ಹಾಸನ: ಹಾಸನ ಜೆಡಿಎಸ್ ಟಿಕೆಟ್ಗಾಗಿ (Hassan JDS Ticket) ಹೆಚ್ಡಿ ರೇವಣ್ಣ(HD Revanna) ಹಾಗೂ ಕುಮಾರಸ್ವಾಮಿ ಮಧ್ಯೆ ಮುಸುಕಿನ ಗುದ್ದಾಟ ನಡೆದಿದೆ. ಈ ಬಾರಿ ಹಾಸನ ವಿಧಾನಸಭೆ ಟಿಕೆಟ್ (Hassan JDS Ticket) ಸ್ವರೂಪ್ ಅವರಿಗೆ ಕೊಡಿಸಲು ಹೆಚ್ಡಿಕೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇತ್ತ ರೇವಣ್ಣ ಕುಟುಂಬ ಸಹ ಟಿಕೆಟ್ಗಾಗಿ ಪಟ್ಟು ಹಿಡಿದಿದೆ. ಇದರ ಮಧ್ಯೆ ಇದೀಗ ಟಿಕೆಟ್ ಆಕಾಂಕ್ಷಿಗಳಾದ ಎಚ್.ಪಿ.ಸ್ವರೂಪ್ ಪ್ರಕಾಶ್(Swaroop Prakash) ಹಾಗೂ ಹೆಚ್ಡಿ ರೇವಣ್ಣ ಭೇಟಿಯಾಗಿದ್ದು, ರಹಸ್ಯ ಮಾತುಕತೆ ನಡೆಸಿದ್ದಾರೆ. ಇದು ಹಾಸನ ಜಿಲ್ಲಾ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ: ಮಾರ್ಚ್ 10 ರಿಂದ ಹಾಸನ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ಆರಂಭ: ಹೆಚ್. ಡಿ ರೇವಣ್ಣ
ಇಂದು ಹಾಸನದಲ್ಲಿ H.D.ರೇವಣ್ಣ ಭೇಟಿಯಾದ ಟಿಕೆಟ್ ಆಕಾಂಕ್ಷಿ ಸ್ವರೂಪ್, ಅರ್ಧಗಂಟೆಗೂ ಹೆಚ್ಚು ಮಾತುಕತೆ ನಡೆಸಿದ್ದಾರೆ. ಕಳೆದ ಒಂದು ತಿಂಗಳಿಂದ ಹಾಸನ ಟಿಕೆಟ್ ಚರ್ಚೆ ನಡುವೆ ಮೊದಲ ಬಾರಿಗೆ ಸ್ವರೂಪ್ ಹಾಗೂ ರೇವಣ್ಣ ಭೇಟಿಯಾಗಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ನಾಳೆಯಿಂದ(ಮಾ.10) ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಥಯಾತ್ರೆ ಯಶಸ್ವಿಗಾಗಿ ಎಲ್ಲರನ್ನು ಒಗ್ಗೂಡಿಸಲು ರೇವಣ್ಣ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.
ಇನ್ನು ರೇವಣ್ಣ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವರೂಪ್, ರೇವಣ್ಣ ಸಾಹೇಬರನ್ನು ಭೇಟಿಯಾಗಿ ವಾರ, ಹತ್ತು ದಿನ ಆಗಿತ್ತು. ಹೊಸದು ಏನಿಲ್ಲ, ಸಾಹೇಬ್ರು ನಮ್ಮ ಪಕ್ಷದ ವರಿಷ್ಠರು, ನಾಯಕರು ಜನರಲ್ ಆಗಿ ಭೇಟಿ ಮಾಡಲು ಬಂದೆ. ಪಂಚರತ್ನ ಯಾತ್ರೆ ಬಗ್ಗೆ ಕುಳಿತು ಮಾತನಾಡೋಣ ಅಂತ ಹೇಳಿದ್ದಾರೆ ಅಷ್ಟೇ. ಟಿಕೆಟ್ ವಿಚಾರ ಮಾತನಾಡಿಲ್ಲ. ಮಾತನಾಡೋಣ ಎಂದು ಹೇಳಿದ್ದಾರೆ. ದೊಡ್ಡವರೆಲ್ಲ ಕುಳಿತುಕೊಂಡು ತೀರ್ಮಾನ ಮಾಡೋಣ ಎಂದಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಹೌದು…ಈಗಾಗಲೇ ರೇವಣ್ಣ ಕುಟುಂಬ ಹಾಗೂ ಕುಮಾರಸ್ವಾಮಿ ನಡುವೆ ಹಾಸನ ಟಿಕೆಟ್ ವಿಚಾರವಾಗಿ ಪರಸ್ಪರ ಒಂದು ಸುತ್ತಿನ ಮಾತಿನ ಸಮರ ನಡೆದಿದೆ. ಇದು ತಾರಕಕ್ಕೇರುತ್ತಿದ್ದಂತೆಯೇ ದೊಡ್ಡಗೌಡ್ರು ಮಧ್ಯೆ ಪ್ರವೇಶಿಸಿ ಅಣ್ಣ-ತಮ್ಮರ ಮುಸುಕಿನ ಗುದ್ದಾಟಕ್ಕೆ ಬ್ರೇಕ್ ಹಾಕಿದ್ದರು. ಅಲ್ಲದೇ ಟಿಕೆಟ್ ವಿಚಾರವಾಗಿ ಯಾವುದೇ ದಿಢೀರ್ ನಿರ್ಧಾರ ತೆಗೆದುಕೊಳ್ಳುವುದ ಬೇಡ ಎಂದು ದೇವೇಗೌಡ್ರು ಕುಮಾರಸ್ವಾಮಿಗೆ ಸಲಹೆ ಕೊಟ್ಟಿದ್ದಾರೆ. ಈ ಮೂಲಕ ನಾನು ಎಲ್ಲವನ್ನು ಚರ್ಚಿಸಿ ತಿಳಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಹಾಸನ ಟಿಕೆಟ್ ವಿಚಾರವಾಗಿ ಯಾವುದೇ ಮಾತುಗಳನ್ನಾಡದೇ ದೊಡ್ಡಗೌಡ್ರತ್ತ ಬೆರಳು ತೋರಿಸಿದ್ದಾರೆ.
ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಹಾಸನ ಟಿಕೆಟ್ ಯಾರಿಗೆ ಎಂದು ದೇವೇಗೌಡ್ರು ಅಂತಿಮಗೊಳಿಸಲಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಒಟ್ಟಿನಲ್ಲಿ ಹಾಸನ ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದರು ಇದೀಗ ದಿಢೀರ್ ಮುಖಾಮುಖಿ ಭೇಟಿಯಾಗಿದ್ದು, ಸಂಚಲನ ಮೂಡಿಸಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 4:02 pm, Wed, 8 March 23