Karnataka Assembly Election Live Updates: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಒಂದು ತಿಂಗಳು ಮಾತ್ರ ಬಾಕಿ ಉಳಿದಿದ್ದು, ಈ ಬಾರಿ ಪೂರ್ಣ ಬಹುಮತದೊಂದಿಗೆ ಅಧಿಕಾರಿದ ಗದ್ದುಗೆ ಹಿಡಿಯಬೇಕೆಂದು ಮೂರು ರಾಜಕೀಯ ಪಕ್ಷಗಳು ಪಣತೊಟ್ಟಿವೆ. ದಕ್ಷಿಣ ಭಾರತದಲ್ಲಿ ಅತಿ ದೊಡ್ಡ ರಾಜ್ಯ ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದರೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತವನ್ನು ಸುಲಭವಾಗಿ ತೆಕ್ಕೆಗೆ ಹಾಕಿ ಕೊಳ್ಳಬಹುದು ಎಂದು ಎರಡು ರಾಷ್ಟ್ರೀಯ ಪಕ್ಷಗಳು ಯೋಜನೆ ರೂಪಿಸಿವೆ. ಮೂರು ಪಕ್ಷಗಳು ಈಗಾಗಲೆ ಭಾಗಶಃ ಪ್ರಚಾರ ಕಾರ್ಯವನ್ನು ಮುಗಿಸಿದ್ದು, ಕೊನೆ ಹಂತದ ಮತದಾರ ಮನವೊಲಿಕೆ ಅಣಿಯಾಗಿವೆ. ಇನ್ನು ಕಾಂಗ್ರೆಸ್ ತನ್ನ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಮತ್ತು ಜೆಡಿಎಸ್ 1 ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ಮಾತ್ರ ಇಂದು ನಾಳೆ ಎನ್ನುತ್ತಿದೆ. ಇದರೊಂದಿಗೆ ಇಂದಿನ ರಾಜಕೀಯ ಅಪ್ಡೇಟ್ಸ್ ಇಲ್ಲಿದೆ
ಬೆಂಗಳೂರು: ನಾಳೆ ತಮ್ಮ ಭೇಟಿಗೆ ಬೆಂಗಳೂರಿಗೆ ಬರುವಂತೆ ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ ಮತ್ತು ಲಕ್ಷ್ಮಣ ಸವದಿಗೆ ಯಡಿಯೂರಪ್ಪ ಅವರು ಕರೆ ಮಾಡಿದ್ದಾರೆ. ನಾಳೆ ದೆಹಲಿಗೆ ತೆರಳುತ್ತಿರುವ ಬಗ್ಗೆ ಶೆಟ್ಟರ್ ಅವರು ಯಡಿಯೂರಪ್ಪಗೆ ತಿಳಿಸಿದ್ದಾರೆ. ಹೀಗಾಗಿ ನಾಳೆ ನಡ್ಡಾ ಭೇಟಿ ಮಾಡಿ ನಾಡಿದ್ದು ಯಡಿಯೂರಪ್ಪ ಭೇಟಿ ಮಾಡಲಿದ್ದಾರೆ.
ಬೆಂಗಳೂರು: ಆರ್. ಅಶೋಕ್ ಮತ್ತು ಬಿ.ವೈ. ವಿಜಯೇಂದ್ರ ವಿರುದ್ಧ ಬೆಂಗಳೂರು ದಕ್ಷಿಣ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಆರ್. ರಮೇಶ್ ಬೆಂಬಲಿಗರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ರಮೇಶ್ ಅವರು ಚಿಕ್ಕಪೇಟೆ ಅಥವಾ ಜಯನಗರ ಕ್ಷೇತ್ರದ ಟಿಕೆಟ್ ಆಕ್ಷಾಂಕ್ಷಿಯಾಗಿದ್ದರು. ಜಯನಗರದ ಎನ್.ಆರ್. ರಮೇಶ್ ನಿವಾಸದ ಎದುರು ಪ್ರತಿಭಟನೆ ನಡೆಸಿದರು.
ಪ್ರಸಕ್ತ ಚುನಾವಣೆಯಲ್ಲಿ 52 ಹೊಸ ಮುಖಗಳಿಗೆ ಬಿಜೆಪಿ ಟಿಕೆಟ್ ನೀಡಿದೆ. ಒಬಿಸಿಯ 32 ಮಂದಿಗೆ ಟಿಕೆಟ್ ಘೋಷಿಸಲಾಗಿದೆ. 8 ಮಂದಿ ಮಹಿಳೆಯರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 9 ಮಂದಿ ವೈದ್ಯರ ಹೆಸರು ಪಟ್ಟಿಯಲ್ಲಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಬಿಜೆಪಿ (BJP) ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, 189 ಮಂದಿ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಲಾಗಿದೆ. ಹಲವು ಸುತ್ತುಗಳ ಸಭೆ, ಸುದೀರ್ಘ ಸಮಾಲೋಚನೆಗಳ ಬಳಿಕ ಮಂಗಳವಾರ ರಾತ್ರಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಹೈಕಮಾಂಡ್ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಪಟ್ಟಿ ಬಿಡುಗಡೆಗೂ ಮುನ್ನ ಮಾತನಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜ್ಯದ 31 ಜಿಲ್ಲೆಗಳಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಸುಮಾರು 25 ಸಾವಿರ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ್ದೇವೆ ಎಂದು ಹೇಳಿದರು.
ದೆಹಲಿ: ಕೇಂದ್ರ ಬಿಜೆಪಿ ಕಚೇರಿಯಲ್ಲಿ ಮಹತ್ವದ ಸುದ್ದಿಗೋಷ್ಠಿ ಆರಂಭಗೊಂಡಿದೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರು ಸುದ್ದಿಗೋಷ್ಠಿ ನಡೆಸುತ್ತಿದೆ.
ಬೆಂಗಳೂರು: ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣ ಸಂಬಂಧ ತನಗೆ ಧಾರವಾಡಕ್ಕೆ ಪ್ರವೇಶ ನೀಡುವಂತೆ ಕೋರಿ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಾಳೆಗೆ (ಏಪ್ರಿಲ್ 12) ಮುಂದೂಡಿದೆ. ಚುನಾವಣೆ ಹಿನ್ನೆಲೆ ಧಾರವಾಡ ಪ್ರವೇಶಕ್ಕೆ ಅನುಮತಿ ಕೋರಿ ವಿನಯ್ ಕುಲಕರ್ಣಿ ಅರ್ಜಿ ಸಲ್ಲಿಸಿದ್ದರು. ಅದರಂತೆ ಕೋರ್ಟ್ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ವೇಳೆ ವಾದ ಮಂಡಿಸಿದ ಕುಲಕರ್ಣಿ ಪರ ವಕೀಲರಾದ ಸಿ ಹೆಚ್ ಹನುಮಂತರಾಯ, ಚುನಾವಣೆಗೆ ನಾಮಪತ್ರ ಸಲ್ಲಿಸಿ ಪ್ರಚಾರ ನಡೆಸಬೇಕಿದೆ. ಹೀಗಾಗಿ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡುವಂತೆ ಕೋರಿದ್ದಾರೆ. ಪ್ರತಿವಾದ ಮಂಡಿಸಿದ ಸಿಬಿಐ ಪರ ವಕೀಲರು, ಯೋಗೇಶ್ ಗೌಡ ಕೊಲೆ ಪ್ರಕರಣದ 90 ಸಾಕ್ಷಿಗಳು ಧಾರವಾಡ ಜಿಲ್ಲೆಯಲ್ಲೇ ಇದ್ದಾರೆ ಎಂಬುದನ್ನು ಕೋರ್ಟ್ ಗಮನಕ್ಕೆ ತಂದರು. ಅಲ್ಲದೆ, ಸೂಚಕರ ಮೂಲಕವೇ ನಾಮಪತ್ರ ಸಲ್ಲಿಸುವ ಅವಕಾಶ ಇದೆ ಅಂತ ಹೇಳಿದರು.
ದೆಹಲಿ: ಇಂದು ರಾತ್ರಿ 9 ಗಂಟೆಗೆ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ಆಯೋಜಿಸಲಾಗಿದೆ, ದೆಹಲಿಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ.
ಗದಗ: ಚುನಾವಣಾ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಮಲ್ಲಾಪುರ ಉಪವಿಭಾಗದ ಎಂಆರ್ಬಿಸಿ ಜೆಇ ಮಹೇಶ್ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಆದೇಶ ಹೊರಡಿಸಿದ್ದಾರೆ. ರೋಣ ವಿಧಾನಸಭಾ ಕ್ಷೇತ್ರದ ಪುರ್ತಗೇರಿ ಕ್ರಾಸ್ ಚೆಕ್ಪೋಸ್ಟ್ನಲ್ಲಿ ನಿಯೋಜನೆ ಮಾಡಲಾಗಿತ್ತು. ಆದರೆ ಕರ್ತವ್ಯಕ್ಕೆ ಹಾಜರಾಗದೆ ಗೈರು ಆಗಿದ್ದರು. ಸದ್ಯ ಅವರನ್ನು ಅಮಾನತು ಮಾಡಲಾಗಿದ್ದು, ಕಚೇರಿ ಮುಖ್ಯಸ್ಥರ ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡದಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಲಾಗಿದೆ.
