Karnataka Assembly Elections 2023: ರಾಜ್ಯದಲ್ಲಿಂದು ಬಿಜೆಪಿ-ಕಾಂಗ್ರೆಸ್ ರಾಷ್ಟ್ರ ನಾಯಕರ ಅಬ್ಬರದ ಪ್ರಚಾರ, ಕಂಪ್ಲೀಟ್ ಮಾಹಿತಿ ಇಲ್ಲಿದೆ
ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ವಲಯ ರಂಗೇರುತ್ತಿದೆ. ಬಿಜೆಪಿ-ಕಾಂಗ್ರೆಸ್ ರಾಷ್ಟ್ರ ನಾಯಕರು ರಾಜ್ಯದ ಮೂಲೆ ಮೂಲೆಗಳಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ, ಕಾಂಗ್ರೆಸ್ ರಾಷ್ಟ್ರ ನಾಯಕರು ರಾಜ್ಯಕ್ಕೆ ಧಾವಿಸಿದ್ದಾರೆ. ಚುನಾವಣೆಯಲ್ಲಿ ಜಯಶಾಲಿಯಾಗಲು ರಣತಂತ್ರ ಹೆಣೆಯುತ್ತಿದ್ದಾರೆ. ಈಗಾಗಲೇ ಬಿಜೆಪಿಯಿಂದ ಅಮಿತ್ ಶಾ, ಜೆ.ಪಿ.ನಡ್ಡಾ, ಸ್ಮೃತಿ ಇರಾನಿ, ದೇವೇಂದ್ರ ಫಡ್ನವೀಸ್, ಅರುಣ್ ಸಿಂಗ್, ಯೋಗಿ ಆದಿತ್ಯನಾಥ ಸೇರಿದಂತೆ ಕರುನಾಡ ಕುರುಕ್ಷೇತ್ರ ಗೆಲ್ಲಲು ಬಿಜೆಪಿಯ ದೊಡ್ಡ ನಾಯಕರ ದಂಡೇ ರಾಜ್ಯಕ್ಕೆ ಭೇಟಿ ನೀಡುತ್ತಿದೆ. ರಾಜ್ಯದ ಮೂಲೆ ಮೂಲೆಗಳಲ್ಲೂ ಭರ್ಜರಿ ಪ್ರಚಾರ ಮಾಡಲಾಗುತ್ತಿದೆ. ಸದ್ಯ ಈಗ ಕ್ಯಾಂಪೇನ್ ಕ್ಲೈಮ್ಯಾಕ್ಸ್ನಲ್ಲಿ ಚಿತ್ರಣವನ್ನೇ ಬದಲಾಯಿಸಲು ಬಿಜೆಪಿ ತನ್ನ ಟ್ರಂಪ್ ಕಾರ್ಡ್ ಬಳಸಲು ಮುಂದಾಗಿದೆ. ಇಂದಿನಿಂದ ಕುರುಕ್ಷೇತ್ರದ ಮತಕಾಳಗದಲ್ಲಿ ಮೋದಿ ಎಂಟ್ರಿಯಾಗಿದ್ದು ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಚಿವೆ ಸ್ಮೃತಿ ಇರಾನಿ ಕೋಟೆನಾಡಿನಲ್ಲಿ ಅಬ್ಬರಿಸಲಿದ್ದಾರೆ. ಮತ್ತೊಂದೆಡೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ರಾಜ್ಯದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದು ಇಂದು ಪ್ರಿಯಾಂಕಾ ಗಾಂಧಿ ಕುಂದಗೋಳ, ಧಾರವಾಡದಲ್ಲಿ ರೋಡ್ಶೋ ನಡೆಸಲಿದ್ದಾರೆ.
ಉತ್ತರದಿಂದ ದಕ್ಷಿಣದವರೆಗೆ ಮೋದಿ ಮತಶಿಕಾರಿ!
ಕರ್ನಾಟಕದಲ್ಲಿ ಮತ್ತೆ ಮೋದಿ ಮೇನಿಯಾ ಶುರುವಾಗಿದೆ. ರಾಜಕೀಯ ಕುರುಕ್ಷೇತ್ರದ ಕಾವನ್ನ ಮತ್ತಷ್ಟು ಕೆಂಪೇರಿಸಲು ನಾಳೆಯಿಂದ ಬಿಜೆಪಿಯ ಟಾಸ್ಕ್ ಮಾಸ್ಟರ್, ಗೇಮ್ ಚೇಂಜರ್ ಪ್ರಧಾನಿ ಮೋದಿಯವರ ಎಂಟ್ರಿ ಆಗ್ತಿದೆ.
