ಟಿಕೆಟ್​ ವಂಚಿತರ ಮಾಸ್ಟರ್​ ಪ್ಲಾನ್​: ತೇರದಾಳದಲ್ಲಿ ನೇಕಾರ ಸಮುದಾಯದ ಸ್ವಾಮೀಜಿ ಸ್ಪರ್ಧೆ ಸಾಧ್ಯತೆ

ತೇರದಾಳ ಕ್ಷೇತ್ರದಲ್ಲಿ ಕ್ಷಿಪ್ರ ಬೆಳವಣಿಗೆಯೊಂದು ನಡೆದಿದ್ದು, ಎರಡು ರಾಷ್ಟ್ರೀಯ ಪಕ್ಷಗಳಿಂದ ಟಿಕೆಟ್​ ವಂಚಿತರಾದ ಅಭ್ಯರ್ಥಿಗಳು ನೇಕಾರ ಸಮುದಾಯದ ಕುರುಹಿನಶೆಟ್ಟಿ ಪೀಠದ ಜಗದ್ಗುರು ಶಿವಶಂಕರ ಶಿವಾಚಾರ್ಯ ಸ್ವಾಮೀಜಿಯವರನ್ನು ಕಣಕ್ಕೆ ಇಳಿಸಲು ನಿರ್ಧರಿಸಿದ್ದಾರೆ.

ಟಿಕೆಟ್​ ವಂಚಿತರ ಮಾಸ್ಟರ್​ ಪ್ಲಾನ್​: ತೇರದಾಳದಲ್ಲಿ ನೇಕಾರ ಸಮುದಾಯದ ಸ್ವಾಮೀಜಿ ಸ್ಪರ್ಧೆ ಸಾಧ್ಯತೆ
ಕುರುಹಿನಶೆಟ್ಟಿ ಪೀಠದ ಜಗದ್ಗುರು ಶಿವಶಂಕರ ಶಿವಾಚಾರ್ಯ ಸ್ವಾಮೀಜಿ
Follow us
| Updated By: ನಯನಾ ಎಸ್​ಪಿ

Updated on:Apr 18, 2023 | 3:53 PM

ಬಾಗಲಕೋಟೆ: ಉತ್ತರ ಕರ್ನಾಟಕದ (North Karnataka) ಬಾಗಲಕೋಟೆ (Bagalkote) ಜಿಲ್ಲೆಯ ಏಳು ವಿಧಾನಸಭಾ ಮತಕ್ಷೇತ್ರಗಳ ಪೈಕಿ ತೇರದಾಳ (Terdal) ವಿಧಾನಸಭಾ ಮತಕ್ಷೇತ್ರ ಕೂಡ ಒಂದು. ತೇರದಾಳ ವಿಧಾನಸಭಾ ಕ್ಷೇತ್ರ 2008 ರಲ್ಲಿ ಉದಯವಾಯಿತು. ಇಲ್ಲಿಯವರೆಗೆ ಕ್ಷೇತ್ರದಲ್ಲಿ 3 ಚುನಾವಣೆ ನಡೆದಿದ್ದು, 3ರಲ್ಲಿ ಎರಡು ಬಾರಿ ಹಾಲಿ ಶಾಸಕ ಸಿದ್ದು ಸವದಿ (Siddu Savadi) ಗೆದ್ದಿದ್ದು, ಒಂದು ಬಾರಿ ನಟಿ ಉಮಾಶ್ರೀ (Umashree) ಗೆದ್ದು ಸಚಿವರಾಗಿದ್ದಾರೆ. ಈ ಹಿಂದೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ (Congress) ಮಾಜಿ ಸಚಿವೆ ಉಮಾಶ್ರೀ ಸ್ಪರ್ಧಿಸಿ ಒಮ್ಮೆ ಗೆಲುವು ಕಂಡು, ಎರಡು ಬಾರಿ ಸೋತಿದ್ದಾರೆ.  ಇನ್ನು ಈ ಬಾರಿ ಕೂಡ ಬಿಜೆಪಿಯಿಂದ ಸಿದ್ದು ಸವದಿ ಟಿಕೆಟ್​ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಅತ್ತ ಮಾಜಿ ಶಾಸಕಿ ಉಮಾಶ್ರೀಯವರಿಗೆ ಕಾಂಗ್ರೆಸ್​ ಟಿಕೆಟ್​ ಕೈ ತಪ್ಪಿದ್ದು, ಸಿದ್ದಪ್ಪ ರಾಮಪ್ಪ ಕೊಣ್ಣೂರು ಎಂಬುವರಿಗೆ ಟಿಕೆಟ್​ ಕೈ ಸೇರಿದೆ. ಕಾಂಗ್ರೆಸ್​ನಿಂದ 12 ಜನರು ಆಕಾಂಕ್ಷಿಗಳಿದ್ದರು. ಉಮಾಶ್ರೀ, ಸಿದ್ದು ಕೊಣ್ಣೂರ, ಡಾ. ದಾನಿಗೊಂಡ, ಡಾ. ದಡ್ಡೇನವರ, ಶ್ರೀಶೈಲ್ ದಳವಾಯಿ ಸೇರಿದಂತೆ ಇತರ ಹಲವರು ರೇಸ್​ನಲ್ಲಿದ್ದರೂ, ಸಿದ್ದಪ್ಪ ರಾಮಪ್ಪ ಕೊಣ್ಣೂರು ಅವರಿಗೆ ಅದೃಷ್ಟ ಖುಲಾಯಿಸಿದೆ. ಬಿಜೆಪಿ ಯಲ್ಲಿಯೂ ಸಿದ್ದು ಸವದಿ ಸೇರಿದಂತೆ ಮನೋಹರ ಶಿರೋಳ, ಭೀಮಸಿ ಮುಗದುಮ ಸೇರಿದಂತೆ ಇತರರು ಸಾಲಿನಲ್ಲಿದ್ದರು. ಆದರೆ ಸಿದ್ದು ಸವದಿಯವರಿಗೆ ಪಕ್ಷ ಮಣೆ ಹಾಕಿದೆ. ಈಗ ತೇರದಾಳ ಕ್ಷೇತ್ರದಲ್ಲಿ ಕ್ಷಿಪ್ರ ಬೆಳವಣಿಗೆಯೊಂದು ನಡೆದಿದ್ದು, ಎರಡು ರಾಷ್ಟ್ರೀಯ ಪಕ್ಷಗಳಿಂದ ಟಿಕೆಟ್​ ವಂಚಿತರಾದ ಅಭ್ಯರ್ಥಿಗಳು ನೇಕಾರ ಸಮುದಾಯದ ಕುರುಹಿನಶೆಟ್ಟಿ ಪೀಠದ ಜಗದ್ಗುರು ಶಿವಶಂಕರ ಶಿವಾಚಾರ್ಯ ಸ್ವಾಮೀಜಿಯವರನ್ನು ಕಣಕ್ಕೆ ಇಳಿಸಲು ನಿರ್ಧರಿಸಿದ್ದಾರೆ.

