ಸಿದ್ದರಾಮೋತ್ಸವಕ್ಕೆ ಕೌಂಟರ್ ಕೊಡಲು ದಾವಣಗೆರೆಯಲ್ಲಿ ಬಿಜೆಪಿಯಿಂದ ಕೇಸರಿ ಮಹಾಸಂಗಮ, ಗುಜರಾತ್ ಮಾದರಿಯಲ್ಲಿ ಹಲವು ಸಮಾವೇಶ, ಯಾತ್ರೆ
ಕರ್ನಾಟಕ ವಿಧಾನಸಭೆ ಚುನಾವಣೆಗೆ ರಾಜ್ಯ ಬಿಜೆಪಿ ರಣಕಹಳೆ ಮೊಳಗಿದ್ದು, ಸಮಾವೇಶಗಳ ಮೇಲೆ ಸಮಾವೇಶಗಳನ್ನು ಆಯೋಜಿಸಲು ತೀರ್ಮಾನಿಸಿದೆ. ಹಾಗಾದ್ರೆ, ಇಂದಿನ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಏನೆಲ್ಲಾ ತೀರ್ಮಾನಗಳನ್ನು ಕೈಗೊಳ್ಳಲಾಯ್ತು ಎನ್ನುವ ಮಾಹಿತಿ ಈ ಕೆಳಗಿನಂತಿದೆ.
ಬೆಂಗಳೂರು: ವಿಧಾನಸಭೆ ಚುನಾವಣೆ (Karnataka Assembly Elections 2023) ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಬೆಳವಣಿಗೆಗಳು ಗರಿಗೆದರಿವೆ. ತಂತ್ರ, ರಣತಂತ್ರಗಳನ್ನು ರೂಪಿಸಿ ಕಾಂಗ್ರೆಸ್‌ಗೆ ಟಕ್ಕರ್ ಕೊಡಲು ಮುಂದಾಗಿದೆ. ಗುಜರಾತ್ ಮಾದರಿಯಲ್ಲಿ ಸಮಾವೇಶ (conventions) ಹಾಗೂ ಯಾತ್ರೆಗಳನ್ನು (Yatra’s) ಮಾಡಲು ನಿರ್ಧಾರ ಮಾಡಿದೆ. ಈ ಮೂಲಕ ಚುನಾವಣೆಗೆ ಬಿಜೆಪಿ ಸಜ್ಜುಗೊಳ್ಳುತ್ತಿದೆ. ಹೌದು.. ಇದಕ್ಕೆ ಪೂರಕವೆಂಬಂತೆ ಇಂದು (ಫೆಬ್ರವರಿ 03) ಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆದಿದ್ದು, ಸಭೆಯಲ್ಲಿ ರಥಯಾತ್ರೆ ಮಾದರಿಯಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ. ಅಲ್ಲದೇ ದಾವಣಗೆರೆಯಲ್ಲಿ ನಡೆದಿದ್ದ ಸಿದ್ದರಾಮೋತ್ಸವಕ್ಕೆ ಕೌಂಟರ್ ನೀಡಲು ದಾವಣಗೆರೆಯಲ್ಲೇ ಕೇಸರಿ ಮಹಾಸಂಗಮ ಸಮಾವೇಶ ಮಾಡಲು ನಿರ್ಧರಿಸಲಾಗಿದೆ.
