ಕಾಂಗ್ರೆಸ್‌ಗೆ ಮತ ಹಾಕಿ ಎಂದ ಹೆಚ್​ಡಿ ಕುಮಾರಸ್ವಾಮಿ ಪರಮಾಪ್ತ: ವಿಡಿಯೋ ಬೆನ್ನಲ್ಲೇ ಫೋಟೋ ವೈರಲ್

|

Updated on: Apr 26, 2023 | 8:46 AM

ಈ ಬಾರಿ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಲು ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲೇಬೇಕೆಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಪಣತೊಟ್ಟಿದ್ದಾರೆ. ಆದ್ರೆ, ಮತ್ತೊಂದೆಡೆ ಕುಮಾರಸ್ವಾಮಿಯವರ ಪರಮಾಪ್ತ ನಡೆ ರಾಜ್ಯ ರಾಜಕಾರದಲ್ಲಿ ಸಂಚಲನ ಮೂಡಿಸಿದೆ.

ಕಾಂಗ್ರೆಸ್‌ಗೆ ಮತ ಹಾಕಿ ಎಂದ ಹೆಚ್​ಡಿ ಕುಮಾರಸ್ವಾಮಿ ಪರಮಾಪ್ತ: ವಿಡಿಯೋ ಬೆನ್ನಲ್ಲೇ ಫೋಟೋ ವೈರಲ್
ಕಾಂಗ್ರೆಸ್​ ಕಚೇರಿಯಲ್ಲಿ ಜೆಡಿಎಸ್​ ಎಂಎಲ್​ಸಿ ಎಸ್​ಎಲ್ ಬೋಜೇಗೌಡ
Follow us on

ಚಿಕ್ಕಮಗಳೂರು: ಚಿಕ್ಕಮಗಳೂರು(chikkamagaluru )ವಿಧಾನಸಭಾ ಕ್ಷೇತ್ರದಲ್ಲಿ ತಮ್ಮದೇ ಪಕ್ಷದ ಅಭ್ಯರ್ಥಿ ಕಣದಲ್ಲಿರುವಾಗಲೇ ಜೆಡಿಎಸ್ ವಿಧಾನಪರಿಷತ್ ಸದಸ್ಯ ಎಸ್​ಎಲ್ ಬೋಜೇಗೌಡ(JDS MLC SL Bojegowda) ಅವರು ಕಾಂಗ್ರೆಸ್​ಗೆ (Congress) ಮತ ಹಾಕುವಂತೆ ತಮ್ಮದೇ ಕಾರ್ಯಕರ್ತರಿಗೆ ತಾಕೀತು ಮಾಡುವ ಮೂಲಕ ಅಧಿಕೃತ ಅಭ್ಯರ್ಥಿ ತಿಮ್ಮಶೆಟ್ಟಿ ಅವರಿಗೆ ಶಾಕ್ ನೀಡಿದ್ದಾರೆ. ಕಾಂಗ್ರೆಸ್​ಗೆ ಮತ ಹಾಕಿ ವಿಡಿಯೋ ಬೆನ್ನಲ್ಲೇ ಇದೀಗ ಫೋಟೋ ಸಹ ವೈರಲ್ ಆಗುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಇನ್ನು ಬೋಜೇಗೌಡ ನಡೆಯಿಂದ ಜೆಡಿಎಸ್ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ.

ಇದನ್ನೂ ಓದಿ: ಲಕ್ಷ್ಮಣ ಸವದಿ ರಾಜಕೀಯ ಜೀವನ ಅಂತ್ಯಗೊಳಿಸಲು ರಮೇಶ್ ಜಾರಕಿಹೊಳಿ ಪಣ, ಪ್ರಮುಖ ಹುದ್ದೆ ಕಿತ್ತುಕೊಳ್ಳಲು ಮೆಗಾ ಪ್ಲಾನ್

