ಬೆಳಗಾವಿಯಲ್ಲಿ ಬಿಜೆಪಿ ಪರ ಪ್ರಚಾರಕ್ಕಿಳಿದ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ಗೆ ಕಪ್ಪು ಬಾವುಟ ಪ್ರದರ್ಶಿಸಿದ ಎಂಇಎಸ್
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ವಿರುದ್ಧ ದೇವೇಂದ್ರ ಫಡ್ನವಿಸ್ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ: ಶಾಂತಿಯುತವಾಗಿ ನಡೆಯುತ್ತಿರುವ ಚುನಾವಣೆಯಲ್ಲಿ ಶಿವಸೇನೆ ಹುಳಿ ಹಿಂಡಲು ಪ್ರಯತ್ನಿಸುತ್ತಿದ್ದು, ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಕಾರ್ಯಕ್ರಮದಲ್ಲಿ ನಾಡದ್ರೋಹಿ ಎಂಇಎಸ್ ಕಾರ್ಯಕರ್ತರು ಉದ್ಧಟತನ ಮೆರೆದಿದ್ದಾರೆ. ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ವಿರುದ್ಧ ಘೋಷಣೆ ಕೂಗಿ ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ.
ಮಹಾರಾಷ್ಟ್ರದ ಕಾಂಗ್ರೆಸ್, ಬಿಜೆಪಿ ನಾಯಕರಿಗೆ ಕಪ್ಪು ಬಾವುಟ ತೋರಿಸಲು ಶಿವಸೇನೆ ಮುಖಂಡ ಸಂಜಯ್ ರಾವತ್ ನಿನ್ನೆ(ಮೇ 3) ಬೆಳಗಾವಿಯಲ್ಲಿ ಕರೆ ನೀಡಿದ್ದರು. ಇಂದು ಬೆಳಗಾವಿಯ ತಿಲಕ್ ಚೌಕ್ ನಲ್ಲಿ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರವಿ ಪಾಟೀಲ್ ಪರ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಪ್ರಚಾರಕ್ಕೆ ಬಂದಾಗ ಅವರಿಗೆ ಎಂಇಎಸ್ ಕಾರ್ಯಕರ್ತರು ಕಪ್ಪು ಬಾವುಟ ತೋರಿಸಿದ್ದಾರೆ. ಹಾಗೂ ಅವರ ವಿರುದ್ಧ ಘೋಷಣೆ ಕೂಗಿದ್ದಾರೆ.
ಎಂಇಎಸ್ ಅಭ್ಯರ್ಥಿಗಳ ವಿರುದ್ಧ ಮಹಾರಾಷ್ಟ್ರ ನಾಯಕರ ಪ್ರಚಾರಕ್ಕೆ ನಾಡದ್ರೋಹಿ ಎಂಇಎಸ್ ಪುಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎಂಇಎಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಬೆಳಗಾವಿಯ ಉತ್ತರ ಕ್ಷೇತ್ರದಲ್ಲಿ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಬಿಜೆಪಿ ಪ್ರಚಾರ ಸಭೆ ನಡೆದಿದೆ. ಸಭೆಯಲ್ಲಿ ಸಂಸದೆ ಮಂಗಲ ಅಂಗಡಿ, ಶಾಸಕ ಅನಿಲ್ ಬೆನಕೆ, ಶಂಕರಗೌಡ ಪಾಟೀಲ, ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ ಭಾಗಿಯಾಗಿದ್ರು. ಸ್ಥಳದಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು ವೇದಿಕೆ ಸುತ್ತಲೂ ಬ್ಯಾರಿಕೇಡ್ ಅಳವಡಿಸಲಾಗಿದೆ.