ಹೀಗಾಗಿ ಬಂಡಾಯವೆದ್ದ ಆಕಾಂಕ್ಷಿಗಳು ಮತ್ತು ಎಲ್ಲ ನೇಕಾರರು ಸೇರಿ ಸ್ವಾಮೀಜಿ ಅವರನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದು, ಸ್ವಾಮೀಜಿ ನಾಳೆಯೇ (ಏ.19) ರಂದು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಸ್ವಾಮೀಜಿಯವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಸ್ವಾಮೀಜಿಯವರಿಗೆ ಬಿಜೆಪಿ ಟಿಕೆಟ್ ವಂಚಿತ ವಿವಿಧ ಸಮುದಾಯಗಳ 9 ಜನರು ಬೆಂಬಲ ವ್ಯಕ್ತಪಡಿಸಿದ್ದರೇ, ಮತ್ತೊಂದೆಡೆ ಕಾಂಗ್ರೆಸ್​ನ ಟಿಕೆಟ್ ವಂಚಿತರಲ್ಲಿ ಕೆಲವರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಗುಜರಾತ್ ಮಾದರಿ; 72 ಹೊಸ ಮುಖ, ಮೋದಿ – ಶಾ ಲೆಕ್ಕಾಚಾರ ಏನು?

ನೇಕಾರ ಸಮುದಾಯದ ಮತಗಳೇ ನಿರ್ಣಾಯಕ

ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ನೇಕಾರ ಜನರೇ ನಿರ್ಣಾಯಕರಾಗಿದ್ದಾರೆ. ರಾಜ್ಯದಲ್ಲಿ ಅತಿಹೆಚ್ಚು ನೇಕಾರರು ಇರುವ ವಿಧಾನಸಭಾ ಮತಕ್ಷೇತ್ರಗಳಲ್ಲಿ ತೇರದಾಳ ಕ್ಷೇತ್ರ ಕೂಡ ಒಂದು. ನೇಕಾರ ಸಮುದಾಯದ 33,803 ಮತಗಳಿವೆ.

ಕಳೆದ 3 ಚುನಾವಣೆಯಲ್ಲಿನ ಫಲಿತಾಂಶ

2008ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​: ಉಮಾಶ್ರೀ 50,351ಮತಗಳು ಬಿಜೆಪಿ: ಸಿದ್ದು ಸವದಿ 62,595 ಮತಗಳನ್ನು ಪಡೆದು ಗೆದ್ದಿದ್ದರು.

2013ರ ವಿಧಾನಸಭಾ ಚುನಾವಣೆ ಕೆಜೆಪಿ: ಸಿದ್ದು ಸವದಿ 67,590 ಮತಗಳು ಕಾಂಗ್ರೆಸ್​: ಉಮಾಶ್ರೀ 70,189 ಮತಗಳನ್ನು ಪಡೆದು ಗೆದ್ದಿದ್ದರು. ಬಿಜೆಪಿ-ಕೆಜೆಪಿ ಗೊಂದಲ ಕಾರಣದಿಂದಾಗಿ ಸಿದ್ದು ಸವದಿ ಅವರಿಗೆ ಸೋಲಾಗಿತ್ತು ಎನ್ನಲಾಗಿದೆ.

2018ರ ಕಳೆದ ವಿಧಾನಸಭಾ ಚುನಾವಣೆ ಬಿಜೆಪಿ: ಸಿದ್ದು ಸವದಿ 87,213 ಮತಗಳು ಕಾಂಗ್ರೆಸ್​: ಉಮಾಶ್ರೀ 20,889 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:45 pm, Tue, 18 April 23