Karnataka Assembly Election 2023: ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ಸಿಕ್ಕ ಹಣ ಎಷ್ಟು? ನಿಮ್ಮ ಜಿಲ್ಲೆಯ ಪಾಲೆಷ್ಟು? ಇಲ್ಲಿದೆ ಮಾಹಿತಿ

|

Updated on: May 09, 2023 | 2:47 PM

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಮಾರ್ಚ್​ 29 ರಂದು ನೀತಿ ಸಂಹಿತೆ ಜಾರಿಯಾಗಿದ್ದು, ಚುನಾವಣಾ ಅಧಿಕಾರಿಗಳು ಮತ್ತು ಐಟಿ ಅಧಿಕಾರಿಗಳು ಚುನಾವಣಾ ಅಕ್ರಮವನ್ನು ತಡೆಗಟ್ಟುವಲ್ಲಿ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ರಾಜ್ಯಾದ್ಯಂತ ಅಧಿಕಾರಿಗಳ ದಾಳಿ ವೇಳೆ ಮತ್ತು ಚೆಕ್​ ಪೋಸ್ಟ್​ಗಳಲ್ಲಿ ಜಪ್ತಿ ಮಾಡಿಕೊಂಡ ಹಣದ ವಿವರ ಇಲ್ಲಿದೆ.

Karnataka Assembly Election 2023: ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ಸಿಕ್ಕ ಹಣ ಎಷ್ಟು? ನಿಮ್ಮ ಜಿಲ್ಲೆಯ ಪಾಲೆಷ್ಟು? ಇಲ್ಲಿದೆ ಮಾಹಿತಿ
ಚುನಾವಣಾ ಆಯೋಗ
Follow us on

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಹಿನ್ನೆಲೆ ಮಾರ್ಚ್​ 29 ರಂದು ನೀತಿ ಸಂಹಿತೆ ಜಾರಿಯಾದಾಗಿನಿಂದ (Model Code Conduct) ಚುನಾವಣಾ ಅಧಿಕಾರಿಗಳು (Election Commission Officers) ಮತ್ತು ಐಟಿ (IT) ಅಧಿಕಾರಿಗಳು ಚುನಾವಣಾ ಅಕ್ರಮವನ್ನು ತಡೆಗಟ್ಟುವಲ್ಲಿ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಹೀಗೆ ರಾಜ್ಯಾದ್ಯಂತ ಅಧಿಕಾರಿಗಳ ದಾಳಿ ವೇಳೆ ಮತ್ತು ಚೆಕ್​ ಪೋಸ್ಟ್​ಗಳಲ್ಲಿ ಈವರೆಗೆ ಬರೋಬ್ಬರಿ 375 ಕೋಟಿ ರೂ. ಹಣ ಸಿಕ್ಕಿದೆ. ಜಾರಿ ನಿರ್ದೇಶನಾಲಯ 288 ಕೋಟಿ ಹಣ ಜಪ್ತಿ ಮಾಡಿದೆ. ಈವರೆಗೆ 147 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ಅಧಿಕೃತ ಮಾಹಿತಿ ನೀಡಿದೆ.

ಇನ್ನು ಅಕ್ರಮವಾಗಿ ಹಣ ಸಂಗ್ರಹಿಸಿದ್ದ ನೂರಕ್ಕೂ ಅಧಿಕ ಕಡೆ ಐಟಿ ದಾಳಿ ನಡೆಸಿದ್ದು, ಬರೊಬ್ಬರಿ 42 ಕೋಟಿ ರೂ. ಹಣ ಸೀಜ್​ ಮಾಡಿದೆ. ವಿಜಿಲೆನ್ಸ್​, ಚೆಕ್​ ಪೋಸ್ಟ್​ಗಳಲ್ಲಿ ಬರೋಬ್ಬರಿ 105 ಕೋಟಿ ರೂ. ಹಣ ವಶಪಡಿಸಿಕೊಳ್ಳಲಾಗಿದೆ. 96.59 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳು ಪತ್ತೆಯಾಗಿವೆ.  ಸೀರೆ, ಕುಕ್ಕರ್ ಸೇರಿದಂತೆ 24.21 ಕೋಟಿ ಮೌಲ್ಯದ ಹಲವು ಬಗೆಯ ವಸ್ತುಗಳು ದೊರೆತಿವೆ.  83.33 ಕೋಟಿ ರೂ. ಮೌಲ್ಯದ 81.39 ಕೋಟಿ ಲೀಟರ್​ ಮದ್ಯ, 23 ಕೋಟಿ ರೂಪಾಯಿ ಮೌಲ್ಯದ ಡ್ರಗ್ ಸೀಜ್​ ಮಾಡಲಾಗಿದೆ. ರಾಜ್ಯಾದ್ಯಂತ 2,896 ಎಫ್​ಐಆರ್​​ ದಾಖಲಾಗಿವೆ.