ಚಿತ್ರದುರ್ಗ: ನನಗೆ ಈವರೆಗೆ ಪಕ್ಷದ ನಾಯಕರಿಂದ ಯಾವುದೇ ಕರೆ ಬಂದಿಲ್ಲ ಎಂದು ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿಕೆ ನೀಡಿದ್ದಾರೆ. ವಯಸ್ಸಿನ ಆಧಾರದ ಮೇಲೆ ಟಿಕೆಟ್ ನಿರಾಕರಣೆ ಎಂಬ ಪ್ರಶ್ನೆಯಿದೆ. ನನ್ನ ಪುತ್ರ ಡಾ.ಸಿದ್ದಾರ್ಥ್ಗೆ ಬಿಜೆಪಿ ಟಿಕೆಟ್ ಕೇಳಿಲ್ಲ. ಪುತ್ರನಿಗೆ ನಾನು ಟಿಕೆಟ್ ಕೇಳುವ ಪ್ರಶ್ನೆಯೇ ಬರುವುದಿಲ್ಲ. ಪುತ್ರನಿಗೆ ಟಿಕೆಟ್ ಕೇಳಿದ್ದೇನೆಂಬುದು ನೂರಕ್ಕೆ ನೂರರಷ್ಟು ಸುಳ್ಳು ಎಂದರು.
ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿಯ 22 ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದು ಬಹುತೇಕ ಅನುಮಾನ ಎಂದು ಟಿವಿ9ಗೆ ಉನ್ನತ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. ಅಲ್ಲದೆ, 5ಕ್ಕೂ ಹೆಚ್ಚು ಹಿರಿಯ ನಾಯಕರಿಗೆ ಕ್ಷೇತ್ರವನ್ನು ಬಿಟ್ಟುಕೊಡುವಂತೆ ದೂರವಾಣಿ ಕರೆ ಮೂಲಕ ಸೂಚನೆ ನೀಡಿದೆ ಎನ್ನಲಾಗುತ್ತಿದೆ. ತನಗೆ ದೂರವಾಣಿ ಕರೆ ಬಂದಿದ್ದು ನಿಜ, ಹೊಸಬರಿಗೆ ಅವಕಾಶ ನೀಡುವಂತೆ ಕೋರಿದ್ದಾರೆ ಎಂದು ಸ್ವತಃ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಇವರಲ್ಲದೆ, ಮಾಜಿ ಸಚಿವರಾದ ಎಸ್.ಸುರೇಶ್ ಕುಮಾರ್, ಆರ್.ಅಶೋಕ್, ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ವರಿಷ್ಠರ ಸೂಚನೆ ನೀಡಲಾಗಿದೆ. ಮಾತ್ರವಲ್ಲದೆ, ಎಸ್.ಎ.ರಾಮದಾಸ್, ಬಿ.ಸಿ.ನಾಗೇಶ್ಗೂ ವರಿಷ್ಠರು ಸೂಚಿಸಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಹುಬ್ಬಳ್ಳಿ: ನಿನ್ನೆಯವರೆಗೆ ನನಗೆ ಬಿಜೆಪಿ ಟಿಕೆಟ್ ಕನ್ಫರ್ಮ್ ಎಂದು ಹೇಳಿದ್ದರು. ಆದರೆ ಇಂದು ದೂರವಾಣಿ ಕರೆ ಮಾಡಿ ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂದು ಕೋರಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಸ್ಪರ್ಧೆ ಮಾಡಬಾರದು ಅನ್ನೋದು ಇದ್ದಿದ್ದರೆ ಎರಡು ಮೂರು ತಿಂಗಳ ಹಿಂದೆ ನನಗೆ ಹೇಳಬೇಕಿತ್ತು