ಹೌದು…ದಾವಣಗೆರೆಯಲ್ಲಿ ನಡೆದಿದ್ದ ಸಿದ್ದರಾಮೋತ್ಸವಕ್ಕೆ ಬಿಜೆಪಿ ಕೌಂಟರ್ ನೀಡಲು ದಾವಣಗೆರೆಯಲ್ಲೇ ಕೇಸರಿ ಮಹಾಸಂಗಮ ಸಮಾವೇಶಕ್ಕೆ ನಿರ್ಧಾರ ಮಾಡಿದೆ. ಮಾರ್ಚ್ 3ನೇ ವಾರದಲ್ಲಿ ಈ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ರಾಜ್ಯದ 4 ಭಾಗಗಳಿಂದ ಬಂದು ದಾವಣಗೆರೆಯಲ್ಲಿ ರಥಯಾತ್ರೆ ಅಂತ್ಯವಾಗಲಿದೆ. 4 ತಂಡಗಳಲ್ಲಿ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಹಾಗೂ ಹಳೇ ಮೈಸೂರು ಭಾಗದಲ್ಲಿ ಎರಡು ಭಾಗವಾಗಿ ಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ. 4 ತಂಡಗಳ ಯಾತ್ರೆ ಬಳಿಕ ದಾವಣಗೆರೆಯಲ್ಲಿ ಮಹಾಸಂಗಮ ಸಮಾವೇಶ ನಡೆಯಲಿದೆ. ಈ ಮಹಾಸಂಗಮ ಸಮಾವೇಶದಲ್ಲಿ ಹೈಕಮಾಂಡ್ ನಾಯಕರು ಪಾಲ್ಗೊಳ್ಳಲಿದ್ದಾರೆ.
ಗುಜರಾತ್ ಮಾದರಿಯಲ್ಲಿ ಸಮಾವೇಶ
ಇನ್ನು ಇಂದಿನ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಹಲವು ಸಮಾವೇಶಗಳನ್ನು ಮಾಡಲು ತೀರ್ಮಾನಿಸಲಾಗಿದೆ. ಗುಜರಾತ್ ಮಾದರಿಯಲ್ಲಿ ಸಚಿವರು ಹಾಗೂ ಬಿಜೆಪಿ ನಾಯಕರ ತಂಡದಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಫಲಾನುಭವಿಗಳ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಫಲಾನುಭವಿಗಳ ಜೊತೆಗೆ ಪಕ್ಷ ಕನೆಕ್ಟ್ ಮಾಡಲು ಈ ಸಭೆಯಲ್ಲಿ ನಾಯಕರುಗಳಿಗೆ ಸೂಚನೆ ನೀಡಲಾಗಿದೆ,
ಇನ್ನು ರಾಜ್ಯದ 224 ಕ್ಷೇತ್ರಗಳಲ್ಲೂ ವಿವಿಧ ಮೋರ್ಚಾಗಳ ಬಿಜೆಪಿ ಸಮಾವೇಶದ ಜೊತೆಗ ರಥಯಾತ್ರೆ ಮಾದರಿಯಲ್ಲೇ ವಿಜಯ ಸಂಕಲ್ಪ ಯಾತ್ರೆ ನಡೆಸಲು ತೀರ್ಮಾನಿಸಲಾಗಿದ್ದು, 4 ತಂಡಗಳ ಯಾತ್ರೆಗಳಿಗೆ ವಿಜಯ ಸಂಕಲ್ಪ ಯಾತ್ರೆ ಎಂದು ನಾಮಕರಣ ಮಾಡಲಾಗಿದೆ. ಪ್ರತಿ ದಿನ ಯಾತ್ರೆಯ ಸಂಜೆ ಸಮಯ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಫೆಬ್ರವರಿ ಕೊನೆಯ ವಾರದಲ್ಲಿ ವಿಜಯ ಸಂಕಲ್ಪ ಯಾತ್ರೆ ಪ್ರಾರಂಭವಾಗಲಿದ್ದು, ಮಾರ್ಚ್ ಮೂರನೇ ವಾರದಲ್ಲಿ ಬಿಜೆಪಿ ಮಹಾ ಸಂಗಮ ಸಮಾವೇಶ ನಡೆಯಲಿದೆ.
ಒಟ್ಟಿನಲ್ಲಿ ಇಂದಿನ ಕೋರ್ ಕಮಿಟಿ ಸಭೆಯಲ್ಲಿ ಸಮಾವೇಶಗಳನ್ನು ಮಾಡುವ ಬಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಈ ಸಮಾವೇಶ ಯಾತ್ರೆಗಳು ಮತದಾರರನ್ನು ಸೆಳೆಯಲು ಯಾವ ರೀತಿ ಕೆಲಸ ಮಾಡುತ್ತವೆ ಎನ್ನುವುದನ್ನು ಚುನಾವಣೆ ಬಳಿಕ ತಿಳಿಯಲಿದೆ.