Karnataka Election: ಹಿಂದಿನ ಚುನಾವಣೆಗಳಲ್ಲಿ ಹೇಗಿತ್ತು ಟ್ರೆಂಡ್, ಈ ಬಾರಿ ಹೇಗಿದೆ ಫೈಟ್?

ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವುದು ಯಾವ ಪಕ್ಷಕ್ಕೂ ಎಂದಿಗೂ ಸುಲಭವಲ್ಲ ಎಂಬುದು ಈ ಹಿಂದಿನ ಚುನಾವಣೆಗಳಿಂದ ತಿಳಿದುಬಂದಿದೆ. ಆದರೆ, ಕಾಂಗ್ರೆಸ್ ಪಕ್ಷವು 1999 ಮತ್ತು 2013ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಗಳಿಸಿತ್ತು.

Karnataka Election: ಹಿಂದಿನ ಚುನಾವಣೆಗಳಲ್ಲಿ ಹೇಗಿತ್ತು ಟ್ರೆಂಡ್, ಈ ಬಾರಿ ಹೇಗಿದೆ ಫೈಟ್?
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on:May 10, 2023 | 4:27 PM

ರಾಜ್ಯ ವಿಧಾನಸಭಾ ಚುನಾವಣೆಯ (Karnataka Election) ಎಲ್ಲಾ 224 ಸ್ಥಾನಗಳಿಗೆ ಮತದಾನ (Voting) ನಡೆಯುತ್ತಿದೆ. ಮೇ 13 ರಂದು ಮತ ಎಣಿಕೆ ನಡೆಯಲಿದೆ. ಮತದಾನ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಎಕ್ಸಿಟ್ ಪೋಲ್‌ ವರದಿಗಳು ಬಹಿರಂಗವಾಗಲಿವೆ. ಈ ಬಾರಿಯಂತೂ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಅತ್ತ ಕೆಲವು ಪ್ರದೇಶಗಳಲ್ಲಿ ಜೆಡಿಎಸ್ ಕೂಡ ರಾಷ್ಟ್ರೀಯ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡಿದೆ. ರಾಜ್ಯದಲ್ಲಿ ಕಳೆದ ನಾಲ್ಕು ಚುನಾವಣೆಗಳ ಟ್ರೆಂಡ್‌ಗಳನ್ನು ಅವಲೋಕಿಸಿ, ಚುಣಾವಣಾ ರಾಜಕೀಯ ಹೇಗಿತ್ತು ಎಂಬ ಅವಲೋಕನ ಇಲ್ಲಿದೆ.

ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವುದು ಯಾವ ಪಕ್ಷಕ್ಕೂ ಎಂದಿಗೂ ಸುಲಭವಲ್ಲ ಎಂಬುದು ಈ ಹಿಂದಿನ ಚುನಾವಣೆಗಳಿಂದ ತಿಳಿದುಬಂದಿದೆ. ಆದರೆ, ಕಾಂಗ್ರೆಸ್ ಪಕ್ಷವು 1999 ಮತ್ತು 2013ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಗಳಿಸಿತ್ತು. ಈ ಎರಡೂ ಚುನಾವಣೆಗಳಲ್ಲಿ ಪಕ್ಷವು ತನ್ನ ಎದುರಾಳಿಗಳ ವಿರುದ್ಧ ಅಸಾಧಾರಣ ಮುನ್ನಡೆ ಸಾಧಿಸಿತ್ತು.

ಬಿಜೆಪಿಗೆ ಬಹುಮತ ಗಳಿಸುವ ಕಾತರ

ಜೆಡಿಎಸ್ 1999 ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿತು. ಆದರೆ ಇಲ್ಲಿಯವರೆಗೆ ಬಹುಮತ ಸಿಕ್ಕಿಲ್ಲ. ಮತ್ತೊಂದೆಡೆ, ಬಿಜೆಪಿ, 2013 ರಲ್ಲಿ ಹಿರಿಯ ಲಿಂಗಾಯತ ನಾಯಕ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಮತ್ತು ಬಿಎಸ್ ಶ್ರೀರಾಮುಲು ಪಕ್ಷವನ್ನು ತೊರೆದಾಗ ಬಂಡಾಯವನ್ನು ಎದುರಿಸಬೇಕಾಗಿ ಬಂದಿತ್ತು. 2004, 2008 ಮತ್ತು 2018ರಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಇದರ ಹೊರತಾಗಿಯೂ ಬಹುಮತದ ಅಂಕಿ ತಲುಪುವುದು ಸಾಧ್ಯವಾಗಲಿಲ್ಲ.

ಕಿಂಗ್ ಮೇಕರ್ ಆಗುವ ಜೆಡಿಎಸ್

ರಾಜ್ಯದಲ್ಲಿ ಜೆಡಿಎಸ್ ಕಿಂಗ್‌ ಮೇಕರ್‌ ಆಗುವುದನ್ನು ಹಲವು ಬಾರಿ ಸಾಬೀತುಪಡಿಸಿದೆ. 1999ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಜೆಡಿಎಸ್ ಶೇ 4.5ರಷ್ಟು ಮತಗಳನ್ನು ಪಡೆದಿತ್ತು. 2004 ರಲ್ಲಿ, ಅದರ ಮತಗಳ ಪ್ರಮಾಣವು 25.9 ಶೇಕಡಾವನ್ನು ಮುಟ್ಟಿತ್ತು. 2018ರ ಚುನಾವಣೆಯಲ್ಲೂ ಶೇ 16.7ರಷ್ಟು ಮತಗಳನ್ನು ಪಡೆದಿತ್ತು. ಜೆಡಿಎಸ್ ಸಹಾಯವಿಲ್ಲದೆ ಸರ್ಕಾರ ರಚಿಸುವುದು ರಾಜ್ಯದಲ್ಲಿ ಬಹಳ ಕಷ್ಟದ ಕೆಲಸ ಎಂಬಂತಾಗಿದೆ.

ಕಾಂಗ್ರೆಸ್ – ಬಿಜೆಪಿ ನಡುವೆ ತೀವ್ರ ಪೈಪೋಟಿ

ಸದ್ಯದ ಟ್ರೆಂಡ್ ಪ್ರಕಾರ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಇದೆ. ಆದರೆ ದಕ್ಷಿಣ ಕರ್ನಾಟಕದಲ್ಲಿ ನೆಲೆಯನ್ನು ವಿಸ್ತರಿಸಲು ಬಿಜೆಪಿ ಹವಣಿಸುತ್ತಿದ್ದು, ಈ ಬಾರಿ ತುಸು ಬದಲಾವಣೆ ಕಂಡುಬರುವ ಸಾಧ್ಯತೆಯೂ ಇದೆ. ದಕ್ಷಿಣ ಕರ್ನಾಟಕ ಜೆಡಿಎಸ್​ನ ಭದ್ರಕೋಟೆಯಾಗಿದೆ. ಆದರೆ, 2019ರ ಲೋಕಸಭೆ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ಬಿಜೆಪಿ ಅಚ್ಚರಿ ಮೂಡಿಸಿತ್ತು.

ಎಲ್ಲ ಕುತೂಹಲಗಳಿಗೂ ಮೇ 13ರಂದು ಉತ್ತರ ದೊರೆಯಲಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:26 pm, Wed, 10 May 23