ಖರ್ಗೆ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದ್ದೇ ಡಿಕೆಶಿ; ಛಲವಾದಿ ನಾರಾಯಣಸ್ವಾಮಿ ಟಾಂಗ್
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಿದ್ದೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಸೋಮವಾರ ಹೇಳಿದ್ದಾರೆ.
ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಿದ್ದೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ (Chalavadi narayanaswamy) ಸೋಮವಾರ ಹೇಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾದರೆ ಅವರ ಕೈಕೆಳಗೆ ಕೆಲಸ ಮಾಡಲು ಸಿದ್ಧ ಎಂದು ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್ ನೆಲೆ ಕಳೆದುಕೊಂಡಿರುವುದು ಡಿಕೆಶಿ ಹೇಳಿಕೆಯಿಂದ ಗೊತ್ತಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವ ವೇಳೆ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಜೆಡಿಎಸ್ನವರು ಹೇಳಿದ್ದರು. ಆದರೆ ಕಾಂಗ್ರೆಸ್ನಲ್ಲೇ ಖರ್ಗೆ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲಾಯಿತು. ಖರ್ಗೆಗೆ ಮುಖ್ಯಮಂತ್ರಿ ಹುದ್ದೆ ತಪ್ಪಲು ಡಿಕೆ ಶಿವಕುಮಾರ್ ಅವರೇ ಕಾರಣ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ.
2004ರಲ್ಲಿ ಎಸ್ಎಂ ಕೃಷ್ಣರನ್ನು ಮುಖ್ಯಮಂತ್ರಿ ಮಾಡಿದರು. ಆಗಲೂ ಮಲ್ಲಿಕಾರ್ಜುನ ಖರ್ಗೆಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಲಾಗಿತ್ತು. 2013ರಲ್ಲಿ ಡಾ. ಜಿ ಪರಮೇಶ್ವರ್ ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿಸಲಾಯಿತು. ಪರಮೇಶ್ವರ್ ಅವರನ್ನು ಸೋಲಿಸಿ ಮುಖ್ಯಮಂತ್ರಿಯಾಗದಂತೆ ಮಾಡಲಾಯಿತು. ಪರಮೇಶ್ವರ್ಅನ್ನು ಉಪಮುಖ್ಯಮಂತ್ರಿ ಮಾಡಿ ಅಂದರೂ ಸಿದ್ದರಾಮಯ್ಯ ಮಾಡಲಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಕೈ ಕೆಳಗೆ ಕೆಲಸ ಮಾಡುವುದನ್ನು ಇಷ್ಟಪಡುತ್ತೇನೆ; ಹೊಸ ದಾಳ ಉರುಳಿಸಿದ ಡಿಕೆ ಶಿವಕುಮಾರ್
ಮಲ್ಲಿಕಾರ್ಜುನ ಖರ್ಗೆ ಕೈ ಕೆಳಗೆ ಕೆಲಸ ಮಾಡುವುದನ್ನು ಇಷ್ಟಪಡುತ್ತೇನೆ. ಖರ್ಗೆ ಅವರು ಏನು ಬಯಸುತ್ತಾರೋ ಅದನ್ನು ಈಡೇರಿಸುವ ಕೆಲಸ ನನ್ನದು ಎಂದು ಡಿಕೆ ಶಿವಕುಮಾರ್ ಇತ್ತೀಚೆಗೆ ಹೇಳಿದ್ದರು. ಖರ್ಗೆ ನಮ್ಮ ಪಕ್ಷದ ಆಸ್ತಿ. ರಾಜ್ಯಕ್ಕೆ ಅವರ ಸೇವೆ ಅಗತ್ಯವಿದೆ. ಮಲ್ಲಿಕಾರ್ಜುನ ಖರ್ಗೆ ನನಗಿಂತ ರಾಜಕೀಯದಲ್ಲಿ ದೊಡ್ಡವರು ಎಂದು ಡಿಕೆಶಿ ಹೊಗಳಿದ್ದರು. ಆ ಮೂಲಕ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಅವರು ಖರ್ಗೆ ದಾಳ ಉರುಳಿಸಿದ್ದಾರೆ ಎಂದೇ ಹೇಳಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