ಏಪ್ರಿಲ್ 29 ಅಂದ್ರೆ ಇಂದು ಬೆಳಗ್ಗೆ 11ಕ್ಕೆ ಬೀದರ್ ಜಿಲ್ಲೆಯ ಹುಮ್ನಾಬಾದ್ ಆಗಮಿಸಲಿರುವ ಮೋದಿ ಸಮಾವೇಶದಲ್ಲಿ ಭಾಗಿಯಾಗಲಿದ್ದು, ಮಧ್ಯಾಹ್ನ 12 ಗಂಟೆಗೆ ವಿಜಯಪುರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಬೇಟೆಯಾಡಲಿದ್ದಾರೆ. ಬಳಿಕ ಮಧ್ಯಾಹ್ನ 3.30ಕ್ಕೆ ಬೆಳಗಾವಿಯ ಕುಡಚಿ ಕ್ಷೇತ್ರದಲ್ಲಿ ಪಿ. ರಾಜೀವ್ ಪರ ಮೋದಿ ಕ್ಯಾಂಪೇನ್ ಮಾಡಲಿದ್ದು, ಸಂಜೆ 6ಕ್ಕೆ ಬೆಳಗಾವಿಯಿಂದ ಬೆಂಗಳೂರಿಗೆ ಬರಲಿರುವ ಮೋದಿ, ನೈಸ್ ರೋಡ್ನಿಂದ ಸುಮ್ಮನಹಳ್ಳಿ ಜಂಕ್ಷನ್ವರೆಗೆ ಬೃಹತ್ ರೋಡ್ ಶೋ ನಡೆಸಲಿದ್ದು, ರಾತ್ರಿ ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ನಾಳೆ ಭಾನುವಾರ ಬೆಂಗಳೂರಿನಿಂದ ಕೋಲಾರಕ್ಕೆ ತೆರಳಲಿರುವ ಮೋದಿ, ಬೆಳಗ್ಗೆ 11ಕ್ಕೆ ಕೋಲಾರದ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.. ಮಧ್ಯಾಹ್ನ 2ಗಂಟೆಗೆ ಕುಮಾರಸ್ವಾಮಿ ಕರ್ಮಭೂಮಿ ಚನ್ನಪಟ್ಟಣದಲ್ಲಿ ಯೋಗೇಶ್ವರ್ ಪರ ಪ್ರಚಾರ ನಡೆಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಬೇಲೂರಿನಲ್ಲಿ ಸಮಾವೇಶ ಮುಗಿಸಿ ಸಂಜೆ 5.30ಕ್ಕೆ ಮೈಸೂರಿಗೆ ಆಗಮಿಸಲಿರುವ ಮೋದಿ ವಿದ್ಯಾಪೀಠ ಸರ್ಕಲ್ನಿಂದ ಬನ್ನಿಮಂಟಪದ ವರೆಗೆ ರೋಡ್ ಶೋ ನಡೆಸಲಿದ್ದಾರೆ. ಬಳಿಕ ದೆಹಲಿಗೆ ತೆರಳಲಿದ್ದಾರೆ.
ಇದನ್ನೂ ಓದಿ: Amit Shah: ಧಾರವಾಡ, ಗದಗ, ಹಾವೇರಿಯಲ್ಲಿ ಅಮಿತ್ ಶಾ ಅಬ್ಬರದ ಪ್ರಚಾರ; ಮತಬೇಟೆಯೊಂದಿಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಮೋದಿ ಸಮಾವೇಶಕ್ಕಾಗಿ ವಿಜಯಪುರದ ಸೈನಿಕ ಶಾಲೆಯಲ್ಲಿ 340 ಅಡಿ ಅಗಲದ ಬೃಹತ್ ವೇದಿಕೆ ನಿರ್ಮಾಣ ಮಾಡಿದ್ದು, 80,000 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸಮಾವೇಶಕ್ಕೆ 9 ಮತಕ್ಷೇತ್ರಗಳಿಂದ 2 ಲಕ್ಷ ಜನರನ್ನ ಕರೆತರುವ ಪ್ಲ್ಯಾನ್ ಮಾಡಲಾಗಿದೆ.
ಮಡಿಕೇರಿ, ಉಡುಪಿ, ಮಂಗಳೂರಿನಲ್ಲಿ ಇಂದು ಅಮಿತ್ ಶಾ ಪ್ರಚಾರ
ಬೆಳಗ್ಗೆ 11 ಗಂಟೆಗೆ ಮಡಿಕೇರಿಯಲ್ಲಿ ಅಮಿತ್ ಶಾ ರೋಡ್ಶೋ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಉಡುಪಿ ಕ್ಷೇತ್ರದ ಕಟಪಾಡಿಯಲ್ಲಿ ಉಡುಪಿ, ಕಾಪು ಕ್ಷೇತ್ರದ ಕಾರ್ಯಕರ್ತರನ್ನೊಳಗೊಂಡ ಪ್ರಚಾರ ಸಭೆ ನಡೆಯಲಿದೆ. ಸಂಜೆ 4ಕ್ಕೆ ಬೈಂದೂರಿನಲ್ಲಿ ಅಮಿತ್ ಶಾ ರೋಡ್ ಶೋ, ಪ್ರಚಾರ ಸಭೆ ನಡೆಸಲಿದ್ದಾರೆ. ಸಂಜೆ 5.30ಕ್ಕೆ ಮಂಗಳೂರಿನಲ್ಲಿ ಸಚಿವ ಅಮಿತ್ ಶಾ ರೋಡ್ ಶೋ ನಡೆಸಿ ನಂತರ ಕ್ಲಾಕ್ಟವರ್ನಿಂದ ಗೋವಿಂದ ಪೈ ವೃತ್ತದವರೆಗೆ ಪ್ರಚಾರ ಮಾಡಲಿದ್ದಾರೆ. ಸಂಜೆ 7 ಗಂಟೆಗೆ ಮಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಪ್ರಮುಖ ಸಭೆ ನಡೆಸಿ ರಾತ್ರಿ 8.50ಕ್ಕೆ ಮಂಗಳೂರಿನಿಂದ ದೆಹಲಿಗೆ ತೆರಳಲಿದ್ದಾರೆ.