ಇವತ್ತು ನನಗೆ ಹೇಳುತ್ತಾರೆ ಅಂದರೆ ಬಹಳ ಬೇಸರವಾಯಿತು. 30 ವರ್ಷ ಪಾರ್ಟಿ ಕಟ್ಟಿದವರಿಗೆ ಹೀಗೆ ಹೇಳಿದ್ದು ಬೇಜಾರಾಯ್ತು, ಹಿರಿಯ ನಾಯಕರಿಗೆ ಗೌರವ ಕೊಡೋ ಕೆಲಸ ಆಗಬೇಕಿದೆ. ನೀವ ಹೇಳಿರುವುದು ನನಗೆ ಒಪ್ಪಿಗೆ ಇಲ್ಲ ಎಂದಿದ್ದೇನೆ. ನಿಮ್ಮ ಸರ್ವೆ ಪಾಸಿಟಿವ್ ಇದೆ ಎಂದು ಹಿರಿಯರು ಹೇಳಿದ್ದಾರೆ. ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಇಲ್ಲ. ಪಕ್ಷದ ನಿಷ್ಟೆಗಾಗಿ ಕೆಲಸ ಮಾಡಿದ್ದೇನೆ. ಲಾಯಲ್ ಆಗಿ ಕೆಲಸ ಮಾಡಿದ್ದೇನೆ. ಲಾಯಲ್ ಆದವರಿಗೆ ಗೌರವ ಇಲ್ಲ ಅಂತಾ ಬೇಜಾರಾಯ್ತು. ವರಿಷ್ಟರು ಚರ್ಚೆ ಮಾಡುತ್ತೇವೆ ಎಂದಿದ್ದಾರೆ. ವರಿಷ್ಠರು ನನಗೆ ಅವಕಾಶ ಕೊಡುತ್ತಾರೆ ಅನ್ನೋ ವಿಶ್ವಾಸ ಇದೆ ಎಂದರು. ಈ ಬಾರಿಯ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡೇ ಮಾಡ್ತೇನೆ. ಈಗಾಗಲೇ ಕ್ಷೇತ್ರದಲ್ಲಿ ನಾನು ಚುನಾವಣೆ ಪ್ರಚಾರ ಮಾಡುತ್ತಿದ್ದೇನೆ. ನನಗೆ ಕ್ಷೇತ್ರದ ಜನರ ಅಶೀರ್ವಾದ ಇದೆ, ಹಾಗಾಗಿ ಸ್ಪರ್ಧಿಸುತ್ತೇನೆ. ಕ್ಷೇತ್ರದ ಜನ ಪ್ರೀತಿ ವಿಶ್ವಾಸದಿಂದ ಗೌರವದಿಂದ ನೋಡಿಕೊಳ್ತಿದ್ದಾರೆ ಎಂದರು.
ಶಿವಮೊಗ್ಗ: ಪೂರ್ಣ ಬಹುಮತದಿಂದ ಬಿಜೆಪಿ ಸರ್ಕಾರ ಬರಲು ಶ್ರಮಿಸುವಂತೆ ಕಾರ್ಯಕರ್ತರಿಗೆ ಕೆಎಸ್ ಈಶ್ವರಪ್ಪ ಕರೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿವೃತ್ತಿ ಬಗ್ಗೆ ರಾಜ್ಯ ಚುನಾವಣಾ ಸಮಿತಿಯ ಗಮನಕ್ಕೆ ತಂದಿದ್ದರೆ. ಆದರೆ ನನ್ನ ಮಾತಿಗೇ ಯಾರು ಗಮನ ಕೊಡಲಿಲ್ಲ. ಹೀಗಾಗಿ ಇವತ್ತು ಬೆಳಿಗ್ಗೆ ರಾಷ್ಟ್ರೀಯ ಅದ್ಯಕ್ಷರಿಗೆ ಪತ್ರ ಬರೆದಿದ್ದೇನೆ. ಚುನಾವಣಾ ನಿವೃತ್ತಿ ಬಗ್ಗೆ ಘೋಷಣೆ ಮಾಡಿ, ಪತ್ರ ಬರೆದಿದ್ದೇನೆ ಎಂದರು. ರಾಜ್ಯದಲ್ಲಿ ಸಂಘಟನೆಗೆ ಶಕ್ತಿ ತುಂಬಬೇಕಿದೆ. ರಾಜ್ಯದಲ್ಲಿ ಒಮ್ಮೆಯೂ ಬಹುಮತ ಬಂದಿಲ್ಲ. ಈ ಬಾರಿ ಪೂರ್ಣ ಬಹುಮತದ ಸರ್ಕಾರ ಬರುವಂತೆ ಮಾಡಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು.