ಇದನ್ನೂ ಓದಿ: ಚುನಾವಣೆ ಅಕ್ರಮ ತಡೆಗೆ ತೆರೆದಿದ್ದ ಸಿವಿಜಿಲ್ ಆ್ಯಪ್​ಗೆ ಭರ್ಜರಿ ರೆಸ್ವಾನ್ಸ್; 6711 ದೂರು ಸಲ್ಲಿಕೆ

ಐಟಿ ಮೆಗಾ ಆಪರೇಷನ್ ಬೆಂಗಳೂರು

ಚುನಾವಣಾ ಹೊತ್ತಿನಲ್ಲಿ ಬೆಂಗಳೂರಿನ ಹಲವು ಕ್ಷೇತ್ರಗಳಲ್ಲಿ ಐಟಿ ಅಧಿಕಾರಿಗಳು ಮೆಗಾ ಆಪರೇಷನ್ ಮಾಡಿದ್ದಾರೆ. ಸಿಲಿಕಾನ್​ ಸಿಟಿಯ 11 ಕ್ಷೇತ್ರಗಳ ವ್ಯಾಪ್ತಿಯಲ್ಲಿ 15 ಕೋಟಿ 53 ಲಕ್ಷ ಹಣವನ್ನು ಅಧಿಕಾರಿಗಳು ಸೀಜ್ ಮಾಡಿದ್ರೆ, 7 ಕೋಟಿ ಮೌಲ್ಯದ 10 ಕೆಜಿ14 ಗ್ರಾಂ ಚಿನ್ನಾಭರಣಗಳನ್ನ ಜಪ್ತಿ ಮಾಡಲಾಗಿದೆ. ಶಿವಾಜಿನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಅತ್ಯಧಿಕ 4 ಕೋಟಿ 77 ಕ್ಷಣ ಹಣ ವಶಪಡಿಸಿಕೊಂಡರೇ, ಆರ್.ಆರ್ ನಗರ ವ್ಯಾಪ್ತಿಯಲ್ಲಿ 3 ಕೋಟಿ 44 ಲಕ್ಷ ಹಣವನ್ನು ಜಪ್ತಿ ಮಾಡಿದ್ದಾರೆ.

ಕುಂದಾನಗರಿ ಬೆಳಗಾವಿಯಲ್ಲಿ ಕಾಂಚಾಣ ಕುಣಿತ

ಜಿದ್ದಾಜಿದ್ದಿನ ಕದನ ಕಣ ಬೆಳಗಾವಿಯಲ್ಲಿ ಚುನಾವಣಾ ಆಯೋಗ ಭರ್ಜರಿ ಭೇಟೆಯಾಡಿದೆ. ನೀತಿ ಸಂಹಿತೆ ಜಾರಿಯಾದ ಸಮಯದಿಂದ ಇಲ್ಲಿಯವರೆಗೆ ಒಟ್ಟು 26 ಕೋಟಿ 18 ಲಕ್ಷದ ನಗದು, ಚಿನ್ನ, ಬೆಳ್ಳಿ ಮತ್ತು ಇತರೆ ವಸ್ತುಗಳನ್ನ ಸೀಜ್ ಮಾಡಲಾಗಿದೆ. ಜಿಲ್ಲೆಯ ವಿವಿಧ ಚೆಕ್​ಪೋಸ್ಟ್​​ಗಳಲ್ಲಿ 7 ಕೋಟಿ 7 ಲಕ್ಷ ಹಣ, 2 ಕೋಟಿ 52 ಲಕ್ಷದ ಮದ್ಯ, 6 ಲಕ್ಷ 29 ಸಾವಿರ ಮೌಲ್ಯದ ಡ್ರಗ್ಸ್​ ಮತ್ತು 1 ಕೋಟಿ 16 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿಮಾಡಲಾಗಿದೆ.

