ಗದಗ: ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ರಾಜ್ಯದಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬಂದರೆ ಲಿಂಗಾಯತರೇ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಗದಗದಲ್ಲಿ ನರಗುಂದ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿಸಿ ಪಾಟೀಲ್ (CC Patil) ಹೇಳಿದ್ದಾರೆ. ರಾಜ್ಯದ 130 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಲಿಂಗಾಯತರೇ ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಹಾಗೂ ಆದರೆ ಒಳ್ಳೆಯದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಂದೇ ಸಮುದಾಯದಿಂದ ಸರ್ಕಾರ ರಚನೆ ಮಾಡಲು ಆಗುವುದಿಲ್ಲ. ಲಿಂಗಾಯತರು, ಕುರುಬರು, ಒಕ್ಕಲಿಗರು ಸೇರಿದಂತೆ ಎಲ್ಲರೂ ಬೇಕು. ಮೇ 13ರಂದು ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಮೇ 18ರಂದು ಹೊಸ ಮುಖ್ಯಮಂತ್ರಿ ಆಯ್ಕೆಯಾಗಲಿದ್ದಾರೆ. ಯಾರ ಹಣೆಯಲ್ಲಿ ಬರೆದಿದೆಯೋ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಪಾಟೀಲ್ ಹೇಳಿದರು.
ಕಾಂಗ್ರೆಸ್ನವರು ಧೈರ್ಯ, ತಾಕತ್ತು ಇದ್ದರೆ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಲಿ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿದ್ದಾರೆ. ಅವರನ್ನು ಸ್ಟಾರ್ ಪ್ರಚಾರಕ್ಕರನ್ನಾಗಿ ಮಾಡಿದ್ದೇವೆ ಎಂದಿದ್ದಾರೆ. ಬಿಜೆಪಿಯಿಂದ ಬಂದ ನಾಯಕರಿಂದ ನಮಗೆ ಶಕ್ತಿ ಬಂದಿದೆ ಎನ್ನುತ್ತಾರೆ. ಹಾಗಾದರೆ ಕಾಂಗ್ರೆಸ್ನವರು ಅಷ್ಟೊಂದು ಅಶಕ್ತರೇ ಎಂದು ಪಾಟೀಲ್ ಪ್ರಶ್ನಿಸಿದರು.
50 ವರ್ಷಗಳಲ್ಲಿ ಒಬ್ಬ ಲಿಂಗಾಯತರನ್ನು ಮಾತ್ರ ಕಾಂಗ್ರೆಸ್ ಮುಖ್ಯಮಂತ್ರಿ ಮಾಡಿದೆ. ಆದರೆ, ಅವರನ್ನು ಯಾವ ರೀತಿ ನಡೆಸಿಕೊಂಡಿತ್ತು ಎಂದು ಪಾಟೀಲ್ ಪ್ರಶ್ನಿಸಿದ್ದಾರೆ.
ಲಿಂಗಾಯತ ಡ್ಯಾಮ್ ನೀರು ಕಾಂಗ್ರೆಸ್ಗೆ ಬರುತ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕಾಂಗ್ರೆಸ್ ಪಕ್ಷ ನಿಂತಿರುವ ನೆಲೆಯೇ ಕುಸಿಯುತ್ತಿದೆ. ಹೀಗಾಗಿ ಡಿಕೆಶಿ ಲಿಂಗಾಯತ ಸಮುದಾಯದ ಬಗ್ಗೆ ಮಾತನಾಡುತ್ತಿದ್ದಾರೆ. ಡಿಕೆಶಿ ಇಷ್ಟು ಅನನುಭವಿ ಅಂದುಕೊಂಡಿರಲಿಲ್ಲ. ಲಿಂಗಾಯತ ಮತಗಳು ಬಿಜೆಪಿ ಡ್ಯಾಮ್ನಲ್ಲಿ ಸುಭದ್ರವಾಗಿವೆ ಎಂದು ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ: ಲಿಂಗಾಯತ ಡ್ಯಾಂ ಒಡೆಯುವ ನಿಮ್ಮ ಹಗಲುಗನಸು ನನಸಾಗದು; ಡಿಕೆ ಶಿವಕುಮಾರ್ಗೆ ಸಚಿವ ಸಿಸಿ ಪಾಟೀಲ ತಿರಗೇಟು
ಲಿಂಗಾಯತರ ಚಿಂತೆ ನಿಮಗೆ ಬೇಡ ಎಂದು ಡಿಕೆಶಿಗೆ ಪಾಟೀಲ್ ಶುಕ್ರವಾರವೇ ತಿರುಗೇಟು ನೀಡಿದ್ದರು. ಡಿಕೆ ಶಿವಕುಮಾರ್ ಅವರೇ, ನಮ್ಮ ನಾಡಿನಲ್ಲಿ ಲಿಂಗಾಯತರ ಡ್ಯಾಮ್ ಒಡೆಯುವ ನಿಮ್ಮ ಹಗಲು ಕನಸು ಯಾವತ್ತೂ ನನಸಾಗುವುದಿಲ್ಲ. ಹಿಂದೆ ನಿಮ್ಮ ಸಿದ್ದರಾಮಯ್ಯನವರ ಸರ್ಕಾರವಿದ್ದಾಗಲೂ ಲಿಂಗಾಯತ ಸಮಾಜವನ್ನು ಒಡೆದು ಆಳುವ ಕುತಂತ್ರಕ್ಕೆ ಕೈ ಹಾಕಿ ಚುನಾವಣೆಯಲ್ಲಿ ಕಾಂಗ್ರೆಸ್ ಅಣೆಕಟ್ಟೆಯೇ ಒಡೆದು ಹೋಗಿ ಒಣಗಿತ್ತು ಎಂಬುದನ್ನು ಜನ ಇನ್ನೂ ಮರೆತಿಲ್ಲ ಎಂದು ಹೇಳಿದ್ದರು.
ಬಿಜೆಪಿ ನಾಯಕರು ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ್ದ ಡಿಕೆ ಶಿವಕುಮಾರ್, ಡ್ಯಾಂ ಒಡೆದರೆ ಹರಿದು ಹೋಗುವ ನೀರನ್ನು ತಡೆ ಹಿಡಿಯಲಾಗದು. ಮತ್ತೆ ಹೊಸದಾಗಿ ಡ್ಯಾಂ ಕಟ್ಟಬೇಕಷ್ಟೆ. ಡ್ಯಾಂ ಒಡೆದು ಹರಿದುಹೋಗುವ ನೀರು ಸಮುದ್ರ ಸೇರಲೇಬೇಕು ಎಂದು ಹೇಳಿದ್ದರು. ಬಿಜೆಪಿಯ ಪ್ರಮುಖ ಲಿಂಗಾಯತ ನಾಯಕರಾದ ಜಗದೀಶ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಇತ್ತೀಚೆಗಷ್ಟೇ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಈ ಎಲ್ಲ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದರು. ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಖಂಡಿಸಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