ಮೈಸೂರು ಜಿಲ್ಲೆಯ ಹಲವು ಕ್ಷೇತ್ರಗಳನ್ನು ಒಟ್ಟುಗೂಡಿಸಿ 2008ರಲ್ಲಿ ರಚಿಸಲಾದ ಕ್ಷೇತ್ರವೇ ವರುಣಾ (Varuna Constituency). ಈ ಕ್ಷೇತ್ರಕ್ಕೆ ಕಾವೇರಿ ನದಿಯ ವರುಣಾ ಕಾಲುವೆಯ ಹೆಸರನ್ನು ಇಡಲಾಗಿತ್ತು (ಈಗ ಇದನ್ನು ದೇವರಾಜ್ ಅರಸು ಕಾಲುವೆ ಎಂದು ಕರೆಯಲಾಗುತ್ತದೆ). ಬಹುಪಾಲು ಕೃಷಿ ಭೂಮಿ ಹೊಂದಿರುವ ಈ ಕ್ಷೇತ್ರವು ಲಿಂಗಾಯತರು (ಅಂದಾಜು 60,000), ಕುರುಬರು (35,000), ಒಕ್ಕಲಿಗರು (15,000), ಎಸ್‌ಸಿಗಳು (38,000), ಎಸ್‌ಟಿಗಳು (40,000), ಮತ್ತು ಮುಸ್ಲಿಮರ (10,000) ಜನಸಂಖ್ಯೆಯನ್ನು ಹೊಂದಿದೆ.
ಕಳೆದ ಬಾರಿ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಅಥವಾ ಸೋಮಣ್ಣ ಇಬ್ಬರೂ ಸ್ಪರ್ಧಿಸಿರಲಿಲ್ಲ. ಈ ಕ್ಷೇತ್ರದಿಂದ 2008ರಲ್ಲಿ ಮತ್ತು 2013ರಲ್ಲಿ ಸಿದ್ದರಾಮಯ್ಯ ಗೆದ್ದಿದ್ದರು. ಆದರೆ 2018ರಲ್ಲಿ ಬಾದಾಮಿ ಮತ್ತು ಚಾಮುಂಡೇಶ್ವರಿಯಿಂದ ಸ್ಪರ್ಧಿಸಿ ಬಾದಾಮಿಯಲ್ಲಿ ಮಾತ್ರ ಗೆದ್ದಿದ್ದರು. ಸೋಮಣ್ಣ ಅವರು ಬೆಂಗಳೂರಿನ ಗೋವಿಂದರಾಜನಗರದಿಂದ ಗೆದ್ದಿದ್ದರು.
ಸಿದ್ದರಾಮಯ್ಯ ಅವರು 2008ರಲ್ಲಿ ಬಿಜೆಪಿಯ ಎಲ್.ರೇವಣಸಿದ್ದಯ್ಯ ಅವರನ್ನು 18,827 ಮತಗಳಿಂದ ಮತ್ತು 2013ರಲ್ಲಿ ಕೆಜೆಪಿಯ ಕಾಪು ಸಿದ್ದಲಿಂಗಸ್ವಾಮಿ ಅವರನ್ನು 29,641 ಮತಗಳಿಂದ ಸೋಲಿಸಿದ್ದರು. 2018ರಲ್ಲಿ ತಮ್ಮ ಪುತ್ರ ಯತೀಂದ್ರ ಅವರಿಗೆ ಕ್ಷೇತ್ರ ಬಿಟ್ಟುಕೊಡಲು ಸಿದ್ದರಾಮಯ್ಯ ನಿರ್ಧರಿಸಿದ್ದರು. ಯತೀಂದ್ರ ಅವರು ಬಿಜೆಪಿಯ ಟಿ ಬಸವರಾಜು ವಿರುದ್ಧ 58,816 ಮತಗಳಿಂದ ಗೆದ್ದಿದ್ದರು.
ಈ ಬಾರಿಯೂ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲು ಸಿದ್ದರಾಮಯ್ಯ ಬಯಸಿದ್ದರು. ಕೋಲಾರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದ ಅವರು ಅದಕ್ಕಾಗಿ ಸಿದ್ಧತೆಯನ್ನೂ ಮಾಡಿಕೊಂಡಿದ್ದರು. ಆದರೆ, ಕೊನೇ ಕ್ಷಣದಲ್ಲಿ ಹೈಕಮಾಂಡ್ ಸೂಚನೆ ಮೇರೆಗೆ ವರುಣಾವನ್ನು ಆರಿಸಿಕೊಂಡರು. ಸಿದ್ದರಾಮಯ್ಯ ಅವರಿಗಾಗಿ ಅವರ ಮಗ ಯತೀಂದ್ರ ಅವರು ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ.
ಇದನ್ನೂ ಓದಿ: ವರುಣಾ ಚುನಾವಣಾ ಅಖಾಡಕ್ಕಿಳಿದ ಬಿವೈ ವಿಜಯೇಂದ್ರ, ಬಿಲ್ ಸಂತೋಷ್: ವರುಣಾದತ್ತ ದೌಡಾಯಿಸಲಿದ್ದಾರೆ ಸಿದ್ದರಾಮಯ್ಯ
ವರುಣಾದಿಂದ ಸಿದ್ದರಾಮಯ್ಯ ಕಣಕ್ಕಿಳಿಯುವುದು ಖಚಿತವಾದ ಬೆನ್ನಲ್ಲೇ ಬಿಜೆಪಿಯು ಸಚಿವ ವಿ.ಸೋಮಣ್ಣ ಅವರನ್ನು ಕಣಕ್ಕಿಳಿಸುವ ಮೂಲಕ ಪೈಪೋಟಿ ನೀಡಲು ನಿರ್ಧಿರಿಸಿದೆ. ಸೋಮಣ್ಣ ಅವರು ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದರು. ಆದರೆ, ಹೈಕಮಾಂಡ್ ಅವರನ್ನು ಚಾಮರಾಜನಗರ ಮತ್ತು ವರುಣಾದಿಂದ ಸ್ಪರ್ಧಿಸಲು ಸೂಚಿಸಿತು.
ಹೈ-ಪ್ರೊಫೈಲ್ ವಿಚಾರಗಳನ್ನು ಮುಂದಿಟ್ಟುಕೊಂಡು ಉಭಯ ನಾಯಕರು ಪೈಪೋಟಿ ನೀಡಿದರೆ, ಸ್ಥಳೀಯ ಸಮಸ್ಯೆಗಳ ಮೇಲೆ ಗಮನ ಕಡಿಮೆಯಾಗಲಿದೆ. ಆದರೆ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಕಾಲುವೆಗೆ ಜಮೀನು ಸ್ವಾಧೀನಪಡಿಸಿಕೊಂಡಿರುವುದನ್ನು ಪ್ರತ್ಯೇಕಿಸುವಲ್ಲಿ ಮತ್ತು ಕಾನೂನು ಪ್ರಕ್ರಿಯೆಗಳನ್ನು ಪೂರೈಸುವಲ್ಲಿ ಸರ್ಕಾರದ ವಿಳಂಬದಿಂದಾಗಿ ತಮ್ಮ ಜಮೀನುಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರೈತರು ದೂರಿದ್ದಾರೆ.
-ಕೆವಿ ರಮೇಶ್
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