ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಹಿನ್ನೆಲೆ ಬಿಜೆಪಿಯ (BJP) ಕೇಂದ್ರ ಮತ್ತು ರಾಜ್ಯ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇಂದು (ಮೇ.06) ಬೆಂಗಳೂರು ಮಹಾನಗರ ರಾಜ್ಯದ ಅತಿದೊಡ್ಡ ರೋಡ್ ಶೋಗೆ ಸಾಕ್ಷಿಯಾಯಿತು. ಹೌದು ಪ್ರಧಾನಿ ನರೇಂದ್ರ ಮೋದಿಯವರು (Narendra Modi) ನಗರದಲ್ಲಿ 26 ಕಿಮೀ ರ‍್ಯಾಲಿ ಮಾಡುವ ಮೂಲಕ ಗಮನ ಸೆಳೆದರು. ಈ ಮೂಲಕ ಜಯನಗರ, ಚಾಮರಾಜಪೇಟೆ, ಗಾಂಧಿನಗರ ಸೇರಿದಂತೆ 13 ಕ್ಷೇತ್ರಗಳ ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳುವ ಪ್ರಯತ್ನ ಮಾಡಿದರು. ಇನ್ನು ಪ್ರಧಾನಿ ಮೋದಿಯವರು ನಿನ್ನೆಯಿಂದ (ಮೇ.05) ರಾಜ್ಯ ಪ್ರವಾಸದಲ್ಲಿದ್ದ ರಾತ್ರಿ ರಾಜಭವನದಲ್ಲಿ ತಂಗಿದ್ದರು. ಇಂದು ಬೆಳಿಗ್ಗೆ ಪ್ರಧಾನಿ ಮೋದಿ ರಾಜಭವನದಿಂದ HQTC ಹೆಲಿಪ್ಯಾಡ್ಗೆ ಆಗಮಿಸಿ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಲೊಯೋಲ ಕಾಲೇಜು ಹೆಲಿಪ್ಯಾಡ್ಗೆ ಆಗಮಿಸಿದರು.
ಜೆ.ಪಿ.ನಗರದ ಲೊಯೋಲ ಕಾಲೇಜು ಹೆಲಿಪ್ಯಾಡ್ನಿಂದ ರಸ್ತೆ ಮಾರ್ಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಸೋಮೇಶ್ವರ ಭವನದತ್ತ ತೆರಳಿದರು. ಸೋಮೇಶ್ವರ ಭವನದಿಂದ 10:20ಕ್ಕೆ ಪ್ರಧಾನಿ ಮೋದಿಯವರ ರೋಡ್ ಶೋ ಆರಂಭವಾಯಿತು. ರೋಡ್ ಶೋ ಉದ್ದಕ್ಕೂ ಸಂಸದರಾದ ತೇಜಸ್ವಿ ಸೂರ್ಯ, ಪಿಸಿ ಮೋಹನ್ ಪ್ರಧಾನಿ ಮೋದಿಯವರ ಜೊತೆ ಇದ್ದರು. ಇನ್ನು ರೋಡ್ ಶೋ ಅನ್ನು ರಾಜ್ಯ ಬಿಜೆಪಿ ಘಟಕ ಪ್ರತಿಷ್ಠೆಯಾಗಿ ತೆಗೆದುಕೊಂಡಿತ್ತು. ನಭೂತೋ ನಭವಿಷ್ಯತಿ ಮಾತಿನಂತೆ ಮುಂಚೆಯೇ ಯೋಜನೆ ರೂಪಿಸಿಕೊಂಡು ಯಶಸ್ವಿಯಾಗಿ ರೋಡ್ ಶೋ ನಡೆಸುವಲ್ಲಿ ಸಫಲವಾಯಿತು.
ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಆರಂಭವಾಗುತ್ತಿದ್ದಂತೆ ರಸ್ತೆಯ ಅಕ್ಕಪಕ್ಕದಲ್ಲಿ ಮತ್ತು ಇಕ್ಕೆಲಗಳಲ್ಲಿ ನಿಂತಿದ್ದ ಜನರು ಮೋದಿ ಮೋದಿ ಮೋದಿ ಎಂದು ಹರ್ಷೋದ್ಗಾರ ಮೊಳಗಿಸಿದರು. ಇದರೊಂದಿಗೆ ಜೈ ಶ್ರೀರಾಮ್, ಬಜರಂಗಬಲಿ ಕೀ ಜೈ ಎನ್ನುವ ಘೋಷಣೆಗಳು ಕೇಳಿ ಬಂದವು. ಅಲ್ಲದೇ ಕಣ್ಣಾಡಿಸಿದಲ್ಲೆಲ್ಲಾ ಆಂಜನೇಯನ ಭಾವಚಿತ್ರವಿರುವ ಧ್ವಜ, ಕೇಸರಿ ಧ್ವಜ ಮತ್ತು ಸಹಜವಾಗಿ ಬಿಜೆಪಿ ಭಾವುಟಗಳು ರಾರಾಜಿಸುತ್ತಿದ್ದವು. ಈ ಮೂಲಕ ಬಿಜೆಪಿ ಬಜರಂಗದಳ ಬ್ಯಾನ್ ವಿಚಾರದ ಕಾವನ್ನು ಜೀವಂತವಾಗಿರಿಸಿ ಕಾಂಗ್ರೆಸ್ ಅನ್ನು ಹಣಿಯಲು ಮುಂದಾಗುತ್ತಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ರೋಡ್ ಶೋನಲ್ಲಿ ಭಜರಂಗಿ ಅಲೆ; ವಿಡಿಯೋ ವೈರಲ್
ಪ್ರಧಾನಿ ಮೋದಿಯವರ 26 ಕಿ.ಮೀ ರೋಡ್ ಶೋಗೆ 40 ಟನ್ ಹೂಗಳನ್ನು ಬಳಸಲಾಗಿತ್ತು. ಅಭಿಮಾನಿಗಳು ಚೆಂಡು ಹೂವು, ಸೇವಂತಿಗೆ ಹೂವು, ಗುಲಾಬಿ ಹೂವಿನ ಮಳೆ ಸುರಿಸಿದರು. ದಾರಿ ಸಂಪೂರ್ಣ ಹೂವಿನಿಂದ ಮುಚ್ಚಿ ಹೋಗಿದ್ದು, ಹೂವಿನ ಹಾಸಿಗೆಯಲ್ಲಿ ಸ್ವಾಗತಿಸಲಾಯಿತು.
