AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ; ರಾಹುಲ್ ಗಾಂಧಿ ಘೋಷಣೆ

ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸಲಾಗುವುದು ಎಂದು ರಾಹುಲ್ ಗಾಂಧಿ ಘೋಷಣೆ ಮಾಡಿದರು.

Ganapathi Sharma
|

Updated on:Apr 27, 2023 | 8:35 PM

Share

ಮಂಗಳೂರು:  ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಗೆದ್ದು ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸಲಾಗುವುದು ಎಂದು ರಾಹುಲ್ ಗಾಂಧಿ (Rahul Gandhi) ಗುರುವಾರ ಘೋಷಣೆ ಮಾಡಿದರು. ಮಂಗಳೂರಿನ ಅಡ್ಯಾರು ಬಳಿ ಕಾಂಗ್ರೆಸ್ ಪಕ್ಷದ ಬೃಹತ್‌ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಮಹಿಳೆಯರಿಗಾಗಿ ಮತ್ತೊಂದು ಯೋಜನೆ ಘೋಷಣೆ ಮಾಡಿದರು. ಇದು ಕಾಂಗ್ರೆಸ್ ಪಕ್ಷ ಚುನಾವಣೆ ಹಿನ್ನೆಲೆಯಲ್ಲಿ ಘೋಷಿಸಿದ ಐದನೇ ಗ್ಯಾರಂಟಿ ಆಗಿದೆ. ಪಕ್ಷ ಅಧಿಕಾರಕ್ಕೆ ಬಂದ ಮೊದಲ ದಿನವೇ ಐದೂ ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಅವರು ವಾಗ್ದಾನ ಮಾಡಿದರು.

ಕಾಂಗ್ರೆಸ್ ಭರವಸೆ ಈಡೇರಿಸುವುದಿಲ್ಲವೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ, ನಾವು ಭರವಸೆ ಈಡೇರಿಸುತ್ತೇವೆ, ಇದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಭರವಸೆ ನಾವು ಈಡೇರಿಸುತ್ತೇವೆ. ಪ್ರಧಾನಿ ಮೋದಿ ಅವರೇ ಭರವಸೆಗಳನ್ನು ಈಡೇರಿಸಿಲ್ಲ. ಬಡವರು, ರೈತರು, ಯುವಕರಿಗೆ ನೀಡಿದ ಭರವಸೆಗಳನ್ನು ಅವರು ಈಡೇರಿಸಿಲ್ಲ. ಆದರೆ, ಉದ್ಯಮಿ ಅದಾನಿಗೆ ನೀಡಿದ ಎಲ್ಲಾ ಭರವಸೆ ಈಡೇರಿಸಿದ್ದಾರೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

ಇದಕ್ಕೂ ಮುನ್ನ ಉಡುಪಿಯ ಕಾಪು ಉಚ್ಚಿಲದಲ್ಲಿ ಅವರು ಮೀನುಗಾರರೊಂದಿಗೆ ಸಂವಾದ ನಡೆಸಿದರು. ಇದೇ ವೇಳೆ ಅವರಿಗೆ ಮಹಿಳೆಯೊಬ್ಬರು ಆಂಜಲ್​ ಮೀನನ್ನು ಉಡುಗೊರೆಯಾಗಿ ನೀಡಿದರು.

ಕಾಂಗ್ರೆಸ್​ ಗ್ಯಾರಂಟಿಗಳು ಯಾವುವೆಲ್ಲ?

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈಗಾಗಲೇ ನಾಲ್ಕು ಭರವಸೆಗಳನ್ನು (ಗ್ಯಾರಂಟಿ) ಘೋಷಿಸಿದೆ. ಗೃಹಲಕ್ಷ್ಮೀ ಯೋಜನೆ ಮೂಲಕ ಬಡ ಕುಟುಂಬಗಳ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂ, ಬಡವರಿಗೆ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್, 10 ಕೆಜಿ ಅಕ್ಕಿ ಹಾಗೂ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 3,000 ರೂ. ನೀಡುವುದಾಗಿ ಕಾಂಗ್ರೆಸ್ ಈಗಾಗಲೇ ಘೋಷಿಸಿದೆ. 34 ಸಾವಿರಕ್ಕೂ ಹೆಚ್ಚು ಮಂದಿ ತನ್ನ ಗ್ಯಾರಂಟಿ ಯೋಜನೆಗೆ ಈಗಾಗಳೇ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದೂ ಗ್ಯಾರಂಟಿ ನೋಂದಣಿಗಾಗಿ ಆರಂಭಿಸಿರುವ ಪ್ರಜಾಧ್ವನಿ ಡಾಟ್​ ಕಾಂ ನಲ್ಲಿ ಕಾಂಗ್ರೆಸ್​ ಉಲ್ಲೇಖಿಸಿದೆ.

ಇದನ್ನೂ ಓದಿ: Belagavi: ಕಾಂಗ್ರೆಸ್ ನಾಲ್ಕನೇ ಗ್ಯಾರಂಟಿ 3,000 ರೂ. ನಿರುದ್ಯೋಗ ಭತ್ಯೆ; ರಾಹುಲ್ ಗಾಂಧಿ ಘೋಷಣೆ

ಆಜಾನ್‌ ಕೂಗಿದಾಗ ಭಾಷಣ ನಿಲ್ಲಿಸಿದ ರಾಹುಲ್

ಸಮಾವೇಶವನ್ನು ಉದ್ದೇಶಿಸಿ ರಾಹುಲ್ ಗಾಂಧಿ ಭಾಷಣ ಮಾಡುತ್ತಿದ್ದಾಗ ಆಜಾನ್‌ ಕೂಗುವುದು ಕೇಳಿಬಂತು. ಕೂಡಲೇ ಕೆಲ ಕಾಲ ಭಾಷಣ ನಿಲ್ಲಿಸಿದ ಅವರು, ಆಜಾನ್‌ ಮುಗಿದ ಬಳಿಕ ಭಾಷಣ ಮುಂದುವರಿಸಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:01 pm, Thu, 27 April 23