ಡಬಲ್ ಇಂಜಿನ್ ರೈಲಿಗೆ ಉತ್ತರ ಕ್ಷೇತ್ರದ ಡಬ್ಬಿ ಜೋಡಿಸಿ
ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಭಾಷಣ ಮಾಡಿದ್ರು. ಈ ವೇಳೆ ಅವರು, ಮೇ 13 ರಂದು ಬೆಳಗಾವಿ ಉತ್ತರದಲ್ಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಗೆಲ್ಲಲಿದೆ. 9 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿಯಿಂದ ದೇಶದಲ್ಲಿ ಪರಿವರ್ತನೆ ಆಗಿದೆ. ಭ್ರಷ್ಟಾಚಾರರಹಿತ ಆಡಳಿತವನ್ನು ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ನೀಡುತ್ತಿದ್ದಾರೆ ಎಂದರು. ಅರ್ಥವ್ಯವಸ್ಥೆಯಲ್ಲಿ ವಿಶ್ವದಲ್ಲಿ 11 ಸ್ಥಾನದಲ್ಲಿದ್ದ ಭಾರತ ಮೋದಿ ಆಡಳಿತದಲ್ಲಿಂದು ಐದನೇ ಸ್ಥಾನದಲ್ಲಿದೆ. ಕಳೆದ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದಾಗ ಅಧಿಕಾರಕ್ಕಾಗಿ ಸಿದ್ದರಾಮಯ್ಯ, ಹೆಚ್‌ಡಿಕೆ ನಾಟಕ ಮಾಡಿದರು. ಚುನಾವಣೆ ಫಲಿತಾಂಶ ಮುನ್ನವೇ ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆಗೆ ಸಿದ್ದರಾಮಯ್ಯ- ಡಿಕೆಶಿ ಮಧ್ಯೆ ಫೈಟ್ ನಡೆದಿದೆ. ಮತ್ತೊಂದೆಡೆ ಸಿಎಂ ಆಗಲು ನನಗೆ ಚಾನ್ಸ್ ಸಿಗುತ್ತೆ ಅಂತಾ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಯುತ್ತಿದ್ದಾರೆ.
ಡಬಲ್ ಇಂಜಿನ್ ರೈಲಿಗೆ ಉತ್ತರ ಕ್ಷೇತ್ರದ ಡಬ್ಬಿ ಜೋಡಿಸಿ. ಕಾಂಗ್ರೆಸ್ ಬೆಂಬಲಿಸಿದರೆ ಆ ಡಬ್ಬಿ ಹೈದ್ರಾಬಾದ್‌ನಲ್ಲಿರುವ ಇಂಜಿನ್ ಕಡೆ ಹೋಗುತ್ತೆ. ಬೆಳಗಾವಿ ಉತ್ತರ ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ ಅವರ ಡಬ್ಬಿಯನ್ನು ಡಬಲ್ ಇಂಜಿನ್‌ಗೆ ಜೋಡಿಸಿ. ಆಗ ಡಬಲ್ ಇಂಜಿನ್ ಸರ್ಕಾರದಿಂದ ಬೆಳಗಾವಿ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯ ಕಾರಿನ ಮೇಲೆ ಕಾಗೆ ಕೂತಿದಕ್ಕೂ ಡಿಕೆ ಶಿವಕುಮಾರ್ ಹೆಲಿಕಾಪ್ಟರ್ಗೆ ರಣಹದ್ದು ಗುದ್ದಿದಕ್ಕೂ ಇದೆಯಾ ಸಾಮ್ಯತೆ
