ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ (Karnataka Assembly Elections 2023) ಬಿರುಸಿನ ಪ್ರಚಾರ ಸೋಮವಾರ ಸಂಜೆ ಮುಕ್ತಾಯಗೊಂಡಿದೆ. ಚುನಾವಣೆ ಗೆಲ್ಲಲು ಬಿಜೆಪಿ ಶತಾಯಗತಾಯ ಪ್ರಯತ್ನಿಸಿದ್ದು, ಪ್ರಚಾರದ ಅಖಾಡದಲ್ಲಿ ಬಹಳ ಚುರುಕಿನಿಂದ ತೊಡಗಿಸಿಕೊಂಡಿತ್ತು. ಪಕ್ಷವು ತನ್ನ ರಾಷ್ಟ್ರೀಯ ನಾಯಕರ ಸುದೀರ್ಘ ಸೇನೆಯನ್ನೇ ಪ್ರಚಾರದ ಕಣಕ್ಕಿಳಿಸಿತ್ತು. ಬಿಜೆಪಿ ಒಟ್ಟು 128 ರಾಷ್ಟ್ರ ಮಟ್ಟದ ನಾಯಕರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದರು. ಈ ರಾಷ್ಟ್ರೀಯ ನಾಯಕರು ಒಳಗೊಂಡ 3116 ಚುನಾವಣಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಬಿಜೆಪಿ ರಾಷ್ಟ್ರ ಮಟ್ಟದ ನಾಯಕರು ಪ್ರಚಾರದ ವೇಳೆ ರಾಜ್ಯದ 311 ಮಠಗಳು ಮತ್ತು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕರು ಕೂಡ ಬಿರುಸಿನ ಪ್ರಚಾರ ನಡೆಸಿದ್ದಾರೆ. ಪಕ್ಷದ ನಾಯಕರು ಒಟ್ಟು 173 ಸಮಾವೇಶ/ಸಭೆಗಳು ಹಾಗೂ 55 ರೋಡ್ ಶೋ ನಡೆಸಿದ್ದಾರೆ.
ರಾಜ್ಯದಲ್ಲಿ ಬಹಿರಂಗ ಪ್ರಚಾರದ ಅವಧಿ ಮುಗಿದಿದ್ದು, ಮೇ 10 ರಂದು ಮತದಾನ ನಡೆಯಲಿದೆ. ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ.
ಚುನಾವಣಾ ಪ್ರಚಾರದ ಸಮಯದಲ್ಲಿ ಬಿಜೆಪಿ 9125 ಸಮಾವೇಶಗಳನ್ನು ಮತ್ತು ಒಟ್ಟು 1377 ರೋಡ್ ಶೋಗಳನ್ನು ನಡೆಸಿದೆ. ಇದಲ್ಲದೇ 9077 ಸಣ್ಣ ಸಭೆಗಳು ನಡೆದಿವೆ. ಪ್ರಧಾನಿ ನರೇಂದ್ರ ಮೋದಿ ಅವರು 6 ದಿನಗಳಲ್ಲಿ 19 ಸಾರ್ವಜನಿಕ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದ್ದು, 6 ರೋಡ್ ಶೋಗಳಲ್ಲಿ ಭಾಗವಹಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರು 16 ಚುನಾವಣಾ ಪ್ರಚಾರ ಸಭೆಗಳು ಮತ್ತು 15 ರೋಡ್ ಶೋಗಳಲ್ಲಿ ಭಾಗವಹಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು 10 ಸಭೆಗಳಲ್ಲಿ ಭಾಗವಹಿಸುವುದರ ಜತೆಗೆ 16 ರೋಡ್ಶೋಗಳಲ್ಲಿ ಮತಬೇಟೆ ನಡೆಸಿದ್ದಾರೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆ ಹೈವೋಲ್ಟೇಜ್ ಬಹಿರಂಗ ಪ್ರಚಾರಕ್ಕೆ ತೆರೆ; ಯಾವುದಕ್ಕೆಲ್ಲ ನಿರ್ಬಂಧ? ಇಲ್ಲಿದೆ ಮಾಹಿತಿ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಚುನಾವಣೆ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು. ಅವರು 9 ಸಭೆಗಳು ಮತ್ತು 3 ರೋಡ್ ಶೋಗಳನ್ನು ಮಾಡಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು 17 ಸಭೆಗಳು ಮತ್ತು 2 ರೋಡ್ಶೋಗಳಲ್ಲಿ ಭಾಗವಹಿಸಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು 15 ಸಭೆಗಳು ಮತ್ತು 1 ರೋಡ್ ಶೋ ನಡೆಸಿದ್ದಾರೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ 13 ಸಭೆಗಳನ್ನು ನಡೆಸಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