ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಸೋಲಿಸಲು ಬಿಜೆಪಿ, ಆರ್​​ಎಸ್​ಎಸ್ ಮಾಸ್ಟರ್ ಪ್ಲ್ಯಾನ್; ಹೀಗಿದೆ ರಣತಂತ್ರ

|

Updated on: Apr 21, 2023 | 2:55 PM

ನಾಗ್ಪುರದಿಂದ ಸುಮಾರು 50 ಆರೆಸ್ಸೆಸ್ ಕಾರ್ಯಕರ್ತರನ್ನು ಹುಬ್ಬಳ್ಳಿಗೆ ಕರೆಸಿಕೊಳ್ಳಲಾಗಿದ್ದು, ಅವರಿಗೆ ವಿವಿಧ ಸಂಘಟನಾ ಜವಾಬ್ದಾರಿಗಳನ್ನು ವಹಿಸಲಾಗಿದೆ ಎಂದು ಹೇಳಲಾಗಿದೆ. ಲಿಂಗಾಯತ ಸಮುದಾಯಕ್ಕೆ ಸೇರಿದ ನಾಯಕರನ್ನು ಪಕ್ಷದಿಂದ ದೂರವಿಡುವ ಪ್ರತಿಪಕ್ಷ ಕಾಂಗ್ರೆಸ್‌ನ ತಂತ್ರಕ್ಕೆ ಪ್ರತಿ ತಂತ್ರ ಹೆಣೆಯಲು ಬಿಜೆಪಿ ಪ್ರಯತ್ನಿಸುತ್ತಿದೆ.

ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಸೋಲಿಸಲು ಬಿಜೆಪಿ, ಆರ್​​ಎಸ್​ಎಸ್ ಮಾಸ್ಟರ್ ಪ್ಲ್ಯಾನ್; ಹೀಗಿದೆ ರಣತಂತ್ರ
ಹುಬ್ಬಳ್ಳಿಯಲ್ಲಿ ಬಿಜೆಪಿ, ಆರ್​ಎಸ್​ಎಸ್ ಮುಖಂಡರ ಜತೆ ಸಭೆ ನಡೆಸಿದ ನಳಿನ್ ಕುಮಾರ್ ಕಟೀಲ್
Follow us on

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ, ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾಗಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿಯಾಗಿರುವ ಜಗದೀಶ ಶೆಟ್ಟರ್ (Jagadish Shettar) ಅವರನ್ನು ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಸೋಲಿಸಲು ಹಾಗೂ ತಮ್ಮ ಮತಬ್ಯಾಂಕ್​​ ಅನ್ನು ಭದ್ರವಾಗಿರಿಸಿಕೊಳ್ಳಲು ಆರ್​ಎಸ್​​ಎಸ್​ ಅನ್ನು ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಆರ್​ಎಸ್​​ಎಸ್​ ಕಾರ್ಯಕರ್ತರನ್ನು ನಿಯೋಜಿಸುವ ಮೂಲಕ ಬಿಜೆಪಿ ಹಲವು ತಂತ್ರಗಳನ್ನು ಹೆಣೆದಿದೆ. ಇತ್ತೀಚೆಗಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಧಾರವಾಡ ಜಿಲ್ಲೆಗೆ ಭೇಟಿ ನೀಡಿ ಎರಡು ಜನಪ್ರಿಯ ಲಿಂಗಾಯತ ಮಠಗಳಿಗೆ ತೆರಳಿ ಪೂಜೆ ಸಲ್ಲಿಸಿ ಸಮುದಾಯವನ್ನು ಓಲೈಸುವ ತಂತ್ರಗಾರಿಕೆ ಅನುಸರಿಸಿದ್ದರು. ಇದರ ಜತೆಗೆ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಅವರ ಗೆಲುವನ್ನು ಖಚಿತಪಡಿಸಿಕೊಳ್ಳಲು ಪಕ್ಷವು ಅನೇಕ ಯೋಜನೆಗಳನ್ನು ರೂಪಿಸುತ್ತಿದೆ.

ಈ ಮಧ್ಯೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹುಬ್ಬಳ್ಳಿಗೆ ಭೇಟಿ ನೀಡಿ ಪಕ್ಷದ ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ. ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದಾರೆ.

ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್ ಅವರನ್ನು ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಶೆಟ್ಟರ್ ಟೀಕಿಸಿದ್ದರು. ಸಂತೋಷ್ ವಿರುದ್ಧ ಆರೋಪಗಳನ್ನೂ ಮಾಡಿದ್ದರು. ಇದರಿಂದ ಆರ್​ಎಸ್​​ಎಸ್ ಸಹ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಸ್ಪರ್ಧೆಯನ್ನು ಪ್ರತಿಯಷ್ಠೆಯಾಗಿ ತೆಗೆದುಕೊಂಡಿದೆ.

