ಬೆಂಗಳೂರು: ಮತದಾನಕ್ಕೆ ಕೇವಲ ನಾಲ್ಕು ದಿನವಷ್ಟೇ ಬಾಕಿ ಇದೆ(Karnataka Assembly Elections 2023). ಮತದಾರರ ಮನಗೆಲ್ಲೋಕೆ ಪ್ರಚಾರದ ನಡುವೆ ಝಣಝಣ ಕಾಂಚಾಣ ಸದ್ದು ಮಾಡ್ತಿದೆ(Money Seized). ಇನ್ನೇನು ಮತದಾರರ ಕೈ ಸೇರಬೇಕು ಅನ್ನುವಾಗ್ಲೇ ಕೋಟಿ ಕೋಟಿ ಹಣ ಜಪ್ತಿಯಾಗಿದೆ. ಶಿವಾಜಿನಗರದಲ್ಲಿ ಬೂತ್ ಲೀಡರ್ಗಳಿಗೆ ಹಂಚಲು ತಂದಿದ್ದ 7 ಲಕ್ಷದ 60 ಸಾವಿರ ನಗದನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಮತ್ತೊಂದೆಡೆ ಮತದಾರರಿಗೆ ಹಂಚಲು ಸಂಗ್ರಹಿಸಲಾಗಿದ್ದ 4 ಕೋಟಿ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಶಿವಾಜಿನಗರದಲ್ಲಿ ಹಣ ಹಂಚುತ್ತಿದ್ದ ಮಾಹಿತಿ ಆಧರಿಸಿ ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಪೊಲೀಸರು ದಾಳಿ ನಡೆಸಿದ್ದು ಲಕ್ಷ ಲಕ್ಷ ಹಣ ಪತ್ತೆಯಾಗಿದೆ. ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಬಿಜೆಪಿ ಅಭ್ಯರ್ಥಿ ಚಂದ್ರು ಪರ ಬೂತ್ ಲೀಡರ್ಗಳಿಗೆ ತಲಾ 10 ಸಾವಿರದಂತೆ ಹಣ ಹಂಚಲು ನಗದು ತಂದಿರುವುದಾಗಿ ಮಾಹಿತಿ ಸಿಕ್ಕ ನಂತರ ದಾಳಿ ನಡೆಸಿದ ಅಧಿಕಾರಿಗಳಿಗೆ ಇಬ್ಬರು ಹಣದ ಸಮೇತ ಸಿಕ್ಕಿಬಿದ್ದಿದ್ದಾರೆ. ಭಾಸ್ಕರ್ ಹಾಗು ಪ್ರಿನ್ಸ್ ಎಂಬ ಇಬ್ಬರನ್ನು ಶಿವಾಜಿನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದು ಪರಿಶೀಲನೆ ವೇಳೆ 7 ಲಕ್ಷದ 60 ಸಾವಿರ ನಗದು ಪತ್ತೆಯಾಗಿದೆ. ಇನ್ನು ವಿಚಾರಣೆ ವೇಳೆ ಹಣ ತನ್ನದು ಎಂದು ಬಾಸ್ಕರ್ ಹೇಳಿಕೆ ನೀಡಿದ್ದಾನೆ. ಬ್ಯಾಂಕ್ ನಿಂದ ಹಣ ಡ್ರಾ ಮಾಡಿ ತಂದಿರುವುದಾಗಿ ತಿಳಿಸಿದ್ದಾನೆ. ಹೀಗಾಗಿ ಸೂಕ್ತ ದಾಖಲೆಗಳನ್ನು ಸಲ್ಲಿಸಲು ಸೂಚಿಸಲಾಗಿದ್ದು ಸದ್ಯ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮತದಾರರಿಗೆ ಹಂಚಲು 4 ಕೋಟಿ ಹಣ ಸಂಗ್ರಹ
ಚಿನ್ನದ ನಾಡು ಕೋಲಾರದಲ್ಲಿ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸ್ರು ಭರ್ಜರಿ ಭೇಟೆಯಾಡಿದ್ದಾರೆ. ಐಷಾರಾಮಿ ವಿಲ್ಲಾ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು ಬರೋಬ್ಬರಿ ನಾಲ್ಕು ಕೋಟಿ ಹಣ ಜಪ್ತಿ ಮಾಡಿದ್ದಾರೆ. ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ ಹಂಚಲು ಸುಮಾರು 4.05 ಕೋಟಿ ರೂಪಾಯಿ ಹಣ ಇಟ್ಟಿದ್ರು. ಖಚಿತ ಮಾಹಿತಿ ಮೇರೆಗೆ ಕೆಜಿಎಫ್ ಎಸ್ಪಿ ಧರಣಿದೇವಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಜಿಯೋನ್ ಹಿಲ್ಸ್ ಗಾಲ್ಫ್ ರೆಸಾರ್ಟ್ನ ವಿಲ್ಲಾ ನಂಬರ್-279ರ ರೂಮ್ಗೆ ಎಂಟ್ರಿಕೊಟ್ಟಿದ್ದ ಅಧಿಕಾರಿಗಳು ಒಂದು ಕ್ಷಣ ದಂಗಾಗಿದ್ರು. ಯಾಕಂದ್ರೆ, ಮಂಚದ ಮೇಲೆ ಐನೂರು, ಇನ್ನೂರು, 2 ಸಾವಿರ ಮುಖಬೆಲೆಯ ಕಂತೆ ಕಂತೆ ಹಣ ಜೋಡಿಸಿಟ್ಟಿದ್ರು. ಬಂಗಾರಪೇಟೆ ಪಂಚಾಯ್ತಿ ಹೆಸರು, ಬೂತ್ಗಳ ಹೆಸ್ರು ಬರೆದು ಎನ್ವಲಪ್ ಕವರ್ಗಳಲ್ಲಿ ಹಣ ಇಟ್ಟಿದ್ರು. ರೂಮ್ನಲ್ಲಿ ಒಟ್ಟು 2 ಕೋಟಿ ಹಣ ಪತ್ತೆಯಾಗಿತ್ತು. ಇದೇ ವಿಲ್ಲಾದ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಪರಿಶೀಲನೆ ನಡೆಸಿದಾಗ ಮೂರು ಗೋಣಿ ಚೀಲಗಳಲ್ಲಿ ತುಂಬಿಸಿ ಇಟ್ಟಿದ್ದ ಒಂದೂವರೆ ಕೋಟಿ ಹಣ ಪತ್ತೆಯಾಗಿದೆ. ಒಟ್ಟಾರೆ 4.5 ಕೋಟಿ ಹಣವನ್ನ ಜಪ್ತಿ ಮಾಡಲಾಗಿದೆ. ಅಧಿಕಾರಿಗಳು ದಾಳಿ ಮಾಡೋಕು ಮುಂಚೆಯೇ ಹಣ ತಂದಿಟ್ಟವರು ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ಸ್ವಾಗತಿಸಲು ಬಂದಿದ್ದ ಉದ್ಯಮಿ ಸೂಟ್ಕೇಸ್ನಲ್ಲಿ ಹಣ ಪತ್ತೆ, ನೋಟಿಸ್ ನೀಡಿ ಹಣ ಸೀಜ್
ಇನ್ನು ದಾಖಲೆಗಳ ಪರಿಶೀಲನೆ ನಡೆಸಿದಾಗ ಈ ವಿಲ್ಲಾ ಬೆಂಗಳೂರು ಮೂಲದ ಪೋನಿಕಾ ಕಾಪಾಡಿಯಾ ವೈಫ್ ಆಫ್ ಕರನ್ ಕಾಪಾಡಿಯಾ ಎಂಬುವರ ಹೆಸರಿನಲ್ಲಿದೆ. ರಮೇಶ್ ಯಾದವ್ ಅನ್ನೋರು ಬಾಡಿಗೆ ಪಡೆದಿದ್ರು ಎಂಬುದು ಗೊತ್ತಾಗಿದೆ. ಕಾರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮುಖಂಡನದ್ದು ಎಂಬ ಮಾಹಿತಿ ಸಿಕ್ಕಿದ್ದು, ಪೊಲೀಸ್ರು ತನಿಖೆ ಕೈಗೊಂಡಿದ್ದಾರೆ.
ಯಾದಗಿರಿ ಜಿಲ್ಲೆಯ ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶರಣಗೌಡ ಕಂದಕೂರ್ ಪರವಾಗಿ ಎಪಿಎಂಸಿ ಯಾರ್ಡ್ ನಲ್ಲಿ ಹಣ ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಬಿಜೆಪಿ ಅಭ್ಯರ್ಥಿ ಲಲಿತಾ ಅನಪುರ ದೂರಿನ ಮೇರೆಗೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಮತದಾರರನ್ನ ಸೇರಿಸಿ ಹಣ ಹಂಚಲಾಗುತ್ತಿದೆ ಎಂದು ದೂರು ದಾಖಲಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