ಬಾಗಲಕೋಟೆಯಲ್ಲಿ 10 ಕೋಟಿ ಮೌಲ್ಯದ ಲಿಕ್ಕರ್ ವಶ

ಬಾಗಲಕೋಟೆಯಲ್ಲಿ ಚುನಾವಣಾ ಅಕ್ರಮಗಳ ಮೇಲೆ ಆಯೋಗ ಹದ್ದಿನ ಕಣ್ಣಿಟ್ಟಿದ್ದು, ಈವರೆಗೆ ಜಿಲ್ಲೆಯ ವಿವಿಧ ಚೆಕ್​ಪೋಸ್ಟ್​ಗಳಲ್ಲಿ 10 ಕೋಟಿ 61 ಲಕ್ಷ ರೂಪಾಯಿ ಅಕ್ರಮ ಹಣವನ್ನ ವಶಕ್ಕೆ ಪಡೆಯಲಾಗಿದೆ. ಇನ್ನು ಒಂದೂವರೆ ಕೋಟಿ ಬೆಲೆಯ 29 ಸಾವಿರ ಲೀಟರ್ ಮದ್ಯ, 46 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ವಸ್ತುಗಳನ್ನ ಜಪ್ತಿ ಮಾಡಿದ್ದು, 1.47 ಕೋಟಿ ರೂಪಾಯಿ ಮೌಲ್ಯದ ಗಿಫ್ಟ್​ ಬಾಕ್ಸ್​​ಗಳನ್ನ ಸೀಜ್ ಮಾಡಲಾಗಿದೆ.

ಬೀದರನಲ್ಲಿ 9 ಕೋಟಿ ರೂ. ಸೀಜ್, 67 ಎಫ್​ಐಆರ್

ಗಡಿಜಿಲ್ಲೆ ಬೀದರ್​ನಲ್ಲೂ ಆಯೋಗ ಮತ್ತು ಪೊಲೀಸ್ ಇಲಾಖೆ ಚುನಾವಾಣ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಜಿಲ್ಲೆಯ ವಿವಿಧ ಚೆಕ್​ಪೋಸ್ಟ್​ಗಳು ಮತ್ತು ದಾಳಿಯ ವೇಳೆ 9 ಕೋಟಿ 82 ಲಕ್ಷ ರೂಪಾಯಿ ಹಣವನ್ನ ವಶಕ್ಕೆ ಪಡೆಯಲಾಗಿದೆ. ಮಾರ್ಚ್ 29 ರಿಂದ ಮೇ 5 ರವರೆಗೆ ನಡೆದ ಕಾರ್ಯಾಚರಣೆ ವೇಳೆ 9 ಕೋಟಿ ಹಣ ಸಿಕ್ಕಿದ್ದು, ಚುನಾವಣಾ ಅಕ್ರಮದಲ್ಲಿ ಭಾಗಿಯಾದವರ ಮೇಲೆ ಒಟ್ಟು 67 ಎಫ್​ಐಆರ್ ಗಳು ದಾಖಲಾಗಿವೆ.

ಕೋಲಾರದಲ್ಲಿ 7.10 ಕೋಟಿ ರೂ. ಜಪ್ತಿ

ಚುನಾವಣಾ ನೀತಿ ಸಂಹಿತೆ ಜಾರಿಯಾದ ಸಮಯದಿಂದ ಕೋಲಾರ ಜಿಲ್ಲೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 7 ಕೋಟಿ 10 ಲಕ್ಷ ರೂ. ಹಣವನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಕೋಲಾರದಲ್ಲಿ 7 ಕೋಟಿ 10 ಲಕ್ಷ ಹಣವನ್ನು ವಶಕ್ಕೆ ಪಡೆದಿದ್ದರೇ, 2 ಕೋಟಿ 25 ಲಕ್ಷ ಮೌಲ್ಯದ 85 ಸಾವಿರ ಲೀಟರ್​ ಲಿಕ್ಕರ್ ಸೀಜ್ ಮಾಡಲಾಗಿದೆ. ಇನ್ನು 43 ಸಾವಿರ ಕೆಜಿ ಮಾದಕ ದ್ರವ್ಯ, 6 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 30 ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳನ್ನ ಸೀಜ್ ಮಾಡಿ ಸರ್ಕಾರಿ ಖಜಾನೆಗೆ ಸೇರಿಸಲಾಗಿದೆ.

