ರಾಯಚೂರು: ಬಿಜೆಪಿ ಈವರೆಗೆ ಖಾತೆ ತೆರೆಯದ ಸಿಂಧನೂರಿನಲ್ಲಿ ಪ್ರಧಾನಿ ಮೋದಿ ಮೇ 2ರಂದು ಬೃಹತ್ ಸಮಾವೇಶ
ಮೇ 2ರಂದು ಮೋದಿ ಅವರು ರಾಯಚೂರಿಗೆ ಆಗಮಿಸಲಿದ್ದು, ಸಿಂಧನೂರು ಕ್ಷೇತ್ರದಲ್ಲಿ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ರಾಯಚೂರು: ವಿಧಾನಸಭೆ ಚುನಾವಣೆ (Karnataka Assembly Elections 2023) ಪ್ರಚಾರದ ಭರಾಟೆ ಜೋರಾಗಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಕೇಂದ್ರ ನಾಯಕತ್ವದ ವರ್ಚಸ್ಸನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡು ರಾಜ್ಯದಲ್ಲಿ ಮರಳಿ ಅಧಿಕಾರದ ಗದ್ದುಗೆಗೆ ಏರಬೇಕೆಂಬ ಹಂಬಲದಲ್ಲಿ ಬಿಜೆಪಿ ಇದೆ. ಹೀಗಾಗಿ ಮೋದಿ ಸೇರಿದಂತೆ ಕೇಂದ್ರ ನಾಯಕರು ರಾಜ್ಯದಲ್ಲಿ ಭರ್ಜರಿ ಪ್ರಚಾರಕ್ಕೆ ಮುಂದಾಗಿದ್ದಾರೆ. ಬಿಜೆಪಿ ಈವರೆಗೆ ಖಾತೆ ತೆರೆಯದ ಕ್ಷೇತ್ರದಲ್ಲೇ ಮೋದಿ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಸಲು ಬಿಜೆಪಿ ಮುಂದಾಗಿದೆ. ಮೇ 2ರಂದು ಮೋದಿ ಅವರು ರಾಯಚೂರಿಗೆ ಆಗಮಿಸಲಿದ್ದು, ಸಿಂಧನೂರು ಕ್ಷೇತ್ರದಲ್ಲಿ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಿಂಧನೂರು ತಾಲ್ಲೂಕು ಹೊಸಳ್ಳಿ ಗ್ರಾಮದ ಹೊರವಲಯದಲ್ಲಿ ಸಮಾವೇಶ ನಡೆಯಲಿದೆ. ಒಟ್ಟು 20 ಎಕರೆ ಪ್ರದೇಶದಲ್ಲಿ ಸಮಾವೇಶ ನಡೆಯಲಿದೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ. ಸಮಾವೇಶದ ಸ್ಥಳದಲ್ಲಿ ಸೋಮವಾರ ಭೂಮಿ ಪೂಜೆ ನೆರೆವೇರಿಸಲಾಗಿದೆ.
ರಾಯಚೂರು ಗಡಿಯ ಕೊಪ್ಪಳ, ಬಳ್ಳಾರಿ ಭಾಗದ ಕ್ಷೇತ್ರಗಳಿಗೂ ಅನಕೂಲವಾಗುವ ನಿಟ್ಟಿನಲ್ಲಿ ಸಮಾವೇಶದ ಸ್ಥಳ ನಿಗದಿಪಡಿಸಲಾಗಿದೆ. ಸುಮಾರು 5-6 ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.