ಮತ್ತೊಂದೆಡೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ವಿರುದ್ಧ ದೇವೇಂದ್ರ ಫಡ್ನವಿಸ್ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಸರ್ಕಾರ ಬಂದ್ರೆ ಬಜರಂಗದಳ ನಿಷೇಧ ಹೇರುತ್ತೀವಿ ಅಂತಾರೆ. ಬಜರಂಗದಳ ನಿಷೇಧಿಸಲು ನಿಮ್ಮಪ್ಪನ ಬಳಿ ತಾಕತ್ ಇದೆಯಾ? ಯಾವನ ಅಪ್ಪನಿಗಾದರೂ ಧೈರ್ಯ ಇದೆಯಾ? ಭಜರಂಗದಳ ನಿಷೇಧಿಸಲು ನಿಮ್ಮ ಬಳಿ ಧೈರ್ಯ ತಾಕತ್ ಇಲ್ಲ? ಭಜರಂಗದಳ ನಿಷೇಧ ಮಾಡ್ತೀವಿ ಅಂದ್ರೆ ಇದರ ಅರ್ಥ ಏನು? ಖರ್ಗೆ ಸುದ್ದಿಗೋಷ್ಠಿ ವೇಳೆ ಯಾವ ರೀತಿ ಕುಂಕುಮ ಅಳಿಸಿಕೊಂಡರು ಗೊತ್ತಲ್ಲ. ಈ ದೇಶದಲ್ಲಿ ಕುಂಕುಮ ಹಚ್ಚಿಕೊಳ್ಳಲು ನಾಚಿಕೊಳ್ಳೋರನ್ನ ಆರಿಸಿ ತರಬೇಕಾ? ಬಜರಂಗದಳ ನಿಷೇಧಕ್ಕೆ ಧೈರ್ಯ ಮಾಡೋರಿಗೆ ಬಜರಂಗದಳದ ಶಕ್ತಿ ತೋರಿಸಲೇಬೇಕು. ನಾವೆಲ್ಲ ಭಜರಂಗಬಲಿ ಭಕ್ತರು, ಭಜರಂಗಬಲಿಗೆ ತನ್ನ ಶಕ್ತಿ ತೋರಿಸುವ ಅವಶ್ಯಕತೆ ಇರಲಿಲ್ಲ. ಕಾಂಗ್ರೆಸ್ ಪಕ್ಷದ ನಿಯತ್ತು ಹೇಗಿದೆ ಗೊತ್ತಾ? ರಾಮಸೇತುವೆ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆಗೆ ಬಂದಾಗ ರಾಮ ಕಾಲ್ಪನಿಕ ಅಂತಾ ಅಫಿಡೆವಿಟ್ ಸಲ್ಲಿಸಿದ್ರು. ರಾಮನ ಅಸ್ತಿತ್ವ ಪ್ರಶ್ನಿಸುವ ಪಕ್ಷ ಒಂದೆಡೆ, ರಾಮ ಮಂದಿರ ಸ್ಥಾಪನೆ ಮಾಡುತ್ತಿರುವ ಪಕ್ಷ ಒಂದೆಡೆ. ಭಜರಂಗಳ ಬ್ಯಾನ್ ಮಾಡಲು ತಾಕತ್ತಿದ್ದೇಯೇ ಎಂದು ಕಾಂಗ್ರೆಸ್ ನಾಯಕರಿಗೆ ದೇವೇಂದ್ರ ಫಡ್ನವಿಸ್ ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ ನಾಯಕರಿಗೆ ಭಜರಂಗದಳ ನಿಷೇಧ ಮಾಡಲು ಆಗಲ್ಲ. ಅಂದು ರಾಮನನ್ನು ವಿರೋಧಿಸಿದವರು ಇಂದು ಹನುಮನನ್ನು ವಿರೋಧಿಸುತ್ತಿದ್ದಾರೆ. ಶ್ರೀರಾಮ, ಶ್ರೀಕೃಷ್ಣ, ಭಜರಂಗಿ ನಮ್ಮ ಹಿಂದೂ ಸಂಸ್ಕೃತಿಯ ಅಸ್ಮಿತೆ. ರಾಮನ ಅಸ್ತಿತ್ವ ಬಗ್ಗೆ ಮಾತನಾಡುವವರಿಗೆ ಮತದಾನ ವೇಳೆ ತಕ್ಕಪಾಠ ಕಲಿಸಿ ಎಂದು ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ದೇವೇಂದ್ರ ಫಡ್ನವಿಸ್ ಕರೆ ಕೊಟ್ಟಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