ಪ್ರಧಾನಿ ಮೋದಿಯವರನ್ನು ನೋಡಲು ಮಕ್ಕಳು-ಮರಿ ಎನ್ನದೆ ನಗರದ ಜನರು ಆಗಮಿಸಿದ್ದರು. ಕೆಲ ಮಕ್ಕಳು ರಾಮ, ಸ್ವಾಮಿ ವಿವೇಕಾನಂದ, ಛತ್ರಪತಿ ಶಿವಾಜಿ ಮಹರಾಜ್, ಪ್ರಭು ಶ್ರೀರಾಮನ ವೇಷಗಳನ್ನು ಧರಿಸಿ ಪ್ರಧಾನಿ ಮೋದಿಯವರ ಗಮನವನ್ನು ತಮ್ಮತ್ತ ಸೆಳೆದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೃಷ್ಟಿಕಲಾ ವಿದ್ಯಾಲಯದ ಕಲಾ ತಂಡ ಜಯನಗರದ ಸೌತ್ ಎಂಡ್ ಸರ್ಕಲ್ನಲ್ಲಿ ಬಿಜೆಪಿ ಹಾಡಿಗೆ ನೃತ್ಯ ಮಾಡುವ ಮೂಲಕ ಸ್ವಾಗತಿಸಿತು. ರ‍್ಯಾಲಿ ಸಾಗುವ ಮಾರ್ಗದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ದೊಡ್ಡ ಗಣಪತಿ ದೇಸವಸ್ಥಾನದ ಬಳಿ ಕಮಲ ಗುರುತಿನ ರಂಗೋಲಿ ಬಿಡಿಸಿದ್ದರು. ರೋಡ್ ಶೋ ಪ್ರಾರಂಭದಿಂದ ಅಂತ್ಯದವರೆಗೂ ವಾದ್ಯಗಳು ಮೇಳೈಸಿದವು. ಬಜರಂಗಬಲಿಯ ಡಿಜೆ ಹಾಡು ಗುನುಗುವಂತೆ ಮಾಡಿತು. ಅಲ್ಲಲ್ಲಿ ಕಾಣಿಸಿದ ಆಂಜನೇಯ ವೇಷಧಾರಿಗಳು ರೋಡ್ ಶೋನ ಪ್ರಮುಖ ಆಕರ್ಷಣೆಯಾಗಿದ್ದರು.
ಜೆಪಿ ನಗರದಿಂದ ಆರಂಭವಾಗಿ-ಮಲ್ಲೇಶ್ವರಂ ತನಕ ನಡೆದ 26 ಕಿಮೀ ರೋಡ್ ಶೋ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತು. ಜಯನಗರದಲ್ಲಿ ಪ್ರಧಾನಿ ಮೋದಿಯವರ ರ‍್ಯಾಲಿ ಬರುತ್ತಿದ್ದಂತೆ ಮತ್ತು ಅದಕ್ಕೂ ಮೊದಲು 10ಕ್ಕಿಂತ ಹೆಚ್ಚು ಪುರೋಹಿತರು ಮಂತ್ರಗಳನ್ನು ಪಠಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ಶೋವನ್ನು ವೀಕ್ಷಿಸಲು ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಸುಬುಧೇಂದ್ರ ತೀರ್ಥ ಶ್ರೀಗಳು ಆಗಮಿಸಿದ್ದರು. ಮಠದ ಬಳಿ ಬರುತ್ತಿದ್ದಂತೆ ಪ್ರಧಾನಿ ಮೋದಿಯವರು ಕೈಮುಗಿದು ನಮಸ್ಕರಿಸಿದರು. ಶ್ರೀಗಳು ಆಶಿರ್ವದಿಸಿದರು. ಇನ್ನು ರ‍್ಯಾಲಿ ರಾಮಕೃಷ್ಣ ಆಶ್ರಮದ ಬಳಿ ಬಂದಾಗ ಅಲ್ಲಿಯ ಸ್ವಾಮೀಜಿಗಳು ಹೂಗುಚ್ಚ ಮತ್ತು ಮಾಲೆಯನ್ನು ನೀಡಿದರು.
3 ಗಂಟೆಗಳ ಕಾಲ ನಡೆದ ರೋಡ್ ಶೋನಲ್ಲಿ ರಾಷ್ಟ್ರ ನಾಯಕ ಪ್ರಧಾನಿ ನರೇಂದ್ರ ಮೋದಿಯವರು ಹೂವಿನ ಮಳೆ, ಹಾರ-ತುರಾಯಿ, ಜಯಘೋಷ, ಆಶಿರ್ವಾದವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಬಹುದು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:58 pm, Sat, 6 May 23