ಈ ಹಿಂದಿನ ನಾಲ್ಕು ಚುನಾವಣೆಗಳಲ್ಲಿ ಒಂದು ಬಾರಿ ಕಾಂಗ್ರೆಸ್ ಗೆದ್ದರೆ ಮತ್ತೂಂದು ಬಾರಿ ಜೆಡಿಎಸ್ ಗೆದ್ದುಕೊಂಡು ಬಂದಿರುವುದು ಸಿಂಧನೂರು ಕ್ಷೇತ್ರ ವಿಶೇಷ. ಈ ಲೆಕ್ಕಾಚಾರದ ಪ್ರಕಾರ ಈ ಬಾರಿ ಕಾಂಗ್ರೆಸ್ ಗೆಲುವು ಸಾಧಿಸಬೇಕು. ಆದರೆ ಸದ್ಯದ ರಾಜಕೀಯ ಚಿತ್ರಣ ಬದಲಾಗಿದ್ದು, ಬಿಜೆಪಿಯೂ ಪ್ರಬಲ ಪೈಪೋಟಿ ಒಡ್ಡುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.
ಅಧಿಕೃತಗೊಳ್ಳದ ಸುದೀಪ್, ಯೋಗಿ ವೇಳಾಪಟ್ಟಿ
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ನಟ ಸುದೀಪ್ ಅವರ ಚುನಾವಣಾ ಪ್ರಚಾರದ ವೇಳಾಪಟ್ಟಿ ಇನ್ನೂ ಅಧಿಕೃತಗೊಂಡಿಲ್ಲ. ಜಿಲ್ಲೆಯ ನಾಲ್ಕು ಎಸ್ಟಿ ಮೀಸಲು ಕ್ಷೇತ್ರಗಳಲ್ಲಿ ಸುದೀಪ್ ಪ್ರಚಾರ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಪ್ರಸ್ತಾವನೆ ಇದೆ. ಈ ಬಗ್ಗೆ ನಟ ಸುದೀಪ್ ಹಾಗೂ ರಾಜ್ಯ ನಾಯಕರ ಜೊತೆ ಚರ್ಚೆ ಮಾಡಲಾಗಿದೆ. ಮಾನ್ವಿ ಕ್ಷೇತ್ರದಲ್ಲಿ ನಟ ಸುದೀಪ್ ನೇತೃತ್ವದ ಬೃಹತ್ ಕಾರ್ಯಕ್ರಮ ನಡೆಸುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಏಪ್ರಿಲ್ 29ರಂದು ಬೆಳಗಾವಿಯ ಕುಡಚಿಗೆ ಮೋದಿ
ಏಪ್ರಿಲ್ 29ರಂದು ಬೆಳಗಾವಿ ಜಿಲ್ಲೆಯ ಕುಡಚಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ರಾಜ್ಯದಲ್ಲಿ ಈ ಬಾರಿ ಬಿಜೆಪಿ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರಲಿದೆ. ಎರಡು ಬಾರಿ ನಾವು ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಏಪ್ರಿಲ್ 29ರಂದು ಕುಡಚಿಗೆ ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಆಗಮನ: ಪ್ರಹ್ಲಾದ್ ಜೋಶಿ
ಚುನಾವಣೆಗೆ ನಾಮಪತ್ರ ವಾಪಸ್ ಪಡೆಯುವ ಅವಧಿ ಇಂದಿಗೆ (ಸೋಮವಾರ) ಮುಕ್ತಾಯಗೊಳ್ಳುತ್ತಿದ್ದು, ಇನ್ನು ಪ್ರಚಾರದ ತೀವ್ರತೆ ಹೆಚ್ಚಿಸಲು ಬಿಜೆಪಿ ಮುಂದಾಗಿದೆ. ಮೋದಿ ಅವರನ್ನು ಹಲವು ಬಾರಿ ರಾಜ್ಯಕ್ಕೆ ಕರೆಸಿ ಪ್ರಚಾರ ಸಮಾವೇಶಗಳನ್ನು ಆಯೋಜಿಸುವುದಾಗಿ ಬಿಜೆಪಿ ತಿಳಿಸಿದೆ. ಈಗಾಗಲೇ ಸುಮಾರು 8 ಬಾರಿ ಪ್ರಧಾನಿಯವರು ರಾಜ್ಯಕ್ಕೆ ಆಗಮಿಸಿ ಹಲವು ಸರ್ಕಾರಿ ಹಾಗೂ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