Karnataka Assembly Elections 2023 Highlights News Updates:ರಾಜ್ಯದ ಚುನಾವಣ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅದ್ರಲ್ಲೂ ರಾಷ್ಟ್ರೀಯ ನಾಯಕರ ಎಂಟ್ರಿಯಿಂದಾಗಿ ಅಬ್ಬರ ಜೋರಾಗಿದೆ. ಇಂದು ಕೂಡ ಮತಬೇಟೆ ಮುಂದುವರೆದಿದೆ. ಬೆಳಗ್ಗೆ 9.30ಕ್ಕೆ 50 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಆಗಿ ನೇರ ಸಂವಾದ ನಡೆಸಲಿದ್ದಾರೆ. 58,112 ಬೂತ್, 1,680 ಜಿ.ಪಂ ಕ್ಷೇತ್ರ ಮಟ್ಟದಲ್ಲಿ ಸಂವಾದಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಇಂದು ಮಾಜಿ ಸಿಎಂ ಯಡಿಯೂರಪ್ಪ ಪ್ರಚಾರ ನಡೆಸಲಿದ್ದಾರೆ. ಮುದ್ದೇಬಿಹಾಳ ಕ್ಷೇತ್ರದಲ್ಲಿ ಎ.ಎಸ್.ಪಾಟೀಲ್ ನಡಹಳ್ಳಿ ಪರ ಪ್ರಚಾರ ಮಾಡಲಿದ್ದಾರೆ. ತವರು ಕ್ಷೇತ್ರ ಗೆಲ್ಲಲ್ಲು ಸಿಎಂ ಬಸವರಾಜ ಬೊಮ್ಮಾಯಿ ಇಂದು ಮತಬೇಟೆ ಮಾಡಲಿದ್ದಾರೆ. ನಟ ಸುದೀಪ್ ಅವರು ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಪರ ಪ್ರಚಾರ ಮಾಡಲಿದ್ದಾರೆ. ಹಾಗೂ ಮತ್ತೊಂದೆಡೆ ಉಡುಪಿಗೆ ರಾಹುಲ್ ಗಾಂಧಿ ಆಗಮಿಸಲಿದ್ದು ಕಾಪು ತಾಲೂಕಿನ ಮೂಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಇಂದಿನ ಕ್ಷಣ ಕ್ಷಣದ ಮಾಹಿತಿಯನ್ನು ಟಿವಿ9 ಡಿಜಿಟಲ್ ಲೈವ್ನಲ್ಲಿ ಪಡೆಯಿರಿ.
ಬಳ್ಳಾರಿ: ನಗರ ಮತ್ತು ಗ್ರಾಮಾಂತರ ಕ್ಷೇತ್ರದಲ್ಲಿ ನಾಳೆ 5ಕ್ಕೆ ರಾಹುಲ್ ಗಾಂಧಿ ರೋಡ್ ಶೋ ನಡೆಯಲಿದೆ. ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಟಿಬಿ ಸ್ಯಾನಿಟೋರಿಯಂನಿಂದ ಕೌಲ ಬಜಾರ್ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಯಲಿದೆ. ರೋಡ್ ಶೋ ಬಳಿಕ ತೆರೆದ ವಾಹನದಲ್ಲಿ ರಾಹುಲ್ ಗಾಂಧಿ ಭಾಷಣ ಮಾಡುತ್ತಾರೆ ಎಂದು ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಹೇಳಿದರು.
ಗದಗ: ನಾಳೆ ಗದಗ ಜಿಲ್ಲೆಗೆ ಘಟಾನುಘಟಿ ನಾಯಕರ ಮತಯಾಚನೆ ಮಾಡಲಿದ್ದಾರೆ. ಕೇಂದ್ರ ಗೃಹ ಸಚಿವ ಅಮೀತ ಶಾ ಬಿಜೆಪಿ ಪರ ಮಧ್ಯಾಹ್ನ 2 ಗಂಟೆಗೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಬಹಿರಂಗ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆ ಸಮಾವೇಶ ನಡೆಯುವ ಸ್ಥಳವನ್ನು ಗದಗ ಎಸ್ಪಿ ಬಿಎಸ್ ನೇಮಗೌಡ ಭೇಟಿ ನೀಡಿ ಪರಿಶೀಲನೆ ಮಾಡಿದರು. ಭದ್ರತೆ ಕುರಿತು ಅಧಿಕಾರಿಗೆ ಸೂಚಿಸಿದ್ದಾರೆ.
ರಾಯಚೂರು: ಕಾಂಗ್ರೆಸ್ ಮಾತ್ರ ಜಾತ್ಯತೀತ ಪಕ್ಷ, ಬದ್ಧತೆ ಇರುವಂತಹ ಪಕ್ಷ. ಜೆಡಿಎಸ್ ಗೆದ್ದಿತ್ತಿನ ಬಾಲ ಹಿಡಿಯುತ್ತೆ, ಯಾವುದೇ ಸಿದ್ಧಾಂತವಿಲ್ಲ ಎಂದು ರಾಯಚೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳೂರು: 2018ರಲ್ಲಿ ಕರಾವಳಿ ಭಾಗದಲ್ಲಿ ಬಿಜೆಪಿ ಶಾಸಕರನ್ನು ಆಯ್ಕೆ ಮಾಡಿದ್ರಿ. ಬಿಜೆಪಿಗೆ ಮತ ಹಾಕಿದ್ದರಿಂದ ನಿಮ್ಮ ಜೀವನದಲ್ಲಿ ಬದಲಾವಣೆ ಆಯ್ತಾ ಎಂದು ಮಂಗಳೂರಿನ ಕಾಂಗ್ರೆಸ್ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು. ಬಿಜೆಪಿ ಡ್ಯಾಂ ಸಂಪೂರ್ಣ ಒಡೆದು ಹೋಗಿದೆ ಎಂದು ಪುನರುಚ್ಚರಿಸಿದ ಡಿಕೆಶಿ, ಮೊನ್ನೆ 3,000 ಜನ ಕೇಸರಿ ಶಾಲು ಹಾಕಿಕೊಂಡು ಬಂದು ಕಾಂಗ್ರೆಸ್ ಸೇರಿದ್ರು. ನಾವು ಯಾರಿಗೂ ಆಪರೇಷನ್ ಮಾಡಲು ಹೋಗಿಲ್ಲ, ಅವರೇ ಬರುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಕೇಳುವ ಪ್ರಶ್ನೆಗಳಿಗೆ ಬಿಜೆಪಿಯಲ್ಲಿ ಉತ್ತರವಿಲ್ಲ ಎಂದು ಹೇಳಿದರು.
ಮಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸಲಾಗುವುದು ಎಂದು ರಾಹುಲ್ ಗಾಂಧಿ ಗುರುವಾರ ಘೋಷಣೆ ಮಾಡಿದರು. ಮಂಗಳೂರಿನ ಅಡ್ಯಾರು ಬಳಿ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಮಹಿಳೆಯರಿಗಾಗಿ ಮತ್ತೊಂದು ಯೋಜನೆ ಘೋಷಣೆ ಮಾಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ; ರಾಹುಲ್ ಗಾಂಧಿ ಘೋಷಣೆ
ಸಿದ್ದಾಪುರ: ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲೇ ವಿಧಾನಸಭೆ ಸ್ಪೀಕರ್, ಬಿಜೆಪಿ ನಾಯಕ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಮತದಾನ ಬಹಿಷ್ಕಾರದ ಬಿಸಿ ಎದುರಾಗಿದೆ. ಕಾಗೇರಿ ಅವರ ಕ್ಷೇತ್ರದಲ್ಲೇ ಜನರು ಮತ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿ: ಪ್ರಧಾನಿ ಮೋದಿ ವಿರುದ್ಧ ಖರ್ಗೆ ಕೀಳುಮಟ್ಟದ ಭಾಷೆ ಬಳಸಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಸೋನಿಯಾ ಗಾಂಧಿ ಮೋದಿಯನ್ನು ಸಾವಿನ ವ್ಯಾಪಾರಿ ಎಂದಿದ್ದರು. ಸುರ್ಜೇವಾಲ ಮೋದಿ ಸಮಾಧಿ ತೋಡುವ ಬಗ್ಗೆ ಮಾತನಾಡಿದ್ದರು. ರಾಹುಲ್ ಗಾಂಧಿ ಸಹ ಮೋದಿ ಜಾತಿ ಬಗ್ಗೆ ಮಾತನಾಡಿದ್ದಾರೆ. ಖರ್ಗೆಯವರು ಮಾತನಾಡಿ ತಮ್ಮ ಮನಸ್ಸಿನ ಭಾವನೆ ತೋರಿಸಿದ್ದಾರೆ. ಸ್ವಲ್ಪವಾದ್ರೂ ಮಾನ ಮರ್ಯಾದೆ ಇದ್ರೆ ಕೀಳುಮಟ್ಟದ ಟೀಕೆ ಬಿಡಬೇಕು. ನರೇಂದ್ರ ಮೋದಿ ಪ್ರಧಾನಿ ಹುದ್ದೆಗೇರಿದ್ದು ಗಾಂಧಿ ಕುಟುಂಬದಿಂದ ಅಲ್ಲ. ದೇಶದ ಜನ ಮೋದಿಯನ್ನು ಪ್ರಧಾನಿ ಕುರ್ಚಿ ಮೇಲೆ ಕೂರಿಸಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಬೆಂಗಳೂರು: ಪ್ರಧಾನಿ ಮೋದಿ ವಿರುದ್ಧದ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಸದ್ಯ ಕಾಂಗ್ರೆಸ್ ಪಾಳೆಯಕ್ಕೆ ತಳಮಳ ಸೃಷ್ಟಿಸಿದೆ. ಪ್ರಧಾನಿ ಮೋದಿ ವಿಷ ಸರ್ಪ ಇದ್ದಂತೆ ಎಂಬ ಹೇಳಿಕೆ ನೀಡಿ ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕಿದಂತ್ತಾಗಿದೆ. ಹಾಗಾಗಿ ಡ್ಯಾಮೇಜ್ ಕಂಟ್ರೋಲ್ಗೆ ಕೈ ಪಡೆ ಮುಂದಾಗಿದೆ. ಮಲ್ಲಿಕಾರ್ಜುನ ಖರ್ಗೆ ಪರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಬ್ಯಾಟಿಂಗ್ ಮಾಡಿದ್ದಾರೆ.
ಬೆಂಗಳೂರು: ಮೋದಿ ವಿಷದ ಹಾವು ಇದ್ದಂತೆ, ನೆಕ್ಕಿದ್ರೆ ಸತ್ತು ಹೋಗ್ತಾರೆ ಎಂಬ ತಮ್ಮ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚಿಸಿದ್ದಾರೆ. ಹೇಳಿಕೆಯಿಂದ ಯಾರಿಗಾದ್ರೂ ನೋವಾಗಿದ್ರೆ ಕ್ಷಮೆ ಇರಲಿ. ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಿಕೊಂಡು ನೋವಾಗಿದ್ರೆ ವಿಷಾದ. ಬಿಜೆಪಿ-ಕಾಂಗ್ರೆಸ್ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆ. ಆರ್‌ಎಸ್‌ಎಸ್-ಬಿಜೆಪಿ ಸಿದ್ಧಾಂತ ವಿಷಕಾರಿಯಾಗಿದೆ ಎಂದು ಹೇಳಿದರು.
ಬೆಂಗಳೂರು: ವಿಧಾನಸಭಾ ಚುನಾವಣೆಗೆ ಪ್ರಣಾಳಿಕೆ (manifesto) ಯನ್ನು ಬೆಂಗಳೂರಿನ ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಗುರುವಾರ ಪ್ರಣಾಳಿಕೆ ರಿಲೀಸ್ ಮಾಡಿದೆ. ಮಾಜಿ ಸಿಎಂ H.D.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಪರಿಷತ್ ಸದಸ್ಯ ಬಿ.ಎಂ.ಫಾರೂಕ್‌ರಿಂದ JDS ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು.