ಶಿವಮೊಗ್ಗ: ನನ್ನ ತಂದೆ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದು ನಿಜ. ಪಕ್ಷದ ಯಾವ ಕಾರ್ಯಕರ್ತರು ಕೂಡ ಬೇಸರವಾಗಬಾರದು. ಯೋಚನೆ ಮಾಡಿಯೇ ನಮ್ಮ ತಂದೆ ತೀರ್ಮಾನ ತೆಗೆದುಕೊಂಡಿದ್ದಾರೆ. ಯಾರದ್ದೋ ಒತ್ತಡದಿಂದ ಈಶ್ವರಪ್ಪ ನಿವೃತ್ತಿ ಘೋಷಿಸಿಲ್ಲ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪುತ್ರ ಕಾಂತೇಶ್ ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗ: ಪ್ರತಿ ಕ್ಷೇತ್ರಕ್ಕೂ ಮೂವರ ಹೆಸರನ್ನು ನಾಯಕರು ಕಳಿಸಿದ್ದಾರೆ. ಅಂತಿಮವಾಗಿ ಅಭ್ಯರ್ಥಿ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ. ಈ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಯಾವುದೇ ಕ್ಷೇತ್ರಕ್ಕೆ ನನ್ನ ಹೆಸರು ಪರಿಗಣಿಸದಂತೆ ಮನವಿ ಮಾಡಿದ್ದೇನೆ ಎಂದು ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ಬೆಳಗಾವಿ: ಚುನಾವಣಾ ರಾಜಕೀಯಕ್ಕೆ ಕೆ.ಎಸ್.ಈಶ್ವರಪ್ಪ ನಿವೃತ್ತಿ ಘೋಷಣೆ ಮಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಈಶ್ವರಪ್ಪ ಅವರದ್ದೇ ಆದ ರೀತಿಯಲ್ಲಿ ಪಕ್ಷ ಸಂಘಟನೆ ಮಾಡಿದವರು. ಒಂದು ಕಾಲದಲ್ಲಿ ಬಿಜೆಪಿಗೆಕ ಶಕ್ತಿ ಇಲ್ಲದಾಗ ಸಂಘಟನೆ ಮಾಡಿದವರಲ್ಲಿ ಪ್ರಮುಖರಾಗಿದ್ದರು. ಅವರ ತೀರ್ಮಾನ ಅವರ ಪಕ್ಷದ ಬೆಳವಣಿಗೆ ಬಗ್ಗೆ ಟೀಕೆ ಮಾಡೋದು ಶೋಭೆ ತರುವಂತದ್ದಲ್ಲ. ಅವರು ಇನ್ನು ಸ್ವಲ್ಪ ದಿನ ರಾಜಕಾರಣದಲ್ಲಿ ಇರಬೇಕಿತ್ತು. ನನ್ನ ಸರ್ಕಾರದಲ್ಲಿ ನೀರಾವರಿ ಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದರು.
ಶಿವಮೊಗ್ಗ: ಚುನಾವಣೆ ರಾಜಕೀಯಕ್ಕೆ ಕೆಎಸ್ ಈಶ್ವರಪ್ಪ ಅವರು ನಿವೃತ್ತಿ ಘೋಷಿಸಿದ್ದು, ಕೇವಲ ಚುನಾವಣೆ ಸ್ಪರ್ಧೆ ಮಾಡುತ್ತಿಲ್ಲ ಎಂದು ಹೇಳುತ್ತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಕಳುಹಿಸಿದ ಪತ್ರವನ್ನು ಭಾವುಕರಾಗಿಯೇ ತೋರಿಸಿದ್ದಾರೆ. ರಾಜಕೀಯ ನಿವೃತ್ತಿ ಬಗ್ಗೆ ನಿನ್ನೆ ರಾತ್ರಿಯೇ ಈಶ್ವರಪ್ಪ ತೀರ್ಮಾನಿಸಿದ್ದಾರೆ. ನಿನ್ನೆ ರಾತ್ರಿ ದೆಹಲಿಯಿಂದ ವಾಪಸಾಗಿದ್ದ ಬಿ.ಎಸ್.ಯಡಿಯೂರಪ್ಪ ಜೊತೆ ದೂರವಾಣಿ ಮೂಲಕ ಈಶ್ವರಪ್ಪ ಅವರು ಚರ್ಚಿಸಿದ್ದರು. ಬಳಿಕ ನಿವೃತ್ತಿ ನಿರ್ಧಾರ ಕೈಗೊಂಡಿದ್ದಾರೆ. ಹಿರಿಯರಿಗೆ ಟಿಕೆಟ್ ನಿರಾಕರಣೆ ಆಗುವ ಕುರಿತು ಈಶ್ವರಪ್ಪಗೆ ಸಂದೇಶ ಸಿಕ್ಕಿದ ಹಿನ್ನೆಲೆ ಹಾಗೂ ಪುತ್ರನ ರಾಜಕೀಯ ಭವಿಷ್ಯಕ್ಕೆ ಅನುಕೂಲವಾಗುವಂತೆ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪದಲ್ಲಿರುವಾಗಲೇ ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಕ್ಷಣಗಣನೆ ನಡೆಯುತ್ತಿರುವಾಗಲೇ ಈಶ್ವರಪ್ಪ ಈ ನಿರ್ಧಾರ ಪ್ರಕಟಿಸಿದ್ದಾರೆ.