ಬೋಜೇಗೌಡ ಅವರು ತಮ್ಮ ನಿವಾಸದಲ್ಲೇ ಜೆಡಿಎಸ್ ಕಾರ್ಯಕರ್ತರನ್ನು ಕರೆಸಿ ಈ ಬಾರಿ ಎಲ್ಲರೂ ಸೇರಿ ಕಾಂಗ್ರೆಸ್ ಗೆಲ್ಲಿಸಿ ಎಂದು ಕರೆ ನೀಡುವ ವೀಡಿಯೋ ಸಾಮಾಜಿಕ ತಾಣಗದಲ್ಲಿ ವೈರಲ್ ಆಗಿತ್ತು. ಇದೀಗ ಕಾಂಗ್ರೆಸ್ ಕಚೇರಿಯಲ್ಲಿ ಮುಖಂಡರ ಜೊತೆ ಇರುವ ಫೋಟೋ ವೈರಲ್ ಆಗಿದೆ. ಸಖರಾಯಪಟ್ಟಣ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮುಖಂಡ ಮಹಡಿಮನೆ ಸತೀಶ್ ಜೊತೆ ಸಭೆ ಮಾಡಿರುವ ಫೋಟೋಗಳು ಹರಿದಾಡುತ್ತಿದೆ. ಎಸ್​ಎಲ್ ಭೋಜೇಗೌಡ ಅವರು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಪರಮಾಪ್ತರಾಗಿದ್ದು, ಚಿಕ್ಕಮಗಳೂರಿನಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್​​ ಜೋಡಿಸಿದ್ರಾ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ. ಯಾಕಂದ್ರೆ ಇತ್ತೀಚೆಗೆ ಬಿಜೆಪಿ ಅಭ್ಯರ್ಥಿ ಸಿಟಿ ರವಿ ಅವರು ಇಲ್ಲಸಲ್ಲದ ಕೆಲ ಆರೋಪಗಳನ್ನು ಮಾಡಿದ್ದಕ್ಕೆ ಅವರನ್ನು ಸೋಲಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ಒಳ‌ ಒ‌ಪ್ಪಂದ ಮಾಡಿಕೊಂಡಿವೆಯಾ ಬಗ್ಗೆ ಚರ್ಚೆಗಳು ಶುರುವಾಗಿವೆ. ಬೋಜೇಗೌಡ ಅವರ ಈ ನಡೆಯಿಂದ ಜೆಡಿಎಸ್ ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದಾರೆ.

ಬೋಜೇಗೌಡರ ವಿಡಿಯೋನಲ್ಲೇನಿದೆ?

ಬೋಜೇಗೌಡ ಅವರು ತಮ್ಮ ನಿವಾಸದಲ್ಲೇ ಜೆಡಿಎಸ್ ಕಾರ್ಯಕರ್ತರನ್ನು ಕರೆಸಿ ಈ ಬಾರಿ ಎಲ್ಲರೂ ಸೇರಿ ಕಾಂಗ್ರೆಸ್ ಗೆಲ್ಲಿಸಿ ಎಂದು ಕರೆ ನೀಡುವ ವೀಡಿಯೋ ಸಾಮಾಜಿಕ ತಾಣಗದಲ್ಲಿ ವೈರಲ್ ಆಗಿದ್ದು, ಏಯ್, ಅದೆಲ್ಲಾ ಗೊತ್ತಿಲ್ಲಾ ಕೇಳ್ರೋ.. ಈ ಸಾರಿ ನೀವೆಲ್ಲಾ ಸೇರಿ ಕಾಂಗ್ರೆಸ್​ಗೆ ವೋಟ್ ಹಾಕಬೇಕು ಅರ್ಥವಾಯ್ತ ಎನ್ನುತ್ತಿದ್ದಂತೆ ಕಾರ್ಯರ್ತರೊಬ್ಬರು ಸಾರ್ ನಾವು ಇದುವರೆಗೆ ಜೆಡಿಎಸ್‌ಗೆ ವೋಟ್ ಹಾಕಿಕೊಂಡು ಬಂದಿದ್ದೇವೆ. ಈಗ ಬದಲಿಸಬೇಕು ಎಂದರೆ ಕೈ ಮುಂದೆ ಬರುವುದಿಲ್ಲ ಎಂದು ಹೇಳುತ್ತಾರೆ. ಆಯ್ತಪ್ಪ ಇದೊಂದು ಸಾರಿ ಹಾಕ್ರಪ್ಪ ಎಂದು ಬೋಜೇಗೌಡರು ಹೇಳುವುದು ವೀಡಿಯೋದಲ್ಲಿ ಸೆರೆಯಾಗಿದೆ.