JDS Manifesto for Karnataka election 2023: ವಿಧಾನಸಭಾ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಿದ ಜೆಡಿಎಸ್
ಬೆಳಗಾವಿ: ಕಾಂಗ್ರೆಸ್ ಪಕ್ಷ ನರೇಂದ್ರ ಮೋದಿಯವರ ಶತಾಯುಷಿ ತಾಯಿ ಬಗ್ಗೆ ಅವಹೇಳನ ಮಾಡಿದ್ದ ಪಕ್ಷ. ನರೇಂದ್ರ ಮೋದಿಯವರ ಸ್ವರ್ಗೀಯ ತಂದೆಯವರ ಅಪಮಾನ ಮಾಡಿದ ನಿರ್ಲಜ್ಜ ಪಕ್ಷ ಕಾಂಗ್ರೆಸ್ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಿಡಿಕಾರಿದ್ದಾರೆ. ನಾನು ಮಲ್ಲಿಕಾರ್ಜುನ ಖರ್ಗೆ ಸಾಹೇಬರಿಗೆ ಹೇಳಬಯಸುತ್ತೇನೆ. ನೀವು ಇಂದು ರಾಜಕೀಯ ಪಕ್ಷವೊಂದರ ಅಧ್ಯಕ್ಷರಾಗಿದ್ದೀರಿ. ಆ ರಾಜಕೀಯ ಪಕ್ಷದ ಇತಿಹಾಸ ಹೇಗಿದೆ ಅಂದರೆ ದಲಿತ ನಾಯಕನಾದರೆ ರಾಹುಲ್ ಗಾಂಧಿ ತಮ್ಮ ಚಪ್ಪಲಿ ಅವರಿಂದ ತೆಗೆಸುತ್ತಾರೆ ಎಂದು ಹರಿಹಾಯ್ದಿದಿದ್ದಾರೆ.
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ನಾನು ಹತ್ತಿರದಿಂದ ಬಲ್ಲೆ. ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಪ್ರಧಾನಿ ಮೋದಿಗೆ ಅಪಾರ ಗೌರವವಿದೆ. ದುರ್ಯೋಧನ, ಚಾಯ್ ವಾಲಾ, ಹುಳ ಎಂಬ ಪದವೆಲ್ಲ ಬಳಸಿದ್ದಾರೆ. ಈಗ ಮಲ್ಲಿಕಾರ್ಜುನ ಖರ್ಗೆ ಕೂಡ ಮೋದಿ ಬಗ್ಗೆ ಟೀಕೆ ಮಾಡಿದ್ದಾರೆ. ಕರ್ನಾಟಕದಲ್ಲಿ ಪ್ರಧಾನಮಂತ್ರಿ ಮೋದಿ ಕಂಡರೆ ಗೌರವ ಇದೆ. ಇದು ಮಲ್ಲಿಕಾರ್ಜುನ ಖರ್ಗೆ ಸಹಿಸಲು ಆಗ್ತಿಲ್ಲ ಎಂದು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಕಿಡಿಕಾರಿದ್ದಾರೆ.
ಬೆಳಗಾವಿ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ನನ್ನ ಸ್ವಂತ ನಿರ್ಧಾರ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಕಟಕೋಳ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯತಿ ಸ್ಥಾನಕ್ಕೆ ರಾಜೀನಾಮೆ ನೀಡಲು ಹಿಂದೆ ಮುಂದೆ ನೋಡುವಾಗ ಬೇರೆಯವರಿಗೆ ಅವಕಾಶ ಸಿಗಲಿ ಅಂತಾ ನಾನು ರಾಜೀನಾಮೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.
ಬೆಂಗಳೂರು: ನಟ ಶಿವರಾಜ್ಕುಮಾರ್ ಪತ್ನಿ ಗೀತಾ ನಾಳೆ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಸೇರ್ಪಡೆ ಆಗಲಿದ್ದಾರೆ. ಗೀತಾ ಅವರು ಮಾಜಿ ಸಿಎಂ ದಿ. ಎಸ್.ಬಂಗಾರಪ್ಪನವರ ಪುತ್ರಿ. ಈ ಹಿಂದೆ ಜೆಡಿಎಸ್ನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು.
Geetha Shivarajkumar: ನಾಳೆ ಕಾಂಗ್ರೆಸ್ ಪಕ್ಷಕ್ಕೆ ಸೇರಲಿರುವ ಗೀತಾ ಶಿವರಾಜ್ಕುಮಾರ್
ಬೆಳಗಾವಿ: ಹೀಗೆ ಮಾತನಾಡಿಯೇ ದೇಶದಲ್ಲಿ ಕಾಂಗ್ರೆಸ್ ಪಕ್ಷ ದಿವಾಳಿಯಾಗಿದೆ ಎಂದು ಖರ್ಗೆ ಹೇಳಿಕೆಯನ್ನು ಬಿಜೆಪಿ ಶಾಸಕ ಯತ್ನಾಳ್ ಖಂಡಿಸಿದ್ದಾರೆ. ಮೋದಿ ಬಗ್ಗೆ ಮಾತಾಡಿ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹ ಆಗಿದ್ದಾರೆ. ಈ ಹಿಂದೆ ಮಣಿಶಂಕರ್ ಅಯ್ಯರ್ ಚಾಯ್ವಾಲಾ ಎಂದು ಟೀಕಿಸಿದ್ರು. ಕಾಂಗ್ರೆಸ್ ನಾಯಕರು ಹೀಗೆ ಮಾತನಾಡಿಯೇ ಕಾಂಗ್ರೆಸ್ ಮುಳುಗಿತು. ಇಂದಿನ ಖರ್ಗೆ ಹೇಳಿಕೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ನ್ನು ಮುಳುಗಿಸುತ್ತೆ. ಪ್ರಧಾನಿ ನರೇಂದ್ರ ಮೋದಿ ಕಂಡರೆ ಕಾಂಗ್ರೆಸ್ನವರಿಗೆ ಭಯ ಎಂದು ಹೇಳಿದರು.