ಶಿವಮೊಗ್ಗ: ಸಂಜೆಯೊಳಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ಕೆಲವು ಕ್ಷೇತ್ರಗಳಲ್ಲಿ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಸಂಜೆಯೊಳಗೆ ಪಟ್ಟಿ ಬಿಡುಗಡೆಯಾಗಲಿದೆ ಎಂದು ಶಿವಮೊಗ್ಗದಲ್ಲಿ ಸಚಿವ ಡಾ.ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ವಿಚಾರವಾಗಿ ಹೆಚ್.ಡಿ.ದೇವೇಗೌಡರನ್ನು ಭೇಟಿಯಾಗಿ ಎಲ್ಲವನ್ನೂ ಚರ್ಚಿಸಿದ್ದೇನೆ. ಎಲ್ಲವನ್ನೂ ಹೇಳಿದ್ದೇನೆ, ಹೆಚ್ಡಿ ದೇವೇಗೌಡರು ಅಂತಿಮ ತೀರ್ಮಾನ ಕೈಗೊಳ್ತಾರೆ. ಹೆಚ್.ಡಿ.ದೇವೇಗೌಡರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಸಾಮಾನ್ಯ ಕಾರ್ಯಕರ್ತ ಯಾರು ಅಂತ ದೇವೇಗೌಡರಿಗೆ ಗೊತ್ತಿದೆ. ರಾಜಕೀಯದಲ್ಲಿ ದೇವೇಗೌಡರಿಗೆ 60 ವರ್ಷದ ಅನುಭವ ಇದೆ. ನಾನು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಿಲ್ಲ. ಹೊಳೆನರಸೀಪುರ ಬಿಟ್ಟು ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ. ಆನೆಕೆರೆಯಮ್ಮ ಗ್ರಾಮದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.
ಬೆಂಗಳೂರು: ಇಬ್ಬರು ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂದು ಚರ್ಚೆ ಮಾಡಬಾರದು. ಯಾರೋ ಆಗ್ತಾರೆ. ಇಬ್ಬರು, ಮೂವರು ನಾಯಕರು ಸಿಎಂ ಆಗಬೇಕೆಂದು ಆಸೆ ಇಟ್ಟುಕೊಂಡಿದ್ದಾರೆ. ನಾನು ಸಿಎಂ ಆಗಬೇಕೆಂದು ಅಂದುಕೊಂಡಿಲ್ಲ. ಈ ಬಗ್ಗೆ ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ ಎಂದು ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನಡುವೆ ಸಿಎಂ ಗಾದಿಗಾಗಿ ಪೈಪೋಟಿ ವಿಚಾರವಾಗಿ ಶಾಸಕ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಮಂಡ್ಯ: ನಿಮಗೆ ಕಾಂಗ್ರೆಸ್ ಪಕ್ಷ ಇಷ್ಟ ಇಲ್ಲದಿದ್ದರೆ ಚಿಹ್ನೆ ಮುಚ್ಚಿ ನನ್ನ ಹೆಸರಿನ ಮುಂದೆ ವೋಟ್ ಹಾಕಿ ಎಂದು ಮಂಡ್ಯದ ಕಾರಸವಾಡಿ ಗ್ರಾಮದಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ರಮೇಶ್ ಬಾಬು ಹೇಳಿದ್ದಾರೆ. ಮಾಜಿ ಶಾಸಕ ರಮೇಶ್ ಬಾಬು ಈ ಹಿಂದಿನ ಮೂರು ಚುನಾವಣೆಯಲ್ಲಿ ಜೆಡಿಎಸ್ನಿಂದ ಗೆದ್ದು ಶಾಸಕರಾಗಿದ್ದರು.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೇರಿ, ಸ್ಪರ್ಧಿಸಿ ಸೋಲು ಕಂಡಿದ್ದರು. ಇದೀಗ ಕ್ಷೇತ್ರದಲ್ಲಿ ಜೆಡಿಎಸ್ ಮುಖಂಡರು ಮತ್ತು ಮೂಲ ಕಾರ್ಯಕರ್ತರನ್ನು ಸೆಳೆಯಲು ಪಕ್ಷ ನೋಡದೆ ವ್ಯಕ್ತಿ ನೋಡಿ ಮತ ಹಾಕುವಂತೆ ಮನವಿ ಮಾಡುತ್ತಿದ್ದಾರೆ.
