PM Modi Roadshow: ಬಿಜೆಪಿಯನ್ನು ಬೆಂಗಳೂರು ಬಯಸುತ್ತಿದೆ, ಸಾಕ್ಷಿ ಇಲ್ಲಿದೆ ನೋಡಿ; ಪ್ರಧಾನಿ ಮೋದಿ
ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಂಗಳೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಈ ವೇಳೆ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದಕ್ಕೆ ಅವರು ಹರ್ಷ ವ್ಯಕ್ತಪಡಿಸಿದ್ದು, ಬೆಂಗಳೂರಿನ ಜನತೆಗೆ ಧನ್ಯವಾದ ಸಮರ್ಪಿಸಿದ್ದಾರೆ.
Updated on:May 06, 2023 | 3:34 PM

ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಂಗಳೂರಿನಲ್ಲಿ ಮೆಗಾ ರೋಡ್ ಶೋ ನಡೆಸಿದರು. ಸುಮಾರು ಎರಡೂವರೆ ಗಂಟೆ ಕಾಲ ನಡೆದ ರೋಡ್ ಶೋದಲ್ಲಿ ಮೋದಿ ಅವರು 13 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿದ್ದಾರೆ. ಮೊದಲ ದಿನದ ರೋಡ್ ಶೋದಲ್ಲಿ ಮೋದಿ 26 ಕಿಲೋಮೀರ್ಗೂ ಹೆಚ್ಚು ಸಂಚರಿಸಿದ್ದಾರೆ.

ಜೆಪಿ ನಗರದ ಬ್ರಿಗೇಡ್ ಮಿಲೇನಿಯಂನ ಬಳಿ ಆರಂಭವಾದ ರೋಡ್ ಶೋ ಮಲ್ಲೇಶ್ವರದ ಸರ್ಕಲ್ ಮಾರಮ್ಮ ದೇವಸ್ಥಾನದ ಬಳಿ ಅಂತ್ಯವಾಯಿತು. ರೋಡ್ ಶೋ ಕೊನೆಯಲ್ಲಿ ಮೋದಿ ಅವರು ಕಾಡುಮಲ್ಲೇಶ್ವರ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದರು.

ಬೆಂಗಳೂರಿನ ರೋಡ್ ಶೋಕ್ಕೆ ಜನರಿಂದ ವ್ಯಕ್ತವಾದ ಅಭೂತಪೂರ್ವ ಸ್ಪಂದನೆಗೆ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು ಸಂಭ್ರಮ ಹಂಚಿಕೊಂಡಿದ್ದಾರೆ. ಜತೆಗೆ, ರೋಡ್ ಶೋದ ಸಂಭ್ರಮದ ಕ್ಷಣಗಳ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ.

ಬೆಂಗಳೂರು ಬಿಜೆಪಿಯನ್ನು ಬಯಸುತ್ತಿದೆ ಎಂಬುದು ಸ್ಪಷ್ಟ. ನಮ್ಮ ಪಕ್ಷವು ಉತ್ತಮ ಆಡಳಿತ ಮತ್ತು ಅಭಿವೃದ್ಧಿಯನ್ನು ನೀಡುವುದನ್ನು ಮುಂದುವರಿಸಲಿದೆ ಎಂಬ ಬಗ್ಗೆ ಈ ನಗರದ ಜನತೆಗೆ ನಂಬಿಕೆ ಇದೆ ಎಂದು ಮೋದಿ ಹೇಳಿದ್ದಾರೆ.

ನಾನು ಬೆಂಗಳೂರಿನಲ್ಲಿ ಕಂಡದ್ದನ್ನು ಕೇವಲ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಈ ಅದ್ಭುತ ನಗರದ ಜನರು ನನ್ನ ಮೇಲೆ ಪ್ರೀತಿಯ ಮಳೆ ಸುರಿಸಿದ್ದಕ್ಕಾಗಿ ಜೀವಮಾನವಿಡೀ ನಾನು ಕೃತಜ್ಞನಾಗಿರಲಿದ್ದೇನೆ ಎಂದು ಮೋದಿ ಖುಷಿಯಿಂದ ಹೇಳಿಕೊಂಡಿದ್ದಾರೆ.

ಭಾನುವಾರವೂ ನಗರದಲ್ಲಿ ಪ್ರಧಾನಿ ಅವರ ರೋಡ್ ಶೋ ನಡೆಯಲಿದೆ. ಭಾನುವಾರ (ಮೇ 7) ಬೆಳಗ್ಗೆ 9 ರಿಂದ ಬೆಳಗ್ಗೆ 11.30ರವರೆಗೆ ರೋಡ್ ಶೋ ನಡೆಯಲಿದೆ. ಭಾನುವಾರವೂ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ನಗರದಾದ್ಯಂತ ಬಿಗಿ ಭದ್ರತೆ ಒದಗಿಸಲಾಗಿದೆ.
Published On - 3:14 pm, Sat, 6 May 23
