ಗದಗ: ನಾನು ಪ್ರಧಾನಿ ಮೋದಿಗೆ ವಿಷದ ಹಾವು ಎಂದು ಹೇಳಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯುಟರ್ನ್ ಹೊಡೆದಿದ್ದಾರೆ. ಜಿಲ್ಲೆಯ ರೋಣದಲ್ಲಿ ಮಾತನಾಡಿದ ಅವರು, ಭಾರತೀಯ ಜನತಾ ಪಾರ್ಟಿ ಹಾವು ಇದ್ದಂತೆ ಎಂದು ಹೇಳಿದ್ದು. ನೆಕ್ಕಿ ನೋಡುತ್ತೇನೆ ಅಂದ್ರೆ ಸತ್ತು ಹೋಗ್ತಾರೆ ಅಂತಾ ಹೇಳಿದೆ. ವೈಯಕ್ತಿಕವಾಗಿ ಯಾರಿಗೂ ಹೇಳಿಲ್ಲ, ಯಾರ ಹೆಸರು ಹೇಳಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ರಾಮನಗರ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ರಾಮನಗರ ತಾಲೂಕಿನ ಅವ್ವೇರಹಳ್ಳಿ ಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಮಾತನಾಡಿದ ಅವರು, ನನ್ನನ್ನ ತೀರಿಸಬೇಕು ಅಂತ ಬಿಜೆಪಿ-ಕಾಂಗ್ರೆಸ್ ಒಂದಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ನನ್ನನ್ನ ಸೋಲಿಸಲು ಷಡ್ಯಂತ್ರ ನಡೆಸಿದ್ದಾರೆ. ಕ್ಷೇತ್ರದ ಹಲವೆಡೆ ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿಗೆ ಮತ ಹಾಕಿ ಅಂದಿದ್ದಾರೆ. ನನಗೆ ಮತ ಹಾಕಲಿಲ್ಲ ಅಂದ್ರೂ ಪರವಾಗಿಲ್ಲ ಬಿಜೆಪಿಗೆ ಮತಹಾಕಿ ಎಂದು ಕಾಂಗ್ರೆಸ್ ಅಭ್ಯರ್ಥಿ ಹೇಳ್ತಿದ್ದಾರೆ. ಕೆಲವು ಕಡೆ ಬಿಜೆಪಿಯವ್ರೂ ಕೂಡಾ ಕಾಂಗ್ರೆಸ್ ಗೆ ಮತಹಾಕಿ ಅಂತ ಪ್ರಚಾರ ಮಾಡ್ತಿದ್ದಾರೆ. ನಮ್ಮ ಮತಗಳನ್ನ ವಿಭಜನೆ ಮಾಡಲು ಕಾಂಗ್ರೆಸ್-ಬಿಜೆಪಿ ಈ ರೀತಿ ಮಾಡ್ತಿದೆ. ನಾನು ಎಲ್ಲವನ್ನೂ ಬಹಿರಂಗವಾಗಿ ಚರ್ಚೆ ಮಾಡಲ್ಲ. ಇದಕ್ಕೆ ಕ್ಷೇತ್ರದ ಮತದಾರರೇ ಉತ್ತರ ಕೊಡ್ತಾರೆ ಎಂದರು.
ಈ ಚುಣಾವಣೆಯಲ್ಲಿ 130-135 ಸ್ಥಾನ ಗೆಲ್ಲುವುದೇ ನಮ್ಮ ಗುರಿ ಎಂದು ಬೆಳಗಾವಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 130ರಿಂದ 135 ಸ್ಥಾನ ಗೆದ್ದು ಸರ್ಕಾರ ರಚನೆ ಮಾಡುತ್ತೇವೆ. ನಮ್ಮ ಕಾರ್ಯಕರ್ತರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ ಎಂದರು. ಇದೇ ವೇಳೆ ‘ಕೆಜೆಪಿ ಕಟ್ಟಿದ BSYಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’ ಎಂದ ಲಕ್ಷ್ಮಣ ಸವದಿ ಹೇಳಿಕೆಗೆ ಬಿ.ಎಸ್.ಯಡಿಯೂರಪ್ಪ ಟಾಂಗ್ ಕೊಟ್ಟಿದ್ದಾರೆ. ನಾನು ಕೆಜೆಪಿ ಕಟ್ಟಿದ್ದೆ, ಆದರೆ ಕಾಂಗ್ರೆಸ್ ಪಕ್ಷಕ್ಕೆ ಹೋಗಲಿಲ್ಲ. ನಾನು ಅಪರಾಧ ಮಾಡಿದ್ದೆ ಅಂತಾ ಜನರ ಕ್ಷಮೆ ಕೇಳಿದ್ದೇನೆ ಎಂದರು.
ಸಿರುಗುಪ್ಪ ಕ್ಷೇತ್ರದಲ್ಲಿ ನಾಗರಾಜ್ ಗೆಲ್ಲಿಸುವ ಹೊಣೆ ನಿಮ್ಮದು ಎಂದು ಕಾಂಗ್ರೆಸ್ ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತದಾರರಿಗೆ ಹೊಣೆ ಹೊರಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿ ಕಾಂಗ್ರೆಸ್ ಸಮಾವೇಶ ನಡೆಯುತ್ತಿದ್ದು ಕಾಂಗ್ರೆಸ್ ಅಭ್ಯರ್ಥಿ ನಾಗರಾಜ್ಗೆ ಮತ ಹಾಕವಂತೆ ಮನವಿ ಮಾಡಿದ್ದಾರೆ. ಇದೇ ವೇಳೆ 2013ರಲ್ಲಿ ನಾಗರಾಜ್ ಶಾಸಕರಾಗಿದ್ದಾಗ ಒಳ್ಳೇ ಕೆಲಸ ಮಾಡಿದ್ದಾರೆ. ನಾನು ಸಿಎಂ ಆಗಿದ್ದಾಗ ಈ ಕ್ಷೇತ್ರಕ್ಕೆ ಬಹಳ ಅನುದಾನ ನೀಡಿದ್ದೇನೆ ಎಂದರು.
