ಕೋಳಿ, ಮೂರು ಸಾವಿರ ರೂ. ನಗದು ಆಮಿಷ: ಜೆಡಿಎಸ್ ವಿರುದ್ಧ ಬಿಜೆಪಿ ಅಭ್ಯರ್ಥಿ ಆರೋಪ
ಎರಡು ಜೀವಂತ ಕೋಳಿ ಮತ್ತು ಮೂರು ಸಾವಿರ ನಗದು ಹಂಚಲಾಗಿದ್ದು, ಇದನ್ನು ಪ್ರಶ್ನಿಸಿದಕ್ಕೆ ನನ್ನ ಮೇಲೆ ಹಲ್ಲೆ ಯತ್ನ ನಡೆದಿದೆ ಎಂದು ಹೊಳೆನರಸೀಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೇವರಾಜೇಗೌಡ ಆರೋಪ ಮಾಡಿದ್ದಾರೆ.
ಹಾಸನ: ಎರಡು ಜೀವಂತ ಕೋಳಿ ಮತ್ತು ಮೂರು ಸಾವಿರ ರೂ. ನಗದು ಹಂಚಲಾಗಿದ್ದು, ಇದನ್ನು ಪ್ರಶ್ನಿಸಿದಕ್ಕೆ ನನ್ನ ಮೇಲೆ ಹಲ್ಲೆ (Assault) ಯತ್ನ ನಡೆದಿದೆ ಎಂದು ಹೊಳೆನರಸೀಪುರ ಕ್ಷೇತ್ರದ ಬಿಜೆಪಿ (BJP) ಅಭ್ಯರ್ಥಿ ದೇವರಾಜೇಗೌಡ ಆರೋಪ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಳೆನರಸೀಪುರ ಕ್ಷೇತ್ರಕ್ಕೆ ಸೇರುವ ಚನ್ನರಾಯಪಟ್ಟಣ ತಾಲ್ಲೂಕಿನ ಅಣ್ಣೇನಹಳ್ಳಿ ಗ್ರಾಮದಲ್ಲಿ ಜೆಡಿಎಸ್ನಿಂದ ಮತದಾರರಿಗೆ ಆಮಿಷ ಒಡ್ಡಿರುವ ಆರೋಪ ಮಾಡಿದ್ದಾರೆ. ಈ ವೇಳೆ ನಾನು ನನ್ನ ವಾಹನ ನಿಲ್ಲಿಸಿ ಅದನ್ನ ಪ್ರಶ್ನೆ ಮಾಡಿದ್ದಕ್ಕೆ ವಾಹನ ಜಖಂಗೊಳಿಸಿ, ನನ್ನ ಅಂಗರಕ್ಷಕ ಮೇಲೆ ಕೂಡ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದರು.
ಹೊಳೆನರಸೀಪುರ ಕ್ಷೇತ್ರದ ಎಲ್ಲಾ ಅಧಿಕಾರಿಗಳು ಜೆಡಿಎಸ್ ಅಭ್ಯರ್ಥಿ ಮಾಜಿ ಸಚಿವ ರೇವಣ್ಣ ಅಧೀನದಲ್ಲಿ ಇದ್ದಾರೆ ಎಂದು ಆರೋಪಿಸಿರುವ ದೇವರಾಜೇಗೌಡ, ಹಲವು ಹಳ್ಳಿಗಳಲ್ಲಿ ರಾಜಾರೋಷವಾಗಿ ಆಮಿಷ ಒಡ್ಡಲಾಗುತ್ತಿದೆ. ಈ ಬಗ್ಗೆ ಸಹಾಯಕ ಚುನಾವಣೆ ಅಧಿಕಾರಿಗೆ ಮಾಹಿತಿ ನೀಡಿದರೂ ಸ್ಪಂದಿಸುತ್ತಿಲ್ಲ. ಕೂಡಲೇ ಚುನಾವಣೆ ತಡೆಹಿಡಿಯಿರಿ ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬಿಡದಿ ಬಳಿಯ ವಂಡರ್ಲಾ ರೆಸಾರ್ಟ್ ಮೇಲೆ ಐಟಿ ರೇಡ್: ಮತದಾರರಿಗೆ ಹಂಚಲು ಹಣ ಸಂಗ್ರಹಿಸಿಟ್ಟಿರುವ ಶಂಕೆ
ಅಕ್ರಮ ತಡೆಯುವಲ್ಲಿ ವಿಫಲವಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ. ಜಿಲ್ಲಾ ಚುನಾವಣಾ ಅಧಿಕಾರಿ ಕೂಡ ನಮ್ಮ ದೂರಿಗೆ ಸ್ಪಂದನೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ವಿರುದ್ಧ ಹಲ್ಲೆ ಆರೋಪ
ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ವಿಶಾಲ್ ದರ್ಗಿ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ. ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಬರುವ ಕುವೆಂಪು ನಗರಕ್ಕೆ ಕಾಂಗ್ರೆಸ್ ಪರ ಪ್ರಚಾರಕ್ಕೆ ಬಂದಿದ್ದ ಅಂತ ಯುವಕನ ಮೇಲೆ ಹಲ್ಲೆ ಆರೋಪ ಮಾಡಿದ್ದಾರೆ. ಇಂದು ಮಧ್ಯಾಹ್ನ ಘಟನೆ ನಡೆದಿದೆ. ಮೇಯರ್ ವಿಶಾಲ್ ದರ್ಗಿ ವರ್ತನೆಗೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ನಗರದ 11 ಕ್ಷೇತ್ರಗಳಲ್ಲಿ ಐಟಿ ಅಧಿಕಾರಿಗಳ ಮೆಗಾ ಆಪರೇಷನ್: ಕೋಟಿ ಕೋಟಿ ನಗದು ಜಪ್ತಿ
ಬೆಳಗಾವಿ ಜಿಲ್ಲೆಯಲ್ಲಿ ದಾಖಲೆ ಇಲ್ಲದ 15 ಲಕ್ಷ ಹಣ ಜಪ್ತಿ
ಬೆಳಗಾವಿ: ಜಿಲ್ಲೆಯಲ್ಲಿ ದಾಖಲೆ ಇಲ್ಲದ 15 ಲಕ್ಷ ರೂ. ಹಣ ಜಪ್ತಿ ಮಾಡಲಾಗಿದೆ. ಚಿಕ್ಕೋಡಿ ತಾಲೂಕಿನ ಮಾಂಜರಿ ಚೆಕ್ಪೋಸ್ಟ್ ಬಳಿ ಕಾರು ತಪಾಸಣೆ ವೇಳೆ ಚೀಲದಲ್ಲಿ 15 ಲಕ್ಷ ರೂ. ಹಣ ಪತ್ತೆಯಾಗಿದೆ. ಮಹಾರಾಷ್ಟ್ರದ ಗಡಹಿಂಗ್ಲಜ್‌ನಿಂದ ಮಾಂಜರಿಗೆ ಬರುತ್ತಿದ್ದ ಕಾರಿನಲ್ಲಿ ಹಣ ಪತ್ತೆಯಾಗಿದ್ದು, ವ್ಯಕ್ತಿ ಬಳಿ ಇದ್ದ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:11 pm, Tue, 9 May 23