇ 10ರಂದು ಚುನಾವಣೆ ಮತದಾನ ಪ್ರಕ್ರಿಯೆ ಮುಗಿದ ನಂತರ ಯಾರು ಗೆಲ್ಲಬಹುದು ಅನ್ನೋ ಒಂದು ಲೆಕ್ಕಾಚಾರ ಸಿಕ್ಕಿದೆ ಹಾಗಾಗಿ ಬೆಟ್ಟಿಂಗ್ ಕಟ್ಟುವವರ ಸಂಖ್ಯೆ ದುಪ್ಪಾಟ್ಟಾಗಿದೆ.
ಗುಟ್ಟ ಗುಟ್ಟಾಗಿ ನಡೆಯುತ್ತದೆ ಬೆಟ್ಟಿಂಗ್
ಇನ್ನು ತಮ್ಮ ನೆಚ್ಚಿನ ನಾಯಕನ ಪರವಾಗಿ ಬೆಟ್ಟಿಂಗ್ ಕಟ್ಟುವ ವಿವಿಧ ಪಕ್ಷಗಳ ಕಾರ್ಯಕರ್ತರು ಬಹಿರಂಗವಾಗಿ ಬೆಟ್ಟಿಂಗ್ ಕಟ್ಟೋದಿಲ್ಲ, ಇದು ಗುಟ್ಟು ಗುಟ್ಟಾಗಿ ವಿವಿಧ ಪಕ್ಷಗಳ ಕಾರ್ಯಕರ್ತರ ನಡುವೆ ನಡೆಯುವ ಬೆಟ್ಟಿಂಗ್. ಇದು ಗ್ರಾಮಗಳಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಕುರಿ, ಕೋಳಿ, ಇಲ್ಲಾ ಹಸು, ಎಮ್ಮೆ ಇಲ್ಲಾ ಹಣಕ್ಕಾಗಿ ಬೆಟ್ಟಿಂಗ್ ನಡೆದರೆ. ನಗರ ಪ್ರದೇಶಗಳಲ್ಲಿ ಲಕ್ಷಾಂತರ ರೂಪಾಯಿ ಹಣ, ಬೈಕ್, ಚಿನ್ನ, ಬೆಳ್ಳಿ, ಕಾರು, ಲಾರಿ, ಆಟೋ ಹೀಗೆ ಬೇರೆ ಬೇರೆ ವಸ್ತುಗಳನ್ನು ಪಣಕ್ಕಿಟ್ಟು ಬೆಟ್ಟಿಂಗ್ ಆಡಲಾಗುತ್ತಿದೆ. ಆದರೆ ಇದೆಲ್ಲವೂ ಕಾನೂನು ಬಾಹಿರವಾದದ್ದು ಆದರೂ ಸದ್ಯದ ಪರಿಸ್ಥಿತಿಯಲ್ಲಿ ಕಾರ್ಯಕರ್ತರು ತಮ್ಮ ನಾಯಕನ ಗೆಲುವಿನ ಲೆಕ್ಕಾಚಾರ ಹಾಗೂ ಕುತೂಹಲದಲ್ಲಿ ಮುಳುಗಿದ್ದು ಇದು ಕಾನೂನು ಬಾಹಿರ ಅನ್ನೋ ಕಾರಣಕ್ಕೆ ಇದು ಗುಟ್ಟು ಗುಟ್ಟಾಗಿಯೇ ಒಂದು ಹೊಂದಾಣಿಕೆ ಮುಖಾಂತರ ನಡೆಯುತ್ತದೆ.
ಬೆಟ್ಟಿಂಗ್ ಹೇಗೆ ನಡೆಯುತ್ತದೆ?