ಹಾಸನ: ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡಿದರೆ ಗೆಲ್ಲಲ್ಲ. ಹಾಸನ ಕ್ಷೇತ್ರದಲ್ಲಿ ಕಾರ್ಯಕರ್ತರ ತೀರ್ಮಾನವೇ ಅಂತಿಮ. ವಾಸ್ತವಿಕ, ಗ್ರೌಂಡ್ ರಿಯಾಲಿಟಿ ಮೇಲೆ ಟಿಕೆಟ್ ನೀಡುತ್ತೇವೆ. ಒಂದೂವರೆ ವರ್ಷದ ಹಿಂದೆ ಹಾಸನ ಶಾಸಕರು ಸವಾಲು ಹಾಕಿದ್ದಾರೆ. ಹಾಗಾಗಿ ಸಾಮಾನ್ಯ ಕಾರ್ಯಕರ್ತನ ನಿಲ್ಲಿಸಿ ಗೆಲ್ಲುತ್ತೇನೆ ಎಂದಿದ್ದೇನೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಮೈಸೂರು: ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡುವ ವಿಚಾರವಾಗಿ ಕೇಂದ್ರ ನಾಯಕರ ವಲಯದಲ್ಲಿ ಚರ್ಚೆ ಆಗಿರುವುದು ನಿಜ. ಆದರೆ ವರುಣದಿಂದ ಸ್ಪರ್ಧೆ ಮಾಡಲ್ಲ ಎಂದು ವರಿಷ್ಠರಿಗೆ ತಿಳಿಸಿದ್ದೇನೆ ಎಂದು ಚಾಮರಾಜನಗರದಲ್ಲಿ ವಸತಿ ಇಲಾಖೆ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಶಿವಮೊಗ್ಗ: ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಬಿಜೆಪಿಯಲ್ಲೇ ಇದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿ ಘೋಷಣೆ ಆಗುತ್ತೆ. ಹೀಗಾಗಿ ಯಾರೂ ಕೂಡ ಆತಂಕಪಡುವ ಅಗತ್ಯವಿಲ್ಲ ಶಿವಮೊಗ್ಗದಲ್ಲಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಬೆಂಗಳೂರು: ನನ್ನ ಪ್ರಕಾರ ಕಾಂಗ್ರೆಸ್‌ನಲ್ಲಿ ನಾಲ್ಕು ಜನರು ಮುಖ್ಯಮಂತ್ರಿ ರೇಸ್ನಲ್ಲಿದ್ದಾರೆ. ಮೊದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಇಬ್ಬರೇ ಇದ್ದರು. ಆದರೆ ಅವರ ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಸಚಿವ ಎಂ.ಬಿ. ಪಾಟೀಲ್ ಕೂಡ ಸಿಎಂ ರೇಸ್ನಲ್ಲಿದ್ದಾರೆ ಎಂದು ಅನ್ನಿಸುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ತುಮಕೂರು: ಸಂಹಿತೆ ಉಲ್ಲಂಘನೆ ಆರೋಪದಡಿ ಮಾಜಿ ಶಾಸಕ ಸುರೇಶ್ ಗೌಡ ವಿರುದ್ಧ ಜೆಡಿಎಸ್ ತಾಲೂಕು ಚುನಾವಣಾಧಿಕಾರಿಗೆ ದೂರು ನೀಡಿದೆ. ತುಮಕೂರು ಗ್ರಾಮಾಂತರ ಕ್ಷೇತ್ರದ ಬೈರಸಂದ್ರ, ಹರಳೂರು, ಸಿದ್ದಾಪುರ,
ನಾಯಕನಪಾಳ್ಯ ಗ್ರಾಮಗಳಲ್ಲಿ ನಿಯಮ ಉಲ್ಲಂಘಿಸಿ ತಡರಾತ್ರಿ 12ರವರೆಗೆ ಪ್ರಚಾರ ನಡೆಸಿದ ಆರೋಪದಡಿ ದೂರು ನೀಡಲಾಗಿದೆ.
ನವದೆಹಲಿ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂದು ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಯಲ್ಲಿ ಹೇಳಿದ್ದಾರೆ.
ರಾಮನಗರ: ರಸ್ತೆ ಸಂಪರ್ಕ ಕಲ್ಪಿಸುವಂತೆ ಆಗ್ರಹಿಸಿ ರಾಮನಗರ ತಾಲ್ಲೂಕಿನ ರಾಂಪುರದೊಡ್ಡಿ ಗ್ರಾಮಸ್ಥರು ಪ್ರತಿಭಟನೆ ಮಾಡುತ್ತಿದ್ದು, ಮತದಾನ ಬಹಿಷ್ಕಾರ ಮಾಡುವ ಎಚ್ಚರಿಕೆ ನೀಡಿದ್ದಾರೆ. ರಾಂಪುರ ದೊಡ್ಡಿ, ಗೋಪಾಲಪುರ, ಇರುಳಿಗದೊಡ್ಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ನಿರ್ಮಾಣ ಮಾಡಿ ಎಂದು ಮೂರು ಗ್ರಾಮದ ಗ್ರಾಮಸ್ಥರು ಪ್ರತಿಭಟನೆ ಮಾಡುತ್ತಿದ್ದಾರೆ.