ನಾಗ್ಪುರದಿಂದ 50 ಕಾರ್ಯಕರ್ತರು ಹುಬ್ಬಳ್ಳಿಗೆ; ಶೆಟ್ಟರ್ ಮೇಲೆ ನಿಗಾ

ನಾಗ್ಪುರದಿಂದ ಸುಮಾರು 50 ಆರೆಸ್ಸೆಸ್ ಕಾರ್ಯಕರ್ತರನ್ನು ಹುಬ್ಬಳ್ಳಿಗೆ ಕರೆಸಿಕೊಳ್ಳಲಾಗಿದ್ದು, ಅವರಿಗೆ ವಿವಿಧ ಸಂಘಟನಾ ಜವಾಬ್ದಾರಿಗಳನ್ನು ವಹಿಸಲಾಗಿದೆ ಎಂದು ಹೇಳಲಾಗಿದೆ. ಲಿಂಗಾಯತ ಸಮುದಾಯಕ್ಕೆ ಸೇರಿದ ನಾಯಕರನ್ನು ಪಕ್ಷದಿಂದ ದೂರವಿಡುವ ಪ್ರತಿಪಕ್ಷ ಕಾಂಗ್ರೆಸ್‌ನ ತಂತ್ರಕ್ಕೆ ಪ್ರತಿ ತಂತ್ರ ಹೆಣೆಯಲು ಬಿಜೆಪಿ ಪ್ರಯತ್ನಿಸುತ್ತಿದೆ.

ಶೆಟ್ಟರ್ ಪ್ರತಿಯೊಂದು ನಡೆಯನ್ನು ಆರ್​​ಎಸ್​ಎಸ್ ಕಾರ್ಯಕರ್ತರು ಸೂಕ್ಷ್ಮವಾಗಿ ಗಮನಿಸಲು ಆರಂಭಿಸಿದ್ದಾರೆ. ಶೆಟ್ಟರ್ ಮನೆಗೆ ಹೋಗಿ ಬರುವವರ ಮೇಲೂ ನಿಗಾ ಇಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಶೆಟ್ಟರ್ ಚಲನವಲನದ ಮೇಲೆ ರಹಸ್ಯವಾಗಿ ಕಣ್ಣಿಟ್ಟಿರುವ ಆರ್​​ಎಸ್​​ಎಸ್ ಕಾರ್ಯಕರ್ತರ ತಂಡ, ಈ ಬಾರಿ ಹೇಗಾದರೂ ಮಾಡಿ ಅವರನ್ನು ಮಣಿಸಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂಬ ಶಪಥ ತೊಟ್ಟಿದೆ.

ಇದನ್ನೂ ಓದಿ: Jagadish Shettar: ಜಗದೀಶ್ ಶೆಟ್ಟರ್‌ ರ‍್ಯಾಲಿಯಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಅರೆಸ್ಟ್

ಏತನ್ಮಧ್ಯೆ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಶೆಟ್ಟರ್ ಅವರನ್ನು ಭೇಟಿ ಮಾಡಿ, ಕ್ಷೇತ್ರದಲ್ಲಿ ಪಕ್ಷದೊಳಗಿನ ಭಿನ್ನಾಭಿಪ್ರಾಯವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದಾರೆ.

ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅಳಿಯ ರಜತ್ ಮತ್ತು ಅನಿಲ್ ಕುಮಾರ್ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದರು, ಆದರೆ ಕಾಂಗ್ರೆಸ್ ಶೆಟ್ಟರ್ ಅವರಿಗೆ ಟಿಕೆಟ್ ನೀಡಿದೆ. ಹೀಗಾಗಿ ಭಿನ್ನಾಭಿಪ್ರಾಯ ಸೃಷ್ಟಿಯಾಗಿದೆ. ಗುರುವಾರ ಎರಡೂ ಬಣಗಳನ್ನು ಕರೆಸಿ ಶೆಟ್ಟರ್ ಪರ ಕೆಲಸ ಮಾಡುವಂತೆ ಸುರ್ಜೇವಾಲಾ ಸೂಚಿಸಿದ್ದರು.

ಕಾಂಗ್ರೆಸ್ 40 ನಾಯಕರ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಶೆಟ್ಟರ್ ಹೆಸರಿದ್ದು, ಕಿತ್ತೂರು-ಕರ್ನಾಟಕ ಭಾಗದಲ್ಲಿ ಅವರನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