ಈ ವೇಳೆ ಪಕ್ಕದಲ್ಲೇ ಕಾಂಗ್ರೆಸ್ ಮುಖಂಡ ಈ ಬಾರಿ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ ಬಿ.ಹೆಚ್.ಹರೀಶ್ ಅವರೂ ಇರುವುದು ವೀಡಿಯೋದಲ್ಲಿ ಕಾಣುತ್ತದೆ. ಜೆಡಿಎಸ್ ಅಭ್ಯರ್ಥಿ ತಿಮ್ಮಶೆಟ್ಟಿ ಇನ್ನೂ ಕಣದಲ್ಲಿರುವಾಗಲೇ ಬೋಜೇಗೌರು ತಮ್ಮದೇ ಅಭ್ಯರ್ಥಿ ವಿರುದ್ಧ ಪ್ರಚಾರಕ್ಕಿಳಿದಿರುವ ಬಗ್ಗೆ ಸಾಮಾನ್ಯ ಕಾರ್ಯಕರ್ತರ ಅಸಮಾಧಾನಕ್ಕೂ ಕಾರಣವಾಗಿದೆ. ಕೆಲವರು ಸಾಮಾಜಿಕ ಜಾಲತಾಣದಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕ ವಲಯದಲ್ಲೂ ಈ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿದೆ. ಕಳೆದ ಎರಡು ತಿಂಗಳಿನಿಂದಲೂ ಟಿಕೆಟ್ ನೀಡುವ ವಿಚಾರದಲ್ಲಿ ಇನ್ನಿಲ್ಲದಂತೆ ಸತಾಯಿಸಿ, ಕಣ್ಣೀರು ಹಾಕಿಸಿ ಕೊನೇ ಘಳಿಗೆಯಲ್ಲಿ ಟಿಕೆಟ್ ಘೋಷಿಸಿದ ನಂತರವೂ ತಿಮ್ಮಶೆಟ್ಟರಿಗೆ ಪಕ್ಷದ ಮುಖಂಡರಿಂದಲೇ ಕಿರುಕುಳ ಮುಂದುವರಿದಿದೆ. ಇದು ಒಳ್ಳೆಯ ರಾಜಕಾರಣವಲ್ಲ ಎಂದು ಕಾರ್ಯಕರ್ತರು ಅಭಿಪ್ರಾಯಿಸಿದ್ದಾರೆ.

ಸಿಟಿ ರವಿ ಅವರ ಪರಮಾಪ್ತ ತಮ್ಮಯ್ಯ ಅವರು ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾಗಿ ಚಿಕ್ಕಮಗಳೂರು ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಚಿಕ್ಕಮಗಳೂರಿನಲ್ಲಿ ಲಿಂಗಾಯತ ಹಾಗೂ ಒಕ್ಕಲಿಗ ಮತಗಳು ಹೆಚ್ಚಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ ತಮ್ಮಯ್ಯ ಅವರಿಗೆ ಮಣೆ ಹಾಕಿದೆ. ಇದೀಗ ಜೆಡಿಎಸ್​ ಎಂಎಲ್​ಸಿ ಕಾಂಗ್ರೆಸ್​ ಪರ ಒಲವು ತೋರಿಸಿದ್ದು, ಸಿಟಿ ರವಿ ಅವರಿಗೆ ಕಂಟಕವಾಗುವ ಸಾಧ್ಯತೆಗಳಿವೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