ಕೊಪ್ಪಳದಲ್ಲಿ 3.91 ಕೋಟಿ ರೂ. ಸೀಜ್

ಕೊಪ್ಪಳ ಜಿಲ್ಲೆಯಲ್ಲಿ ಮಾರ್ಚ್​​ 29ರಿಂದ ಮೇ7ರವರೆಗೆ 3 ಕೋಟಿ 91 ಲಕ್ಷ ಹಣವನ್ನು ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆ ವಶಕ್ಕೆ ಪಡೆದಿದೆ. ಇನ್ನು ಇದೇ ಅವಧಿಯಲ್ಲಿ 47 ಲಕ್ಷ ರೂಪಾಯಿ ಮೌಲ್ಯದ 10 ಸಾವಿರ ಲೀಟರ್ ಲಿಕ್ಕರ್​, 7 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣ, 1 ಲಕ್ಷ 36 ಸಾವಿರ ರೂಪಾಯಿ ಮೌಲ್ಯದ ಡ್ರಗ್ಸ್​ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಂಡ್ಯದಲ್ಲಿ 3.48 ಕೋಟಿ ರೂ. ಜಪ್ತಿ

ಸಕ್ಕರೆ ನಾಡು ಮಂಡ್ಯದಲ್ಲೂ ಚುನಾವಣಾ ಆಯೋಗದ ಅಕ್ರಮ ಶಿಕಾರಿ ಮುಂದುವರೆದಿದೆ. ಈವರೆಗೆ ಮಂಡ್ಯ ಜಿಲ್ಲೆಯ ವಿವಿಧ ಭಾಗಗಳಲ್ಲಿ, 3 ಕೋಟಿ 48 ಲಕ್ಷದ 48 ಸಾವಿರ ಹಣ, 2 ಕೋಟಿ 35 ಲಕ್ಷ ಮೌಲ್ಯದ ಲಿಕ್ಕರ್​, 55 ಸಾವಿರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ. ಇನ್ನು ಚುನಾವಣಾ ಅಕ್ರಮ ಆರೋಪದಲ್ಲಿ ಪೊಲೀಸ್ ಇಲಾಖೆ 19 ಕೇಸ್ ದಾಖಲಿಸಿದ್ದರೇ, ಅಬಕಾರಿ ಇಲಾಖೆ 1322 ಪ್ರಕರಣಗಳನ್ನ ದಾಖಲಿಸಿಕೊಂಡು, 128 ವಾಹನಗಳನ್ನ ಜಪ್ತಿ ಮಾಡಿದೆ.

ಮಂಗಳೂರು ಕರಾವಳಿಯಲ್ಲಿ ಡಬಲ್​ ಬೇಟೆ

ಕರಾವಳಿ ಪ್ರದೇಶದಲ್ಲಿ ಐಟಿ ಮತ್ತು ಚುನಾವಣಾ ಆಯೋಗದಿಂದ ಪ್ರತ್ಯೇಕ ದಾಳಿಗಳಾಗಿದ್ದು, 2 ಕೋಟಿ ರೂ. ನಗದು ಮತ್ತು 27 ಲಕ್ಷ ರೂಪಾಯಿ ಮೌಲ್ಯದ ಲಿಕ್ಕರ್ ವಶಕ್ಕೆ ಪಡೆಯಲಾಗಿದೆ. ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆಯ ಕಾರ್ಯಾಚರಣೆಯ ವೇಳೆ 1 ಕೋಟಿ 82 ಲಕ್ಷ ಹಣ ಸಿಕ್ಕಿದ್ದು, 66 ಪ್ರಕರಣಗಳು ದಾಖಲಾಗಿವೆ. ಇನ್ನು ಮಂಗಳೂರು ಮತ್ತು ಬೆಳ್ತಂಗಡಿಯ ಕಾಂಗ್ರೆಸ್ ಮುಖಂಡರ ಮನೆಗಳ ಮೇಲೆ ಐಟಿ ದಾಳಿ ಮಾಡಿದ್ದು 30 ಲಕ್ಷ ಹಣವನ್ನ ಸೀಜ್ ಮಾಡಿದೆ.

ಮೈಸೂರಿನಲ್ಲಿ 3 ಕೋಟಿ ಪತ್ತೆ

ಮೈಸೂರು ಜಿಲ್ಲೆಯಲ್ಲಿ 3 ಕೋಟಿ 2 ಲಕ್ಷದ 32 ಸಾವಿರ ನಗದು ಜಪ್ತಿಯಾಗಿದ್ದು, ಈವರೆಗೆ 8 ಕೋಟಿ ರೂ. ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಅಡಿ 40 ಪ್ರಕರಣಗಳು ದಾಖಲಾಗಿವೆ ಎಂದು  ಜಿಲ್ಲಾಧಿಕಾರಿ ಡಾ.ರಾಜೇಂದ್ರ, ಎಸ್​ಪಿ ಸೀಮಾ ಮಾಹಿತಿ ನೀಡಿದ್ದಾರೆ.

ನಾಳೆ (ಮೇ.10) ರಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. 13 ಮತ ಎಣಿಕೆ ಆರಂಭವಾಗಲಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:28 pm, Tue, 9 May 23