ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿದ ಕಾಂಗ್ರೆಸ್: ಇಂದಿನಿಂದ ಜಿಲ್ಲಾವಾರು ಸರಣಿ ಸಭೆ ಆರಂಭ

ಮುಂದಿನ ವಿಧಾನಸಭಾ ಚುನಾವಣೆ ವೇಳೆ ಅನುಸರಿಸಬೇಕಾದ ತಂತ್ರಗಳ ಕುರಿತು ಸಭೆಯಲ್ಲಿ ಆಯಾ ಜಿಲ್ಲೆಗಳ ನಾಯಕರು, ಅಧ್ಯಕ್ಷರ ಜೊತೆ ಚರ್ಚೆ ನಡೆಯಲಿದೆ.

ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿದ ಕಾಂಗ್ರೆಸ್: ಇಂದಿನಿಂದ ಜಿಲ್ಲಾವಾರು ಸರಣಿ ಸಭೆ ಆರಂಭ
ಸಿದ್ದರಾಮಯ್ಯ, ಡಿಕೆ ಶಿವಕುಮಾರ್
Edited By:

Updated on: Nov 04, 2022 | 12:37 PM

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯು ಕಾಂಗ್ರೆಸ್​ ಮತ್ತು ಬಿಜೆಪಿಗೆ ಹಲವು ಕಾರಣಗಳಿಂದ ಮುಖ್ಯವಾಗಿದೆ. ಭಾರತದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆಯಿರುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಮತ್ತೊಂದೆಡೆ ದಕ್ಷಿಣ ಭಾರತದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿಗೆ ಇರುವ ಏಕೈಕ ಆಸರೆ ಕರ್ನಾಟಕವೇ ಆಗಿದೆ. ಹೀಗಾಗಿ ಎರಡೂ ಪಕ್ಷಗಳ ನಡುವೆ ಜಿದ್ದಾಜಿದ್ದಿ ಹೋರಾಟ ಆರಂಭವಾಗಿದ್ದು, ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಸಂಘಟನೆ ಚುರುಕುಗೊಂಡಿದೆ.

ಪ್ರತಿ ಬಾರಿ ಟಿಕೆಟ್ ಹಂಚಿಕೆಯಲ್ಲಿ ಗೊಂದಲ ಮಾಡಿಕೊಳ್ಳುತ್ತಿದ್ದ ಕಾಂಗ್ರೆಸ್ ಈ ಬಾರಿ ಸ್ವಲ್ಪ ಬೇಗನೇ ಎಚ್ಚೆತ್ತುಕೊಂಡಿದೆ. ಸಂಘಟನೆ ಬಲಗೊಳಿಸುವ ಉದ್ದೇಶದಿಂದ ಇಂದಿನಿಂದ (ನ 4) ಜಿಲ್ಲಾವಾರು ಸರಣಿ ಸಭೆಗಳನ್ನು ಕಾಂಗ್ರೆಸ್ ಆಯೋಜಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಏರ್ ಪೋರ್ಟ್ ರಸ್ತೆಯ ಖಾಸಗಿ ಹೋಟೆಲ್​ನಲ್ಲಿ ಸಭೆಗಳನ್ನು ನಿಗದಿಪಡಿಸಲಾಗಿದೆ. ಇಂದು ಕೋಲಾರ, ಹಾವೇರಿ, ಹುಬ್ಬಳ್ಳಿ-ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ನಾಯಕರನ್ನು ಸಭೆಗೆ ಆಹ್ವಾನಿಸಲಾಗಿದೆ.

ನಾಳೆ (ನ 5) ಹಾಸನ, ದಕ್ಷಿಣ ಕನ್ನಡ, ಬೆಳಗಾವಿ ಜಿಲ್ಲೆಗಳ ನಾಯಕರನ್ನು ಸಭೆಗೆ ಆಹ್ವಾನಿಸಲಾಗಿದೆ. ನಾಡಿದ್ದು (ನ 8-9) ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ರಾಯಚೂರು, ವಿಜಯಪುರ, ತುಮಕೂರು ಸೇರಿದಂತೆ ಹಲ ಜಿಲ್ಲೆಗಳ ಅಧ್ಯಕ್ಷರು, ಸ್ಥಳೀಯ ನಾಯಕರ ಜೊತೆಗೆ ವರಿಷ್ಠರು ಸಭೆ ನಡೆಸಲಿದ್ದಾರೆ.

ಮುಂದಿನ ವಿಧಾನಸಭಾ ಚುನಾವಣೆ ವೇಳೆ ಅನುಸರಿಸಬೇಕಾದ ತಂತ್ರಗಳ ಕುರಿತು ಸಭೆಯಲ್ಲಿ ಆಯಾ ಜಿಲ್ಲೆಗಳ ನಾಯಕರು, ಅಧ್ಯಕ್ಷರ ಜೊತೆ ಚರ್ಚೆ ನಡೆಯಲಿದೆ. ಯಾರಿಗೆ ಟಿಕೆಟ್ ಕೊಡಬಹುದು? ಜಿಲ್ಲೆಯಲ್ಲಿ ಪಕ್ಷದ ಪರಿಸ್ಥಿತಿ ಹೇಗಿದೆ? ಜಿಲ್ಲೆಗಳಲ್ಲಿನ ಗೊಂದಲಗಳನ್ನು ಹೇಗೆ ಪರಿಹರಿಸಿಕೊಳ್ಳಬಹುದು? ಒಗ್ಗೂಡಿ ಪಕ್ಷದ ಕೆಲಸ ಮಾಡುವುದೂ ಸೇರಿದಂತೆ ಹಲವು ವಿಚಾರಗಳ ಬಗ್ಗೆ ನಾಯಕರು ಸಮಾಲೋಚನೆ ನಡೆಸಲಿದ್ದಾರೆ.