ಬಿಜೆಪಿಯಲ್ಲಿ ಬಹುತೇಕ ಹೊಸ ಮುಖಗಳಿಗೆ ಅವಕಾಶ ನೀಡಿದ್ದೇವೆ. ಪರಿಸ್ಥಿತಿ ಹೇಗಿದೆ ಅಂತಾ ಸಿದ್ದರಾಮಯ್ಯ ನೋಡಿದ್ರೆ ತಿಳಿಯುತ್ತೆ. ಕ್ಷೇತ್ರವಿಲ್ಲದೆ ಹುಡುಕಾಟ ಮಾಡಿ ಕೊನೆಗೆ ವರುಣಗೆ ಬಂದಿದ್ದಾರೆ. ಈ ಬಾರಿಯೂ ಸಿದ್ದರಾಮಯ್ಯ ಎರಡು ಕಡೆ ಸ್ಪರ್ಧಿಸಲು ಯತ್ನಿಸಿದ್ದರು. ಆದರೆ ಎರಡು ಕಡೆ ಸ್ಪರ್ಧಿಸಲು ಹೈಕಮಾಂಡ್ ಅವಕಾಶ ಕೊಟ್ಟಿಲ್ಲ. ಬಸವರಾಜ ಬೊಮ್ಮಾಯಿ ಅಹಂಕಾರ ಇಲ್ಲದ ಸರಳವಾದ ಸಿಎಂ. ಎಲ್ಲವನ್ನೂ ಶಾಂತಚಿತ್ತರಾಗಿ ಚೆನ್ನಾಗಿ ನಿಭಾಯಿಸ್ತಾರೆ ಎಂದು ಮೈಸೂರಿನಲ್ಲಿ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಶೆಟ್ಟರ್ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ. ಜಗದೀಶ್ ಶೆಟ್ಟರ್ಗೆ ಜಾತಿ ನೋಡಿ ಹುಬ್ಬಳ್ಳಿ ಜನ ಮತ ಹಾಕಿಲ್ಲ. ಕಾಂಗ್ರೆಸ್ಗೆ ಹೋದ ಮೇಲೆ ಜಾತಿ ನೆನಪಾಗ್ತಿದೆ ಅಂತಾ ಟಾಂಗ್ ಕೊಟ್ಟಿದ್ದಾರೆ. ಬಿಎಸ್ವೈ ಯಾವತ್ತೂ ಒಂದು ಸಮುದಾಯ ಪರ ಮಾತಾಡಿಲ್ಲ. ಎಲ್ಲಾ ವರ್ಗದ ಜನರ ಒಳಿತಿಗಾಗಿ ಬಿಎಸ್ವೈ ಕೆಲಸ ಮಾಡಿದ್ದಾರೆ. ಬಿಜೆಪಿ ತೊರೆದ ಮೇಲೆ ಶೆಟ್ಟರ್ಗೆ ಜಾತಿ ಮೇಲೆ ಪ್ರೀತಿ ಬಂದಿದೆ ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಗ್ಗೆ ಕೇಂದ್ರ ನಾಯಕರ ಟೀಕೆ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್ ವಾಗ್ದಾಳೀ ನಡೆಸಿದ್ದಾರೆ. ಹತಾಶರಾಗಿ ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಟೀಕೆ ಮಾಡುತ್ತಿದ್ದಾರೆ. ಹೇಗಿದ್ದರೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲ್ಲ. ಪ್ರಧಾನಿ ಮೋದಿ, ಅಮಿತ್ ಶಾ ಆತಂಕಪಡುವ ಅಗತ್ಯವಿಲ್ಲ. ನಮ್ಮ ಗ್ಯಾರಂಟಿಗಳ ಬಗ್ಗೆ ಆತಂಕಪಡುವುದು ಬೇಡ. ಬಿಜೆಪಿಯವರು ಹಿಂದೆ ಕೊಟ್ಟಿದ್ದ ಯಾವುದೇ ಭರವಸೆ ಈಡೇರಿಸಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಗ್ಯಾರಂಟಿಗಳನ್ನು ಈಡೇರಿಸುತ್ತೆ ಎಂದರು.
ಶಿಗ್ಗಾಂವಿ ಕ್ಷೇತ್ರದ ಕುನ್ನುರ ಗ್ರಾಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ರೋಡ್ ಶೋ ನಡೆಸಿದ್ದಾರೆ. ಅಭಿವೃದ್ಧಿ ನೋಡಿ ಮತ ಹಾಕಿ. ಕಳೆದ ಭಾರಿಕ್ಕಿಂತ ಹೆಚ್ಚು ಮತಗಳು ಸಿಗುತ್ತೆವೆ ಈ ಭಾರಿ. 25 ಸಾವಿರ ಅಂತರಗಳಿಂದ ಗೆಲ್ಲಿಸಬೇಕು. ದಾಖಲೆ ಮಟ್ಟದಿಂದ ಆಯ್ಕೆಯಾಗುತ್ತೇನೆ. ನಿಮ್ಮ ಸೇವೆ ಮಾಡುತ್ತೇನೆ. ನಾನು ನಾಡಿಗೆ ಸಿಎಂ ಅಗಿದ್ದರು, ನಾನು ನಿಮ್ಮ ಬಸವರಾಜ್ ಬೊಮ್ಮಾಯಿ. ನಿವೇಲ್ಲರೂ ಅಭಿಮಾನಪಡುವಂತೆ ಅಧಿಕಾರ ಮಾಡಿದ್ದೇನೆ. ಎಲ್ಲಾ ವರ್ಗದ ಜನರು ಪ್ರೀತಿಯನ್ನ ತೋರಿಸಿದ್ದಾರೆ. ಬಿಜೆಪಿ ಸುನಾಮಿ ಎದ್ದಿದೆ. 29 ಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಮೋದಿ ಬಂದ ನಂತರ 150 ಸೀಟು ಗೆಲ್ಲುವ ವಾತಾವರಣ ನಿರ್ಮಾಣವಾಗುತ್ತೆ. 13 ಕ್ಕೆ ವಿಜಯೋತ್ಸವ ಮಾಡೋಣ ಎಂದು ಪ್ರಚಾರದ ವೇಳೆ ಹೇಳಿದ್ರು.
ಕೋಲಾರ ನಗರದ ಕಾಂಗ್ರೆಸ್ ಮುಖಂಡರು ಜೆಡಿಎಸ್ಗೆ ಸೇರಿದ್ದಾರೆ. ಮಾಜಿ ನಗರಸಭೆ ಅಧ್ಯಕ್ಷ ಮುಬಾರಕ್, ಬೆಂಬಲಿಗರು ಬೆಂಗಳೂರಿನಲ್ಲಿ ಹೆಚ್ಡಿಕೆ ಸಮ್ಮುಖದಲ್ಲಿ ಜೆಡಿಎಸ್ ಸೇರಿದ್ದಾರೆ. ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಆಕಾಂಕ್ಷಿಯಾಗಿದ್ದ ಮುಬಾರಕ್ ಹುದ್ದೆ ಕೈತಪ್ಪಿದ ಹಿನ್ನೆಲೆ ಜೆಡಿಎಸ್ ಸೇರಿದ್ದಾರೆ.