ತುಮಕೂರು: ನೂರಕ್ಕೆ ನೂರು ಟಿಕೆಟ್ ಸಿಗಲಿದೆ. ನಾನು ಮಾಡುವ ಸೇವೆಗೆ ಟಿಕೆಟ್ ಸಿಗಲಿದೆ. ನನ್ನ ಕಾರ್ಯಕರ್ತರು ಆತಂಕ ಪಡುವ ಅಗತ್ಯವಿಲ್ಲ. ಟಿಕೆಟ್ ನನಗೆ ಖಚಿತ,ಖಚಿತ. ದೆಹಲಿಯಲ್ಲಿ ಎಲ್ಲರಿಗೂ ಮನವಿ ಮಾಡಲಾಗಿದೆ. ಟಿಕೆಟ್ ಸಿಗುವುದು ಖಚಿತವಾಗಿದೆ. ನಾಮಿನೇಷನ್ ಪೈಲ್‌ಮಾಡಲು ಸಿದ್ದತೆ ನಡೆಸಿಕೊಳ್ಳಲಾಗಿದೆ. ಒಂದು ವೋಟು,ಇನ್ನೊಂದು ನೋಟಿಗೆ ಜೋಳಿಗೆ ಹಾಕಿಕೊಂಡಿದ್ದೇನೆ. ಪ್ರಜಾಪ್ರಭುತ್ವ ಉಳಿಸಲು ನನ್ನ ಜೊತೆ ಬಂದು ಪ್ರಚಾರ ಮಾಡಲಿ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದ್ದಾರೆ.
ಬಿಜೆಪಿ ಟಿಕೆಟ್ ಘೋಷಣೆ ಸಾಧ್ಯತೆ ಹಿನ್ನೆಲೆ ಮಾಜಿ ಸಚಿವ ಸೊಗಡು ಶಿವಣ್ಣ ಎರಡು ಜೋಳಿಗೆ ಹಾಕಿಕೊಂಡು ಖಾಸಗಿ ಹೊಟೇಲ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಿವಿಗೆ ಕೇಳಲಿ ಎಂದು ತಮಟೆ ವಾಧ್ಯವು ಕೊಟ್ಟಿದೆ. ಎಲ್ಲಾ ಬಂದುಗಳು ಬಾಯಿಬಿಟ್ಟು ಹೇಳುತ್ತಿದ್ದಾರೆ.ನೀವು ಸ್ಪರ್ಧೆ ಮಾಡಿ ಅಂತಾ. ಕಣ್ಣು ಮುಂದೆ ಪ್ರಜಾಪ್ರಭುತ್ವ ನಾಶ ಆಗುತ್ತಿರುವುದು ಕಾಣುತ್ತಿದೆ ಎಂದರು.
ಬೆಂಗಳೂರು: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇನ್ನೂ ಘೋಷಣೆ ಆಗದಿರುವ ಹಿನ್ನೆಲೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮನೆಗೆ ಶಾಸಕರಾದ ರಾಮಣ್ಣ ಲಮಾಣಿ, ಮುದ್ನಾಳ್, ಸುರೇಶ್ ಕುಮಾರ್ ಭೇಟಿ ನೀಡಿದ್ದಾರೆ.
ತಮಕೂರು: ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಕ್ಷೇತ್ರ ಕೊರಟಗೆರೆಯಲ್ಲಿ ಮತದಾನ ಬಹಿಷ್ಕಾರದ ಕೂಗು ಎದ್ದಿದೆ. ಕ್ಷೇತ್ರದಲ್ಲಿ 13 ಗ್ರಾಮಗಳ ಜನರು ಮತ ಬಹಿಷ್ಕಾರದ ಎಚ್ಚರಿಕೆ ನೀಡುತ್ತಿದ್ದಾರೆ. ಈ ಹಿನ್ನೆಲೆ ಗ್ರಾಮಕ್ಕೆ ಡಾ. ಜಿ ಪರಮೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ರೈತರ ಅಹವಾಲು ಸ್ವೀಕರಿಸಿ, ಬಳಿಕ ಸುತ್ತಮುತ್ತಲಿನ ಗ್ರಾಮಗಳಿಗೆ ಭೇಟಿ ನೀಡಿ ಮತ ಬಹಿಷ್ಕಾರಿಸಿದವರ ಮನವೊಲಿಕೆಗೆ ಯತ್ನಿಸುತ್ತಿದ್ದಾರೆ.
Published On - 9:57 am, Tue, 11 April 23