ಉದಾಹರಣೆಗೆ ಕಾಂಗ್ರೆಸ್ 112-130 ಸ್ಥಾನಗಳನ್ನು ಪಡೆಯುತ್ತದೆ ಎಂದು ಒಬ್ಬ ವ್ಯಕ್ತಿ ಬೆಟ್ಟಿಂಗ್ ಕಟ್ಟಿದ್ದರೆ ಮತ್ತು ಚುನಾವಣೆ ಫಲಿತಾಂಶದಲ್ಲಿ ಅಷ್ಟೇ ಸ್ಥಾನ ಬಂದರೆ, ಬೆಟ್ಟಿಂಗ್ ಆಪರೇಟರ್ ದುಪ್ಪಟ್ಟು ಹಣವನ್ನು ಕೊಡಬೇಕಾಗುತ್ತದೆ. ಬಿಜೆಪಿ 100 ಸ್ಥಾನಗಳನ್ನು ಪಡೆಯುತ್ತದೆ ಎಂದು ಯಾರಾದರು ಬೆಟ್ ಮಾಡಿದ್ದರೆ ಆಪರೇಟರ್‌ಗಳು ಒಂದಕ್ಕೆ 3ರ ಆಫರ್ ನೀಡುತ್ತಿದ್ದಾರೆ.
ಇದನ್ನೂ ಓದಿ: Karnataka Polls 2023: ಅಭ್ಯರ್ಥಿಗಳ ಸೋಲು ಗೆಲುವಿನ ಮೇಲೆ ಬೆಟ್ಟಿಂಗ್ ಕಟ್ಟುವವರೇ ಹುಷಾರ್
ಅಂದರೆ ನೀವು ರೂ 1000 ಬಾಜಿ ಕಟ್ಟಿದರೆ ನೀವು 4000 ಮರಳಿ ಪಡೆಯುತ್ತೀರಿ. ಆದರೆ ಈ ರೀತಿ ಆಗುವ ಸಾಧ್ಯತೆಗಳು ಕಡಿಮೆ. ಬಿಜೆಪಿ 70-85 ಸ್ಥಾನಗಳನ್ನು ಮಾತ್ರ ಪಡೆಯುವ ಸಾಧ್ಯತೆಯಿದೆ. ನೀವು ಬಿಜೆಪಿ 80/100 ಸ್ಥಾನ ಪಡೆಯುತ್ತದೆ ಎಂದು 1000 ರೂ. ಬೆಟ್ ಮಾಡಿದರೆ, ಆಡ್ ಆಧಾರದಲ್ಲಿ ನಿಮಗೆ ನಿಮಗೆ 1800 ರೂ. ಸಿಗುತ್ತದೆ.
ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ ಎಂದು ಯಾರಾದರೂ ಹೇಳಿದರೆ, 90/100 ರ ಆಡ್ ಪ್ರಕಾರ ನಿಮ್ಮ 1000 ರೂ.ಗೆ 1900 ರೂ. ಹಣ ಹಿಂತಿರುಗಿ ಕೊಡಲಾಗುತ್ತದೆ. ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ ಎಂದು ಬೆಟ್ ಮಾಡಿದ ನಿಮಗೆ 3500-4000 ರೂ. ಹಣ ಕೊಡಲಾಗುತ್ತದೆ.
ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ 25-30 ಸೀಟು ಬರುತ್ತೆ ಎಂದು ಯಾರಾದರೂ ಬೆಟ್ಟಿಂಗ್ ಕಟ್ಟಿದರೆ, 1000 ರೂ ಕೊಟ್ಟರೆ 2500 ಸಿಗುತ್ತೆ. ಈಗ ಸದ್ಯದ ಮಟ್ಟಿಗೆ, ಜೆಡಿಎಸ್ 31 ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುವ ಮೇಲೆ ಬೆಟ್ಟಿಂಗ್ ಮಾಡುವವರು 1000 ಕ್ಕೆ 3500 ರೂ. ಹಣ ಪಡೆಯಲಿದ್ದಾರೆ. ಹೀಗೆ ಈ ಚುನಾವಣೆ ಬೆಟ್ಟಿಂಗನ್ನು ಕಟ್ಟಲಾಗುತ್ತೆ.
ಸದ್ಯ ಕಾರ್ಯಕರ್ತರ ಕುತೂಹಲಕ್ಕೆ ತೆರೆ ಬೀಳಲು ಇನ್ನೊಂದು ದಿನ ಬಾಕಿ ಇದ್ದು ಯಾರು ಗೆಲ್ತಾರೆ ಯಾರು ಸೋಲ್ತಾರೆ, ಯಾರಿಗೆ ಲಾಭ ಯಾರಿಗೆ ನಷ್ಟ ಅನ್ನೋದು ತಿಳಿಯಲು ಮತ ಎಣಿಕೆ ಮುಗಿಯುವವರೆಗೆ ಕಾಯಲೇ ಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