ವಿದೇಶದಿಂದಲೇ ಮತದಾನ; ಅನಿವಾಸಿ ಭಾರತೀಯರ ಮನವಿಗೆ ಹೈಕೋರ್ಟ್ ಹೇಳಿದ್ದೇನು?

ಅನಿವಾಸಿ ಭಾರತೀಯರಿಗೆ ಅವರು ಇರುವ ದೇಶದಿಂದಲೇ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ.

ವಿದೇಶದಿಂದಲೇ ಮತದಾನ; ಅನಿವಾಸಿ ಭಾರತೀಯರ ಮನವಿಗೆ ಹೈಕೋರ್ಟ್ ಹೇಳಿದ್ದೇನು?
ಕರ್ನಾಟಕ ಹೈಕೋರ್ಟ್

Updated on: May 02, 2023 | 4:52 PM

ಬೆಂಗಳೂರು: ಅನಿವಾಸಿ ಭಾರತೀಯರಿಗೆ ಅವರು ಇರುವ ದೇಶದಿಂದಲೇ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಮತದಾನ ಮಾಡಲು ಅವಕಾಶ ಕಲ್ಪಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ (Karnataka High Court) ಮಂಗಳವಾರ ತಿರಸ್ಕರಿಸಿದೆ. ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಮತಗಟ್ಟೆ ಸ್ಥಾಪಿಸುವ ಮೂಲಕ ಅಥವಾ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಅಲ್ಲಿರುವ ಭಾರತೀಯರ ಪರವಾಗಿ ರವಿ ಎಂ ಎಂಬವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ತಾವು ಸೌದಿ ಅರೇಬಿಯಾದಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ವೋಟರ್ ಐಡಿ ಕಾರ್ಡ್ ಹೊಂದಿರುವುದಾಗಿಯೂ ಅರ್ಹ ಮತದಾರನಾಗಿರುವುದಾಗಿಯೂ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ಅನಿವಾಸಿ ಭಾರತೀಯರಿಗೆ ರಾಯಭಾರ ಕಚೇರಿಗಳಲ್ಲಿ ಮತಗಟ್ಟೆ ತೆರೆಯುವ ಮೂಲಕ ಅಥವಾ ಅಂಚೆ ಮತದಾನದ ಅವಕಾಶ ನೀಡುವ ಮೂಲಕ ಮತದಾನಕ್ಕೆ ಅವಕಾಶ ನೀಡಬೇಕು. ಇದರಿಂದ ಲಕ್ಷಾಂತರ ಮಂದಿಗೆ ಪ್ರಯೋಜನವಾಗಲಿದೆ. ಸುಮಾರು 60 ಲಕ್ಷ ಮಂದಿ ಅನಿವಾಸಿ ಭಾರತೀಯರಿದ್ದು, ಈ ಪೈಕಿ 5 ಲಕ್ಷ ಮಂದಿ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಾಗಿದ್ದಾರೆ ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಹಾಗೂ ವಿಜಯಕುಮಾರ್ ಪಾಟೀಕ್ ಅವರಿದ್ದ ನ್ಯಾಯಪೀಠ ಮನವಿಯನ್ನು ತಿರಸ್ಕರಿಸಿತು.

ಇದನ್ನೂ ಓದಿ: PM Modi: ಕಾಂಗ್ರೆಸ್​​ನವರಿಗೆ ಹನುಮಂತನ ಕಂಡರೂ ಆಗಲ್ಲ; ಬಜರಂಗದಳ ನಿಷೇಧ ಪ್ರಸ್ತಾವಕ್ಕೆ ಮೋದಿ ಟಾಂಗ್

ಮತದಾನದ ಹಕ್ಕು ಮೂಲಭೂತ ಹಕ್ಕಲ್ಲ ಎಂದು ಚುನಾವಣಾ ಆಯೋಗ ಪ್ರತಿಪಾದಿಸಿತು. ಇದನ್ನು ಪುರಸ್ಕರಿಸಿದ ಪೀಠ, ಈ ವಿಷಯವು ವಿಚಾರಣೆಗೆ ಅರ್ಹತೆ ಹೊಂದಿಲ್ಲ. ಹೀಗಾಗಿ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಹೇಳಿತು.

ರಾಜ್ಯದ 224 ಕ್ಷೇತ್ರಗಳಿಗೆ ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Follow Us