ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ (Karnataka Election) ಬುಧವಾರ ನಡೆಯಲಿದ್ದು, ಶನಿವಾರ ಫಲಿತಾಂಶ ಪ್ರಕಟವಾಗಲಿದೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಮೇಲೆ ಮತ್ತು ಯಾರು ಗೆಲ್ಲಬಹುದು ಎಂಬ ಬಗ್ಗೆ ಬೆಟ್ಟಿಂಗ್ ಕೂಡ ಜೋರಾಗಿ ನಡೆಯುತ್ತಿದೆ ಎನ್ನಲಾಗಿದೆ. ಹೀಗಾಗಿ ಬೆಟ್ಟಿಂಗ್ ದಂಧೆ ಮೇಲೆ ಸೂಕ್ಷ್ಮ ನಿಗಾ ವಹಿಸುವಂತೆ ಸಿಸಿಬಿ ಅಧಿಕಾರಿಗಳು (CCB Police) ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಆ್ಯಪ್ಗಳ ಮೂಲಕ ಆನ್ಲೈನ್ನಲ್ಲಿ ಹಾಗೂ ಆಫ್ಲೈನ್ನಲ್ಲಿ ನಡೆಯುವ ಬೆಟ್ಟಿಂಗ್ ಕೃತ್ಯಗಳ ಮೇಲೆ ಕಣ್ಗಾವಲಿಡುವಂತೆ ಪೊಲೀಸರಿಗೆ ಸೂಚಿಸಲಾಗಿದೆ.
ಚುನಾವಣೆಯಲ್ಲಿ ಸ್ಪರ್ಧಿಸಿರುವ ಗಣ್ಯ ಅಭ್ಯರ್ಥಿಗಳು, ಹಾಗೂ ಪ್ರಮುಖ ವಿಧಾನಸಭಾ ಕ್ಷೇತ್ರಗಳ ಮೇಲೆ ಬೆಟ್ಟಿಂಗ್ ನಡೆಯುತ್ತಿದೆ ಎನ್ನಲಾಗಿದೆ.
ಸದ್ಯ ಸಿಸಿಬಿ ಹೈ ಅಲರ್ಟ್ ಸ್ಥಿತಿಯಲ್ಲಿದ್ದು, ಮುಂದಿನ ಒಂದು ವಾರ ಕಾಲ ಅನೇಕ ಜೂಜಿನ ಆ್ಯಪ್ಗಳ ಮೇಲೆ ನಿಗಾವಹಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ, ಚುನಾವಣೆಗೆ ಸಂಬಂಧಿಸಿದಂತೆ ಬೆಟ್ಟಿಂಗ್ ಕಂಡುಬಂದರೆ ಕಠಿಣ ಕ್ರಮ ಜರುಗಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ವಿಧಾನಸಭೆ ಚುನಾವಣೆ ಬುಧವಾರ ಬೆಳಿಗ್ಗೆ 7ಕ್ಕೆ ಆರಂಭವಾಗಲಿದ್ದು, ಸಂಜೆ ಆರು ಗಂಟೆಯ ವರೆಗೆ ನಡೆಯಲಿದೆ. ಅದಾದ ನಂತರ ಮತದಾನ ಪ್ರಮಾಣದ ಕುರಿತು ಚುನಾವಣಾ ಆಯೋಗ ಮಾಹಿತಿ ನೀಡಲಿದೆ. ನಂತರ ಎಕ್ಸಿಟ್ಪೋಲ್ ಸಮೀಕ್ಷೆಗಳ ವರದಿಯೂ ಪ್ರಕಟವಾಗಲಿದೆ. ಆ ನಂತರ ಬೆಟ್ಟಿಂಗ್ ಚಟುವಟಿಕೆ ಮತ್ತಷ್ಟು ಹೆಚ್ಚಾಗಬಹುದು ಎನ್ನಲಾಗಿದೆ. ಈಗಾಗಲೇ ಚುನಾವಣಾಪೂರ್ವ ಸಮೀಕ್ಷಾ ವರದಿಗಳು ಪ್ರಕಟವಾಗಿವೆ.
ಇದನ್ನೂ ಓದಿ: Karnataka Election: ವಿಧಾನಸಭೆ ಚುನಾವಣೆಗೆ ವಿಶೇಷ ರೈಲು, ಹೆಚ್ಚುವರಿ ಕೋಚ್; ವಿವರ ಇಲ್ಲಿದೆ
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ಮತದಾನ ನಡೆಯಲಿದ್ದು, 5,30,85,566 ಮತದಾರರು ಹಕ್ಕು ಚಲಾಯಿಸಲಿದ್ದಾರೆ. 37,777 ಸ್ಥಳಗಳ 58,545 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. 11,71,558 ಮಂದಿ ಮೊದಲ ಬಾರಿ ವೋಟ್ ಮಾಡಲಿದ್ದಾರೆ. ರಾಜ್ಯಾದ್ಯಂತ ನಾಳೆ 4,00,000 ಮತಗಟ್ಟೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