ಕೋಟೆನಾಡಿನಲ್ಲಿ ಇಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಚಾರ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದ ನೆಹರು ಮೈದಾನದಲ್ಲಿ ಮಧ್ಯಾಹ್ನ 3ಕ್ಕೆ ಬಹಿರಂಗ ಸಭೆ ನಡೆಯಲಿದ್ದು ಸ್ಮೃತಿ ಇರಾನಿ ಭಾಗಿಯಾಗಲಿದ್ದಾರೆ. ಹಾಘೂ ಹಿರಿಯೂರು ಬಿಜೆಪಿ ಅಬ್ಯರ್ಥಿ ಪೂರ್ಣಿಮಾ ಪರ ಮತಯಾಚನೆ ಮಾಡಲಿದ್ದಾರೆ. ಎಪ್ರಿಲ್ 26ರಂದು ಹಿರಿಯೂರಿಗೆ ಪ್ರಿಯಾಂಕಾ ಗಾಂಧಿ ಆಗಮಿಸಿದ್ದರು. ಕಾಂಗ್ರೆಸ್ ಅಬ್ಯರ್ಥಿ ಡಿ.ಸುಧಾಕರ್ ಪರ ರೋಡ್ ಶೋ ನಡೆಸಿದ್ದರು. ಪ್ರಿಯಾಂಕಾ ಗಾಂಧಿ ಪ್ರಚಾರದ ಬೆನ್ನಲ್ಲೇ ಸ್ಮೃತಿ ಇರಾನಿ ಆಗಮಿಸಿದ್ದು ಸ್ಮೃತಿ ಪ್ರಚಾರದ ಮೂಲಕ ಮಹಿಳಾ ಮತ ಸೆಳೆಯಲು ಬಿಜೆಪಿ ಪ್ಲಾನ್ ಮಾಡಿದೆ. ಪ್ರಿಯಾಂಕಾ ಗಾಂಧಿಗೆ ಕೌಂಟರ್ ಕೊಡಲು ಬಿಜೆಪಿ ಸಜ್ಜಾಗಿದೆ.
ಮೈಸೂರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಂಟ್ರಿ
ಇಂದು ಬೆಳಗ್ಗೆ 11.15ಕ್ಕೆ ಮಂಡಕಳ್ಳಿ ಏರ್ಪೋರ್ಟ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಗಮಿಸಲಿದ್ದಾರೆ. ದೆಹಲಿಯಿಂದ ವಿಶೇಷ ವಿಮಾನದಲ್ಲಿ ಆಗಮಿಸುವ ರಾಜನಾಥ್ ಸಿಂಗ್, ಇಂದು ಬೆಳಗ್ಗೆ 11.30ರಿಂದ ಮಧ್ಯಾಹ್ನ 12.30ರವರೆಗೆ ಮೈಸೂರಿನ ವಿವೇಕಾನಂದ ವೃತ್ತದಲ್ಲಿ ನಡೆಯಲಿರುವ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಪರ ಮತಯಾಚಿಸಲಿದ್ದಾರೆ. ಮಧ್ಯಾಹ್ನ 12.40ಕ್ಕೆ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಸುತ್ತೂರು ಶಾಖಾ ಮಠದಲ್ಲಿ ಭೋಜನ ಸೇವಿಸಲಿದ್ದಾರೆ. ಭೋಜನ ನಂತರ ಹೆಲಿಕಾಪ್ಟರ್ನಲ್ಲಿ ಶ್ರೀರಂಗಪಟ್ಟಣಕ್ಕೆ ಪ್ರಯಾಣಿಸಲಿದ್ದಾರೆ.
ರಾಜ್ಯದಲ್ಲಿಂದು ಚುನಾವಣಾ ಪ್ರಚಾರ ನಡೆಸುವ ಪ್ರಿಯಾಂಕಾ ಗಾಂಧಿ
ಕುಂದಗೋಳ, ಧಾರವಾಡದಲ್ಲಿ ಪ್ರಿಯಾಂಕಾ ರೋಡ್ಶೋ ನಡೆಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ನವಲಗುಂದದಲ್ಲಿ ಪ್ರಿಯಾಂಕಾ ಗಾಂಧಿ ಪ್ರಚಾರ ಸಭೆ ನಡೆಯಲಿದ್ದು ಸಂಜೆ ಹಳಿಯಾಳ, ದಾಂಡೇಲಿಯಲ್ಲಿ ಪ್ರಿಯಾಂಕಾ ಗಾಂಧಿ ಪ್ರಚಾರ ನಡೆಸಲಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:21 am, Sat, 29 April 23