ಸವದಿ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆಂದು BSY ಹೇಳಿಕೆ ವಿಚಾರಕ್ಕೆ ಈ ಬಗ್ಗೆ ಹೇಳಲು ಬಿ.ಎಸ್.ಯಡಿಯೂರಪ್ಪಗೆ ನೈತಿಕ ಹಕ್ಕಿಲ್ಲ ಎಂದು ಸವದಿ ತಿರುಗೇಟು ಕೊಟ್ಟಿದ್ದಾರೆ. ಆ ಪಕ್ಷ ಬಿಎಸ್ವೈರನ್ನು ಸಿಎಂ, ವಿಪಕ್ಷ ನಾಯಕರನ್ನಾಗಿ ಮಾಡಿತ್ತು. ಬಿ.ಎಸ್.ಯಡಿಯೂರಪ್ಪ ಅಧಿಕಾರದ ಆಸೆಗಾಗಿ ಕೆಜೆಪಿ ಸ್ಥಾಪಿಸಿದ್ದರು. ಸೋಲಿಸುವುದು ಗೆಲ್ಲಿಸುವುದು ನನ್ನ ಕ್ಷೇತ್ರದ ಜನರ ಕೈಯಲ್ಲಿದೆ. ಕಾಂಗ್ರೆಸ್ಗೆ ಹೊಸದಾಗಿ ಸಾಕಷ್ಟು ಜನರು ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಹೋದವರಿಂದ ಹಾನಿಯಾಗಲ್ಲ.‘ಗಂಡಸಾಗಿದ್ರೆ ಲಕ್ಷ್ಮಣ ಸವದಿ ಡಿಸಿಎಂ ಸ್ಥಾನ ಬೇಡ ಎನ್ನಬೇಕಿತ್ತು’ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆಗೆ ಕೊಟ್ಟಿದ್ದಾರೆ. ಈ ಬಗ್ಗೆ ಚುನಾವಣೆ ಬಳಿಕ ನಾನು ಉತ್ತರ ಕೊಡ್ತೇನೆ. ನನ್ನ ಕ್ಷೇತ್ರದ ಮತದಾರರು ಕೂಡ ತಕ್ಕ ಉತ್ತರ ಕೊಡುತ್ತಾರೆ ಎಂದು ಅಥಣಿಯಲ್ಲಿ ಲಕ್ಷ್ಮಣ ಸವದಿ ಆಕ್ರೋಶ ಹೊರ ಹಾಕಿದರು.
ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸುದ್ದಿಗೋಷ್ಠಿ ನಡೆಸಿದ್ದು ನಾಳೆಯಿಂದ ಮೇ 8ರವರೆಗೆ 62 ಕಡೆ ತಾತ್ಕಾಲಿಕ ಕಾರ್ಯಕ್ರಮ ನಿಗದಿಯಾಗಿದೆ. ವಾರದಲ್ಲಿ ಒಂದು ದಿನ ಆರೋಗ್ಯದ ಕಾರಣ ವಿಶ್ರಾಂತಿಗೆ ಸೂಚಿಸಿದ್ದಾರೆ. ಬೆಂಗಳೂರಿಗೆ ನನ್ನ ಕೊಡುಗೆ ಸಾಕಷ್ಟು ಇದೆ. ದಾಬಸ್ಪೇಟೆ, ಹೊಸಕೋಟೆಯಲ್ಲಿ ರಿಂಗ್ ರೋಡ್ ಮಾಡಿದ್ದೇನೆ. 7 ಗ್ರಾ.ಪಂ ಜನರಿಗೆ ಕುಡಿಯುವ ನೀರು, ಸರಿಯಾದ ರಸ್ತೆ ಇರಲಿಲ್ಲ. ಬಿಬಿಎಂಪಿಗೆ ಸೇರಿಸಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಹೆಚ್.ಡಿ.ದೇವೇಗೌಡ ಹೇಳಿದರು.
ಅಥಣಿ ಕ್ಷೇತ್ರದಲ್ಲಿ ಲಕ್ಷ್ಮಣ ಸವದಿ ಸೋಲಿಸಲು ರಮೇಶ್ ರಣತಂತ್ರ ಹೆಣೆದಿದ್ದಾರೆ. ಒಂದು ಕಡೆ ಯಡಿಯೂರಪ್ಪ ಜಾತಿ ಅಸ್ತ್ರ ಪ್ರಯೋಗಿಸಿ ಮತಬೇಟೆಗೆ ಇಳಿದ್ರೆ ಮತ್ತೊಂದೆಡೆ ರಮೇಶ ಜಾರಕಿಹೊಳಿ ಕಾಂಗ್ರೆಸ್ ಮುಖಂಡರ ಆಪರೇಷನ್‌ಗಿಳಿದಿದ್ದಾರೆ. ಚುನಾವಣಾ ಪ್ರಚಾರದ ಜೊತೆಗೆ ರಾತ್ರಿ ಕಾರ್ಯಾಚರಣೆಗಿಳಿದಿದ್ದಾರೆ. ಲಕ್ಷ್ಮಣ ಸವದಿ ಆಪ್ತರು, ‘ಕೈ’ ಮುಖಂಡರನ್ನು ಭೇಟಿಯಾಗಿದ್ದಾರೆ. ಮನೆ ಮನೆಗೆ ಭೇಟಿ ನೀಡಿ ಪಕ್ಷಕ್ಕೆ ಕರೆತರುತ್ತಿದ್ದಾರೆ. ಕಳೆದೊಂದು ವಾರದಿಂದ ನಿರಂತರ ಕಾರ್ಯಾಚರಣೆಗಿಳಿದಿದ್ದು ಧರೆಪ್ಪ ಠಕ್ಕನ್ನವರ್, ನಾನಾಸಾಬ ಅವತಾಡೆ ಹಾಗೂ ತಮ್ಮಣ್ಣ ಪೂಜಾರಿ ಮೂವರನ್ನು ಪಕ್ಷಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಂಗ್ರೆಸ್ ಅಭಿಮಾನಿ ಮಂಜುನಾಥ ಎಂಬುವವರು, ಜಗದೀಶ್ ಶೆಟ್ಟರ್ ಗೆಲ್ತಾರೆ ಎಂದು ರಕ್ತದಲ್ಲಿ ಪತ್ರ ಬರೆದಿದ್ದಾರೆ. ಶೆಟ್ಟರ್ ಗೆಲ್ತಾರೆ,ಕಾಂಗ್ರೆಸ್ ಅಧಿಕಾರಕ್ಕೆ ಬರತ್ತೆ ಎಂದು ರಕ್ತದಲ್ಲಿ ಬರೆದು ಶೆಟ್ಟರ್ ಗೆ ಶುಭ ಹಾರೈಸಿದ್ದಾರೆ.
