ಕಲಬುರಗಿ: ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅವರು ಎಐಸಿಸಿ ಅಧ್ಯಕ್ಷರಾದ ಮೇಲೆ ಕರ್ನಾಟಕದಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಗೆಲವು ಸಾಧಿಸುವುದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರತಿಷ್ಟೆಯಾಗಿತ್ತು. ರಾಜ್ಯದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವುದರ ಜೊತೆಗೆ, ತವರು ಜಿಲ್ಲೆ ಕಲಬುರಗಿ(Kalaburagi)ಯಲ್ಲಿ ಕೂಡ ಹೆಚ್ಚಿನ ಸ್ಥಾನ ಗೆಲ್ಲುವುದು ಖರ್ಗೆ ಅವರಿಗೆ ಅನಿವಾರ್ಯವಾಗಿತ್ತು. ಯಾಕೆಂದರೆ ಪ್ರಧಾನಿ ಮೋದಿ, ಅಮಿತ್ ಶಾ ಅವರು ಖರ್ಗೆರನ್ನ ಟಾರ್ಗೆಟ್ ಮಾಡಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆರನ್ನ ಸೋಲಿಸಿದ್ದ ಬಿಜೆಿಪಿ, ಈ ಬಾರಿ ಖರ್ಗೆ ತವರಲ್ಲಿಯೇ ಬಿಸಿ ಮುಟ್ಟಿಸಬೇಕು. ಹೆಚ್ಚಿನ ಸ್ಥಾನ ಗೆದ್ದು, ಖರ್ಗೆ ಅವರಿಗೆ ದೊಡ್ಡ ಪೆಟ್ಟು ನೀಡಬೇಕು. ತವರು ಭಾಗದಲ್ಲಿಯೇ ಖರ್ಗೆ ಶಕ್ತಿ ಕುಂದಿದೆ ಅನ್ನೋದನ್ನ ಈ ಚುನಾವಣೆಯಲ್ಲಿ ಸಾರಿ ಸಾರಿ ಹೇಳಬೇಕು ಅನ್ನೋ ಲೆಕ್ಕಾಚಾರ ಹಾಕಿಕೊಂಡಿತ್ತು. ಆದ್ರೆ, ಬಿಜೆಪಿಯ ಎಲ್ಲಾ ಲೆಕ್ಕಾಚಾರಗಳನ್ನು ಕೂಡ ಖರ್ಗೆ ಉಲ್ಟಾ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲುವುದರ ಜೊತೆಗೆ ತವರು ಜಿಲ್ಲೆಯಲ್ಲಿ ಕೂಡ ಹೆಚ್ಚಿನ ಸ್ಥಾನ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಇನ್ನು ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ. ನನಗೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಅನ್ನೋದನ್ನ ಸಾರಿ ಸಾರಿ ಹೇಳುವ ಮೂಲಕ, ನಾನು ಸಿಎಂ ಹುದ್ದೆಯ ರೇಸ್ನಲ್ಲಿ ಇಲ್ಲ ಎನ್ನುವುದನ್ನ ತೋರಿಸಿ, ಸಿದ್ದರಾಮಯ್ಯ, ಡಿ. ಕೆ ಶಿವಕುಮಾರ್ ಅವರಿಗೆ ಹುರುಪು ತುಂಬುವ ಕೆಲಸ ಮಾಡಿದ್ದ ಖರ್ಗೆ, ಅದರಲ್ಲಿ ಯಶಸ್ಸು ಕಂಡಿದ್ದಾರೆ. ರಾಜ್ಯದ ಅನೇಕ ಕಡೆ ಪ್ರಚಾರ ಸಭೆಯಲ್ಲಿ ಭಾಗಿಯಾಗಿ, ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದ ಮಲ್ಲಿಕಾರ್ಜುನ ಖರ್ಗೆ, ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ. ಇನ್ನು ಕಾಂಗ್ರೆಸ್ನಲ್ಲಿ ಅಪಸ್ವರಕ್ಕೆ ಅವಕಾಶ ಇಲ್ಲದಂತೆ ಪರಿಸ್ಥಿತಿಯನ್ನ ಜಾಣತನದಿಂದ ನಿಭಾಯಿಸಿದ್ದ ಖರ್ಗೆ, ತವರು ಜಿಲ್ಲೆ ಸೇರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಕೊನೆಯ ಮೂರು ದಿನಗಳ ಕಾಲ ಇದ್ದು, ಪ್ರಚಾರ ನಡೆಸಿದ್ದ ಮಲ್ಲಿಕಾರ್ಜುನ ಖರ್ಗೆ. ಕಲಬುರಗಿ ಮಣ್ಣಿನ ಮಗ ಅಸ್ತ್ತ್ರವನ್ನು ಪ್ರಯೋಗಿಸಿದ್ದರು. ನಾನು ಈ ಮಣ್ಣಿನ ಮಗ. ಇಲ್ಲಿಯೇ ಹುಟ್ಟಿದ್ದೇನೆ, ಇಲ್ಲಿಯೇ ಸಾಯುತ್ತೇನೆ. ಹೀಗಾಗಿ ನೀವು ನನಗೆ ಮತ ಕೊಡಬೇಕು. ನಾನೇ ಸ್ಪರ್ಧಿಸಿದ್ದೇನೆ ಎಂದು ತಿಳಿದು ಮತ ನೀಡಬೇಕು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನ ಬಿಟ್ಟು, ಕಾಂಗ್ರೆಸ್ ಗೆಲ್ಲಿಸಬೇಕು ಎಂದು ಮನವಿ ಮಾಡಿದ್ದರು. ಈ ಅಸ್ತ್ರ ಫಲ ನೀಡಿದ್ದು, ಜಿಲ್ಲೆಯ 9 ಕ್ಷೇತ್ರಗಳ ಪೈಕಿ, ಕಾಂಗ್ರೆಸ್ 7ರಲ್ಲಿ ಜಯ ಸಾಧಿಸಿದೆ. ಆ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ತವರು ಜಿಲ್ಲೆ, ಕಾಂಗ್ರೆಸ್ ಮತ್ತು ತನ್ನ ಭದ್ರಕೋಟೆ ಅನ್ನೋದನ್ನ ಸಾಭೀತು ಮಾಡಿದ್ದಾರೆ.
ಕಲಬುರಗಿ ಮಾತ್ರವಲ್ಲದೆ, ನೆರೆಯ ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ ಜಿಲ್ಲೆಯಲ್ಲಿ ಕೂಡ ಪ್ರಚಾರ ಮಾಡಿದ್ದ ಖರ್ಗೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲುವಲ್ಲಿ ಹೆಚ್ಚಿನ ಮುತುವರ್ಜಿವಹಿಸಿ, ಯಶಸ್ಸು ಕಂಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆರನ್ನ ತವರಲ್ಲಿಯೇ ಕಟ್ಟಿಹಾಕುವ ತಂತ್ರವನ್ನು ಬಿಜೆಪಿ ರೂಪಿಸಿತ್ತು. ಆದ್ರೆ, ತವರಲ್ಲಿ ನನ್ನ ಬಗ್ಗಿಸೋಲು ಆಗಲ್ಲವೆಂದು ಖರ್ಗೆ ಸಾಭಿತು ಮಾಡಿದ್ದಾರೆ. ಜೊತೆಗೆ ರಾಜ್ಯದಲ್ಲಿ, ತವರಲ್ಲಿ ಮೋದಿ, ಅಮಿತ್ ಶಾ ಆಟ ನಡೆಯಲ್ಲ ಅನ್ನೋದನ್ನ ತೋರಿಸಿದ್ದಾರೆ.
ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:01 am, Sun, 14 May 23