ಹಣ ಪಡೆದು ಮತದಾರರ ಮಾಹಿತಿ ಮಾರಾಟ ಮಾಡಲಾಗುತ್ತಿರುವ ಆರೋಪ ಕೇಳಿ ಬಂದಿದೆ. ಸದ್ಯ ಕಂಪನಿಯ ಹೆಸರನ್ನು ಬಹಿರಂಗ ಪಡೆಸದೆ ಪೊಲೀಸರು ಗೌಪತ್ಯೆ ಕಾಪಾಡಿದ್ದಾರೆ. ಚಿಲುಮೆ ಸಂಸ್ಥೆಯ ರೀತಿಯಲ್ಲಿ ಈ ಕಂಪನಿಯು ಸಹ ಕೆಲಸ ಮಾಡುತ್ತಿದ್ದು ಮತದಾರರ ಸಂಪೂರ್ಣ ವಿವರವನ್ನು ಸಂಸ್ಥೆ ಸಂಗ್ರಹಿಸುತ್ತಿತ್ತು. ಪ್ರತ್ಯೇಕ ಆ್ಯಪ್ ಬಳಸಿ ಮತದಾರರ ಮಾಹಿತಿ, ಹೆಸರು, ವಿಳಾಸ, ಜಾತಿ, ಮತದಾರರು ಕಳೆದ ಬಾರಿ ಯಾವ ಪಕ್ಷಕ್ಕೆ ಬೆಂಬಲಿಸಿದ್ದರು, ಈ ಬಾರಿ ಯಾವ ಪಕ್ಷಕ್ಕೆ ಬೆಂಬಲಿಸಲಿದ್ದಾರೆ ಎಂಬಾ ಮಾಹಿತಿ ಇವರ ಬಳಿ ಇತ್ತು. ಕಂಪನಿ ತನ್ನ ವೆಬ್ ಸೈಟ್‌ನಲ್ಲಿ ಮತದಾರರ ಮೊಬೈಲ್ ಸಂಖ್ಯೆ ಹಾಕುತ್ತಿತ್ತು. 25 ಸಾವಿರ ನೀಡಿದರೆ ಲಾಗ್ ಇನ್ ಐಡಿ ನೀಡುತ್ತಿತ್ತು. ಸುಮಾರು 6 ಲಕ್ಷ ದಷ್ಟು ಮತದಾರರ ಮಾಹಿತಿ ಈ ಸಂಸ್ಥೆಯ ಬಳಿ ಇತ್ತು ಎನ್ನಲಾಗಿದೆ.
ಹು-ಧಾ ಪಾಲಿಕೆ ಮಾಜಿ ಮೇಯರ್ ಪ್ರಕಾಶ್ ಕ್ಯಾರಕಟ್ಟಿ BJP ಸೇರ್ಪಡೆಯಾಗಿದ್ದಾರೆ. ಹುಬ್ಬಳ್ಳಿಯ ಶ್ರೀನಿವಾಸ ಗಾರ್ಡನ್ನಲ್ಲಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ವೈ ಸಮ್ಮುಖದಲ್ಲಿ ಪ್ರಕಾಶ್ ಕ್ಯಾರಕಟ್ಟಿ BJP ಸೇರಿದರು. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಗೋವಿಂದ ಕಾರಜೋಳ ಉಪಸ್ಥಿತರಿದ್ದರು.
ಕಾಂಗ್ರೆಸ್ ಪಕ್ಷದ ವಾರಂಟಿಯೇ ಎಕ್ಸ್‌ಪೈರ್ ಆಗಿದೆ. ಈಗ ಗ್ಯಾರಂಟಿ ಕೊಡುವುದರ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಿದೆ. ಕಾಂಗ್ರೆಸ್ನವರ ಸುಳ್ಳು ಗ್ಯಾರಂಟಿಗೆ ಯಾರೂ ಬಲಿಯಾಗಬೇಡಿ ಎಂದು ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದರು.
ಕರ್ನಾಟಕದ ಯುವಪೀಳಿಗೆಯ ಭವಿಷ್ಯದ ಬಗ್ಗೆ ಯೋಚಿಸಬೇಕಿದೆ. ಅದಕ್ಕಾಗಿಯೇ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಬಿಜೆಪಿಗೆ ಯಾವುದೇ ಶಾರ್ಟ್ ಕಟ್ ಇಲ್ಲ. ದೇಶದ ಅಭಿವೃದ್ಧಿಗಾಗಿ ಬಿಜೆಪಿ ಸದಾ ಶ್ರಮಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಕೊವಿಡ್ ಸಂದರ್ಭದಲ್ಲಿ ಬಡವರಿಗೆ ಉಚಿತ ಅಕ್ಕಿ ವಿತರಣೆ ನೀಡಿದ್ದೇವೆ. ಬಿಜೆಪಿಗೆ ಬಡವರ ಬಗ್ಗೆ ಅಪಾರ ಕಾಳಜಿ ಇದೆ, ಅವರ ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳಲಾಗಿದೆ. ದೇಶದಲ್ಲಿ 25 ವರ್ಷಗಳ ಹಿಂದೆ ವೈದ್ಯರ ಸಂಖ್ಯೆ ಬಹಳ ಕಡಿಮೆ ಇತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ವೈದ್ಯರ ಸಂಖ್ಯೆ ಬಹಳಷ್ಟು ಹೆಚ್ಚಿದೆ ಎಂದರು.
ಕರ್ನಾಟಕ ಹನುಮನ ಜನ್ಮಸ್ಥಳ ಹಾಗೂ ಸಾಂಸ್ಕೃತಿಕ ರಾಜ್ಯವಾಗಿದೆ. ಆಧ್ಯಾತ್ಮಿಕತೆಯಲ್ಲಿ ಸಾಕಷ್ಟು ಸಾಧನೆ ಮಾಡಿದೆ. ಆಧಾತ್ಮಿಕತೆ ಸಮಾಜ ಒಗ್ಗೂಡಿಸಿಕೊಂಡು ಹೋಗಲು ಪ್ರಮುಖ ಪಾತ್ರ ವಹಿಸಿದೆ ಎಂದು ತಮ್ಮ ಭಾಷಣದಲ್ಲಿ ಸಂತ ಕನಕದಾಸರು, ಶಿವ ಶರಣರ ಬಗ್ಗೆ ಮೋದಿ ಉಲ್ಲೇಖ ಮಾಡಿದರು. ಕನ್ನಡ ಭಾಷೆ ಸಮೃದ್ಧ ಸಾಹಿತ್ಯವನ್ನು ಹೊಂದಿದೆ. ಕರ್ನಾಟಕದ ಜನರನ್ನು ದಶಕದಿಂದಲೂ ನಾನು ನೋಡುತ್ತಿದ್ದೇನೆ. ರಾಜಕೀಯಕ್ಕೆ ಬರುವ ಮೊದಲು ಹಲವು ಬಾರಿ ಕರ್ನಾಟಕಕ್ಕೆ ಬಂದಿದ್ದೇನೆ. ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಬದಲಾವಣೆ ಸಾಧ್ಯ ಎಂದರು.
ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಇರುವ ರಾಜ್ಯಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಬಡವರಿಗೆ ಹಲವು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಕಾಂಗ್ರೆಸ್ ಸರ್ಕಾರ ಇರುವ ರಾಜ್ಯಗಳಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಪ್ರಜಾಪ್ರಭುತ್ವದಲ್ಲಿ ಮತದಾರರ ತೀರ್ಪು ನಾವೆಲ್ಲರೂ ಸ್ವಾಗತಿಸಬೇಕು. ಆದರೆ ಅಭಿವೃದ್ಧಿಗಾಗಿ ಡಬಲ್ ಇಂಜಿನ್ ಸರ್ಕಾರದ ಅಗತ್ಯವಿದೆ. ಬೂತ್ ಮಟ್ಟದಲ್ಲಿ ಬಿಜೆಪಿ ಬಲಪಡಿಸಬೇಕು. 2014ರ ಮೊದಲು 1 ಮನೆ ನಿರ್ಮಿಸಲು 300 ದಿನ ತೆಗೆದುಕೊಳ್ತಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 100 ದಿನಗಳಲ್ಲಿ ಮನೆಗಳ ನಿರ್ಮಾಣವಾಗುತ್ತಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಬಡವರಿಗೆ ಸುಸಜ್ಜಿತವಾದ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಿದ್ದೇವೆ ಎಂದರು. ಕಾಂಗ್ರೆಸ್ 70 ವರ್ಷಗಳಲ್ಲಿ ಕೇವಲ 7 ಏಮ್ಸ್ ಆಸ್ಪತ್ರೆ ನಿರ್ಮಿಸಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 3 ಪಟ್ಟು ಹೆಚ್ಚಳವಾಗಿದೆ. ಕೇವಲ 7 ವರ್ಷಗಳಲ್ಲಿ 3 ಪಟ್ಟು ಏಮ್ಸ್ ಆಸ್ಪತ್ರೆಗಳ ನಿರ್ಮಾಣ ಮಾಡಲಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿ ಸೋಮಣ್ಣ ವಿರುದ್ಧ ಕೈ ನಾಯಕರು ದೂರು ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ದೂರು ನೀಡಿದ್ದಾರೆ. ವಿ.ಸೋಮಣ್ಣ ಚಾಮರಾಜನಗರ ಜೆಡಿಎಸ್ ಅಭ್ಯರ್ಥಿಗೆ ಆಮಿಷವೊಡ್ಡಿದ್ದಾರೆ. ಚುನಾವಣೆ ಪ್ರಚಾರದ ವೇಳೆ ಅಮಿತ್ ಶಾ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗಲಾಟೆಗಳು, ಘರ್ಷಣೆಗಳು, ಗಲಭೆಗಳು ಹೆಚ್ಚಾಗುತ್ತವೆ ಎಂಬ ಹೇಳಿಕೆ ನೀಡಿದ್ದಾರೆ. ಹೀಗಾಗಿ ವಿ. ಸೊಮಣ್ಣ, ಅಮಿತ್ ಶಾ ವಿರುದ್ಧ ದೂರು ನೀಡಲಾಗಿದೆ.
ಮೈಸೂರು ಜಿಲ್ಲೆ ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಿಎಂ ಸಿದ್ದರಾಮಯ್ಯ ಪರ ಸೊಸೆ ಸ್ಮಿತಾ ರಾಕೇಶ್ ಪ್ರಚಾರ ನಡೆಸಿದ್ದಾರೆ. ಮನೆ ಮನೆಗೆ ತೆರಳಿ ಮತಯಾಚಿಸಿದ್ದಾರೆ. ವರುಣ ಕ್ಷೇತ್ರದ ತಾಯೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಮತಯಾಚನೆ ಮಾಡಿದ್ದಾರೆ.
ಬೆಳ್ಳಂಬೆಳಿಗ್ಗೆ ಬಿಜೆಪಿ ಶಾಸಕ ಪ್ರೀತಂಗೌಡ ಪ್ರಚಾರ ಆರಂಭಿಸಿದ್ದಾರೆ. ನಗರದ ಬೀರನಹಳ್ಳಿ, ಹೊಯ್ಸಳನಗರ, ಕೆ.ಆರ್.ಪುರಂ ಪ್ರದೇಶದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ನೂರಾರು ಜನರ ಜೊತೆಗೆ ವಾರ್ಡ್ ವಾರು ಪ್ರಚಾರ ನಡೆಸಿದ್ದಾರೆ. ಬೆಳಿಗ್ಗೆ ವೇಳೆ ನಗರ, ಸಂಜೆ ವೇಳೆ ಗ್ರಾಮಾಂತರ ಭಾಗದಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ.
ವಿಜಯಪುರ: ಚುನಾವಣೆ ಪ್ರಚಾರಕ್ಕೆ ಹೋಗಿದ್ದ ದೇವರಹಿಪ್ಪರಗಿ ಕ್ಷೇತ್ರದ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ್ಗೆ ಸಾಸನೂರ ಗ್ರಾಮಸ್ಥರು ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಐದು ವರ್ಷದ ಹಿಂದೆ ವೋಟ್ ಹಾಕಿದ್ದೇವೆ. ನಂತರ ಒಮ್ಮೆಯೂ ಶಾಸಕರ ಮುಖ ನೋಡಿಲ್ಲ, ಒಮ್ಮೆಯೂ ಗ್ರಾಮಕ್ಕೆ ಬಂದಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಕಾರ್ಯಕರ್ತರು, ಗ್ರಾಮಸ್ಥರ ಮಧ್ಯೆ ವಾಗ್ವಾದ ನಡೆದಿದೆ.
ಗದಗ ಜಿಲ್ಲೆಯಲ್ಲಿ ಇಂದು ಘಟಾನುಘಟಿ ನಾಯಕರ ಮತಬೇಟೆ. ರೋಣ ಕ್ಷೇತ್ರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಭ್ಯರ್ಥಿ ಜಿ ಎಸ್ ಪಾಟೀಲ್ ಪರ ಪ್ರಚಾರ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆ ಹೆಲಿಕಾಪ್ಟರ್ ಮೂಲಕ ರೋಣ ಪಟ್ಟಣಕ್ಕೆ ಆಗಮಿಸಲಿದ್ದಾರೆ.
Published On - 9:03 am, Thu, 27 April 23